ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತು ವರ್ಷಗಳಿಂದ ನನ್ನ ತೇಜೋವಧೆ: ಮಾಜಿ ಸಂಸದ ಚಂದ್ರಪ್ಪ ಕಿಡಿ

Published 12 ಮಾರ್ಚ್ 2024, 13:50 IST
Last Updated 12 ಮಾರ್ಚ್ 2024, 13:50 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ‘ಕೈ’ ಟಿಕೆಟ್‌ ಆಕಾಂಕ್ಷಿ, ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ ಅವರು ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರನ್ನು ಮಂಗಳವಾರ ಭೇಟಿ ಮಾಡಿ ಚರ್ಚೆ ನಡೆಸಿದರು.

ತಾಜ್ ವೆಸ್ಟೆಂಡ್‌ ಹೋಟೆಲ್‌ನಲ್ಲಿ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಚಂದ್ರಪ್ಪ, ಚಿತ್ರದುರ್ಗ ಟಿಕೆಟ್ ಕುರಿತ ಗೊಂದಲದ ಬಗ್ಗೆ ಮಾತುಕತೆ ನಡೆಸಿದರು. ‘ನನ್ನ ಜಾತಿ    ಪ್ರಮಾಣಪತ್ರದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ಸೃಷ್ಟಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭೇಟಿಯ ಬಳಿಕ ಮಾತನಾಡಿದ ಚಂದ್ರಪ್ಪ, ‘ನಾನು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಘೋಷಿಸಿದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ನನ್ನ ಹೆಸರನ್ನು ಯಾಕೆ ತಡೆಹಿಡಿಯಲಾಯಿತೆಂದು ಗೊತ್ತಿಲ್ಲ. ಈ ಬಗ್ಗೆ ವರಿಷ್ಠರನ್ನು ಕೇಳುವುದಕ್ಕೂ ಹೋಗಿಲ್ಲ. ತಾಂತ್ರಿಕ ಕಾರಣಕ್ಕೆ ತಡೆಹಿಡಿದಿರಬಹುದು’ ಎಂದರು.

ತಮ್ಮದು ನಕಲಿ ಜಾತಿ ಪ್ರಮಾಣಪತ್ರ ಎಂಬ ಆರೋಪದ ಬಗ್ಗೆ ಬೇಸರ ವ್ಯಕ್ತಪಡಿಸಿದ ಚಂದ್ರಪ್ಪ, ‘ಈ ಬಗ್ಗೆ ನಮ್ಮ ಕಡೆಯವರು ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ನನ್ನದು ಮೂಲ ಜಾತಿ ಪ್ರಮಾಣಪತ್ರ. ನನ್ನ ಜಾತಿ ಪ್ರಮಾಣಪತ್ರವನ್ನು ಕೆಲವು ಟಿಕೆಟ್‌ ಆಕಾಂಕ್ಷಿಗಳು ನಕಲಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಹತ್ತು ವರ್ಷಗಳಿಂದ ನನ್ನನ್ನು ತೇಜೋವಧೆ ಮಾಡುತ್ತಿದ್ದಾರೆ. ಆದರೆ, ಚಂದ್ರಪ್ಪ ಏನೆಂಬುದು ಮತದಾರರಿಗೆ ಗೊತ್ತಿದೆ. ವಿಶಾಲ ಹೃದಯದಿಂದ ಚಿತ್ರದುರ್ಗ ಮತದಾರರು ನನ್ನನ್ನು ಈ ಹಿಂದೆ ಗೆಲ್ಲಿಸಿದ್ದರು. ನಕಲಿ ಗಿರಾಕಿಗಳಿಗೆ ದೇವರು ಒಳ್ಳೆಯದು ಮಾಡಲಿ’ ಎಂದರು.

‌‘ಟಿಕೆಟ್ ಕೇಳಲು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶವಿದೆ. ಆದರೆ, ಇನ್ನೊಬ್ಬರನ್ನು ತೇಜೋವಧೆ ಮಾಡಬಾರದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT