ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಮೂಲದ ಶಿಕ್ಷಣವೇ ಮೌಲ್ಯ ಶಿಕ್ಷಣವಲ್ಲ: ಬರಗೂರು ರಾಮಚಂದ್ರಪ್ಪ

Last Updated 14 ಜನವರಿ 2023, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ಧರ್ಮ ಮೂಲದ ಶಿಕ್ಷಣವೇ ಮೌಲ್ಯಾಧರಿತ ಶಿಕ್ಷಣವಲ್ಲ, ಮಕ್ಕಳಿಗೆ ಮಾನವೀಯತೆ ಕಲಿಸುವುದೇ ಮೌಲ್ಯಯುತ ಶಿಕ್ಷಣ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಜನ ಪ್ರಕಾಶನ, ನಾಡೋಜ ಡಾ.ಬರಗೂರು ಪ್ರತಿಷ್ಠಾನ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯ ಕನ್ನಡ ಅಧ್ಯಾಪಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಕ್ಷತಾ ಕೃಷ್ಣಮೂರ್ತಿ ಅವರ ‘ಇಸ್ಕೂಲು’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಎಲ್ಲಾ ಮನುಷ್ಯರೂ ಒಂದೇ ಎಂಬುದೇ ಧರ್ಮ. ಸಂವಿಧಾನದ ಆಶಯಗಳೇ ಮೌಲ್ಯಯುತ ಶಿಕ್ಷಣ. ಅವುಗಳನ್ನು ಅನುಸರಿಸುವುದೇ ನಿಜವಾದ ಮೌಲ್ಯ. ಸಮತೆ ಮತ್ತು ಮಮತೆ ಇರುವ ಮನಸುಗಳನ್ನು ಸೃಷ್ಟಿಸುವುದೇ ಶಿಕ್ಷಣ’ ಎಂದು ಅವರು ಪ್ರತಿಪಾದಿಸಿದರು.

’ಮಕ್ಕಳಿಗೆ ಅರಿವು ಮತ್ತು ಅಂತಃಕರಣ ಮೌಲ್ಯ ಕಲಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರನ್ನು ಮೊದಲು ತಯಾರು ಮಾಡಬೇಕು. ಅವರ ಮೂಲಕ ಮಕ್ಕಳಿಗೆ ಮೌಲ್ಯವನ್ನು ಕಲಿಸಬೇಕು. ಇದನ್ನು ಮಾಡದೆ ಏನೇ ಬದಲಾವಣೆ ಮಾಡಿದರೂ ಅದು ಸಾಕಾರವಾಗದು‘ ಎಂದರು.

‘ಮೌಲ್ಯಯುತ ಶಿಕ್ಷಣದ ಬಗ್ಗೆ ಮಾತನಾಡುವ ಸರ್ಕಾರ, ಶಿಕ್ಷಣವೇ ದೊಡ್ಡ ಮೌಲ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಧರ್ಮ ಮೂಲ ಶಿಕ್ಷಣ ಹೇರಿ ಮೌಲ್ಯ ಶಿಕ್ಷಣ ಎನ್ನುವುದು ತಪ್ಪು ಕಲ್ಪನೆ’ ಎಂದು ಹೇಳಿದರು.

‌ಶಿಕ್ಷಣ ಕ್ಷೇತ್ರದ ಸುಧಾರಣೆ ಆಗಬೇಕೆಂದರೆ ಮೊದಲು ಶಿಕ್ಷಕರನ್ನು ಸಿದ್ಧಪಡಿಸಬೇಕು. ಅಧ್ಯಾಪಕರನ್ನು ಕರೆದು ಸುಧಾರಣೆ ಬಗ್ಗೆ ಸಲಹೆಗಳನ್ನು ಸರ್ಕಾರ ಪಡೆದುಕೊಳ್ಳಬೇಕು. ಅಧಿಕಾರಿಗಳು ಮತ್ತು ರಾಜಕಾರಣಿಗಳೇ ಶಿಕ್ಷಣ ಸುಧಾರಣೆ ಬಗ್ಗೆ ಸಭೆ ನಡೆಸಿದರೆ ಪ್ರಯೋಜನವಾಗದು ಎಂದರು.

ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಮೌಲ್ಯಗಳನ್ನು ತುಂಬುವುದು ಹೇಗೆ ಎಂಬುದನ್ನು ‘ಇಸ್ಕೂಲು’ ಪುಸ್ತಕದಲ್ಲಿ ಅಕ್ಷತಾ ಕೃಷ್ಣಮೂರ್ತಿ ಹೇಳಿದ್ದಾರೆ ಎಂದು ಬರಗೂರು ಹೇಳಿದರು. ಪುಸ್ತಕದ ಕುರಿತು ಸಾಹಿತಿ ರಾಜಪ್ಪ ದಳವಾಯಿ ಮಾತನಾಡಿದರು.

ಬಿಡುಗಡೆಯಾದ ಪುಸ್ತಕ

ಪುಸ್ತಕ: ಇಸ್ಕೂಲು (ಲೇಖನಗಳ ಸಂಗ್ರಹ)

ಲೇಖಕರು: ಅಕ್ಷತಾ ಕೃಷ್ಣಮೂರ್ತಿ

ಪುಟ: 184

ಬೆಲೆ: ₹200

ಪ್ರಕಾಶಕರು: ಜನ ಪ್ರಕಾಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT