ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ನುಗ್ಗದ ಮನೆಗೆ ಪರಿಹಾರ ನೀಡಿದರೆ ಕ್ರಮ

ಸಚಿವ ವಿ.ಸೋಮಣ್ಣ ಎಚ್ಚರಿಕೆ
Last Updated 25 ಮೇ 2022, 19:04 IST
ಅಕ್ಷರ ಗಾತ್ರ

ಬೆಂಗಳೂರು: ‘ಪಶ್ಚಿಮ ವಲಯದಲ್ಲಿ 1,369 ಮನೆಗಳಿಗೆ ನೀರು ನುಗ್ಗಿ ತೊಂದರೆ ಆಗಿರುವುದನ್ನು ಗುರುತಿಸಲಾಗಿದೆ. ಅವರ ಬ್ಯಾಂಕ್ ಖಾತೆಗೆ ಶೀಘ್ರವೇ ತಲಾ ₹25 ಸಾವಿರ ವರ್ಗಾವಣೆ ಮಾಡಲಾಗುವುದು. ನೀರು ನುಗ್ಗದಿರುವ ಮನೆಯವರಿಗೂ ಪರಿಹಾರ ನೀಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಪಶ್ಚಿಮ ವಲಯದ ಕಾರ್ಯಪಡೆಯ ಮುಖ್ಯಸ್ಥರಾದ ಬಳಿಕ ಬಿಬಿಎಂಪಿ ಕಚೇರಿಯಲ್ಲಿ ಮೊದಲ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.

‘ರೈಲ್ವೆ ಸೇತುವೆಗಳು ಕಿರಿದಾಗಿರುವುದರಿಂದಲೂ ನೀರು ಬಡಾವಣೆಗಳಿಗೆ ನುಗ್ಗುತ್ತಿರುವ ದೂರುಗಳಿವೆ. ಮುಂದಿನ ಸಭೆಗೆ ರೈಲ್ವೆ ಅಧಿಕಾರಿಗಳನ್ನು ಆಹ್ವಾನಿಸುವಂತೆ ಸೂಚಿಸಿದ್ದೇನೆ’ ಎಂದರು.

‘ಪಶ್ಚಿಮ ವಲಯದ ಕಾರ್ಯಪಡೆ 15 ದಿನಗಳಿಗೊಮ್ಮೆ ಸಭೆ ನಡೆಸಲಿದೆ. ವಲಯ ಆಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದ್ದು, ₹1 ಕೋಟಿ ತನಕ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲು ಸ್ಥಳದಲ್ಲೇ ಆದೇಶ ನೀಡುವ ಅಧಿಕಾರ ಕೊಡಲಾಗಿದೆ. ಇದರಿಂದ ಪ್ರವಾಹ ಸಂದರ್ಭದಲ್ಲಿ ಪರಿಹಾರ ಕಾರ್ಯವನ್ನು ವೇಗವಾಗಿ ಕೈಗೊಳ್ಳಲು ಸಾಧ್ಯ’ ಎಂದರು.

ಅಭಿವೃದ್ಧಿ ಕಾಮಗಾರಿಗಳನ್ನು ವಿಳಂಬ ಮಾಡುವ ಬೇಜವಾಬ್ದಾರಿ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವನ್ನೂ ವಲಯ ಆಯುಕ್ತರಿಗೆ ನೀಡಲಾಗಿದೆ ಎಂದು ಹೇಳಿದರು.

‘ಪ್ರಾಥಮಿಕ ಮತ್ತು ಎರಡನೇ ಹಂತದ ಕಾಲುವೆಗಳ ಹೂಳು ತೆಗೆಯುವ ಕೆಲಸವನ್ನು ಆದ್ಯತೆ ಮೇರೆಗೆ ನಿರ್ವಹಿಸಲಾಗುವುದು. ಎಲ್ಲೆಲ್ಲಿ ರಾಜಕಾಲುವೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಪ್ರವಾಹ ಸಾಧ್ಯತೆ ಇರುವ ಸ್ಥಳಗಳನ್ನು ಗುರುತಿಸಿ ಸರಿಪಡಿಸುವ ಕೆಲಸ ಮಾಡಲಾಗುವುದು’ ಎಂದರು.

ಅಬಕಾರಿ ಸಚಿವ ಕೆ.ಗೋಪಾಲಯ್ಯ, ಸಂಸದ ತೇಜಸ್ವಿಸೂರ್ಯ, ಶಾಸಕ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ತಿನ ಸದಸ್ಯ ಪುಟ್ಟಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT