ಗುರುವಾರ , ಫೆಬ್ರವರಿ 27, 2020
19 °C
ಬ್ಯಾಂಕ್, ಕ್ರೆಡಿಟ್ ಕಾರ್ಡ್ ಮೂಲಕ ₹ 15 ಲಕ್ಷವರೆಗೆ ಸಾಲ ಮಾಡಿದ್ದಳು

ತಾಯಿಯನ್ನು ಕೊಲೆ ಮಾಡಿ ಮೃತ ದೇಹದ ಬಳಿ ಕಣ್ಣೀರಿಟ್ಟಿದ್ದ ಅಮೃತಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆ.ಆರ್. ಪುರದ ಅಕ್ಷಯನಗರದಲ್ಲಿ ತಾಯಿಯನ್ನು ಕೊಂದು ಪರಾರಿಯಾಗಿದ್ದ ಮಗಳು ಅಮೃತಾ (32) ಮತ್ತು ಆಕೆಯ ಪ್ರಿಯಕರ ಶ್ರೀಧರ್‌ ರಾವ್‌ (30) ಅವರನ್ನು ಅಂಡಮಾನ್‌ ನಿಕೋಬಾರ್‌ನ ಪೋರ್ಟ್‌ಬ್ಲೇರ್‌ನಲ್ಲಿ ಬುಧವಾರ ಬಂಧಿಸಿದ್ದ ಪೊಲೀಸರು, ಗುರುವಾರ ನಗರಕ್ಕೆ ಕರೆದುಕೊಂಡು ಬಂದರು.

‘ಇಬ್ಬರನ್ನೂ ಅಂಡಮಾನ್‌ ನಿಕೋಬಾರ್‌ನಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಿ ನಗರಕ್ಕೆ ಕರೆದುಕೊಂಡು ಬರಲಾಗಿದೆ. ಇಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದೆ’ ಎಂದು ವೈಟ್‌ಫೀಲ್ಡ್‌ ಡಿಸಿಪಿ ಎಂ.ಎನ್‌. ಅನುಚೇತ್‌ ತಿಳಿಸಿದರು.

‘ಆರೋಪಿ ಅಮೃತಾ ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆತನಿಂದ ದೂರವಾದ ಬಳಿಕ ಅದೇ ಕಂಪನಿಯಲ್ಲಿ ತಂಡವೊಂದರ ಮುಖ್ಯಸ್ಥನಾಗಿದ್ದ ಶ್ರೀಧರ್‌ನನ್ನು ಪ್ರೀತಿಸಲು ಆರಂಭಿಸಿದ್ದು, ಇಬ್ಬರೂ ಸಹಜೀವನ ನಡೆಸುತ್ತಿದ್ದರು ಎನ್ನಲಾಗಿದೆ.

‘ಕಂಪನಿ ತ್ಯಜಿಸಿದ್ದ ಅಮೃತಾ ಎರಡು ವರ್ಷಗಳಿಂದ ಮನೆಯಲ್ಲೇ ಇದ್ದು, ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ₹10 ಲಕ್ಷದಿಂದ ₹15 ಲಕ್ಷವರೆಗೆ ಸಾಲ ಮಾಡಿದ್ದಳು. ಆ ಹಣದಲ್ಲಿ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿದ್ದಳು. ಈ ಬಗ್ಗೆ ದಾಖಲೆಗಳು ಸಿಕ್ಕಿವೆ’ ಎಂದು ಪೊಲೀಸರು ಹೇಳಿದರು.

ಸಾಲದ ಒತ್ತಡ ಹೆಚ್ಚಾಗುತ್ತಿದ್ದಂತೆ ತಲೆಮರೆಸಿಕೊಳ್ಳಲು ಅಮೃತಾ ಸಿದ್ಧತೆ ನಡೆಸಿದ್ದಳು ಎಂಬ ವಿಚಾರವೂ ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ಆದರೆ, ಬ್ಯಾಂಕ್ ಅಧಿಕಾರಿಗಳು ಮನೆಗೆ ಬಂದಾಗ ತಾಯಿ, ಸಹೋದರನಿಗೆ ಮುಜುಗರ ಉಂಟಾಗುತ್ತದೆ. ಹೀಗಾಗಿ ಇಬ್ಬರನ್ನೂ ಕೊಲೆ ಮಾಡಿ ಪರಾರಿಯಾಗಲು ನಾಲ್ಕು ತಿಂಗಳ ಹಿಂದೆಯೇ ನಿರ್ಧರಿಸಿದ್ದಳು. ಅದಕ್ಕಾಗಿ ಎರಡು ಚಾಕುಗಳನ್ನು ಖರೀದಿಸಿ, ಬ್ಯಾಗ್‍ನಲ್ಲಿ ಇಟ್ಟುಕೊಂಡಿದ್ದಳು ಎನ್ನಲಾಗಿದೆ.

ಫೆ. 2ರಂದು ನಸುಕಿನಲ್ಲಿ ಪಕ್ಕದಲ್ಲಿ ಮಲಗಿದ್ದ ತಾಯಿ ನಿರ್ಮಲಾ ಅವರನ್ನು ದಿಬ್ಬಿನಿಂದ ಉಸಿರುಗಟ್ಟಿಸಿ, ಬಳಿಕ ಚಾಕುವಿನಿಂದ ಎದೆಗೆ ಅಮೃತಾ ಇರಿದಿದ್ದಾಳೆ. ಬಳಿಕ, ಮೃತದೇಹದ ಎದುರು ಕುಳಿತು ಸುಮಾರು ಅರ್ಧ ಗಂಟೆ ಕಾಲ ಕಣ್ಣೀರು ಹಾಕಿದ್ದಾಳೆ. ಸಹೋದರ ಹರೀಶ್‌ಗೆ ಎರಡು ಬಾರಿ ಇರಿದು ಗಾಯಗೊಳಿಸಿ ಪರಾರಿಯಾಗಿದ್ದಾಳೆ. ಆದರೆ, ಕೊಲೆ ವಿಷಯ ಆಕೆಯ ಪ್ರಿಯಕರ ಶ್ರೀಧರ್‍ ರಾವ್‍ಗೆ ಗೊತ್ತಿರಲಿಲ್ಲ ಎಂದೂ ಹೇಳಲಾಗಿದೆ.

‘ಅಮೃತಾ ಜತೆ ಪ್ರವಾಸ ಹೋಗಲು ಶ್ರೀಧರ್ ಕೂಡ ಸಾಲ ಮಾಡಿದ್ದಾನೆ. ಫೆ. 2ರಂದು ಬೆಳಿಗ್ಗೆ ಇಬ್ಬರೂ ಅಂಡಮಾನ್ ನಿಕೋಬಾರ್‌ಗೆ ತೆರಳಿದ್ದಾರೆ. ಮೂರು ದಿನ ಮೂರು ಬೇರೆ ಬೇರೆ ಹೋಟೆಲ್‍ಗಳಲ್ಲಿ ತಂಗಿದ್ದಾರೆ. ಫೆ. 5ರಂದು ಅಂಡಮಾನ್‍ನ ಕೋಟೆಯೊಂದು ವೀಕ್ಷಿಸಿ ಇಬ್ಬರು ಹೊರಬರುವಾಗ ವಶಕ್ಕೆ ಪಡೆಯಲಾಯಿತು. ಅಂಡಮಾನ್‌ಗೆ ತೆರಳಿರುವ ವಿಷಯ ಗೊತ್ತಾದ ತಕ್ಷಣ ಅವರ ಮೇಲೆ ನಿಗಾ ಇಡುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಲಾಗಿತ್ತು. ಶ್ರೀಧರ್ ವಿರುದ್ಧ 2017ರಲ್ಲಿ ರಸ್ತೆ ಅಪಘಾತ ಎಸಗಿದ ಆರೋಪವಿದೆ’ ಎಂದೂ ಪೊಲೀಸರು ವಿವರಿಸಿದರು.

***

ಇದೊಂದು ಪೂರ್ವನಿಯೋಜಿತ ಕೃತ್ಯ ಎಂಬುದು ಗ್ತೊತಾಗಿದೆ. ಬಂಧಿತರು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಹೆಚ್ಚಿನ ವಿಚಾರಣೆ ಬಳಿಕ ಸತ್ಯಾಂಶ ಗೊತ್ತಾಗಲಿದೆ.
– ಎಂ.ಎನ್.ಅನುಚೇತ್, ವೈಟ್‍ಫೀಲ್ಡ್ ಡಿಸಿಪಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು