ಗುರುವಾರ , ಆಗಸ್ಟ್ 22, 2019
25 °C

‘ಕುರ್ಬಾನಿ’ ನಿಷೇಧಕ್ಕೆ ಬಿಜೆಪಿ, ಬಜರಂಗ ದಳ ಆಗ್ರಹ

Published:
Updated:

ಬೆಂಗಳೂರು: ರಾಜ್ಯದಲ್ಲಿ ಗೋವುಗಳು ಸೇರಿದಂತೆ ಎಲ್ಲ ಪ್ರಾಣಿಗಳ ಬಲಿ ನಿಷೇಧ ಕಾಯ್ದೆ ಜಾರಿ ಇರುವುದರಿಂದ ಆ.11 ರಂದು ಬಕ್ರೀದ್‌ ಸಂದರ್ಭದಲ್ಲಿ ‘ಕುರ್ಬಾನಿ’ಗೆ ಅವಕಾಶ ನೀಡಬಾರದು ಎಂದು  ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಬಿಜೆಪಿ ಮನವಿ ಮಾಡಿದೆ.

ಬಕ್ರೀದ್‌ ದಿನ ಪ್ರಾಣಿಗಳ ಶೇಖರಣೆ ಮತ್ತು ಸಾಗಣೆಗೆ ಅವಕಾಶ ನೀಡಬಾರದು. ರಾಜ್ಯದಲ್ಲಿ ಎಲ್ಲ ಪ್ರಾಣಿಗಳ ಬಲಿಯನ್ನು ನಿಷೇಧಿಸಿ ‘ಕರ್ನಾಟಕ ಬಲಿ ನಿಷೇಧ ಕಾಯಿದೆ 1959’ ರಿಂದ ಜಾರಿಯಲ್ಲಿದೆ. ಈ ಕಾನೂನು 1959 ರಲ್ಲಿ ಹಿಂದುಗಳಿಗೆ ಮಾತ್ರ ಅನ್ವಯವಾಗಿತ್ತು. ಆದರೆ, 1975 ರಲ್ಲಿ ಅದನ್ನು ಎಲ್ಲ ಧರ್ಮದವರಿಗೂ ಅನ್ವಯಿಸುವಂತೆ ತಿದ್ದುಪಡಿ ಮಾಡಿರುವುದರಿಂದ ಬಕ್ರೀದ್‌ ದಿನ ಕುರ್ಬಾನಿ ಕೊಡುವುದಕ್ಕೂ ನಿಷೇಧ ಅನ್ವಯವಾಗುತ್ತದೆ ಎಂದು ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಗೋಹತ್ಯಾ ನಿಷೇಧ ಜಾರಿಯಲ್ಲಿದ್ದು, ಯಾವುದೇ ಕಾರಣಕ್ಕೂ ಗೋವುಗಳ ಕಳ್ಳತನ, ಅಕ್ರಮ ಸಾಗಾಣಿಕೆ ಮತ್ತು ಹತ್ಯೆ ಆಗದಂತೆ ತಡೆಯುವ ನಿಟ್ಟಿನಲ್ಲಿ ಸೂಕ್ತ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬಜರಂಗದಳ ಎಚ್ಚರಿಕೆ: ಬಕ್ರೀದ್‌ ಸಂದರ್ಭದಲ್ಲಿ ಅಕ್ರಮ ಗೋ ಸಾಗಣೆ ಮಾಡಿದರೆ ಅದರ ವಿರುದ್ಧ ರಾಜ್ಯದಾದ್ಯಂತ  ಹೋರಾಟ ನಡೆಸುವುದಾಗಿ ಬಜರಂಗದಳ ಪ್ರಾಂತ ಸಹಸಂಯೋಜಕ ರಘು ಸಕಲೇಶಪುರ ತಿಳಿಸಿದ್ದಾರೆ.

ಶಾಸಕ ತನ್ವೀರ್‌ ಸೇಠ್‌ ಅವರು ಆರು ಜನ ಮುಸ್ಲಿಂ ಶಾಸಕರ ಜತೆ ಸೇರಿ ಬಲಿಗಾಗಿ ಪ್ರಾಣಿಗಳ ಸಾಗಣೆ ಮತ್ತು ಅದಕ್ಕೆ ಭದ್ರತೆ ನೀಡಬೇಕು ಎಂದು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಇದು ಕಾನೂನಿಗೆ ವಿರುದ್ಧ. ಅಲ್ಲದೆ, ಇವರು ಕೇವಲ ಮುಸ್ಲಿಂ ಓಟುಗಳಿಂದ ಮಾತ್ರ ಗೆದ್ದು ಬಂದಿಲ್ಲ ಎಂದೂ ಹೇಳಿದ್ದಾರೆ.

Post Comments (+)