ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಸಮಾರಂಭಗಳಿಗೆ ನಿಷೇಧ– ಆದೇಶ ವಾಪಸ್‌

ಬಿಬಿಎಂಪಿ: ಶಿವಾಜಿನಗರ ವೈದ್ಯಾಧಿಕಾರಿ ಪತ್ರದಿಂದ ಗೊಂದಲ ಸೃಷ್ಟಿ
Last Updated 13 ಮಾರ್ಚ್ 2020, 8:32 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ 19 ಹಾಗೂ ಕಾಲರಾ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ, ಹೋಟೆಲ್‌ಗಳಲ್ಲಿ, ಕಲ್ಯಾಣ ಮಂಟಪಗಳಲ್ಲಿ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳನ್ನು ಹಮ್ಮಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂಬುದಾಗಿ ಶಿವಾಜಿನಗರ ವಲಯದ ಆರೋಗ್ಯ ಮತ್ತು ವೈದ್ಯಾಧಿಕಾರಿ ಶಿವೇಗೌಡ ಅವರು ಗುರುವಾರ ಬರೆದ ಪತ್ರ ಗೊಂದಲ ಸೃಷ್ಟಿಸಿದೆ.

ಈ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಶಿವೇಗೌಡ ಅವರು, ‘ಪತ್ರದಲ್ಲಿ ನೀಡಿದ ಸೂಚನೆಯನ್ನು ಹಿಂಪಡೆದಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ಹೋಟೆಲ್‌ ಅಥವಾ ಕಲ್ಯಾಣ ಮಂಟಪಗಳಲ್ಲಿ ಯಾವುದಾದರೂ ಸಭೆ ಸಮಾರಂಭ ಹಮ್ಮಿಕೊಂಡಿದ್ದು ಕಂಡುಬಂದರೆ ನಿಮ್ಮ ಉದ್ದಿಮೆ ಪರವಾನಗಿಯನ್ನೇ ರದ್ದುಪಡಿಸಲಾಗುವುದು. ಹೋಟೆಲ್‌ ಅಥವಾ ಕಲ್ಯಾಣ ಮಂಟಪಗಳನ್ನು ಮುಚ್ಚಿಸಲಾಗುವುದು’ ಎಂದೂ ಅವರು ಎಚ್ಚರಿಕೆ ನೀಡಿದ್ದರು. ‘ಪಾಲಿಕೆ ಆಯುಕ್ತರ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದೂ ಉಲ್ಲೇಖಿಸಿದ್ದರು. ಈ ಕ್ರಮಕ್ಕೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿತ್ತು. ಬಳಿಕ ಎಚ್ಚೆತ್ತುಕೊಂಡ ಪಾಲಿಕೆಯ ಹಿರಿಯ ಅಧಿಕಾರಿಗಳು ಶಿವೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಈ ಬೆಳವಣಿಗೆ ಕುರಿತು ಸ್ಪಷ್ಟೀಕರಣ ನೀಡಿರುವ ಪಾಲಿಕೆ ವಿಶೇಷ ಆಯುಕ್ತ (ಆರೋಗ್ಯ) ರವಿಕುಮಾರ್‌ ಸುರಪುರ್‌, ‘ಇಂತಹ ಸೂಚನೆ ಅಥವಾ ತಿಳಿವಳಿಕೆ ನೀಡಲು ಶಿವೇಗೌಡ ಅವರಿಗೆ ಯಾವುದೇ ನಿರ್ದೇಶನ ನೀಡಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೇಳಲಾಗಿದೆ’ ಎಂದಿದ್ದಾರೆ.

‘ತಾವು ಬರೆದ ಪತ್ರವನ್ನು ಹಿಂಪಡೆದಿರುವಾಗಿ ಶಿವೇಗೌಡ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಈ ವಿಚಾರದಲ್ಲಿ ಜನರಲ್ಲಿ ಗೊಂದಲಗಳು ಉಂಟಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ’ ಎಂದು ರವಿಕುಮಾರ್‌ ತಿಳಿಸಿದ್ದಾರೆ.

ಕೊರೊನಾ ಸೋಂಕು ಮತ್ತು ಕಾಲರಾ ರೋಗಕ್ಕೆ ಸಂಬಂಧಿಸಿದಂತೆ ಯಾವುದೇ ಆದೇಶ ಅಥವಾ ಸಾರ್ವಜನಿಕ ಮಾಹಿತಿಯನ್ನು ವಿಶೇಷ ಆಯುಕ್ತರ (ಆರೋಗ್ಯ) ಕಚೇರಿಯಿಂದಲೇ ಪ್ರಕಟಿಸಲಾಗುತ್ತದೆ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT