ಬೆಂಗಳೂರು: ಬಾಡಿಗೆ ವಿಚಾರವಾಗಿ ಶ್ರೀದೇವಿ (40) ಎನ್ನುವವರ ಮೇಲೆ ಹಲ್ಲೆ ಮಾಡಿರುವ ಆರೋಪದಡಿ ಬಾಡಿಗೆದಾರರಾದ ನಜೀರ್ ಹಾಗೂ ಸದ್ದಾಂ ಅವರನ್ನು ಬಂಡೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಬ್ಬರು ಜಾಮಿನು ಮೇಲೆ ಬಿಡುಗಡೆಗೊಂಡಿದ್ದಾರೆ.
‘ಜುಲೈ 6ರಂದು ನಡೆದಿರುವ ಘಟನೆ ಸಂಬಂಧ ಶ್ರೀದೇವಿ ದೂರು ನೀಡಿದ್ದರು. ಆರೋಪಿಗಳನ್ನು ಬಂಧಿಸಲಾಗಿತ್ತು. ಅವರಿಬ್ಬರಿಗೂ ಜಾಮೀನು ಸಿಕ್ಕಿದೆ’ ಎಂದು ಪೊಲೀಸರು ಹೇಳಿದರು.
‘ವಿದೇಶದಲ್ಲಿರುವ ಫಯಾಜ್ ಹೆಸರಿನಲ್ಲಿ ಮಂಗಮ್ಮನಪಾಳ್ಯ ಮುನೇಶ್ವರನಗರದಲ್ಲಿ ಕಟ್ಟಡವಿದೆ. ಕಟ್ಟಡದ ನಿರ್ವಹಣೆ ಹಾಗೂ ಬಾಡಿಗೆದಾರರಿಂದ ಬಾಡಿಗೆ ಸಂಗ್ರಹ ಕೆಲಸವನ್ನು ಶ್ರೀದೇವಿ ನೋಡಿಕೊಳ್ಳುತ್ತಿದ್ದಾರೆ. ಅದೇ ಕಟ್ಟಡದ ಮನೆಯಲ್ಲಿ ಆರೋಪಿ ನಜೀರ್ ಹಾಗೂ ಮಗ ಸದ್ದಾಂ ವಾಸವಿದ್ದರು’ ಎಂದು ತಿಳಿಸಿದರು.
ಮೂರು ತಿಂಗಳಿನಿಂದ ನಜೀರ್ ಬಾಡಿಗೆ ನೀಡಿರಲಿಲ್ಲ. ಅದನ್ನು ಕೇಳಲು ಶ್ರೀದೇವಿ ಅವರು ಮನೆಗೆ ಹೋಗಿದ್ದರು. ಇದೇ ಸಂದರ್ಭದಲ್ಲಿ ನಜೀರ್ ಹಾಗೂ ಸದ್ದಾಂ, ಶ್ರೀದೇವಿ ಮೇಲೆ ಹಲ್ಲೆ ಮಾಡಿದ್ದರು. ಎಡ ಕೈಗೆ ಚಾಕುವಿನಿಂದ ಇರಿದಿದ್ದರು.
‘ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಶ್ರೀದೇವಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.
ನ್ಯಾಯಕ್ಕೆ ಆಗ್ರಹ
‘ಹಲ್ಲೆ ಆರೋಪಿಗಳು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಿದ್ದಾರೆ. ಸಾಕ್ಷ್ಯ ನಾಶದ ಭಯವಿದೆ. ನಮಗೆ ನ್ಯಾಯ ಬೇಕು. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು’ ಎಂದು ಶ್ರೀದೇವಿ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.