ಬೆಂಗಳೂರು: ಇಲ್ಲಿಯ ಕೋರಮಂಗಲದಲ್ಲಿ ಮಂಗಳವಾರ ನಸುಕಿನಲ್ಲಿ ಅಪಘಾತ ಸಂಭವಿಸಿದ್ದು, ಶಾಸಕರೊಬ್ಬರ ಮಗ ಸೇರಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹೊಸೂರು ಕ್ಷೇತ್ರದ ಡಿಎಂಕೆ ಶಾಸಕ ವೈ.ಪ್ರಕಾಶ್ ಅವರ ಮಗ ಕರುಣಾಸಾಗರ್ (25), ಅವರ ಸಂಬಂಧಿ ಬಿಂದು (28), ಸ್ನೇಹಿತರಾದ ಮಹಾರಾಷ್ಟ್ರದ ಇಷಿತಾ ಬಿಸ್ವಾಸ್ (21), ಕೇರಳದ ಎಂ.ಧನುಷಾ (29), ಅಕ್ಷಯ್ ಗೋಯಲ್ (25), ಹರಿಯಾಣದ ಉತ್ಸವ್ (25) ಹಾಗೂ ಹುಬ್ಬಳ್ಳಿ ನವನಗರದ ರೋಹಿತ್ (23) ಮೃತರು.
‘ಏಳು ಮಂದಿಯೂ ಕೋರಮಂಗಲದ 80 ಅಡಿ ರಸ್ತೆಯ ಎನ್.ಜಿ.ವಿ ಜಂಕ್ಷನ್‌ನಿಂದ ಫೋರಂ ಮಾಲ್ ಜಂಕ್ಷನ್ ಕಡೆಗೆ ‘ಔಡಿ ಕ್ಯೂ3’ ಐಷಾರಾಮಿ ಕಾರಿನಲ್ಲಿ ರಾತ್ರಿ 2 ಗಂಟೆಯ ಸುಮಾರಿಗೆ ಹೊರಟಿದ್ದರು. ಕರುಣಾಸಾಗರ್ ಕಾರು ಚಲಾಯಿಸುತ್ತಿದ್ದರು. ಮಂಗಳ ಕಲ್ಯಾಣ ಮಂಟಪದ ಸಮೀಪ ನಿಯಂತ್ರಣ ತಪ್ಪಿದ ಕಾರು, ಪಾದಚಾರಿ ಮಾರ್ಗಕ್ಕೆ ವೇಗವಾಗಿ ನುಗ್ಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆ ಗೋಡೆಗೆ ಗುದ್ದಿದ್ದರಿಂದ ಅವಘಡ ಸಂಭವಿಸಿದೆ’ ಎಂದು ಸಂಚಾರ ಪೊಲೀಸ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
‘ಗುದ್ದಿದ್ದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಏಳು ಮಂದಿಯೂ ತೀವ್ರವಾಗಿ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿದ್ದರು. ಸಹಾಯಕ್ಕೆ ಬಂದ ಸ್ಥಳೀಯರು, ಕಾರಿನಿಂದ ಎಲ್ಲರನ್ನೂ ಹೊರತೆಗೆದು ಹತ್ತಿರದ ಸೇಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದರು. ವೈದ್ಯರು, ಏಳು ಮಂದಿಯೂ ಮೃತಪಟ್ಟಿರುವುದಾಗಿ ತಿಳಿಸಿದರು’ ಎಂದೂ ಅವರು ವಿವರಿಸಿದರು.
‘ಸಂಜೀವಿನಿ ಬ್ಲೂ ಮೆಟಲ್ ಕಂಪನಿ ಹೆಸರಿನಲ್ಲಿ ಔಡಿ ಕಾರು (ಕೆಎ 03 ಎಂವೈ 6666) ನೋಂದಣಿಯಾಗಿದೆ. ಹೊಸೂರಿನಿಂದ ಬೆಂಗಳೂರಿಗೆ ಸೋಮವಾರ ಬೆಳಿಗ್ಗೆ ಬಂದಿದ್ದ ಕರುಣಾ ಸಾಗರ್, ಸಂಬಂಧಿ ಬಿಂದು ಅವರನ್ನು ಮಾತನಾಡಿಸಲು ಸಂಜೆ ಕೋರಮಂಗಲಕ್ಕೆ ಬಂದಿದ್ದರು. ಸಂಬಂಧಿ ಹಾಗೂ ಸ್ನೇಹಿತರ ಜೊತೆಗೂಡಿ ಹಲವೆಡೆ ಸುತ್ತಾಡಿದ್ದರು. 5 ಆಸನ ಸಾಮರ್ಥ್ಯದ ಕಾರಿನಲ್ಲಿ ಏಳು ಮಂದಿ ಕುಳಿತಿದ್ದರು’ ಎಂದೂ ಹೇಳಿದರು.
ಚಾಲಕನ ವಿರುದ್ಧ ಎಫ್‌ಐಆರ್: ‘ಅತಿವೇಗ, ಅಜಾಗರೂಕತೆ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಜೀವನಕ್ಕೆ ಕುತ್ತು ತಂದ (ಐಪಿಸಿ 279) ಹಾಗೂ ನಿರ್ಲಕ್ಷ್ಯದಿಂದ ಸಾವನ್ನುಂಟು ಮಾಡಿದ (ಐಪಿಸಿ 304ಎ) ಆರೋಪದಡಿ ಚಾಲಕನ ವಿರುದ್ಧ ಆಡುಗೋಡಿ ಸಂಚಾರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆಗ್ನೇಯ ವಿಭಾಗದ (ಸಂಚಾರ) ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್.ರವಿಕಾಂತೇಗೌಡ ತಿಳಿಸಿದರು.
‘ಕಾರಿನಲ್ಲಿದ್ದ ಒಬ್ಬರೂ ಬದುಕಿಲ್ಲ. ಹೀಗಾಗಿ, ಘಟನೆ ಹೇಗಾಯಿತು? ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ರಕ್ಷಣೆಗೆ ಹೋಗಿದ್ದ ಸ್ಥಳೀಯರು ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಚಾಲಕ ಮದ್ಯಸೇವಿಸಿದ್ದರಾ? ತಡರಾತ್ರಿ ಎಲ್ಲಿಗೆ ಹೊರಟಿದ್ದರು? ಎಂಬ ಪ್ರಶ್ನೆಗಳಿವೆ. ಮರಣೋತ್ತರ ಪರೀಕ್ಷೆ ನಂತರ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ’ ಎಂದರು.
ಅತಿವೇಗಕ್ಕೆ ಎಚ್ಚರಿಕೆ ನೀಡಿದ್ದ ಕಾನ್‌ಸ್ಟೆಬಲ್
ಹೊಸೂರು ರಸ್ತೆಯಲ್ಲಿ ರಾತ್ರಿ 10.30ರ ಸುಮಾರಿಗೆ ಕರುಣಾಸಾಗರ್, ಅತಿವೇಗವಾಗಿ ಕಾರು ಚಲಾಯಿಸಿದ್ದರು. ಕಾರು ತಡೆದಿದ್ದ ಆಡುಗೋಡಿ ಠಾಣೆ ಪೊಲೀಸರು, ಎಚ್ಚರಿಕೆ ನೀಡಿದ್ದರು. ‘ನಾನು ಶಾಸಕನ ಮಗ’ ಎಂದು ಹೇಳಿದ್ದ ಕರುಣಾಸಾಗರ್, ಕಾರು ಬಿಡಿಸಿಕೊಂಡು ಹೋಗಿದ್ದರು.
‘ಕಾರಿನ ಸನ್ ರೂಫ್ ತೆರೆದು ಇಬ್ಬರು ಯುವತಿಯರು ರೂಫ್‌ನಲ್ಲಿ ನಿಂತು ಕೂಗಾಡುತ್ತಿದ್ದರು. ಚಾಲಕ ಕರುಣಾಸಾಗರ್, ವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದರು. ಚೆಕ್‌ಪೋಸ್ಟ್‌ನಲ್ಲಿದ್ದ ಕಾನ್‌ಸ್ಟೆಬಲ್ ಪ್ರಶಾಂತ್, ಕಾರು ತಡೆದು ವಿಚಾರಣೆ ನಡೆಸಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ನಾನು ಆನೇಕಲ್ ಶಾಸಕನ ಮಗ. ಇವರೆಲ್ಲ ನನ್ನ ಕುಟುಂಬದವರು. ಊಟಕ್ಕೆ ಬಂದಿದ್ದೇವೆ’ ಎಂದಿದ್ದ ಕರುಣಾಸಾಗರ್, ಕಾರು ಬಿಡಲು ಹೇಳಿದ್ದರು. ಎಚ್ಚರಿಕೆ ನೀಡಿದ್ದ ಕಾನ್‌ಸ್ಟೆಬಲ್, ‘ಇದು ನಗರ ವಲಯ. ರಾತ್ರಿ ಕರ್ಫ್ಯೂ ಬೇರೆ ಇದೆ. ನಿಧಾನವಾಗಿ ಹೋಗಿ’ ಎಂದಿದ್ದರು. ‘ಆಯ್ತು ಮನೆಗೆ ಹೋಗುತ್ತೇವೆ’ ಎಂದು ಅಲ್ಲಿಂದ ಹೊರಟಿದ್ದರು. ತಡರಾತ್ರಿ ಅಪಘಾತದ ಸುದ್ದಿ ಬಂದಿತು’ ಎಂದೂ ಹೇಳಿದರು.
‘ಜೋರು ಸದ್ದು, ಕಾರಿನಿಂದ ಹೊಗೆ’
‘ರಸ್ತೆಯಲ್ಲಿ ತಡರಾತ್ರಿ ವಾಹನಗಳ ಓಡಾಟ ತೀರಾ ಕಡಿಮೆ ಇತ್ತು. ಕಾರು ಗೋಡೆಗೆ ಗುದ್ದಿದ್ದರಿಂದ ಜೋರು ಸದ್ದು ಕೇಳಿಸಿತ್ತು. ಸ್ಥಳಕ್ಕೆ ಹೋಗಿ ನೋಡಿದಾಗ, ಕಾರಿನೊಳಗಿನಿಂದ ಹೊಗೆ ಬರುತ್ತಿತ್ತು’ ಎಂದು ಪ್ರತ್ಯಕ್ಷದರ್ಶಿ ಕ್ಯಾಬ್ ಚಾಲಕ ಸತೀಶ್ ಹೇಳಿದರು.
‘ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ಮಲಗಿದ್ದೆ. ಜೋರು ಶಬ್ಧ ಕೇಳಿ ಸ್ಥಳಕ್ಕೆ ಓಡಿದ್ದೆ. ಕಾರಿನಿಂದ ಹೊಗೆ ಬರುತ್ತಿದ್ದರಿಂದ ಸ್ಫೋಟವಾಗುವ ಭಯ ಉಂಟಾಯಿತು. ರಸ್ತೆಯಲ್ಲಿ ಹೊರಟಿದ್ದ ಜನರನ್ನು ಕೂಗಿ ಕರೆದು, ಕಾರಿನಲ್ಲಿದ್ದವರನ್ನು ರಕ್ಷಿಸಲು ಮುಂದಾದೆ. ಗಾಯಾಳುಗಳು ಪ್ರಜ್ಞೆ ತಪ್ಪಿದ್ದರು. ಎಲ್ಲರನ್ನೂ ಹೊರಗೆ ತೆಗೆದು ಆಸ್ಪತ್ರೆಗೆ ಕಳುಹಿಸಿದ್ದೆವು. ಪೊಲೀಸರಿಗೂ ಮಾಹಿತಿ ನೀಡಿದ್ದೆವು’ ಎಂದೂ ತಿಳಿಸಿದರು.
‘ಪೇಯಿಂಗ್ ಗೆಸ್ಟ್‌ನಲ್ಲಿದ್ದರು’
‘ಮೃತ ಬಿಂದು, ಇಷಿತಾ ಬಿಸ್ವಾಸ್, ಅಕ್ಷಯ್ ಗೋಯೆಲ್ ಹಾಗೂ ರೋಹಿತ್ ಅವರು ಖಾಸಗಿ ಕಂಪನಿ ಉದ್ಯೋಗಿಗಳು. ಎಂ.ಧನುಷಾ, ದಂತ ವೈದ್ಯೆ ಆಗಿದ್ದರು’ ಎಂದು ಪೊಲೀಸ್ ಅಧಿಕಾರಿ ಹೇಳಿದರು. ‘ಇವರೆಲ್ಲರೂ ಕೋರಮಂಗಲದ ಪಿ.ಜಿಯಲ್ಲಿದ್ದರು. ಕರುಣಾಸಾಗರ್, ಬಿಂದು ಅವರನ್ನು ಮಾತನಾಡಿಸಲು ಬಂದಾಗ ಇತರರನ್ನೂ ಭೇಟಿಯಾಗಿದ್ದರು. ಪಾರ್ಟಿ ಮಾಡಲೆಂದು ಎಲ್ಲರೂ ಹೊರಗೆ ಬಂದಿದ್ದರು’ ಎಂದೂ ತಿಳಿಸಿದರು.
‘ಮದುವೆಗೆ ಆಕ್ಷೇಪ’
‘ಕರುಣಾಸಾಗರ್ ಅವರು ಸಂಬಂಧಿ ಬಿಂದು ಅವರನ್ನು ಇಷ್ಟಪಡುತ್ತಿದ್ದು, ಮದುವೆಯಾಗಲು ತೀರ್ಮಾನಿಸಿದ್ದರು. ಆದರೆ, ವಯಸ್ಸಿನ ಅಂತರದಿಂದಾಗಿ ಮದುವೆಗೆ ಹಿರಿಯರು ಒಪ್ಪಿರಲಿಲ್ಲ. ಪರಸ್ಪರ ಮಾತನಾಡದಂತೆ ಎಚ್ಚರಿಕೆ ನೀಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಚೆನ್ನೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಿಂದು, ರಾಜೀನಾಮೆ ನೀಡಿ ಬೆಂಗಳೂರಿಗೆ ಬಂದಿದ್ದರು. ಇಲ್ಲಿಯೇ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿ, ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ಉಳಿದುಕೊಂಡಿದ್ದರು. ಅವರನ್ನು ಮಾತನಾಡಿಸಲು ಕರುಣಾಸಾಗರ್, ಆಗಾಗ ನಗರಕ್ಕೆ ಬರುತ್ತಿದ್ದರು. ಸೋಮವಾರವೂ ಚೆನ್ನೈಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಬೆಂಗಳೂರಿಗೆ ಬಂದಿದ್ದರೆಂಬ ಮಾಹಿತಿ ಇದೆ’ ಎಂದೂ ತಿಳಿಸಿವೆ.
Karnataka: Seven people killed in a car accident in Koramangala area of Bengaluru in the wee hours of Tuesday, as per Adugodi Police Station pic.twitter.com/GTcob09pG4
— ANI (@ANI) August 31, 2021
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.