ಬೆಂಗಳೂರು: ನಾಗರಬಾವಿ ಮನೆಯೊಂದರ ಎದುರು ನಿಲುಗಡೆ ಮಾಡಿದ್ದ ಆಟೊ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸೊಣ್ಣೇನಹಳ್ಳಿ ಉಲ್ಲಾಳ ಮುಖ್ಯರಸ್ತೆಯ 17ನೇ ಕ್ರಾಸ್‌ನ ನಿವಾಸಿ ಅಮ್ಜದ್ ಖಾನ್(19) ಹಾಗೂ ಅದೇ ಬಡಾವಣೆಯ ನಿವಾಸಿ ಫೈರೋಜ್ ಪಾಷಾ(19) ಬಂಧಿತರು.
‘ಬಂಧಿತರಿಂದ ₹3.25 ಲಕ್ಷ ಮೌಲ್ಯದ ಎರಡು ಆಟೊ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ನಾಗರಬಾವಿಯ ಎರಡನೇ ಮುಖ್ಯರಸ್ತೆಯ ನಿವಾಸಿ ಹರ್ಷ ಅವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ಆಗಸ್ಟ್ 23ರಂದು ರಾತ್ರಿ ಮನೆಯ ಎದುರು ನಿಲುಗಡೆ ಮಾಡಿದ್ದ ಆಟೊವನ್ನು ನಕಲಿ ಕೀ ಬಳಸಿ ಇಬ್ಬರು ಕಳ್ಳತನ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಆರೋಪಿಗಳ ಬಂಧನದಿಂದ ಚಂದ್ರಾ ಲೇಔಟ್, ಅನ್ನಪೂರ್ಣೇಶ್ವರಿ ನಗರ, ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳೂ ಪತ್ತೆ ಆಗಿವೆ’ ಎಂದು ಮಾಹಿತಿ ನೀಡಿದರು.
ಮೊಬೈಲ್ ಕಳ್ಳತನ: ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರನ್ನು ಅಡ್ಡಗಟ್ಟಿ ಮೊಬೈಲ್ ಫೋನ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಇದೇ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಎಂ.ಎಸ್.ಪಾಳ್ಯದ ನಿವಾಸಿ ಶಾಬಾಜ್(24) ಹಾಗೂ ಗಂಗೊಂಡನಹಳ್ಳಿ ಐದನೇ ಮುಖ್ಯರಸ್ತೆಯ ಮುಬಾರಕ್(24) ಬಂಧಿತರು.
‘ಬಂಧಿತರಿಂದ ₹2.15 ಲಕ್ಷ ಮೌಲ್ಯದ 11 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಶಿವಕುಮಾರ್ ಅವರು ಗೋವಿಂದರಾಜನಗರದ ಬಿಡಿಎ ಕಾಂಪ್ಲೆಕ್ಸ್ ಎದುರು ನಡೆದು ತೆರಳುತ್ತಿದ್ದಾಗ, ಬೈಕ್‌ನಲ್ಲಿ ಬಂದ ಇಬ್ಬರು ಆರೋಪಿಗಳು ಐಫೋನ್ ಕಸಿದು ಪರಾರಿ ಆಗಿದ್ದರು. ಶಿವಕುಮಾರ್ ನೀಡಿದ್ದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.
ಆರೋಪಿಗಳ ಬಂಧನದಿಂದ ಅನ್ನಪೂರ್ಣೇಶ್ವರಿ ನಗರ ಹಾಗೂ ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.