ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರದಟ್ಟಣೆಗೆ ಸವಾರರು ಹೈರಾಣ

ಡೈರಿ ವೃತ್ತದಿಂದ ಹೊಸೂರು ರಸ್ತೆ ಚೆಕ್‌ಪೋಸ್ಟ್‌ವರೆಗೆ ವೈಟ್‌ಟಾಪಿಂಗ್‌ ಕಾಮಗಾರಿ
Last Updated 3 ಡಿಸೆಂಬರ್ 2019, 20:14 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ನಗರದಲ್ಲಿ ಮಂಗಳವಾರ ಹೊಸೂರು ರಸ್ತೆ ಮೂಲಕ ಸಾಗಿದ ವಾಹನ ಸವಾರರು ಹೈರಾಣಾಗಿದ್ದರು.7 ಕಿ.ಮೀ. ವರೆಗೆ ವಾಹನಗಳು ನಿಂತಿದ್ದರಿಂದ ಸವಾರರು ಗಂಟೆಗಟ್ಟಲೇ ರಸ್ತೆಯಲ್ಲಿ ಸಮಯ ಕಳೆಯಬೇಕಾಯಿತು.

ಡೈರಿ ವೃತ್ತದಿಂದ ಹೊಸೂರು ರಸ್ತೆಯ ಚೆಕ್‌ಪೋಸ್ಟ್‌ವರೆಗಿನ 1.5 ಕಿ.ಮೀ. ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವುದು ಇದಕ್ಕೆ ಕಾರಣ. ಎರಡು ವರ್ಷಗಳ ನಂತರ ಬಿಬಿಎಂಪಿ ಇಲ್ಲಿ ಮತ್ತೆ ವೈಟ್‌ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಂಡಿದೆ.

ಹೊಸೂರು ರಸ್ತೆ ಸಿಂಗಸಂದ್ರದಿಂದ ಆಡುಗೋಡಿವರೆಗೂ ದಟ್ಟಣೆ ಉಂಟಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲೂ ದಟ್ಟಣೆ ಉಂಟಾಗಿದ್ದರಿಂದ ವಾಹನ ಸವಾರರು ಪರದಾಡಿದರು.

ಗಾಯದ ಮೇಲೆ ಬರೆ !

ಸಿಲ್ಕ್ ಬೋರ್ಡ್ ಬಳಿ ನಡೆಯುತ್ತಿರುವ ಮೆಟ್ರೊ ಕಾಮಗಾರಿಯಿಂದಾಗಿ ಬೊಮ್ಮನಹಳ್ಳಿಯಿಂದ ಸಿಲ್ಕ್ ಬೋರ್ಡ್‌ವರೆಗೆ ಯಾವಾಗಲೂ ಒಂದು ಕಿ.ಮೀ. ಉದ್ದದವರೆಗೆ ದಟ್ಟಣೆ ಇರುತ್ತಿತ್ತು. ಇದೀಗ ವೈಟ್ ಟಾಪಿಂಗ್ ಕಾಮಗಾರಿಯಿಂದ ಸಂಚಾರ ದಟ್ಟಣೆ ಆರೇಳು ಕಿ.ಮೀ.ವರೆಗೆ ವಿಸ್ತರಿಸಿದೆ. ಇದೊಂದು ರೀತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸವಾರರು ಆಕ್ರೋಶ ವ್ಯಕ್ತಪಡಿಸಿದರು.

‘ಮನೆಯಿಂದ ಹೊರಟು ಮಡಿವಾಳ ತಲುಪಲು ಒಂದೂವರೆ ತಾಸು ಬೇಕಾಯಿತು. ವಿಲ್ಸನ್‌ ಗಾರ್ಡನ್‌ ತಲುಪಲು ದೊಡ್ಡ ಸಾಹಸವೇ ಮಾಡುವಂತಾಯಿತು’ ಎಂದುವಿಶ್ವಪ್ರಿಯ ಬಡಾವಣೆ ನಿವಾಸಿ ಸದಾಶಿವ ಮೂರ್ತಿ ತಮ್ಮ ಅಳಲು ತೋಡಿಕೊಂಡರು.

‘10 ಗಂಟೆಗೆ ಬೊಮ್ಮನಹಳ್ಳಿಯಿಂದ ಹೊರಟು, ಆಡುಗೋಡಿ ಸೇರುವಷ್ಟರಲ್ಲಿ 12 ಗಂಟೆಯಾಯಿತು. ಹೀಗಾದರೆ, ನಾವು ಕಚೇರಿಗೆ ಹೋಗುವುದಾದರೂ ಹೇಗೆ? ಯಾವುದೋ ಒಂದು ದಿನ ಈ ರೀತಿ ಆದಲ್ಲಿ ಸಹಿಸಿಕೊಳ್ಳಬಹುದು. ವೈಟ್ ಟಾಪಿಂಗ್ ಕಾಮಗಾರಿ ಮುಗಿಯಲು ತಿಂಗಳುಗಳೇ ಬೇಕು. ಇನ್ನೆಷ್ಟು ದಿನ ಯಾತನೆ ಅನುಭವಿಸಬೇಕೋ’ ಎಂದು ಉದ್ಯೋಗಿ ರೇಖಾ ಸಿಟ್ಟು ಹೊರಹಾಕಿದರು.

‘ಹೊಸೂರು ರಸ್ತೆಯಲ್ಲಿ ವಾಹನಗಳ ಗರಿಷ್ಠ ವೇಗ ಗಂಟೆಗೆ 15 ಕಿಮೀ ಇದೆ. ಈ ಕಾಮಗಾರಿಯಿಂದ ಇದು ಗಂಟೆಗೆ 5 ಕಿಮೀಗೆ ಇಳಿಯಲಿದೆ. ಸಂಚಾರ ದಟ್ಟಣೆ ನಿಭಾಯಿಸುವುದು ಸವಾಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಂಚಾರ ಪೊಲೀಸರೊಬ್ಬರು ಹೇಳಿದರು.

ವೈಟ್‌ಟಾಪಿಂಗ್‌ ಕಾಮಗಾರಿಯು ಇನ್ನೂ 60 ದಿನ ನಡೆಯುವ ಸಾಧ್ಯತೆ ಇದ್ದು, ಸವಾರರು ನಿತ್ಯ ಇದೇ ಸಮಸ್ಯೆ ಎದುರಿಸಬೇಕಾಗುತ್ತದೆ.

ಪೂರ್ವ ಸಂಚಾರ ವಿಭಾಗದ ಡಿಸಿಪಿ ಕೆ.ವಿ. ಜಗದೀಶ್‌, ‘ಸಂಚಾರ ದಟ್ಟಣೆ ನಿರ್ವಹಿಸುವುದಕ್ಕೆ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ. ಕಾಮಗಾರಿ ಮುಗಿಯುವವರೆಗೆ ವಾಹನ ಸವಾರರೇ ಸಹಕರಿಸಬೇಕು. ನಗರಕ್ಕೆ ವೈಟ್‌ಟಾಪಿಂಗ್‌ ರಸ್ತೆಗಳು ಅಗತ್ಯ ಇವೆ’ ಎಂದು ಹೇಳಿದರು.

ಅನುಮತಿ ನಿರಾಕರಿಸಲಾಗಿತ್ತು:2017ರ ಡಿಸೆಂಬರ್‌ನಲ್ಲಿ ಹೊಸೂರು ರಸ್ತೆಯ ಆನೆಪಾಳ್ಯ ಜಂಕ್ಷನ್‌ನಲ್ಲಿ ವೈಟ್‌ಟಾಪಿಂಗ್‌ ರಸ್ತೆ ಕಾಮಗಾರಿ ಕೈಗೊಳ್ಳಲು ಬಿಬಿಎಂಪಿ ಮುಂದಾದಾಗ, ಆಗಿನಡಿಸಿಪಿ ಆಗಿದ್ದ ಆರ್. ಹಿತೇಂದ್ರ ಅವರು ಅನುಮತಿ ನಿರಾಕರಿಸಿದ್ದರು. ಸಂಚಾರ ದಟ್ಟಣೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಅವರು ಅನುಮತಿ ನಿರಾಕರಿಸಿದ್ದರು. ಎರಡು ವರ್ಷಗಳ ನಂತರ ಬಿಬಿಎಂಪಿಗೆ ಕಾಮಗಾರಿ ಕೈಗೆತ್ತಿಕೊಳ್ಳಲು ಅನುಮತಿ ಸಿಕ್ಕಿದೆ.

ಆಂಬುಲೆನ್ಸ್‌ಗೂ ಸಿಗದ ದಾರಿ

ಕೆಲವು ಆಂಬುಲೆನ್ಸ್‌ಗೆ ಕೂಡ ಸಂಚಾರ ದಟ್ಟಣೆಯ ಬಿಸಿ ತಾಗಿತು. ಸೈರನ್‌ ಮಾಡುತ್ತಾ ನಿಂತಲ್ಲೇ ನಿಲ್ಲಬೇಕಾಯಿತು. ವಾಹನ ಸವಾರರು ಕೂಡ ಮುಂದೆ ಸಾಗಲಾಗದೆ, ಆಂಬುಲೆನ್ಸ್‌ಗೂ ಜಾಗ ಬಿಡಲು ಸಾಧ್ಯವಾಗದೆ ಕಸಿವಿಸಿಗೊಳಗಾದರು.

‘ಸಂಚಾರ ಪೊಲೀಸರು ವಾಹನ ಸವಾರರಿಗೆ ಪರ್ಯಾಯ ರಸ್ತೆ ಸೂಚಿಸಿದ್ದಾರೆ. ಈ ಪರ್ಯಾಯ ರಸ್ತೆಗಳಲ್ಲಿಯೂ ಮೊದಲಿನಿಂದ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ’ ಎಂದು ಸವಾರರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT