ಶನಿವಾರ, ಏಪ್ರಿಲ್ 17, 2021
27 °C

ದಂಡ ಹೆಚ್ಚಳ ಖಂಡಿಸಿ ಚಾಲಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ವಿಧಿಸಲಾಗುವ ದಂಡದ ಮೊತ್ತ ಹೆಚ್ಚಳ ಮಾಡಿರುವುದನ್ನು ಖಂಡಿಸಿ ‘ಆಟೋರಿಕ್ಷಾ ಡ್ರೈವರ್ ಯೂನಿಯನ್’ ನೇತೃತ್ವದಲ್ಲಿ ಆಟೊ ಚಾಲಕರು ಶನಿವಾರ ಪ್ರತಿಭಟನೆ ನಡೆಸಿದರು.‌

ನಗರದ ಪುರಭವನ ಎದುರು ಸೇರಿದ್ದ ಚಾಲಕರು, ‘ದಂಡ ಹೆಚ್ಚಳ ನಿರ್ಧಾರವು ಜನವಿರೋಧಿಯಾಗಿದೆ. ಸಾರಿಗೆ ಇಲಾಖೆಯು ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

‘ಓಲಾ, ಉಬರ್‌ ಸೇರಿದಂತೆ ಮೊಬೈಲ್ ಆ್ಯಪ್ ಆಧರಿತ ಟ್ಯಾಕ್ಸಿ ಕಂಪನಿಗಳಿಂದಾಗಿ ಈಗಾಗಲೇ ಆಟೊ ಚಾಲಕರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಸಂದರ್ಭದಲ್ಲೇ ದಂಡವನ್ನು ಶೇ 10ರಿಂದ ಶೇ 20ರಷ್ಟು ಹೆಚ್ಚಳ ಮಾಡಿರುವುದು ಚಾಲಕರನ್ನು ಮತ್ತಷ್ಟು ತೊಂದರೆಗೆ ಸಿಲುಕುವಂತೆ ಮಾಡಿದೆ’ ಎಂದು ದೂರಿದರು.

‘ಸಂಚಾರ ಪೊಲೀಸರಿಂದ ಕಿರುಕುಳ ಅನುಭವಿಸುವುದು ನಿತ್ಯದ ಗೋಳಾಗಿದೆ. ಎಲ್ಲೆಂದರಲ್ಲಿ ಫೋಟೊ ತೆಗೆದುಕೊಳ್ಳುವುದು, ಅಡ್ಡಗಟ್ಟಿ ಪ್ರಕರಣ ದಾಖಲಿಸಿಕೊಳ್ಳುವುದು, ದಂಡದ ನೆಪದಲ್ಲಿ ಅಕ್ರಮವಾಗಿ ಹಣ ಪಡೆಯುವುದು ಜಾಸ್ತಿ ಆಗಿದೆ. ಇದಕ್ಕೆ ಮೊದಲು ಕಡಿವಾಣ ಹಾಕಬೇಕು’ ಎಂದು ಚಾಲಕರು ಆಗ್ರಹಿಸಿದರು.

‘ನಗರದಲ್ಲಿ ಸಂಚಾರ ವ್ಯವಸ್ಥೆ ಶೋಚನೀಯ ಸ್ಥಿತಿಯಲ್ಲಿದೆ. ರಸ್ತೆ ಸುಧಾರಣೆ, ವಿಸ್ತರಣೆ, ವಾಹನಗಳ ತಂಗುದಾಣ ನಿರ್ಮಾಣದಂಥ ಯೋಜನೆಗಳನ್ನು ಸಮರ್ಪಕವಾಗಿ ರೂಪಿಸಿ ಜಾರಿಗೆ ತರಬೇಕಿದೆ. ಅದನ್ನು ಬಿಟ್ಟು ಸರ್ಕಾರದ ಖಜಾನೆ ತುಂಬಿಸಿಕೊಳ್ಳುವುದಕ್ಕಾಗಿ ದಂಡ ಏರಿಕೆ ಮಾಡಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಉದ್ಯೋಗ ಸಿಗದವರು ಆಟೊ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯದ ಸ್ಥಿತಿಯಲ್ಲಿ ದಿನಕ್ಕೆ ₹ 300 ಸಂಪಾದಿಸುವುದೂ ಕಷ್ಟವಾಗಿದೆ. ಮನುಷ್ಯ ತಪ್ಪು ಮಾಡುವುದು ಸಹಜ. ಅರಿವು ಇಲ್ಲದಂತೆ ಒಮ್ಮೊಮ್ಮೆ ಸಂಚಾರ ನಿಯಮ ಉಲ್ಲಂಘಿಸುತ್ತೇವೆ. ಪರಿಷ್ಕೃತ ದಂಡ ವಸೂಲಿ ಆರಂಭವಾದರೆ, ದುಡಿದ ಹಣವನ್ನೆಲ್ಲ ಪೊಲೀಸರಿಗೇ ನೀಡಬೇಕಾದ ಸ್ಥಿತಿ ಬರುತ್ತದೆ’ ಎಂದು ಅಳಲು ತೋಡಿಕೊಂಡರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು