ಪೀಣ್ಯ ದಾಸರಹಳ್ಳಿ: ಬಾಗಲಗುಂಟೆಯ ಮಾರಮ್ಮ ದೇವಸ್ಥಾನದಲ್ಲಿ ಶಾಸಕ ಎಸ್. ಮುನಿರಾಜು ನೇತೃತ್ವದಲ್ಲಿ ಪಕ್ಷದ ಎಲ್ಲಾ ಮುಖಂಡರು ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿದರು.
ಬಳಿಕ ಮಾತನಾಡಿದ ಅವರು 'ದೇಶದ ಎಲ್ಲಾ ದೇಗುಲಗಳು ಹಾಗೂ ಪುಣ್ಯಕ್ಷೇತ್ರಗಳು ಸ್ವಚ್ಛ, ಸುಂದರವಾಗಿ ಕಂಗೊಳಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಮಾರಮ್ಮ ದೇವಸ್ಥಾನ, ದಾಸರಹಳ್ಳಿಯ ಮಹೇಶ್ವರಮ್ಮ ದೇವಸ್ಥಾನ, ಕ್ಷೇತ್ರದ ಹಲವು ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದೇವೆ' ಎಂದರು.
'22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ನಡೆಯುತ್ತಿದ್ದು, ಆ ದಿನ ಸಂಜೆ 5 ಗಂಟೆಯ ನಂತರ ಪ್ರತಿ ಮನೆಯಲ್ಲೂ ಕನಿಷ್ಠ ಐದು ದೀಪಗಳನ್ನು ಹಚ್ಚಿ ಶ್ರೀರಾಮನ ಪೂಜೆ, ಭಜನೆ ಮಾಡಲು ವಿನಂತಿಸುತ್ತಿದ್ದೇನೆ‘ ಎಂದರು.
ಇದೇ ವೇಳೆ ಸಮೀಪದ ಸರ್ಕಾರಿ ಪ್ರಾಥಮಿಕ ಶಾಲೆ ಹಿಂಭಾಗ ಕಸ ಸುರಿಯುತ್ತಿದ್ದ ಜಾಗವನ್ನು ಪೌರಕಾರ್ಮಿಕರು ಸ್ವಚ್ಛಗೊಳಿಸಿ, ರಂಗೋಲಿ ಹಾಕಿದರು. ಪೌರಕಾರ್ಮಿಕರಿಗೆ ಶಾಸಕ ಎಸ್.ಮುನಿರಾಜು ಅಭಿನಂದನೆ ಸಲ್ಲಿಸಿ, ಎಲ್ಲರಿಗೂ ಎಳನೀರು ಕೊಡಿಸಿದರು.
ದಾಸರಹಳ್ಳಿ ಮಂಡಲ ಅಧ್ಯಕ್ಷ ಸೋಮಶೇಖರ್ ಬಿಜೆಪಿ ಮುಖಂಡರಾದ ಸುಜಾತ ಎಸ್. ಮುನಿರಾಜು, ವಿಜಯಲಕ್ಷ್ಮಿ, ರಾಜೇಶ್ವರಿ, ಸವಿತಾ, ನಿರ್ಮಲ, ಪೌರಕಾರ್ಮಿಕರು ಈ ಭಾಗದ ಮುಖಂಡರು, ಸ್ಥಳೀಯರು ಇದ್ದರು.