ಬುಧವಾರ, ಮಾರ್ಚ್ 22, 2023
21 °C
ಜಾತಿಗೆ ಸೀಮಿತಗೊಳಿಸುವ ಪ್ರಯತ್ನ: ಅನ್ನದಾನನಾಥ ಸ್ವಾಮೀಜಿ ಬೇಸರ

‘ಕೆಂಪೇಗೌಡರು ಜಾತ್ಯತೀತ ನಾಯಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಾಡಪ್ರಭು ಕೆಂಪೇಗೌಡ ಅವರನ್ನು ಸರ್ಕಾರಗಳು ಹಾಗೂ ಆಧ್ಯಾತ್ಮಿಕ ಕೇಂದ್ರಗಳು ಒಂದು ಜಾತಿಗೆ ಸೀಮಿತಗೊಳಿಸುವ ಮೂಲಕ ಜಾತ್ಯತೀತ ನಾಯಕನನ್ನು ಸಂಕುಚಿತಗೊಳಿಸುತ್ತಿವೆ’ ಎಂದು ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನನಾಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. 

ಬೆಂಗಳೂರು ವಿಶ್ವವಿದ್ಯಾಲಯದ ನಾಡಪ್ರಭು ಕೆಂಪೇಗೌಡ ಮಾನವಿಕ ಮತ್ತು ಸಮಾಜ ವಿಜ್ಞಾನಗಳ ಕೇಂದ್ರ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಬೆಂಗಳೂರಿನ ಇತಿಹಾಸ ಮತ್ತು ಪರಂಪರೆ’ ರಾಷ್ಟ್ರೀಯ ವಿಚಾರಸಂಕಿರಣ ದಲ್ಲಿ ಮಾತನಾಡಿದರು. 

‘ದೂರದೃಷ್ಟಿ ಹೊಂದಿದ್ದ ಕೆಂಪೇಗೌಡರು ಅಂದೇ ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದರು. ಅವರ ವಿಚಾರಧಾರೆ ಹಾಗೂ ಆದರ್ಶಗಳು ಪ್ರತಿಯೊಬ್ಬರಿಗೂ ಅನುಕರಣೀಯ. ಇಂತಹ ಮಹಾನ್‌ ನಾಯಕನ ಪುತ್ಥಳಿ ಹಾಗೂ ಮ್ಯೂಸಿಯಂಗಳನ್ನು ಸರ್ಕಾರ ನಿರ್ಮಿಸಬೇಕು’ ಎಂದು ಆಗ್ರಹಿಸಿದರು. 

‘ಗ್ರಂಥ, ತಾಳೆಗರಿ ಹಾಗೂ ಶಾಸನಗಳ ಮೂಲಕ ಕೇಂಪೇಗೌಡರ ಬಗ್ಗೆ ಅಧ್ಯಯನಗಳು ನಡೆದಿವೆ. ಇನ್ನಷ್ಟು ಸಂಶೋಧನೆಗಳನ್ನು ನಡೆಸಿ, ಸಮಗ್ರ ಸಂಪುಟ ಹೊರತರಬೇಕು’ ಎಂದರು. 

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್, ‘ಬೆಂಗಳೂರು ವಿಶ್ವವಿಖ್ಯಾತವಾಗಲು ಕೆಂಪೇಗೌಡರ ಕೊಡುಗೆ ಅಪಾರ. ನಗರದಲ್ಲಿ ಸಾವಿರಾರು ಕೆರೆಗಳಿದ್ದವು. ಆದರೆ, ನಗರೀಕರಣದ ನೆಪದಲ್ಲಿ ಪ್ರಾಕೃತಿಕ ಸಂಪತ್ತನ್ನು ನಾಶಮಾಡಲಾಯಿತು. ಇದೀಗ ಕೆರೆಗಳು ಕಣ್ಮರೆಯಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು. 

‘ಉದ್ಯಾನ ನಗರಿ ಎಂದು ಪ್ರಸಿದ್ಧವಾಗಿದ್ದ ಬೆಂಗಳೂರಿನಲ್ಲಿ ಕಸದ ಸಮಸ್ಯೆ ತಲೆದೋರಿದೆ. ವಿವಿಯಲ್ಲಿ ಹೊಸದಾಗಿ ಕಸ ನಿರ್ವಹಣಾ ಕೋರ್ಸ್ ಹಾಗೂ ವಿಪತ್ತು ನಿರ್ವಹಣಾ ಕೋರ್ಸ್‌ಗಳನ್ನು ಆರಂಭಿಸಲಾಗಿದೆ’ ಎಂದು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು