ಮಂಗಳವಾರ, ನವೆಂಬರ್ 12, 2019
28 °C
ಕಾನೂನು ಬಾಹಿರವಾಗಿ ಕಂದಾಯ ನಿವೇಶನಗಳ ಮಾರಾಟ

ಸಬ್‌ ರಿಜಿಸ್ಟ್ರಾರ್‌ಗಳಿಗೆ ನಿರೀಕ್ಷಣಾ ಜಾಮೀನು

Published:
Updated:

ಬೆಂಗಳೂರು: ವಿವಿಧೆಡೆ 350ಕ್ಕೂ ಹೆಚ್ಚು ಕಂದಾಯ ನಿವೇಶನಗಳನ್ನು ನಿಯಮ ಉಲ್ಲಂಘಿಸಿ ಸೇಲ್ ಅಗ್ರಿಮೆಂಟ್ ಮೇಲೆ ನೋಂದಣಿ ಮಾಡಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಕೆಲವು ಸಬ್‌ ರಿಜಿಸ್ಟ್ರಾರ್‌ಗಳೂ ಸೇರಿದಂತೆ 20 ಮಂದಿಗೆ ಇಲ್ಲಿನ 56 ಸಿಸಿಎಚ್‌ ನ್ಯಾಯಾಲಯ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.

ಆರೋಪಿಗಳು ₹ 50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್‌ ಹಾಗೂ ಇಬ್ಬರು ಶ್ಯೂರಿಟಿಗಳಿಂದ ಅಷ್ಟೇ ಮೊತ್ತದ ಭದ್ರತೆ ಕೊಡಿಸಬೇಕು ಎಂಬ ಷರತ್ತಿನ ಮೇಲೆ ನ್ಯಾಯಾಧೀಶ ವಿ. ನಾರಾಯಣ ಪ್ರಸಾದ್‌ ಮಂಗಳವಾರ ನಿರೀಕ್ಷಣಾ ಜಾಮೀನು ನೀಡಿದರು. ಕೇಂದ್ರ ಅಪರಾಧ ದಳದ (ಸಿಸಿಬಿ) ಸೈಬರ್‌ ವಿಭಾಗ ಈ ಪ್ರಕರಣದ ತನಿಖೆ ನಡೆಸುತ್ತಿದೆ.

ವಿ. ಪ್ರಸನ್ನ, ಎಸ್‌. ಭಾಸ್ಕರ್‌ ಸೇರಿದಂತೆ ಕೆಲ ಸಬ್‌ ರಿಜಿಸ್ಟ್ರಾರ್‌ಗಳು, ಕಂಪ್ಯೂಟರ್‌ ಎಂಜಿನಿಯರ್‌ ಹಾಗೂ ಡೇಟಾ ಎಂಟ್ರಿ ಆಪರೇಟರ್‌ಳಾದ ವಿ. ಹೇಮಾವತಿ, ಎ.ಎಚ್‌. ಗೋವಿಂದರಾಜು, ಮಂಗಳ ಗೌರಮ್ಮ, ಎನ್‌.ನಾಗರತ್ನಮ್ಮ, ಎಂ. ಸಂಜೀವ ರೆಡ್ಡಿ, ಎಚ್‌.ಎಸ್‌. ಅರವಿಂದ, ಕೆ.ಆರ್. ನಾಗರಾಜ್, ಬಿ.ಟಿ. ಲಲಿತಾ ಅಮೃತೇಶ, ಬಿ. ಮಧುಕುಮಾರ್, ರಂಜನಾ ಮತ್ತಿತರರು ಜಾಮೀನು ಪಡೆದವರಲ್ಲಿ ಸೇರಿದ್ದಾರೆ.

ಆರೋಪಿಗಳು ಏಳು ದಿನದೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಕರೆದಾಗಲೆಲ್ಲಾ ವಿಚಾರಣೆಗೆ ಹೋಗಬೇಕು. ತಮ್ಮ ಬಳಿ ಇರುವ ದಾಖಲೆಗಳನ್ನು ತನಿಖೆಗೆ ಒಪ್ಪಿಸಬೇಕು.ಸಾಕ್ಷ್ಯ ನಾಶಪಡಿಸಬಾರದು. ತನಿಖಾಧಿಕಾರಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಬಾರದು ಎಂಬ ಷರತ್ತುಗಳನ್ನು ಕೋರ್ಟ್‌ ವಿಧಿಸಿದೆ.

ಈ ಷರತ್ತುಗಳನ್ನು ಆರೋಪಿಗಳು ಉಲ್ಲಂಘಿಸಿದರೆ ಜಾಮೀನು ರದ್ದುಪಡಿಸುವಂತೆ ತನಿಖಾಧಿಕಾರಿ ಅರ್ಜಿ ಸಲ್ಲಿಸಬಹುದು ಎಂದೂ ಅದು ಹೇಳಿದೆ. ರಾಜ್ಯದಲ್ಲಿ 350ಕ್ಕೂ ಹೆಚ್ಚು ಕಂದಾಯ ನಿವೇಶನಗಳನ್ನು ನಿಯಮ ಉಲ್ಲಂಘಿಸಿ ಖರೀದಿದಾರರಿಗೆ ನೋಂದಣಿ ಮಾಡಿದ ಆರೋಪ ಇವರೆಲ್ಲರ ಮೇಲಿದೆ. ಸಬ್‌ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಭ್ರಷ್ಟಾಚಾರನಡೆದಿರುವ ಶಂಕೆ ವ್ಯಕ್ತವಾಗಿದೆ.

ಪ್ರತಿಕ್ರಿಯಿಸಿ (+)