ಪ್ಲಾಸ್ಟಿಕ್ ನಿಷೇಧಕ್ಕೆ ಜಾಗೃತಿ: ಪಿಒಪಿ ಬದಲು ಮಣ್ಣಿನ ಗಣೇಶ ಮೂರ್ತಿ ಬಳಕೆಗೆ ಸಲಹೆ

ಶುಕ್ರವಾರ, ಜೂಲೈ 19, 2019
24 °C

ಪ್ಲಾಸ್ಟಿಕ್ ನಿಷೇಧಕ್ಕೆ ಜಾಗೃತಿ: ಪಿಒಪಿ ಬದಲು ಮಣ್ಣಿನ ಗಣೇಶ ಮೂರ್ತಿ ಬಳಕೆಗೆ ಸಲಹೆ

Published:
Updated:
Prajavani

ಬೆಂಗಳೂರು: ಪ್ಲಾಸ್ಟಿಕ್ ಬಳಕೆ ನಿಷೇಧ, ಕಸ ವಿಂಗಡಣೆ, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿ ಬದಲು ಮಣ್ಣಿನ ಗಣೇಶ ಮೂರ್ತಿ ಬಳಕೆ ಬಗ್ಗೆ ಶಾಲಾ ಮಕ್ಕಳ ಮೂಲಕ ಜಾಗೃತಿ ಮೂಡಿಸಲು ಬಿಬಿಎಂಪಿ ಮುಂದಾಗಿದೆ.

ಈ ಸಂಬಂಧ ಶಾಲಾ ಮುಖ್ಯಸ್ಥರ ಜತೆ ಮೇಯರ್ ಗಂಗಾಂಬಿಕೆ ಅವರು ಗುರುವಾರ ಸಭೆ ನಡೆಸಿದರು.

‘ಬಿಬಿಎಂಪಿ ವತಿಯಿಂದ ಎಲ್ಲಾ ವಲಯಗಳಲ್ಲೂ ಜಾಗೃತಿ ಜಾಥಾ ಆಯೋಜಿಸಲಾಗುತ್ತಿದೆ. ದಕ್ಷಿಣ ವಲಯದಲ್ಲಿ ಮೊದಲಿಗೆ ಜಾಥಾ ನಡೆಯಲಿದೆ. ಪಾಲಿಕೆಯ 20 ಹಾಗೂ 120 ಖಾಸಗಿ ಶಾಲೆಗಳ ಎಲ್ಲಾ ಮಕ್ಕಳನ್ನು ಜಾಥಾಕ್ಕೆ ಕರೆತರಬೇಕು’ ಎಂದು ಮೇಯರ್ ತಿಳಿಸಿದರು.

‘ನಗರದಲ್ಲಿ ಪ್ರತಿನಿತ್ಯ 5,700 ಟನ್ ಕಸ ಉತ್ಪತ್ತಿಯಾಗುತ್ತಿದೆ. ಸಾರ್ವಜನಿಕರ ಅಸಹಕಾರದಿಂದ ಕಸ ವಿಂಗಡಣೆ ಸಮರ್ಪಕವಾಗಿ ಆಗುತ್ತಿಲ್ಲ. ಹೀಗಾಗಿ, ಸಮಸ್ಯೆ ಬಿಗಡಾಯಿಸಿದೆ. ಸೆಪ್ಟೆಂಬರ್ 1ರಿಂದ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುವುದು. ವಿಂಗಡಿಸಿ ನೀಡದವರಿಗೆ ದಂಡ ವಿಧಿಸಲಾಗುವುದು’ ಎಂದು ಹೇಳಿದರು.

‘ಪಿಒಪಿ ಗಣೇಶ ಮೂರ್ತಿಗಳ ಬದಲು ಮಣ್ಣಿನ ಮೂರ್ತಿಗಳನ್ನು ಬಳಕೆ ಮಾಡುವುದರಿಂದ ಪರಿಸರ ಸಂರಕ್ಷಣೆ ಸಾಧ್ಯ. ಕೆರೆಯ ನೀರು ಮಲೀನ ಆಗುವುದನ್ನು ತಪ್ಪಿಸಲು ಎಲ್ಲರೂ ಮಣ್ಣಿನ ಮೂರ್ತಿಗಳನ್ನೇ ಬಳಸಬೇಕು’ ಎಂದು ಮನವಿ ಮಾಡಿದರು.

‘ಪರಿಸರ ಕಾಪಾಡಲು ಶಾಲಾ ಮಕ್ಕಳ ಸಹಕಾರ ಬೇಕಿದೆ. ಮಕ್ಕಳಿಗೆ ಅರಿವು ಮೂಡಿಸಿದರೆ ಅವರು ಪೋಷಕರಿಗೆ ಮನವರಿಕೆ ಮಾಡಿಸುತ್ತಾರೆ’ ಎಂದರು.

ಬಿಬಿಎಂಪಿಯಿಂದ ಪೇಪರ್ ಬ್ಯಾಗ್ ವಿತರಣೆ
‘ಪ್ಲಾಸ್ಟಿಕ್ ನಿಷೇಧವನ್ನು ಸಮರ್ಪಕವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ‌ವ್ಯಾಪಾರಿಗಳಿಗೆ ಬಿಬಿಎಂಪಿಯಿಂದಲೇ ಪೇಪರ್ ಬ್ಯಾಗ್ ವಿತರಿಸಲು ಕ್ರಮ ವಹಿಸಲಾಗುತ್ತಿದೆ’ ಎಂದು ಗಂಗಾಂಬಿಕೆ ತಿಳಿಸಿದರು.

ಪ್ಲಾಸ್ಟಿಕ್ ನಿಷೇಧ ಸಂಬಂಧ ಅಧಿಕಾರಿಗಳ ಸಭೆ ನಡೆಸಿದ ಅವರು,ತಂಗುದಾಣ, ರೈಲ್ವೆ ನಿಲ್ದಾಣ, ಉದ್ಯಾನಗಳಲ್ಲಿ ಫಲಕ ಅಳವಡಿಸಬೇಕು. ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಆಟೋಗಳಲ್ಲಿ ಧ್ವನಿವರ್ಧಕಗಳ ಮೂಲಕ ಅರಿವು ಮೂಡಿಸಬೇಕು’ ಎಂದು ಸೂಚಿಸಿದರು.

‘ಎಲ್ಲಾ ವಾರ್ಡ್‌ಗಳಲ್ಲಿ ಆರೋಗ್ಯಾಧಿಕಾರಿಗಳು ಅಲ್ಲಿನ ಸದಸ್ಯರ ಸಹಯೋಗ ಪಡೆದು ಜು.15ರಿಂದ ಬೀದಿ ಬದಿಯ ಅಂಗಡಿಗಳು, ಬಿಬಿಎಂಪಿ ಹಾಗೂ ಬಿಡಿಎ ಕಾಂಪ್ಲೆಕ್ಸ್‌ಗಳು, ಪ್ರಮುಖ ಮಾರುಕಟ್ಟೆಗಳಿಗೆ ದಾಳಿ ನಡೆಸಿ ಪ್ಲಾಸ್ಟಿಕ್ ಕೈ ಚೀಲ ಜಪ್ತಿ ಮಾಡಬೇಕು. ಇನ್ನು ಮುಂದೆ ಪ್ಲಾಸ್ಟಿಕ್ ಕೈಚೀಲ ಬಳಕೆ ಮಾಡಿದರೆ ದುಪ್ಪಟ್ಟು ದಂಡ ವಿಧಿಸುವ ಬಗ್ಗೆ ಎಚ್ಚರಿಕೆ ನೀಡಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !