ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಸ್ತೆ ವಿಸ್ತರಣೆ: ಅರಮನೆ ಜಮೀನು ಬಿಬಿಎಂಪಿ ಸ್ವಾಧೀನಕ್ಕೆ

15 ಎಕರೆ 15.5 ಗುಂಟೆ ಜಮೀನಿನ ಅಭಿವೃದ್ಧಿ ಹಕ್ಕು ವರ್ಗಾವಣೆಗೆ ₹ 1 ಕೋಟಿ ಪಾವತಿ
Published 4 ಜುಲೈ 2024, 0:30 IST
Last Updated 4 ಜುಲೈ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಜಯಮಹಲ್‌ ರಸ್ತೆ ಮತ್ತು ಬಳ್ಳಾರಿ ರಸ್ತೆಗಳಿಗೆ ಹೊಂದಿಕೊಂಡಂತಿರುವ 15 ಎಕರೆ 15.5 ಗುಂಟೆ ಜಮೀನನ್ನು ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌) ಪಾವತಿಸುವ ಮೂಲಕ ಬಿಬಿಎಂಪಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ.

ಅರಮನೆ ಮೈದಾನದ ವ್ಯಾಪ್ತಿಯ ಈ ಜಮೀನಿಗೆ ₹1 ಕೋಟಿ ಟಿಡಿಆರ್‌ ‍ಪಾವತಿಸಲಾಗಿದೆ. ಮಾರುಕಟ್ಟೆ ದರಕ್ಕಿಂತ ಸಾಕಷ್ಟು ಕಡಿಮೆ ಇರುವ ಪರಿಹಾರ ಮೊತ್ತವನ್ನು ಸುಪ್ರೀಂ ಕೋರ್ಟ್‌ನಲ್ಲಿ ಮೈಸೂರು ರಾಜಮನೆತನದವರು ಪ್ರಶ್ನಿಸಬಹುದು ಎನ್ನಲಾಗಿದೆ.

‘ರಸ್ತೆಗಳನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ ಪಾಲಿಕೆ ಜಮೀನನ್ನು ವಶಕ್ಕೆ ತೆಗೆದುಕೊಂಡಿದೆ. ಆಸ್ತಿ ಮಾಲೀಕರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿ ಹಕ್ಕು ಪ್ರಮಾಣಪತ್ರವನ್ನು (ಡಿಆರ್‌ಸಿ) ನೀಡಬೇಕಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ಜಂಟಿ ಸಮೀಕ್ಷೆ ನಡೆಸಲು ಪಾಲಿಕೆ ಮೈಸೂರು ರಾಜ ಮನೆತನದವರಿಗೆ ಜೂನ್‌ 18ರಂದು  ನೋಟಿಸ್‌ ನೀಡಿತ್ತು. ಅದಕ್ಕೆ ಉತ್ತರ ಬಾರದ್ದರಿಂದ ಜೂನ್‌ 26ರಂದು ಮತ್ತೊಂದು ನೋಟಿಸ್‌ ನೀಡಿ, ಜುಲೈ 1ರಂದು ಜಂಟಿ ಪರಿಶೀಲನೆಗೆ ಬಾರದಿದ್ದರೆ ಜಮೀನನ್ನು ಸ್ವಾಧೀನಕ್ಕೆ ಪಡೆಯುವುದಾಗಿ ಹೇಳಿತ್ತು. ಎರಡನೇ ನೋಟಿಸ್‌ಗೂ ಉತ್ತರ ಬಾರದ್ದರಿಂದ ಬಿಬಿಎಂಪಿ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. 

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಮೇನಲ್ಲಿ ನೀಡಿದ್ದ ಆದೇಶದಂತೆ ಬಿಬಿಎಂಪಿ ಪರಿಹಾರವನ್ನು ಪ್ರಕಟಿಸಿದೆ. ಅರಮನೆ ಜಮೀನಿನ ಒಟ್ಟು 472 ಎಕರೆಗೆ ₹11 ಕೋಟಿ ಮೌಲ್ಯ ನಿಗದಿಪಡಿಸಲಾಗಿತ್ತು. ಇದನ್ನು 15 ಎಕರೆ 17.5 ಗುಂಟೆಗೆ ಅನ್ವಯಿಸಿದಾಗ ₹1 ಕೋಟಿಯಷ್ಟಾಗುತ್ತದೆ. ಬಡ್ಡಿಯನ್ನೂ ಸೇರಿಸಿದರೆ ₹1.5 ಕೋಟಿಯಾಗುತ್ತದೆ.

‘ಪರಿಹಾರ ನೀಡಿರುವುದನ್ನು ನಾವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ. ನ್ಯಾಯಾಲಯದ ಆದೇಶಕ್ಕೆ ಇದು ತದ್ವಿರುದ್ಧವಾಗಿದೆ. ಡಿಆರ್‌ಸಿ ಮಾರುಕಟ್ಟೆ ದರದಂತಿರುತ್ತದೆ. ಆದರೆ ಇದನ್ನು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿಲ್ಲ’ ಎಂದು ರಾಜಮನೆತನದವರ ಆಪ್ತರು ತಿಳಿಸಿದ್ದಾರೆ.

‘ಡಿಆರ್‌ಸಿಯಲ್ಲಿ ನಮೂದಿಸಲಾಗಿರುವ ಪರಿಹಾರ ಮೊತ್ತವು 2016ರ ಟಿಡಿಆರ್‌ ನಿಯಮಗಳಂತೆಯೇ ಇದೆ’ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT