ಬೆಂಗಳೂರು: ಬೈಕ್‌ಟ್ಯಾಕ್ಸಿಗಳನ್ನು ಬಾಡಿಗೆಗೆ ಬಳಸುವ ಆನ್‌ಲೈನ್ ಬುಕ್ಕಿಂಗ್ ಆ್ಯಪ್ ಕಂಪನಿಗಳನ್ನು ನಿಷೇಧಿಸಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ. ಕಂಪನಿಗಳು ಹೈಕೋರ್ಟ್‌ನಿಂದ ತಂದಿರುವ ತಡೆಯಾಜ್ಞೆಯನ್ನು ತೆರವುಗೊಳಿಸಿ ಕ್ರಮ ಕೈಗೊಳ್ಳಲು ಮುಂದಾಗಿದೆ.
ಬಾಡಿಗೆ ನಡೆಸುವ ವಾಹನಗಳಿಗೆ ಹಳದಿ ನಂಬರ್ ಪ್ಲೇಟ್ ಇರುತ್ತದೆ. ವೈಯಕ್ತಿಕ ಬಳಕೆಗೆ ಇರುವ ವಾಹನಗಳಿಗೆ ಬಿಳಿ ನಂಬರ್ ಪ್ಲೇಟ್ ನೀಡಲಾಗಿರುತ್ತದೆ. ಆದರೆ, ನಗರದಲ್ಲಿ ಬಿಳಿ ನಂಬರ್ ಪ್ಲೇಟ್ ಹೊಂದಿರುವ ಕೆಲವು ಟ್ಯಾಕ್ಸಿಗಳು ಬಾಡಿಗೆ ನಡೆಸುತ್ತಿವೆ. ಅದಲ್ಲದೇ ಆನ್‌ಲೈನ್ ಬುಕ್ಕಿಂಗ್ ಆ್ಯಪ್‌ಗಳು ಯಾವುದೇ ಅನುಮತಿ ಇಲ್ಲದೆಯೇ ಬೈಕ್ ಟ್ಯಾಕ್ಸಿ ನಡೆಸುತ್ತಿವೆ. ಇದರಿಂದ ಬಾಡಿಗೆ ನಡೆಸಲೆಂದೇ ಇರುವ ವಾಹನಗಳಿಗೆ ಬಾಡಿಗೆ ಇಲ್ಲದಂತಾಗಿದೆ ಎಂದು ಬೆಂಗಳೂರು ಸಾರಥಿ ಸೇನೆ ಅಧ್ಯಕ್ಷ ಬಿ. ರಾಮೇಗೌಡ ‘ಪ್ರಜಾವಾಣಿ’ ಜೊತೆಗೆ ಅಳಲು ತೋಡಿಕೊಂಡರು.
ಅಕ್ರಮವಾಗಿ ಬಾಡಿಗೆ ನಡೆಸುವ ಬಿಳಿ ನಂಬರ್ ಪ್ಲೇಟ್ ವಾಹನಗಳನ್ನು ಮತ್ತು ಬೈಕ್‌ಟ್ಯಾಕ್ಸಿ ನಡೆಸುವ ರ‍್ಯಾಪಿಡೊ ಸಹಿತ ಎಲ್ಲ ಆ್ಯಪ್‌ಗಳನ್ನು ನಿಷೇಧಿಸಬೇಕು ಎಂಬುದು ಅವರ ಒತ್ತಾಯವಾಗಿದೆ.
‘1 ಲಕ್ಷ ಆಟೊಗಳು ರ‍್ಯಾಪಿಡೊ ಕಂಪನಿ ಜೊತೆಗಿನ ಒಪ್ಪಂದದಲ್ಲಿ ಬೆಂಗಳೂರಿನಲ್ಲಿ ಬಾಡಿಗೆ ಮಾಡುತ್ತಿವೆ. ಇವು ಬಾಡಿಗೆ ವಾಹನಗಳೇ ಆಗಿವೆ. ಇದಲ್ಲದೇ ಅಷ್ಟೇ ಸಂಖ್ಯೆಯ ಬೈಕ್ ಟ್ಯಾಕ್ಸಿಗಳಿವೆ. ಬೈಕ್ ಟ್ಯಾಕ್ಸಿಗಳಿಗೆ ಹಳದಿ ನಂಬರ್ ಪ್ಲೇಟ್ ಬಂದಿಲ್ಲ. ಈಗಾಗಲೇ ಆಹಾರ, ತರಕಾರಿಗಳನ್ನು ದ್ವಿಚಕ್ರವಾಹನಗಳ ಮೂಲಕ ತಲುಪಿಸುವ ಕೆಲಸವನ್ನು ಹಲವು ಕಂಪನಿಗಳು ನಡೆಸುತ್ತಿವೆ. ನಮ್ಮ ಬೈಕ್ ಟ‍್ಯಾಕ್ಸಿಗಳು ಜನರನ್ನು ತಲುಪಿಸುತ್ತವೆ. ಬೈಕ್ ಟ‍್ಯಾಕ್ಸಿಯಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಇರುತ್ತಾರೆ. ಇದರಿಂದ ಬೇರೆಯವರಿಗೆ ನಷ್ಟ ಆಗುವುದಿಲ್ಲ’ ಎಂದು ರ‍್ಯಾಪಿಡೊ ಅಧಿಕಾರಿಗಳು ಸಮರ್ಥಿಸಿಕೊಂಡರು.
‘ರ‍್ಯಾಪಿಡೊ ನಿಷೇಧಿಸದಂತೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ. ಅದನ್ನು ತೆರವುಗೊಳಿಸಿ ನಿಷೇಧಿಸಲು ಮುಂದಾದರೆ ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಲಿದ್ದಾರೆ. ಕೆಲವರಿಗೆ ಬೈಕ್‌ಟ್ಯಾಕ್ಸಿಯೇ ಪೂರ್ಣಾವಧಿ ಉದ್ಯೋಗವಾಗಿದ್ದು, ಅನೇಕರಿಗೆ ಅರೆಕಾಲಿಕ ಉದ್ಯೋಗವಾಗಿದೆ. ಅವರೆಲ್ಲರಿಗೂ ತೊಂದರೆಯಾಗಲಿದೆ’ ಎಂದು ವಿವರಿಸಿದರು.
ಆ್ಯಪ್ ಕಂಪನಿಗಳು ಮತ್ತು ಆಟೊ, ಟ್ಯಾಕ್ಸಿ ಸಂಘಗಳ ನಡುವೆ ಈ ಬಗ್ಗೆ ಹಲವು ಸಮಯಗಳಿಂದ ತಿಕ್ಕಾಟ ನಡೆಯುತ್ತಿದೆ. ಹೊಡೆದಾಟ ಕೂಡ ನಡೆದಿದೆ. ಅಕ್ರಮ ಬಾಡಿಗೆ ಸಂಚಾರದ ಆ್ಯಪ್ ಮತ್ತು ವಾಹನಗಳನ್ನು ನಿಷೇಧಿಸಬೇಕು ಎಂದು ಹಲವು ಬಾರಿ ಪ್ರತಿಭಟನೆಗಳು ನಡೆಸಲಾಗಿತ್ತು. ಹಲ್ಲೆ, ದೂರು–ಪ್ರತಿದೂರು, ಅಶಾಂತಿಯ ವಾತಾವರಣ ತಪ್ಪಿಸಲು ಸರ್ಕಾರವು ಸರಿಯಾದ ಕ್ರಮ ವಹಿಸಬೇಕು ಎಂದು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಆಗ್ರಹಿಸಿದೆ.
ಹೈಕೋರ್ಟ್‌ನಲ್ಲಿ ಇರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬಳಿಕ ನಿಷೇಧದ ಚಿಂತನೆ ನಡೆಸಲಾಗುವುದು.ರಾಮಲಿಂಗಾರೆಡ್ಡಿ ಸಾರಿಗೆ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.