ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೆನ್ಯೂ ರಸ್ತೆ ಅವ್ಯವಸ್ಥೆ

ರಸ್ತೆಯಲ್ಲಿ ಉಕ್ಕುತ್ತಿದೆ ಕೊಳಚೆ ನೀರು l ಪಾದಚಾರಿ ಮಾರ್ಗ ಒತ್ತುವರಿ l ಸಂಚಾರ ದಟ್ಟಣೆಯ ಕಿರಿಕಿರಿ
Last Updated 18 ನವೆಂಬರ್ 2020, 21:10 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಹೆಚ್ಚು ವಾಣಿಜ್ಯ ಚಟುವಟಿಕೆ ನಡೆಯುವ ರಸ್ತೆಗಳಲ್ಲಿ ಪ್ರಮುಖವಾಗಿರುವುದು ಅವೆನ್ಯೂ ರಸ್ತೆ. ಸರ್ಕಾರಕ್ಕೆ ಹೆಚ್ಚು ತೆರಿಗೆ ವರಮಾನ ತಂದುಕೊಡುವ ಸ್ಥಳವಾಗಿದ್ದರೂ, ಈ ರಸ್ತೆ ಅವ್ಯವಸ್ಥೆಯ ಆಗರವಾಗಿದೆ.

ಅಲ್ಲಲ್ಲಿ ಗುಂಡಿಗಳು, ಒತ್ತುವರಿಯಾದ ಪಾದಚಾರಿ ಮಾರ್ಗ, ಸಂಚಾರ ದಟ್ಟಣೆಯಂತಹ ಸಮಸ್ಯೆಗಳ ನಡುವೆಯೇ ಹೊಳೆಯಂತೆ ಕೊಳಚೆ ನೀರು ಇಲ್ಲಿ ಹರಿಯುತ್ತಲೇ ಇರುತ್ತದೆ. ಸುಮಾರು ಎರಡು ತಿಂಗಳಿಂದ ಇದೇ ಪರಿಸ್ಥಿತಿ ಇಲ್ಲಿದ್ದು, ವ್ಯಾಪಾರಿಗಳು, ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ.

ಅವೆನ್ಯೂ ರಸ್ತೆಯ ಮೈಸೂರು ಬ್ಯಾಂಕ್ ವೃತ್ತದ ಕಡೆಗಿನ ಭಾಗ ಚಿಕ್ಕಪೇಟೆ ವಾರ್ಡ್‌ (109) ವ್ಯಾಪ್ತಿಯಲ್ಲಿದೆ, ಇದೇ ರಸ್ತೆಯ ಕೆ.ಆರ್. ಮಾರುಕಟ್ಟೆ ಕಡೆಗಿನ ಭಾಗ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ (119)ಗೆ ಸೇರುತ್ತದೆ. ಈ ಎರಡೂ ವಾರ್ಡ್‌ಗಳ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘60 ವರ್ಷಗಳಿಂದ ಈ ರಸ್ತೆಯಲ್ಲಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದೆ. ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಈ ರಸ್ತೆ ಈ ಹಿಂದೆ ಯಾವತ್ತೂ ಇಷ್ಟು ಹದಗೆಟ್ಟಿರಲಿಲ್ಲ. ಲಾಕ್‌ಡೌನ್‌ ಮುಗಿದ ನಂತರ ಒಳಚರಂಡಿ ಪೈಪ್‌ಗಳನ್ನು ಅಳವಡಿಸಲು ಜಲಮಂಡಳಿಯವರು ರಸ್ತೆ ಅಗೆದಿದ್ದಾರೆ. ರಸ್ತೆ ಈಗ ಹದಗೆಟ್ಟು ಹೋಗಿದೆ. ಪೈಪ್‌ಗಳನ್ನೂ ಅಳವಡಿಸಿಲ್ಲ. ಹಳೆಯ ಪೈಪ್‌ಗಳು ಅಲ್ಲಲ್ಲಿ ಒಡೆದು ಹೋಗಿ ರಸ್ತೆಯ ತುಂಬಾ ಕೊಳಚೆ ನೀರು ಹರಿಯುತ್ತಿದೆ’ ಎಂದು ಹಿರಿಯ ನಾಗರಿಕ ಕೃಷ್ಣಮೂರ್ತಿ ದೂರಿದರು.

‘ಬಿಬಿಎಂಪಿಯವರಿಗೆ ಕೇಳಿದರೆ, ಜಲಮಂಡಳಿ ಕಾಮಗಾರಿ ಮುಗಿದ ನಂತರ ರಸ್ತೆ ದುರಸ್ತಿ ಮಾಡಿಸುವುದಾಗಿ ಹೇಳುತ್ತಾರೆ. ಹೊಸ ಪೈಪ್‌ಗಳನ್ನು ಹಾಕಲು ಸಿದ್ಧವಿದ್ದೇವೆ. ಆದರೆ, ರಸ್ತೆ ಅಗೆಯಬೇಕು. ಇದಕ್ಕಾಗಿ ಬಿಬಿಎಂಪಿ ಹಾಗೂ ಸಂಚಾರ ಪೊಲೀಸರ ಅನುಮತಿ ಪಡೆಯಬೇಕು ಎಂದು ಜಲಮಂಡಳಿಯವರು ಹೇಳುತ್ತಾರೆ. ಯಾರೂ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಶೀಘ್ರವೇ ದುರಸ್ತಿ: ‘ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿರುವುದು ಗಮನಕ್ಕೆ ಬಂದಿದೆ. ಲಾಕ್‌ಡೌನ್‌ ನಂತರ ಹೊಸ ಪೈಪ್‌ಗಳನ್ನು ಅಳವಡಿಸುವ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ಆದರೆ, ಪೂರ್ಣ ರಸ್ತೆ ಅಗೆಯಲು ಪೊಲೀಸರ ಅನುಮತಿ ಬೇಕು. ದಟ್ಟಣೆ ಹೆಚ್ಚಾಗುವ ಕಾರಣದಿಂದ ಅನುಮತಿ ಸಿಗುತ್ತಿಲ್ಲ. ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿಗೆ ಪತ್ರ ಬರೆದು, ಅನುಮತಿ ಪಡೆದು ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಜಲಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚನ್ನಪ್ಪಾಜಿ ತಿಳಿಸಿದರು.

‘ರಸ್ತೆಯ ಇಕ್ಕೆಲಗಳಲ್ಲಿ ಉದ್ದಕ್ಕೂ ಅಂಗಡಿಗಳಿವೆ. ಸಾಕಷ್ಟು ಹೋಟೆಲ್‌ಗಳು ಇವೆ. ಅನೇಕರು ಕಸ, ಪ್ಲಾಸ್ಟಿಕ್‌ಗಳನ್ನು, ಒಳಚರಂಡಿಯ ಗುಂಡಿಯೊಳಗೆ ಎಸೆಯುತ್ತಾರೆ. ಉಳಿದ ಅನ್ನ, ಇತರೆ ಆಹಾರ ಪದಾರ್ಥವನ್ನೂ ಇಲ್ಲಿಯೇ ಎಸೆದು ಹೋಗುತ್ತಾರೆ. ಒಳಚರಂಡಿಗಳನ್ನು ಹಲವು ಬಾರಿ ಸ್ವಚ್ಛಗೊಳಿಸಿ, ನೀರು ಹರಿಯಲು ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ, ಒಳಚರಂಡಿಯಲ್ಲಿ ಹೀಗೆ ತ್ಯಾಜ್ಯ ಎಸೆದಾಗ ತೊಂದರೆಯಾಗುತ್ತದೆ’ ಎಂದು ಅವರು ವಿವರಿಸಿದರು.

***

‘ಬಸ್‌ಗಳೂ ಬರುತ್ತಿಲ್ಲ’

‘ರಸ್ತೆ ಹದಗೆಟ್ಟಿರುವುದರಿಂದ ಲಾಕ್‌ಡೌನ್‌ ನಂತರ ಈ ಮಾರ್ಗದಲ್ಲಿ ಬಸ್‌ಗಳೂ ಸಂಚರಿಸುತ್ತಿಲ್ಲ. ವಿಧಾನಸೌಧಕ್ಕೆ ಹೋಗುವ ಬಸ್‌ಗಳು ಬೆಳಿಗ್ಗೆ 9.30ರಿಂದ 11ರವರೆಗೆ ಅವೆನ್ಯೂ ರಸ್ತೆ ಮೂಲಕವೇ ಹೋಗುತ್ತಿದ್ದವು. ಮೈಸೂರು ಬ್ಯಾಂಕ್‌ ವೃತ್ತಕ್ಕೆ ಹೋಗಲು ಇದೇ ಪ್ರಮುಖ ರಸ್ತೆ. ಚಿಕ್ಕಪೇಟೆಯಲ್ಲಿ ಮೆಟ್ರೊ ನಿಲ್ದಾಣವಿರುವುದರಿಂದ ಇದೇ ಮಾರ್ಗದ ಮೂಲಕ ಸಾವಿರಾರು ಜನ ಹೋಗುತ್ತಾರೆ. ಈಗ ಬಸ್‌ಗಳು ಬರುತ್ತಿಲ್ಲ. ಪ್ರಶ್ನಿಸಿದರೆ ರಸ್ತೆಯೇ ಸರಿಯಿಲ್ಲ. ಹೇಗೆ ಬರುವುದು ಎನ್ನುತ್ತಾರೆ’ ಎಂದು ಸ್ಥಳೀಯರು ಹೇಳಿದರು.

‘ಆಟೊ ಚಾಲಕರ ಲಾಬಿಯಿಂದ ಈ ಮಾರ್ಗದಲ್ಲಿ ಬಸ್‌ ಸಂಚರಿಸುತ್ತಿಲ್ಲ. ಚಿಕ್ಕಪೇಟೆಯಲ್ಲಿ ಬಟ್ಟೆ ಮತ್ತಿತರ ವಸ್ತುಗಳನ್ನು ಖರೀದಿಸುವ ಗ್ರಾಹಕರ ಕೈಯಲ್ಲಿ ಬಹಳಷ್ಟು ಲಗೇಜ್‌ಗಳಿರುತ್ತವೆ. ಇದನ್ನು ಗಮನಿಸುವ ಆಟೊ ಚಾಲಕರು ದುಪ್ಪಟ್ಟು ಬಾಡಿಗೆ ಕೇಳುತ್ತಾರೆ. ಎಲ್ಲ ರೀತಿಯಿಂದಲೂ ಜನ ಇಲ್ಲಿ ತೊಂದರೆಗೀಡಾಗುತ್ತಿದ್ದಾರೆ’ ಎಂದು ನಿವಾಸಿ ಕೃಷ್ಣಮೂರ್ತಿ ದೂರಿದರು.

****

‘ರಸ್ತೆ ಸರಿಯಿಲ್ಲ, ಫುಟ್‌ಪಾತ್‌ನಲ್ಲಿ ಜಾಗವೇ ಇಲ್ಲ’

‘ರಸ್ತೆಯಲ್ಲಿ ನಡೆದು ಹೋಗಲು ಸಾಧ್ಯವೇ ಇಲ್ಲದಂತೆ ಕೊಳಚೆ ನೀರು ಹರಿಯುತ್ತದೆ. ಪಾದಚಾರಿ ಮಾರ್ಗದಲ್ಲಾದರೂ ಹೋಗೋಣವೆಂದರೆ ಅಲ್ಲಿ ಕಾಲಿಡಲೂ ಜಾಗವಿಲ್ಲ. ಬಾಡಿಗೆ ಕೊಟ್ಟು ರಸ್ತೆ ಬದಿಯಲ್ಲಿನ ಮಳಿಗೆಯನ್ನಾದರೂ ಪಡೆಯಬಹುದು. ಫುಟ್‌ಪಾತ್‌ನಲ್ಲಿ ಸರಾಗವಾಗಿ ನಡೆದು ಹೋಗಲು ಆಗುವುದಿಲ್ಲ’ ಎಂದು ಸ್ಥಳೀಯರು ದೂರಿದರು.

‘ಸಂಚಾರ ಪೊಲೀಸರಿಗೆ, ಬಿಬಿಎಂಪಿಗೆ ಹಲವು ಬಾರಿ ದೂರು ಕೊಟ್ಟಿದ್ದೇವೆ. ಹೀಗೆ ದೂರು ನೀಡಿದಾಗ ಬಂದು ಒಂದು ಹತ್ತು ಅಂಗಡಿಗಳನ್ನು ತೆರವುಗೊಳಿಸಿ ಹೋಗುತ್ತಾರೆ. ಎರಡು–ಮೂರು ದಿನ ಬಿಟ್ಟರೆ ಮತ್ತೆ ಅದೇ ಪರಿಸ್ಥಿತಿ ಇರುತ್ತದೆ. ಎರಡೂ ಬದಿಯ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಮಾಡುವುದು ಆಗದಿದ್ದರೆ, ಒಂದು ಬದಿಯಲ್ಲಾದರೂ ಸಾರ್ವಜನಿಕರಿಗೆ ಸರಾಗವಾಗಿ ಓಡಾಡಲು ವ್ಯವಸ್ಥೆ ಮಾಡಿ ಎಂದು ಕೇಳಿದ್ದೇವೆ. ಆ ಬೇಡಿಕೆಯೂ ಈಡೇರಿಲ್ಲ’ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

****

ಲಾಕ್‌ಡೌನ್‌ ತೆರವು ಆದಾಗ ಬಂದು ಪೈಪ್‌ ಹಾಕಿದ್ದರು. ಆಗಿನಿಂದ ಕೊಳಚೆ ನೀರು ಹೀಗೆ ರಸ್ತೆಯಲ್ಲಿ ಹರಿಯುತ್ತಿದೆ. ನಿತ್ಯ ಹಲವರು ಬಿದ್ದು ಗಾಯ ಗೊಳ್ಳುತ್ತಾರೆ. ಮಹಿಳೆಯೊಬ್ಬರು ಬಿದ್ದು ತಲೆಗೆ ಗಾಯವಾಗಿತ್ತು
-ಅಸ್ಲಂ ಪಾಷಾ, ಬಟ್ಟೆ ವ್ಯಾಪಾರಿ, ಅವೆನ್ಯೂ ರಸ್ತೆ

ಕೊಳಚೆ ನೀರು ಹರಿಯುತ್ತಿರುವುದರಿಂದ ದುರ್ವಾಸನೆ ಹೆಚ್ಚಾಗಿದೆ. ಗುಂಡಿ–ದಿಣ್ಣೆ ತುಂಬಿರುವ ಈ ರಸ್ತೆಯಲ್ಲಿ ಸಂಚರಿಸಿ ವಾಹನಗಳೂ ಹಾಳಾಗುತ್ತಿವೆ. ಅಧಿಕಾರಿಗಳಿಗೆ ಅನೇಕ ಬಾರಿ ಹೇಳಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ
-ಪ್ರವೀಣ್, ಹೋಟೆಲ್‌ ಮಾಲೀಕ, ಅವೆನ್ಯೂ ರಸ್ತೆ

ಆದಷ್ಟು ಬೇಗ ಸಮಸ್ಯೆ ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಬಿಬಿಎಂಪಿ ಮಾತ್ರವಲ್ಲದೆ, ಜಲಮಂಡಳಿಯ ಮುಖ್ಯ ಎಂಜಿನಿಯರ್‌ಗೂ ಕರೆಸಿ ಮಾತನಾಡಿ, ಸೂಚನೆ ನೀಡುತ್ತೇನೆ.
-ಎನ್. ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ

ಪಾದಚಾರಿ ಮಾರ್ಗ ಒತ್ತುವರಿ ತೆರವು ಮಾಡಲು ಹಲವು ಬಾರಿ ಸೂಚನೆ ನೀಡಲಾಗಿದೆ. ಆದರೆ, ಯಾವ ಅಂಗಡಿಗಳು ಪರವಾನಗಿ ಪಡೆದಿಲ್ಲ ಎಂಬ ಮಾಹಿತಿ ಬಿಬಿಎಂಪಿಯಿಂದ ನಮಗೆ ಬರಬೇಕು. ನಂತರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

-ಡಾ.ಎಸ್.ಕೆ. ಸೌಮ್ಯಲತಾ, ಡಿಸಿಪಿ (ಸಂಚಾರ), ಪಶ್ಚಿಮ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT