ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ಹೆಚ್ಚಿನ ಗದ್ದಲವಿಲ್ಲದ ಸಂಭ್ರಮ !

Published 4 ಜೂನ್ 2024, 14:40 IST
Last Updated 4 ಜೂನ್ 2024, 14:40 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಬೆಳಿಗ್ಗೆ 8 ಗಂಟೆಗೆ ಆರಂಭವಾದರೂ, ಕಾರ್ಯಕರ್ತರ ಹೆಚ್ಚೇನು ಗದ್ದಲವಿರಲಿಲ್ಲ. ಒಂದು ಲಕ್ಷ ಮತಗಳ ಅಂತರ ಬಂದ ನಂತರವಷ್ಟೇ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮತ ಎಣಿಕೆ ಕೇಂದ್ರಕ್ಕೆ ಬಂದರು.

ಜಯನಗರ 9ನೇ ಬ್ಲಾಕ್‌ನಲ್ಲಿರುವ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಿತು. ಎಂಟು ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಒಂದೊಂದು ಕೊಠಡಿಯಲ್ಲಿ 14 ಟೇಬಲ್‌ಗಳಲ್ಲಿ ಹಲವು ಸುತ್ತುಗಳಲ್ಲಿ ನಡೆಯಿತು. ಒಂಬತ್ತನೇ ಕೊಠಡಿಯಲ್ಲಿ ಅಂಚೆ ಮತಗಳನ್ನು ಎಣಿಕೆ ಮಾಡಲಾಯಿತು. ಜಯನಗರ ವಿಧಾನಸಭೆ ಕ್ಷೇತ್ರ ಮತ ಎಣಿಕೆ 15 ಸುತ್ತುಗಳಲ್ಲಿ ಮುಗಿದರೆ, ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರ ಮತ ಎಣಿಕೆ 28 ಸುತ್ತುಗಳಲ್ಲಿ ನಡೆಯಿತು.

ಎಣಿಕೆ ಕೇಂದ್ರದ ಆವರಣದಲ್ಲಿ ಹಂತ ಹಂತವಾಗಿ ಬಿಜೆಪಿ ಕಾರ್ಯಕರ್ತರ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಹೆಚ್ಚಾಗಿ ಇತ್ತ ಸುಳಿಯಲೇ ಇಲ್ಲ.

ತೇಜಸ್ವಿ ಸೂರ್ಯ ಮತ ಎಣಿಕೆ ಕೇಂದ್ರಕ್ಕೆ ಬಂದಾಗ ಎಂಟು ಸುತ್ತುಗಳ ಮತ ಎಣಿಕೆ ಮುಗಿದಿತ್ತು. ಬೆರಳೆಣಿಕೆಯಷ್ಟು ಕಾರ್ಯಕರ್ತರು ಮಾತ್ರ ಜೊತೆಗಿದ್ದರು.

ಪ್ರತಿ ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಮುಂದೆ ಬಿಜೆಪಿ ಕಾರ್ಯಕರ್ತರು ಜಮಾಯಿಸುತ್ತಿದ್ದರು. ಕ್ಷೇತ್ರದಲ್ಲಿ ಗೆಲುವು ಖಚಿತವಾಗುತ್ತಿದ್ದಂತೆಯೇ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್‌ ರೆಡ್ಡಿ, ಸಿ.ಕೆ. ರಾಮಮೂರ್ತಿ ಅವರೊಂದಿಗೆ ಮತ ಎಣಿಕೆ ಕೇಂದ್ರ ಮುಂದೆ ಕಾರ್ಯಕರ್ತರೊಂದಿಗೆ ಸಂಭ್ರಮಿಸಿದರು. ಮಾಧ್ಯಮಗಳೊಂದಿಗೆ ಸಂತಸ ಹಂಚಿಕೊಂಡರು.

‘ತುಂಬಾ ಪೈಪೋಟಿ ಆಗುತ್ತದೆ ಎಂಬ ಸುದ್ದಿ ಇತ್ತು. ಆದರೆ, ಕೋವಿಡ್ ವೇಳೆ, ಬ್ಯಾಂಕ್ ಸಮಸ್ಯೆಯಂತಹ ಹಲವು ಸಂದರ್ಭದಲ್ಲಿ ಜನರ ಜೊತೆಗಿದ್ದೆ. ಕೇಂದ್ರದ ಯೋಜನೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದೆ. ಇದೆಲ್ಲದರ ಕಾರಣ ಇಷ್ಟೊಂದು ಲೀಡ್ ನೀಡಿದ್ದಾರೆ. ಕಾಂಗ್ರೆಸ್‌ನವರು ನೀರಿನಂತೆ ಹಣ ಹಂಚಿದ್ದಾರೆ. ಆದರೆ ಒಂದೇ ಒಂದು ಮತಕ್ಕೂ ಹಣ ಕೊಡಬಾರದು ಎಂದು ನಿರ್ಧರಿಸಲಾಗಿತ್ತು. ಭ್ರಷ್ಟಾಚಾರ ಕೊನೆಗಾಣಿಸಬೇಕು, ಲೀಡ್ ಕಡಿಮೆ ಆದರೂ ಪರವಾಗಿಲ್ಲ ಎಂದು ನಿರ್ಧರಿಸಲಾಗಿತ್ತು’ ಎಂದು ತೇಜಸ್ವಿ ಸೂರ್ಯ ಹೇಳಿದರು.

‘ಬೆಂಗಳೂರಿಗೆ ಇನ್ನೊಂದು ವಿಮಾನನಿಲ್ದಾಣ, ಸೆಮಿಕಂಡಕ್ಟರ್ ಘಟಕ, ಮೆಟ್ರೊ ವಿಸ್ತರಣೆ, ಬಡವರ ಸೇವೆ ಮಾಡುವುದು ನನ್ನ ಉದ್ದೇಶ. ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ಇಂದಿನಿಂದಲೇ ಕೆಲಸ ಆರಂಭಿಸುವೆ’ ಎಂದರು.

‘ಕಾಂಗ್ರೆಸ್‌ನವರು ಮನೆ ಮನೆಗೆ ಗಿಫ್ಟ್‌ ಕೊಟ್ಟರು, ದುಡ್ಡೂ ಕೊಟ್ಟರು. ಆದರೆ ಜನರು ಇವತ್ತು ನಮಗೆ ಆಶೀರ್ವಾದ ಮಾಡಿದ್ದಾರೆ. ಸಚಿವರ ಕ್ಷೇತ್ರದಲ್ಲೇ ನಾವು ಮುಂದಿದ್ದೇವೆ. ನಮ್ಮೆಲ್ಲರ ಸಂಘಟನೆಯಿಂದ ಈ ಗೆಲುವು ಸಾಧ್ಯವಾಯಿತು’ ಎಂದು ಬಿಜೆಪಿಯ ಬೆಂಗಳೂರು ದಕ್ಷಿಣ ಘಟಕದ ಅಧ್ಯಕ್ಷ ಸಿ.ಕೆ. ರಾಮಮೂರ್ತಿ ಹೇಳಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಮೆರವಣಿಗೆಯಲ್ಲಿ ಸಾಗಿ ಧನ್ಯವಾದ ಸಲ್ಲಿಸಿದರು. ಶಾಸಕರಾದ ಸಿ.ಕೆ. ರಾಮಮೂರ್ತಿ ಹಾಗೂ ಸತೀಶ್‌ ರೆಡ್ಡಿ ಉಪಸ್ಥಿತರಿದ್ದರು.
–ಪ್ರಜಾವಾಣಿ ಚಿತ್ರ/ ರಂಜು ಪಿ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಮೆರವಣಿಗೆಯಲ್ಲಿ ಸಾಗಿ ಧನ್ಯವಾದ ಸಲ್ಲಿಸಿದರು. ಶಾಸಕರಾದ ಸಿ.ಕೆ. ರಾಮಮೂರ್ತಿ ಹಾಗೂ ಸತೀಶ್‌ ರೆಡ್ಡಿ ಉಪಸ್ಥಿತರಿದ್ದರು. –ಪ್ರಜಾವಾಣಿ ಚಿತ್ರ/ ರಂಜು ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT