ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರ್ಣಿಮೆ ರಾತ್ರಿಯಲ್ಲಿ ಸಂಭ್ರಮದ ಕರಗ

ವರುಣನ ಸಿಂಚನ l ಭಕ್ತರ ಹರ್ಷೋದ್ಗಾರ l ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ–ವಿಧಾನ
Last Updated 17 ಏಪ್ರಿಲ್ 2022, 1:57 IST
ಅಕ್ಷರ ಗಾತ್ರ

ಬೆಂಗಳೂರು: ಬಿರು ಬಿಸಿಲಿನಿಂದ ಕಾದಿದ್ದ ಇಳೆಗೆ ಮಳೆ ತಂಪೆರೆದರೆ, ಚೈತ್ರ ಪೌರ್ಣಿಮೆಯ ರಾತ್ರಿಯಲ್ಲಿ ತಿಗಳರಪೇಟೆ ಧರ್ಮರಾಯಸ್ವಾಮಿ ದೇವಸ್ಥಾನದ ಗರ್ಭಗುಡಿಯತ್ತ ಸಹಸ್ತ್ರಾರು ಕಣ್ಣುಗಳು ದೃಷ್ಟಿ ನೆಟ್ಟಿದ್ದವು.

ಝಗಮಗಿಸುವ ಬೆಳಕು, ಓಲಗದ ಸದ್ದು ಇಡೀ ಪೇಟೆಯನ್ನೇ ಆವರಿಸಿಕೊಂಡಿತ್ತು. ಶನಿವಾರ ತಡರಾತ್ರಿ ಮಲ್ಲಿಗೆಯ ಪರಿಮಳ ಹರಡುತ್ತ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗದ ಮೆರವಣಿಗೆ ಹೊರಟಿತು. ಕರಗ ಹೊರ ಬಂದ ಕೂಡಲೇ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ ವೈಭವಪೂರ್ಣವಾಗಿ ನಡೆಯಿತು.

ಕಿಷ್ಕಿಂದೆಯಂತೆ ಇರುವ ಈ ಪ್ರದೇಶದ ಪ್ರತಿ ಗಲ್ಲಿಯಲ್ಲೂ ಜನಸಾಗರ ಸೇರಿತ್ತು. ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಬಂದಿದ್ದ ಸಾವಿರಾರು ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು. ಶನಿವಾರ ರಾತ್ರಿ ಸುರಿದ ಮಳೆ ಭಕ್ತರ ಉತ್ಸಾಹವನ್ನು ಕುಗ್ಗಿಸಲಿಲ್ಲ. ಮಳೆ ಕಡಿಮೆಯಾದಂತೆ ಭಕ್ತರ ದಂಡು ದೇವಸ್ಥಾನದ ಆಗಮಿಸಿತು.

ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ–ವಿಧಾನಗಳು ನಡೆದವು. ಕರಗ ಹೊತ್ತಿದ್ದ ಅರ್ಚಕ ಎ. ಜ್ಞಾನೇಂದ್ರ ಅವರು ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ಸರ್ವಾಲಂಕಾರ ಭೂಷಿತರಾಗಿದ್ದ ಎ. ಜ್ಞಾನೇಂದ್ರ ಅವರು ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ಧರ್ಮರಾಯಸ್ವಾಮಿ ದೇವಾಲಯದ ಗರ್ಭಗುಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ತಮಟೆ, ಮಂಗಳ ವಾದ್ಯಗಳು ಮೊಳಗಿದವು. ಖಡ್ಗ ಹಿಡಿದಿದ್ದ ನೂರಾರು ವೀರಕುಮಾರರು ‘ಗೋವಿಂದಾ, ಗೋವಿಂದಾ’ ಎಂದು ನಾಮಸ್ಮರಣೆ ಮಾಡುತ್ತ ಕರಗದೊಂದಿಗೆ ಹೆಜ್ಜೆ ಹಾಕಿದರು.

ಹಲಸೂರುಪೇಟೆ ಆಂಜನೇಯಸ್ವಾಮಿ ಮತ್ತು ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿದ ನಂತರ ಕರಗ ಮುಂದೆ ಸಾಗಿತು. ನಗರ್ತಪೇಟೆಯ ವೇಣುಗೋಪಾಲಸ್ವಾಮಿ, ಸಿದ್ದಣ್ಣಗಲ್ಲಿಯ ಭೈರೇದೇವರ ದೇವಸ್ಥಾನ, ಕಬ್ಬನ್‌ ಪೇಟೆಯ ರಾಮಸೇವಾ ಮಂದಿರ, ಮಕ್ಕಳ ಬಸವನಗುಡಿ, ಗಾಣಿಗರಪೇಟೆಯ ಚನ್ನರಾಯಸ್ವಾಮಿ, ಚಾಮುಂಡೇಶ್ವರಿ ದೇವಸ್ಥಾನದ ಮೂಲಕ ನಗರದ ನಾಲ್ಕೂ ದಿಕ್ಕುಗಳಲ್ಲಿ ಕರಗ ಸಂಚರಿಸಿತು.

ವೀರಕುಮಾರರು ರಕ್ಷಕರಾಗಿ ನಿರ್ದಿಷ್ಟ ಸ್ಥಳಗಳಲ್ಲಿ ಅಲಗು ಸೇವೆ ಮಾಡುತ್ತ ಕರಗದೊಂದಿಗೆ ಸಾಗಿದರು. ಕರಗಧಾರಿಗಳ ಸ್ವಾಗತಕ್ಕೆ ಮನೆಗಳ ಮುಂದೆ ರಂಗೋಲಿ, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು.

ದ್ರೌಪತಿಯಂತೆ ಸಿಂಗಾರ
ಹನ್ನೊಂದು ದಿನಗಳ ಕಾಲ ನಡೆಯುವ ಕರಗ ಉತ್ಸವದಲ್ಲಿ ಹೂವಿನ ಕರಗವೇ ಉತ್ಸವದ ಕೇಂದ್ರಬಿಂದು.

ಮುಖದ ಮೇಲ್ಭಾಗದಲ್ಲಿ ವಿಷ್ಣು, ಕೊರಳಲ್ಲಿ ಶಿವ, ಕೆಳ ಭಾಗದಲ್ಲಿ ಬ್ರಹ್ಮ ಮತ್ತು ಮಧ್ಯ ಭಾಗದಲ್ಲಿ ಮಾತೃಗಣಗಳಿವೆ ಎಂಬ ನಂಬಿಕೆ ಇರುವ ‘ಕರಗ’ ಸೂಸುವ ಮಲ್ಲಿಗೆಯ ಪರಿಮಳ ಜನರನ್ನು ಮಂತ್ರ ಮುಗ್ಧರನ್ನಾಗಿಸಿತು. ಮಲ್ಲಿಗೆ ಹೂವಿನ ಅಲಂಕಾರ, ಕನಕಾಂಬರ ಹೂವಿನ ಎಸಳುಗಳು, ಮೇಲ್ತುದಿಯಲ್ಲಿ ಬೆಳ್ಳಿ ಛತ್ರಿ ನೋಡಲು ಆಕರ್ಷಕವಾಗಿತ್ತು.

ಲೋಕಕಂಟಕನಾಗಿ ಮೆರೆಯುತ್ತಿದ್ದ ತ್ರಿಪುರಾಸುರನೆಂಬ ರಾಕ್ಷಸನ ಸಂಹಾರಕ್ಕಾಗಿ ದ್ರೌಪದಿಯು ಶಕ್ತಿದೇವತೆಯ ಅವತಾರ ತಾಳಿದಳು ಎಂಬ ಕಥೆ ಇದೆ. ಅದಕ್ಕಾಗಿ ದ್ರೌಪದಿ ಸೈನಿಕ ಪಡೆಯನ್ನೂ ಸೃಷ್ಟಿಸಿಕೊಂಡಿದ್ದಳಂತೆ. ಅವರೇ ವೀರಕುಮಾರರು ಎಂಬ ನಂಬಿಕೆ ಇದೆ.

ಲೋಕಕಲ್ಯಾಣ ಮಾಡಿದ ದ್ರೌಪದಿ ಯುದ್ಧ ಮುಗಿದ ಬಳಿಕ ಪೂರ್ವಾಶ್ರಮಕ್ಕೆ ತೆರಳಲು ಸಿದ್ಧಳಾಗುತ್ತಾಳೆ. ಆಗ ವೀರಕುಮಾರರಿಗೆ ದುಃಖವಾಗುತ್ತದೆ. ‘ಪ್ರತಿ ಹೊಸ ವರ್ಷದಲ್ಲಿ ಬರುವ ಮೊದಲ ಹುಣ್ಣಿಮೆಯಂದು ನಿಮ್ಮಲ್ಲಿಗೆ ಬರುತ್ತೇನೆ’ ಎಂದಳು. ಚೈತ್ರ ಮಾಸದ ಮೊದಲ ಹುಣ್ಣಿಮೆಯ ದಿನ ದ್ರೌಪದಿ ಧರೆಗಿಳಿದು ಬರುತ್ತಾಳೆ ಎಂಬುದು ಭಕ್ತರ ನಂಬಿಕೆ.

ಉತ್ಸವ ಮೂರ್ತಿಗಳ ಮೆರವಣಿಗೆ
ರಾತ್ರಿ ಕರಗ ಹೊರಬರುವ ಮುನ್ನ ಮಹಾರಥದಲ್ಲಿ ಅರ್ಜುನ, ದ್ರೌಪದಿ ದೇವಿ ಹಾಗೂ ಮುತ್ಯಾಲಮ್ಮ ದೇವಿಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಹೂವು ಮತ್ತು ತಳಿರು– ತೋರಣಗಳಿಂದ ಸಿಂಗಾರಗೊಂಡಿದ್ದ ಈ ರಥದೊಂದಿಗೆ ಉತ್ಸವ ಮೂರ್ತಿಗಳ ಮೆರವಣಿಗೆಯೂ ಸಾಗಿತು.

ಇದಕ್ಕೂ ಮುನ್ನ ಶನಿವಾರ ಬೆಳಿಗ್ಗೆ ಕಬ್ಬನ್ ಪಾರ್ಕ್‌ನ ಕರಗದ ಕುಂಟೆಯಲ್ಲಿ ಜ್ಞಾನೇಂದ್ರ ಅವರು ಗಂಗಾಪೂಜೆ ಸಲ್ಲಿಸಿದರು.

ಬಳಿಕ ಅಲ್ಲಿಂದ ಹಸಿಕರಗವನ್ನು ಮಂಟಪಕ್ಕೆ ತಂದು ವಿಶೇಷ ಪೂಜೆ ನೆರವೇರಿಸಿ ಧರ್ಮರಾಯಸ್ವಾಮಿ ದೇವಾಲಯಕ್ಕೆ ಕರೆತರಲಾಯಿತು. ಜ್ಞಾನೇಂದ್ರ ಅವರು ದೇವಸ್ಥಾನದ ಸುತ್ತಮುತ್ತ ಇರುವ ಸಮುದಾಯದ ಮನೆಗಳಿಗೆ ಹೋಗಿ ಪೂಜೆ ಸ್ವೀಕರಿಸಿದರು.

ಸಮುದಾಯದ ಮುಖಂಡರು ಜ್ಞಾನೇಂದ್ರ ಅವರ ಮನೆಗೆ ತೆರಳಿ ಹಣ್ಣು–ಹಂಪಲು, ಸೀರೆ, ಬಳೆ ನೀಡಿ ಸತ್ಕರಿಸಿದರು. ಬಳಿಕ ಅಲ್ಲಿಂದ ಅವರನ್ನು ದೇವಸ್ಥಾನಕ್ಕೆ ಕರೆತರಲಾಯಿತು. ಸಂಜೆ ವೇಳೆಗೆ ಅವರಿಗೆ ಕಂಕಣಧಾರಣೆ ಮಾಡಿ, ಕೈತುಂಬ ಕರಿಬಳೆ ತೊಡಿಸಲಾಯಿತು.

ದೇವಸ್ಥಾನದಲ್ಲಿ ವೈಷ್ಣವಾಗಮ ರೀತಿಯಲ್ಲಿ ಪೂಜೆ, ಹೋಮಗಳು ನಡೆದವು. ಹೋಮದ ಬೂದಿಯನ್ನು ದೇವರ ಬಳಿ ಇಡಲಾಯಿತು. ಆನಂತರ ಅರ್ಜುನ, ದ್ರೌಪದಿಯರ ಕಲ್ಯಾಣೋತ್ಸವ ನಡೆಯಿತು.

ಪ್ರಧಾನ ಪುರೋಹಿತರು ತಾಳಿಯನ್ನು ಅರ್ಜುನನ ವಿಗ್ರಹಕ್ಕೆ ಮುಟ್ಟಿಸಿ ದ್ರೌಪದಿಯಂತೆ ಸಿಂಗಾರಗೊಂಡಿದ್ದ ಜ್ಞಾನೇಂದ್ರ ಅವರಿಗೆ ಕಟ್ಟಿದರು. ಬಳಿಕ ಅನ್ನಕ್ಕೆ ಕುಂಕುಮ ಬೆರೆಸಿ ‘ದೃಷ್ಟಿ ಉಂಡೆ’ ಮಾಡಿ ಕರಗ ಸಾಗುವ ಹಲಸೂರುಪೇಟೆ, ನಗರ್ತಪೇಟೆ, ಸಿದ್ದಣ್ಣಗಲ್ಲಿ, ಕಬ್ಬನ್‌ಪೇಟೆ, ಅರಳೆಪೇಟೆ, ಗಾಣಿಗರಪೇಟೆ, ಅಕ್ಕಿಪೇಟೆ, ಅರಳೆಪೇಟೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆಯ ಮುಖ್ಯದ್ವಾರಗಳ ಬಳಿ ಇಡಲಾಯಿತು.

ರಾತ್ರಿ 10ರ ಸುಮಾರಿಗೆ ಜ್ಞಾನೇಂದ್ರ, ಗಂಟೆ ಪೂಜಾರಿಗಳು, ವೀರಕುಮಾರರು ಹಾಗೂ ಸಮುದಾಯದ ಕೆಲ ಮುಖಂಡರು ಸಂಪಂಗಿ ಕೆರೆಯಂಗಳದಲ್ಲಿ ಸೇರಿದರು. ಅಲ್ಲಿ ಜ್ಞಾನೇಂದ್ರ ಅವರನ್ನು ಅಚ್ಚಮಲ್ಲಿಗೆ, ಜಡೆಕುಚ್ಚು, ಹಾರಗಳಿಂದ ಸಿಂಗರಿಸಿ, ಅರಿಶಿಣ ಬಣ್ಣದ ಸೀರೆ ಉಡಿಸಿ, ಕುಪ್ಪಸ ತೊಡಿಸಿ, ವಕ್ಷಸ್ಥಲವನ್ನು ಹವಳದ ಹಾರ, ರತ್ನಾಭರಣಗಳಿಂದ ಅಲಂಕರಿಸಲಾಯಿತು.

ಅವರಿಗೆ ಧೂಪ, ದೀಪ, ಆರತಿಗಳ ಅರ್ಚನೆ ಮಾಡಲಾಯಿತು. ವೀರಕುಮಾರರಿಂದ ಅಲಗುಸೇವೆಯಾದ ಬಳಿಕ ಅವರ ಮೈಮೇಲೆ ಆದಿಶಕ್ತಿಯ ಆವಿರ್ಭಾವವಾಯಿತು. ಬಳಿಕ ಮಂಗಳವಾದ್ಯಗಳೊಂದಿಗೆ ಎಲ್ಲರೂ ದೇವಾಲಯದ ಬಳಿಗೆ ಬಂದರು. ಜ್ಞಾನೇಂದ್ರ ಅವರು ಮಾತ್ರ ಗರ್ಭಗುಡಿಯನ್ನು ಪ್ರವೇಶಿಸಿದರು.

ಉತ್ಸವ ಕಣ್ತುಂಬಿಕೊಂಡ ಭಕ್ತರು
ಹೂವಿನ ಕರಗ ಶಕ್ತ್ಯೋತ್ಸವವನ್ನು ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕಣ್ತುಂಬಿಕೊಂಡರು. ಕೋವಿಡ್‌ನಿಂದ ಕಳೆದ ಎರಡು ವರ್ಷ ಸರಳವಾಗಿ ನಡೆದಿದ್ದ ಕರಗ ಈ ಬಾರಿ ವಿಜೃಂಭಣೆಯಿಂದ ನಡೆಯಿತು.

ಉತ್ಸವ ಸಾಗಿದ ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿದ್ದ ಭಕ್ತರು ಕರಗದ ದರ್ಶನ ಪಡೆದು, ವಿವಿಧ ಬಗೆಯ ಹೂಗಳನ್ನು ಅರ್ಪಿಸಿ ಧನ್ಯತೆ ಅನುಭವಿಸಿದರು.

ತಿಗಳರಪೇಟೆ ಸೇರಿದಂತೆ ಕರಗ ಸಾಗುವ ಮಾರ್ಗದಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕರಗ ತಲುಪುವ ದೇವಸ್ಥಾನಗಳನ್ನು ದೀಪಾಲಂಕಾರಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT