ಶುಕ್ರವಾರ, ಮೇ 27, 2022
31 °C

ಸಾಲದ ಕಂತು ಪಾವತಿಸದಿದ್ದಕ್ಕೆ ಜಗಳ: ಸ್ನೇಹಿತನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಲದ ತಿಂಗಳ ಕಂತು ಪಾವತಿಸುವ ವಿಚಾರವಾಗಿ ನಡೆದ ಜಗಳದಲ್ಲಿ ಜಯಕುಮಾರ್ (31) ಅವರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಸ್ನೇಹಿತ ರಾಹೀಲ್‌ನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

‘ಥಣಿಸಂದ್ರದ ನಿವಾಸಿ ಜಯಕುಮಾರ್, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಹಾಗೂ ಮಕ್ಕಳ ಜೊತೆ ವಾಸವಿದ್ದರು. ಅವರ ಕೊಲೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ರಾಹೀಲ್‌ನನ್ನು ಬಂಧಿಸಲಾಗಿದೆ’ ಎಂದು ಬಾಣಸವಾಡಿ ಪೊಲೀಸರು ಹೇಳಿದರು.

‘ಪದವೀಧರನಾದ ಆರೋಪಿ ರಾಹೀಲ್, ಕಾಚರಕನಹಳ್ಳಿಯ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ಸ್ನೇಹಿತರ ಜೊತೆ ವಾಸವಿದ್ದ. ಕೆಲ ವರ್ಷಗಳ ಹಿಂದೆಯಷ್ಟೇ ಆತನಿಗೆ ಜಯಕುಮಾರ್‌ ಪರಿಚಯವಾಗಿತ್ತು. ಸ್ನೇಹಿತರಾಗಿದ್ದ ಇಬ್ಬರೂ ಪಾಲುದಾರಿಕೆಯಲ್ಲಿ ಹೋಟೆಲ್ ತೆರೆಯಲು ಮುಂದಾಗಿದ್ದರು.’

‘ಹೋಟೆಲ್ ತೆರೆಯುವುದಕ್ಕಾಗಿ ಜಯಕುಮಾರ್ ತಮ್ಮ ಪತ್ನಿ ಹೆಸರಿನಲ್ಲಿ ಬ್ಯಾಂಕ್‌ನಿಂದ ₹ 19 ಲಕ್ಷ ವೈಯಕ್ತಿಕ ಸಾಲ ಪಡೆದಿದ್ದರು. ರಾಹೀಲ್ ಹಾಗೂ ಜಯಕುಮಾರ್ ಇಬ್ಬರೂ ಸೇರಿ ತಿಂಗಳ ಕಂತು ಪಾವತಿಸುವಂತೆ ಮಾತುಕತೆ ಆಗಿತ್ತು. ಕೆಲ ತಿಂಗಳು ಕಂತು ಪಾವತಿಸಿದ್ದ ರಾಹೀಲ್, ಮೇ ತಿಂಗಳ ಕಂತು ತುಂಬಿರಲಿಲ್ಲ. ಇದರಿಂದ ಜಯಕುಮಾರ್ ಸಿಟ್ಟಾಗಿದ್ದರು’ ಎಂದೂ ಪೊಲೀಸರು ತಿಳಿಸಿದರು.

‘ರಾಹೀಲ್‌ ವಾಸವಿದ್ದ ಫ್ಲ್ಯಾಟ್‌ಗೆ ಗುರುವಾರ ಹೋಗಿದ್ದ ಜಯಕುಮಾರ್, ತಿಂಗಳ ಕಂತು ಪಾವತಿಸುವಂತೆ ಪಟ್ಟು ಹಿಡಿದಿದ್ದರು. ಹಣವಿಲ್ಲವೆಂದು ರಾಹೀಲ್ ಹೇಳಿದ್ದ. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ಶುರುವಾಗಿತ್ತು. ಇದೇ ಸಂದರ್ಭದಲ್ಲೇ ಆರೋಪಿ, ತರಕಾರಿ ಕತ್ತರಿಸುವ ಚಾಕುವಿನಿಂದ ಜಯಕುಮಾರ್ ಎದೆಯ ಎಡಭಾಗಕ್ಕೆ ಇರಿದಿದ್ದರು. ಮಧ್ಯಪ್ರವೇಶಿಸಿದ್ದ ಸ್ನೇಹಿತರು, ಜಗಳ ಬಿಡಿಸಿದ್ದರು’ ಎಂದೂ ಹೇಳಿದರು.

ಮಲಗಿದ್ದಲ್ಲೇ ಸಾವು: ‘ಚಾಕು ಇರಿತದ ಬಳಿಕ ಜಯಕುಮಾರ್, ಫ್ಲ್ಯಾಟ್‌ನಲ್ಲೇ ಮಲಗಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲು ಸ್ನೇಹಿತರು ಸಹ ಪ್ರಯತ್ನಿಸಿರಲಿಲ್ಲ’ ಎಂದು ಪೊಲೀಸರು ತಿಳಿಸಿದರು.

‘ಸ್ವಲ್ಪ ಹೊತ್ತಿನ ಬಳಿಕ ಸ್ನೇಹಿತರು, ಜಯಕುಮಾರ್‌ ಅವರನ್ನು ಎಬ್ಬಿಸಲು ಹೋಗಿದ್ದರು. ಆದರೆ, ಎದ್ದಿರಲಿಲ್ಲ. ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು, ರಕ್ತಸ್ರಾವದಿಂದ ಜಯಕುಮಾರ್ ಮೃತಪಟ್ಟಿರುವುದಾಗಿ ಹೇಳಿದರು’ ಎಂದೂ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು