ಭಾನುವಾರ, ಆಗಸ್ಟ್ 1, 2021
28 °C

ವಹಿವಾಟು ನಡೆಸಲು ಸರ್ಕಾರ ಅನುಮತಿ: ಮತ್ತೆ ಕಾರ್ಯಾರಂಭ ಮಾಡಿದ ಮಾರುಕಟ್ಟೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಹಿವಾಟು ನಡೆಸಲು ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆ ನಗರದ ಕೆ.ಆರ್.ಮಾರುಕಟ್ಟೆ ಹಾಗೂ ರಸೆಲ್ ಮಾರುಕಟ್ಟೆಗಳು ಸೋಮವಾರ ವಹಿವಾಟು ಆರಂಭಿಸಿವೆ. ಆದರೆ, ಇನ್ನೂ ಕೋವಿಡ್‌ 19 ಸೋಂಕು ಹರಡದಂತೆ ತಡೆಯಲು ಸುರಕ್ಷತಾ ಕ್ರಮಗಳ ಅನುಷ್ಠಾನಕ್ಕೆ ಸಿದ್ಧತೆ ಬಾಕಿ ಇರುವ ಕಾರಣ ವಹಿವಾಟು ಕಡಿಮೆ ಇತ್ತು.

ಈ ಮಾರುಕಟ್ಟೆಗಳಲ್ಲಿ ಬುಧವಾರದಿಂದ ವಹಿವಾಟು ಚುರುಕುಗೊಳ್ಳುವ ನಿರೀಕ್ಷೆ ಇದೆ. ಕೆ.ಆರ್.ಮಾರುಕಟ್ಟೆಯಲ್ಲಿ ತರಕಾರಿ-ಹಣ್ಣು ಹೊರತುಪಡಿಸಿ, ಹೂವು, ಕಾಂಡಿಮೆಂಟ್ಸ್, ಸ್ಟೀಲ್‌ ಪರಿಕರಗಳು, ಪ್ಲಾಸ್ಟಿಕ್ ಪರಿಕರಗಳ ಮಾರಾಟ ಮಳಿಗೆಗಳು ಮಾತ್ರ ತೆರೆದಿವೆ. ತರಕಾರಿ ಮತ್ತು ಹಣ್ಣಿನ ವ್ಯಾಪಾರಿಗಳು ಅಕ್ಕಪಕ್ಕದ ಪಾದಚಾರಿ ಮಾರ್ಗಗಳಲ್ಲೇ ವ್ಯಾಪಾರ ನಡೆಸುತ್ತಿದ್ದಾರೆ.

ರಸೆಲ್ ಮಾರುಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯಗಳು ಭರದಿಂದ ಸಾಗಿದ್ದು, ಬುಧವಾರದಿಂದ ಗ್ರಾಹಕರಿಗೆ ಮುಕ್ತ ಪ್ರವೇಶ ಇರಲಿದೆ.

'ಪಾಲಿಕೆ ಸಿಬ್ಬಂದಿ ಮಾರುಕಟ್ಟೆಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿದ್ದಾರೆ. ಎರಡು ತಿಂಗಳಿನಿಂದ ಮುಚ್ಚಲಾಗಿದ್ದ ಮಳಿಗೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ತರಕಾರಿ ಅಂಗಡಿಗಳು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಕಟ್ಟಡದಲ್ಲಿರುವ ಮಳಿಗೆಗಳು ಮಾತ್ರ ತೆರೆದಿವೆ. ಹಾಗಾಗಿ ಶೇ 5ರಷ್ಟು ಗ್ರಾಹಕರೂ ಮಾರುಕಟ್ಟೆಗೆ ಬರಲಿಲ್ಲ’ ಎಂದು ಶ್ರೀಕೃಷ್ಣರಾಜ ಮಾರುಕಟ್ಟೆಯ ಮಳಿಗೆಗಳ ಮಾಲೀಕರ ಸಂಘದ ಅಧ್ಯಕ್ಷ ಜಿ.ಎಂ.ದಿವಾಕರ್ ತಿಳಿಸಿದರು.

‘ಮಾರುಕಟ್ಟೆಯಲ್ಲಿ ಒಟ್ಟು 1,200 ಮಳಿಗೆಗಳಿವೆ. ಒಂದು ಬಾರಿಗೆ 20 ಸಾವಿರ ಮಂದಿ ಸೇರುತ್ತಾರೆ. ಮೊದಲಿನಂತೆ ಹೆಚ್ಚು ಜನ ಸೇರಲು ಅವಕಾಶ ಇಲ್ಲದ ಕಾರಣ, ವ್ಯಾಪಾರಿಗಳು ಮಳಿಗೆಗಳ ಬಳಿ ಕೆಲ ಸಿದ್ಧತೆ ಮಾಡಿಕೊಳ್ಳಲು ಸಮಯ ಬೇಕಿದೆ. ಬುಧವಾರದ ವೇಳೆಗೆ ಮಾರುಕಟ್ಟೆ ಪೂರ್ಣವಾಗಿ ತೆರೆಯಲಿದೆ' ಎಂದರು.

'ಮಾರುಕಟ್ಟೆಯಲ್ಲಿ ವಹಿವಾಟು ಆರಂಭಗೊಂಡರೂ ಮೊದಲಿನಂತೆ ಗ್ರಾಹಕರು ಬರುವುದು ಅನುಮಾನ. ಇದರಿಂದ ವ್ಯಾಪಾರ ಇದ್ದೂ ಇಲ್ಲದಂತಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಹೂವು ಖರೀದಿಗೆ ಜನ ಒಲವು ತೋರುವುದಿಲ್ಲ. ಶೀಘ್ರವೇ ಆಷಾಢ ಮಾಸ ಆರಂಭವಾಗಲಿದ್ದು, ಹೂವಿನ ವ್ಯಾಪಾರ ಕುಸಿಯಲಿದೆ. ವರಮಹಾಲಕ್ಷ್ಮಿ ಹಬ್ಬದ ವೇಳೆಗೆ ವ್ಯಾಪಾರ ಚೇತರಿಕೆ ಕಾಣುವ ನಿರೀಕ್ಷೆ ಇದೆ' ಎಂದರು.

ಮಾರುಕಟ್ಟೆ ಪುನರಾರಂಭಕ್ಕೆ ಒತ್ತಾಯಿಸಿ ರೈತರು ಹಾಗೂ ವ್ಯಾಪಾರಿಗಳು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಜೂ.8ರಿಂದ ಮಾರುಕಟ್ಟೆ ತೆರೆಯಲು ಅನುಮತಿ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು.

ಮಾರುಕಟ್ಟೆಯಲ್ಲಿ ಹೆಚ್ಚಿನ ಜನ ಸೇರುವುದರಿಂದ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು  ಸೋಮವಾರ ನಡೆಯಬೇಕಿದ್ದ ಸಂಸದ ಪಿ.ಸಿ.ಮೋಹನ್, ಪಾಲಿಕೆ ಅಧಿಕಾರಿಗಳು ಹಾಗೂ ವ್ಯಾಪಾರಿಗಳ ಸಭೆಯನ್ನು ಮುಂದೂಡಲಾಗಿದೆ.

ಕಲಾಸಿಪಾಳ್ಯ ಮಾರುಕಟ್ಟೆ ನಾಳೆಯಿಂದ ಕಾರ್ಯಾರಂಭ?
'ಕಲಾಸಿಪಾಳ್ಯ ಸಗಟು ಮಾರುಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯಗಳು ಮುಗಿದಿವೆ. ಸೋಮವಾರದಿಂದಲೇ ಮಾರುಕಟ್ಟೆ ಆರಂಭಗೊಳ್ಳುವ ನಿರೀಕ್ಷೆ ಇತ್ತು. ಆದರೆ, ಮಾರುಕಟ್ಟೆ ತೆರೆಯುವ ಆದೇಶಕ್ಕೆ ಎಪಿಎಂಸಿ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾ ಸಹಿ ಹಾಕಿಲ್ಲ. ಇದರಿಂದ ಮಾರುಕಟ್ಟೆ ಕಾರ್ಯಾರಂಭ ವಿಳಂಬಗೊಂಡಿದೆ' ಎಂದು ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆ ಸಗಟು ವ್ಯಾಪಾರಿಗಳ ಸಂಘದ ಅಧ್ಯಕ್ಷ ಆರ್.ವಿ.ಗೋಪಿ ತಿಳಿಸಿದರು.

'ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರಗೊಂಡಿದ್ದ ವ್ಯಾಪಾರಿಗಳು ಮರಳಿದ್ದು, ಕಲಾಸಿಪಾಳ್ಯ ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಬುಧವಾರದೊಳಗೆ ಮಾರುಕಟ್ಟೆ ತೆರೆಯಲು ಅನುಮತಿ ನೀಡುವ ನಿರೀಕ್ಷೆ ಇದೆ. ಅನುಮತಿ ನೀಡದಿದ್ದರೂ ವ್ಯಾಪಾರಿಗಳೆಲ್ಲ ಮಾರುಕಟ್ಟೆ ಪ್ರವೇಶಿಸುವ ನಿರ್ಧಾರಕ್ಕೆ ಬಂದಿದ್ದೇವೆ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು