ಶನಿವಾರ, ಜನವರಿ 18, 2020
19 °C
ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿದ ರೆಫರಲ್ l ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಕೊರತೆ

ಆಯುಷ್ಮಾನ್ ಸೇವೆಗೆ ತಪ್ಪದ ಅಲೆದಾಟ

ವರುಣ್ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಹಾಗೂ ತಜ್ಞ ವೈದ್ಯರ ಕೊರತೆಯಿಂದಾಗಿ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯಡಿ ಸೇವೆ ಪಡೆದುಕೊಳ್ಳುವುದು ರೋಗಿಗಳಿಗೆ ಸವಾಲಾಗಿದೆ. ಇದರಿಂದಾಗಿ 87 ಸಾವಿರಕ್ಕೂ ಅಧಿಕ ರೋಗಿಗಳು ಚಿಕಿತ್ಸೆಗಾಗಿ ರೆಫರಲ್ ಆಧಾರದ ಮೇಲೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಿದ್ದಾರೆ. 

ಈ ಹಿಂದೆ ‘ಯಶಸ್ವಿನಿ’ ಯೋಜನೆಯಡಿ ಫಲಾನುಭವಿಗಳು ನೇರವಾಗಿ ನೋಂದಾಯಿತ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೆ ತೆರಳಿ, ಅಗತ್ಯ ಚಿಕಿತ್ಸೆಗಳನ್ನು ಪಡೆದುಕೊಳ್ಳಬಹುದಾಗಿತ್ತು. ಆದರೆ, ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ’ ಯೋಜನೆಯಡಿ ಸೇವೆ ಪಡೆಯಲು ರೋಗಿಗಳು ಮೊದಲು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗಬೇಕು. ಅಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ಅಥವಾ ವೈದ್ಯರು ಕೈಚೆಲ್ಲಿದಲ್ಲಿ ಮಾತ್ರ ರೆಫರಲ್ ಆಧಾರದ ಮೇಲೆ ಬೇರೊಂದು ಆಸ್ಪತ್ರೆಗೆ ತೆರಳಬೇಕಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಡ–ಮಧ್ಯಮ ವರ್ಗದ ರೋಗಿಗಳು ಬಂದು, ದುಬಾರಿ ಚಿಕಿತ್ಸೆಗಳನ್ನು ಬಹುತೇಕ ಉಚಿತವಾಗಿ ಪಡೆಯಬೇಕೆನ್ನುವುದು ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಆದರೆ, ಯೋಜನೆಯ ಈ ಆಶಯವೇ ಪ್ರಾಣ ಸಂಕಟ ತಂದೊಡ್ಡಿದೆ ಎಂದು ರೋಗಿಗಳು ಅಳಲು ತೋಡಿಕೊಂಡಿದ್ದಾರೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ದಾಖಲಾತಿಯ ಪ್ರಕಾರ‌ ಯೋಜನೆಯಡಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 2.47 ಲಕ್ಷ (ಆಗಸ್ಟ್ ಅಂತ್ಯಕ್ಕೆ) ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಯೋಜನೆಯ ನಿಯಮಗಳ ಪ್ರಕಾರ ತುರ್ತು ಚಿಕಿತ್ಸೆಗಳಿಗೆ ಮಾತ್ರ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ. 

ಸಿಗದ ವೈದ್ಯಕೀಯ ಸೇವೆ: ದ್ವಿತೀಯ ಕ್ಲಿಷ್ಟಕರ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿರದಿದ್ದರೆ ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ರೆಫರಲ್ ನೀಡಬೇಕೆಂಬ ನಿಯಮವಿದೆ. ಈ ಹಂತದ ಚಿಕಿತ್ಸೆಗಳಿಗೆ ಯೋಜನೆಯಡಿ 1,06,036 ಮಂದಿ ಆರೋಗ್ಯ ಸೇವೆಗಳನ್ನು ಪಡೆದುಕೊಂಡಿದ್ದಾರೆ. ಆದರೆ, ಬಹುತೇಕರಿಗೆ ಮೊದಲು ದಾಖಲಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆತಿಲ್ಲ. ಹಾಗಾಗಿ ರೆಫರಲ್ ಆಧಾರದ ಮೇಲೆ ಖಾಸಗಿ ಆಸ್ಪತ್ರೆಗಳಿಗೆ ತೆರಳಿ, ಚಿಕಿತ್ಸೆ ಪಡೆದುಕೊಂಡಿದ್ದಾರೆ. 

‘ತಜ್ಞ ವೈದ್ಯರನ್ನು ನೇಮಿಸುವ ಜತೆಗೆ ಮೂಲಸೌಕರ್ಯ ಒದಗಿಸಿದಲ್ಲಿ ದಾಖಲಾದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ರೋಗಿಗಳಿಗೂ ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆ ಇರುತ್ತದೆ. ಸದ್ಯ ಜಾರಿ
ಯಲ್ಲಿರುವ ವೈದ್ಯಕೀಯ ಕಾಯ್ದೆಗಳು ಕೂಡ ಚಿಕಿತ್ಸೆಗೆ ತೊಡಕಾಗಿದ್ದು, ವೈದ್ಯರು ಅಪಾಯವನ್ನು ಎದುರು ಹಾಕಿಕೊಳ್ಳಲು ಸಿದ್ಧವಿಲ್ಲ. ಚಿಕಿತ್ಸೆ ನೀಡುವುದಾಗಿ ಆಸ್ಪತ್ರೆಯಲ್ಲಿಯೇ ಉಳಿಸಿಕೊಂಡಾಗ ರೋಗಿ ಬದುಕುಳಿಯದಿದ್ದರೆ ಆತನ ಕುಟುಂಬದವರು ಹಲ್ಲೆ ಮಾಡುವ ಸಾಧ್ಯತೆಗಳಿವೆ. ಇದು ಕೂಡ ರೆಫರಲ್ ಹೆಚ್ಚಲು ಕಾರಣ’ ಎನ್ನುತ್ತಾರೆ ವೈದ್ಯರು.

ಅಂಕಿ–ಅಂಶಗಳು 

87,690 -ರೆಫರಲ್ ಆಧಾರದ ಮೇಲೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರು

1.05 ಕೋಟಿ -ಯೋಜನೆಗಳ ಫಲಾನುಭವಿ ಕುಟುಂಬಗಳ ಸಂಖ್ಯೆ

405 -ಯೋಜನೆಯಡಿ ಚಿಕಿತ್ಸೆ ಒದಗಿಸುತ್ತಿರುವ ಸರ್ಕಾರಿ ಆಸ್ಪತ್ರೆಗಳು

371 -ಯೋಜನೆಯಡಿ ಚಿಕಿತ್ಸೆ ಒದಗಿಸುತ್ತಿರುವ ಖಾಸಗಿ ಆಸ್ಪತ್ರೆಗಳು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು