ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಾಂಗಣ ಜಾಹೀರಾತು ಏನಿದರ ಹೂರಣ?

ನಮ್ಮ ನಗರ ನಮ್ಮಧ್ವನಿ
Last Updated 29 ಜುಲೈ 2019, 3:42 IST
ಅಕ್ಷರ ಗಾತ್ರ

ಬೆಂಗಳೂರು: 2018 ಆಗಸ್ಟ್‌ 1ರ ಮಟಮಟ ಮಧ್ಯಾಹ್ನದ ಹೊತ್ತು. ಬಿಬಿಎಂಪಿಯ ಎಲ್ಲ ವಿಭಾಗಗಳ ಅಧಿಕಾರಿಗಳು ಬೇರೆಲ್ಲ ಕೆಲಸ ಬಿಟ್ಟು ಬೀದಿ ಬದಿಯ ಹೊರಾಂಗಣ ಜಾಹೀರಾತುಗಳನ್ನು ತೆರವುಗೊಳಿಸುವ ಗಡಿಬಿಡಿಯಲ್ಲಿದ್ದರು. ಸಂಜೆಯಾಗುವಷ್ಟರಲ್ಲಿ ನಗರದಲ್ಲಿದ್ದ ಶೇ 50ರಷ್ಟು ಹೊರಾಂಗಣ ಜಾಹೀರಾತುಗಳು ಮಂಗಮಾಯ!

ಈ ‘ಮಾಯಾ’ಜಾಲದ ಹಿಂದೆ ಕೆಲಸ ಮಾಡಿದ್ದು, ಹೈಕೋರ್ಟ್‌ ಬೀಸಿದ್ದ ಚಾಟಿ. ನಗರದಲ್ಲಿ ಫ್ಲೆಕ್ಸ್‌ ಹಾಗೂ ಅನಧಿಕೃತ ಜಾಹೀರಾತು ಹಾವಳಿ ಕುರಿತು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು 2018ರ ಆಗಸ್ಟ್‌ 1ರಂದು ವಿಚಾರಣೆಗೆ ಎತ್ತಿಕೊಂಡಿದ್ದ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಅವರು ಸಾರ್ವಜನಿಕ ಸ್ಥಳಗಳಲ್ಲಿರುವ ಅಷ್ಟೂ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಬಿಬಿಎಂಪಿಗೆ ಸೂಚನೆ ನೀಡಿದ್ದರು. ಪಾಲಿಕೆ ಸಿಬ್ಬಂದಿ ಸಮರೋಪಾದಿಯಲ್ಲಿ ತೆರವು ಕಾರ್ಯ ನಡೆಸಿದ್ದರಿಂದ ಒಂದೇ ದಿನದಲ್ಲಿ ನಗರ ಫ್ಲೆಕ್ಸ್‌ ಹಾವಳಿಗೆ ಕಡಿವಾಣ ಬಿದ್ದಿದ್ದು ಈಗ ಇತಿಹಾಸ.

ಒಂದು ವರ್ಷದ ಅವಧಿಗೆ ನಗರ ವ್ಯಾಪ್ತಿಯಲ್ಲಿ ಎಲ್ಲ ಮಾದರಿಯ ಜಾಹೀರಾತು ಪ್ರದರ್ಶನವನ್ನು ನಿಷೇಧಿಸಿ ಪಾಲಿಕೆ ಆಗಸ್ಟ್‌ನಲ್ಲಿ ನಿರ್ಣಯ ಕೈಗೊಂಡಿತು. ಬಳಿಕ, ಹೈಕೋರ್ಟ್‌ನ ಆದೇಶದ ಮೇರೆಗೆ ಬಿಬಿಎಂ‍ಪಿ ‘ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶ ನೀತಿ ಹಾಗೂ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ -2018’ ರೂಪಿಸಿತು. ಇದಕ್ಕೆ ಕೌನ್ಸಿಲ್‌ ಸಭೆ ಸರ್ವಾನುಮತದ ಅನುಮೋದನೆ ನೀಡಿತು. ಹೊಸ ಜಾಹೀರಾತು ನೀತಿಗೆ ನಗರಾಭಿವೃದ್ಧಿ ಇಲಾಖೆಯೂ ಒಪ್ಪಿಗೆ ನೀಡಿತು. ಸಾರ್ವಜನಿಕ ಪ್ರದೇಶಗಳಲ್ಲಿ ಎಲ್ಲಾ ರೀತಿಯ ಖಾಸಗಿ ಜಾಹೀರಾತು ಹೋರ್ಡಿಂಗ್‌ಗಳಿಗೆ ನಿಷೇಧ ಹೇರುವ ಪ್ರಸ್ತಾಪ ಇದರಲ್ಲಿತ್ತು.

2018ರ ಸೆಪ್ಟೆಂಬರ್‌ನಲ್ಲಿ ಬೈಲಾ ಕರಡನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿ ಸಾರ್ವಜನಿಕರಿಂದ ಸಲಹೆ ಆಹ್ವಾನಿಸಲಾಯಿತು. ಒಟ್ಟು 737 ಅರ್ಜಿಗಳು ಸಲ್ಲಿಕೆ ಆಗಿದ್ದವು. ಆ ಬಳಿಕ ಬಿಬಿಎಂಪಿ ಆಯುಕ್ತರು ಅಂತಿಮ ಅನುಮೋದನೆಗಾಗಿ ಬೈಲಾ ಕರಡನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದರು.

ಆಶಯವೇ ಬುಡಮೇಲು
ಸಾರ್ವಜನಿಕ ಪ್ರದೇಶಗಳ ಅಂದಗೆಡದಂತೆ ನೋಡಿಕೊಳ್ಳುವುದಕ್ಕೆ ಕಾರಣವಾಗಿದ್ದ ಈ ಬೆಳವಣಿಗೆಗಳ ಆಶಯವನ್ನೇ ಬುಡಮೇಲು ಮಾಡುವ ಪ್ರಯತ್ನ ಸದ್ದಿಲ್ಲದೇ ನಡೆಯಿತು. ನಗರ ವ್ಯಾಪ್ತಿಯಲ್ಲಿ ಜಾಹೀರಾತು ಪ್ರದರ್ಶನ ನಿಷೇಧಿಸಿ ಪಾಲಿಕೆ ಕೈಗೊಂಡಿದ್ದ ನಿರ್ಣಯವನ್ನು ಪ್ರಶ್ನಿಸಿ ಮೆಸರ್ಸ್ ಪಾಪ್ಯುಲರ್ ಅಡ್ವಟೈಸರ್ಸ್‌ ಸೇರಿದಂತೆ 11 ಖಾಸಗಿ ಜಾಹೀರಾತು ಕಂಪನಿಗಳು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. ಪಾಲಿಕೆಯ ನಿರ್ಣಯವನ್ನು ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು ತಡೆ ನೀಡಿತು.

ಏಕ ಸದಸ್ಯ ಪೀಠದ ಆದೇಶಕ್ಕೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಮರುದಿನವೇ ತಡೆ ನೀಡಿತು. ಅಷ್ಟೇ ಅಲ್ಲ, ‘ಜಾಹೀರಾತು ಅಳವಡಿಸಿ ಸಾರ್ವಜನಿಕ ಪ್ರದೇಶಗಳನ್ನು ವಿರೂಪಗೊಳಿಸುವವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಹಾಗೂ ತಪ್ಪಿತಸ್ಥರನ್ನು ಕೋರ್ಟ್‌ ಮುಂದೆ ಹಾಜರುಪಡಿಸಿ’ ಎಂದು ಬಿಬಿಎಂಪಿಗೆ ತಾಕೀತು ಮಾಡಿತ್ತು.

ಈ ಬೆಳವಣಿಗೆಗಳ ನಡುವೆ ಜಾಹೀರಾತು ಕಂಪನಿಗಳು ಸರ್ಕಾರದ ಉನ್ನತ ಮಟ್ಟದಲ್ಲಿ ಲಾಬಿ ನಡೆಸ ತೊಡಗಿದ್ದವು. ಪಾಲಿಕೆ ರೂಪಿಸಿದ್ದ ಬೈಲಾ ಕಾನೂನುಬದ್ಧವಾಗಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ತಗಾದೆ ತೆಗೆಯಿತು. ಬೈಲಾ ಕರಡು ದೋಷಪೂರಿತವಾಗಿದ್ದು, ಅದನ್ನು ಪರಿಷ್ಕರಿಸಿ ಮತ್ತೊಮ್ಮೆ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆ ಆಹ್ವಾನಿಸಬೇಕು ಎಂದು ಸಂಸದೀಯ ವ್ಯವಹಾರಗಳ ಇಲಾಖೆ ಸಲಹೆ ನೀಡಿತ್ತು. ಬೈಲಾದಲ್ಲಿ ಲೋಪಗಳಿದ್ದುದೇ ಆದರೆ, ಅದನ್ನು ಸರಿಪಡಿಸುವುದನ್ನು ಬಿಟ್ಟು ಜಾಹೀರಾತು ಬೈಲಾವನ್ನು ಮೂಲೆಗುಂಪು ಮಾಡಲಾಗುತ್ತಿದೆ.

ನಗರಾಭಿವೃದ್ಧಿ ಇಲಾಖೆಯು 1976ರ ಕೆಎಂಸಿ ಕಾಯ್ದೆಯ ಸೆಕ್ಷನ್‌ 427ರಲ್ಲಿನ ಅಧಿಕಾರ ಬಳಸಿ ಹೊಸತಾಗಿ ‘ಬಿಬಿಎಂಪಿ ಜಾಹೀರಾತು ನಿಯಮಗಳು 2019’ರ ಕರಡನ್ನು ರೂಪಿಸಿದ್ದಲ್ಲದೇ, ಈ ಕುರಿತು ಅಧಿಸೂಚನೆಯನ್ನೂ ಹೊರಡಿಸಿದೆ. ಈ ಹೊಸ ನಿಯಮವು ನೆಲದಲ್ಲಿ, ಚಾವಣಿಗಳ ಮೇಲೆ ಖಾಸಗಿ ಹೋರ್ಡಿಂಗ್‌ಗಳಿಗೆ ಹಾಗೂ ಬಿಲ್‌ಬೋರ್ಡ್‌ಗಳನ್ನು ಅಳವಡಿಸುವುದಕ್ಕೆ ಅವಕಾಶ ಕಲ್ಪಿಸಲಿದೆ. ಇದರಿಂದ ನಗರದಲ್ಲಿ ಮತ್ತೆ ಜಾಹೀರಾತು ಹಾವಳಿಗೆ ಇದು ದಾರಿ ಮಾಡಿಕೊಡಲಿದೆ ಎಂಬ ಆತಂಕ ವ್ಯಕ್ತವಾಗಿದೆ.

‘ಭ್ರಷ್ಟಾಚಾರದ ವಾಸನೆ’
‘ಹೈಕೋರ್ಟ್‌ ಚಾಟಿ ಬೀಸಿದ ಬಳಿಕ ನಗರದಲ್ಲಿ ಹೊರಾಂಗಣ ಜಾಹೀರಾತು ಹಾವಳಿಗೆ ಕಡಿವಾಣ ಬಿದ್ದಿತ್ತು. ಬಿಬಿಎಂಪಿಯೂ 2018ರಲ್ಲಿ ರೂಪಿಸಿದ ಜಾಹೀರಾತು ಬೈಲಾ ಉತ್ತಮವಾಗಿತ್ತು. ಆದರೆ, ಜಾಹೀರಾತು ಲಾಬಿಗೆ ಮಣಿದ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅದನ್ನು ಜಾರಿಗೊಳಿಸಲು ಬಿಡಲೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ.

‘ನಗರಾಭಿವೃದ್ಧಿ ಇಲಾಖೆ ರಚಿಸಿರುವ ‘ಜಾಹೀರಾತು ನಿಯಮ 2019’ರ ಕರಡು ನಗರದ ಹಿತಕ್ಕಿಂತಲೂ ಹೆಚ್ಚಾಗಿ ಜಾಹೀರಾತುದಾರರ ಹಿತ ಕಾಯುವಂತಿದೆ. ಈ ಹಿಂದೆ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದವರು ಬಹಳ ಮುತುವರ್ಜಿ ವಹಿಸಿ ಈ ಕರಡು ರೂಪುಗೊಳ್ಳುವಂತೆ ನೋಡಿಕೊಂಡರು. ಸಮ್ಮಿಶ್ರ ಸರ್ಕಾರ ಪತನದಂಚಿನಲ್ಲಿದ್ದಾಗ ತರಾತುರಿಯಲ್ಲಿ ಈ ಬಗ್ಗೆ ಅಧಿಸೂಚನೆ ಹೊರಡಿಸಲಾಯಿತು.

ಈ ಬೆಳವಣಿಗೆ ಹಿಂದೆ ಭಾರಿ ಭ್ರಷ್ಟಾಚಾರ ನಡೆದಿದೆ. ಹೊಸ ಸರ್ಕಾರ ಈ ಕರಡನ್ನು ಒಪ್ಪಿಕೊಂಡರೆ ನಗರದಲ್ಲಿ ಮತ್ತೆ ಜಾಹೀರಾತು ಹಾವಳಿ ಕಾಣಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ 2019ರ ಕರಡಿನ ಬದಲು 2018ರಲ್ಲಿ ಬಿಬಿಎಂಪಿ ರೂಪಿಸಿದ್ದ ಜಾಹೀರಾತು ಬೈಲಾವನ್ನೇ ಹೊಸ ಸರ್ಕಾರ ಜಾರಿಗೆ ತರಬೇಕು’ ಎಂದು ಅವರು ಒತ್ತಾಯಿಸಿದರು.

ಡೀಮ್ಡ್‌ ಅನುಮೋದನೆ?
‘ಬಿಬಿಎಂಪಿ 2018ರಲ್ಲಿ ರೂಪಿಸಿದ ಜಾಹೀರಾತು ಬೈಲಾವನ್ನು ಮೂರು ತಿಂಗಳಲ್ಲಿ ಸರ್ಕಾರ ಅನುಮೋದಿಸಬೇಕಿತ್ತು. ಆದರೆ, ಅನುಮೋದನೆ ನೀಡದ ಕಾರಣ, ಕರ್ನಾಟಕ ಪೌರಾಡಳಿತ ಕಾಯ್ದೆ-1976ರ ಕಲಂ 425ರ ಪ್ರಕಾರ ಅದು ಡೀಮ್ಡ್ ಅನುಮೋದನೆ ಹೊಂದಿ ಜಾರಿಗೆ ಬಂದಂತಾಗಿದೆ’ ಎಂದು ಅನಧಿಕೃತ ಜಾಹೀರಾತು ತೆರವು ಕೋರಿ ಅರ್ಜಿ ಸಲ್ಲಿಸಿದ್ದ ಕಕ್ಷಿದಾರರ ಪರ ವಕೀಲ ಜಿ.ಆರ್.ಮೋಹನ್‌ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಈ ಬಗ್ಗೆ ಅಂತಿಮ ತೀರ್ಪು ಇನ್ನಷ್ಟೇ ಬರಬೇಕಿದೆ.

ವರ್ಷದಲ್ಲಿ ಏನೇನಾಯಿತು?
* 2018 ಆ. 01:
ನಗರದಲ್ಲಿ ಎಲ್ಲ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಿ ಎಂದ ಹೈಕೋರ್ಟ್‌
* 2018 ಆಗಸ್ಟ್‌ 6: ಒಂದು ವರ್ಷ ಹೊರಾಂಗಣ ಜಾಹೀರಾತು ಕಾಲ ನಿಷೇಧಿಸಿ ಪಾಲಿಕೆ ಕೌನ್ಸಿಲ್‌ ಸಭೆ ನಿರ್ಣಯ
* 2018 ಆ.28: ‘ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶ ನೀತಿ ಹಾಗೂ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ -2018’ಕ್ಕೆ ಪಾಲಿಕೆ ಸಭೆ ಅನುಮೋದನೆ
* 2018ರ ಸೆ. 11: ಬೈಲಾ ಕರಡು ರಾಜ್ಯಪತ್ರದಲ್ಲಿ ಪ್ರಕಟ– ಸಾರ್ವಜನಿಕರಿಂದ ಸಲಹೆ ಆಹ್ವಾನ ಎರಡು ತಿಂಗಳ ಬಳಿಕ ಸರ್ಕಾರಕ್ಕೆ ಪರಿಷ್ಕೃತ ಕರಡು ಸಲ್ಲಿಕೆ.
* 2019ರ ಫೆ.6: ಜಾಹೀರಾತು ನಿಷೇಧಿಸುವ ಪಾಲಿಕೆ ನಿರ್ಣಯಕ್ಕೆ ಹೈಕೋರ್ಟ್‌ ಏಕ ಸದಸ್ಯ ಪೀಠದಿಂದ ತಡೆ
* 2019ರ ಫೆ.7: ಏಕ ಸದಸ್ಯ ಪೀಠದ ಆದೇಶ ರದ್ದುಪಡಿಸಿದ ವಿಭಾಗೀಯ ನ್ಯಾಯಪೀಠ
* 2019 ಮಾ.20: ಹೊಸ ನಿಯಮ ರಚನೆಗೆ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ನೇತೃತ್ವದಲ್ಲಿ ಸಭೆ
* 2019 ಜು 15: ನಗರಾಭಿವೃದ್ಧಿ ಇಲಾಖೆಯಿಂದ ‘ಜಾಹೀರಾತು ನಿಯಮ 2019’ರ ಕರಡು ಅಧಿಸೂಚನೆ ಪ್ರಕಟ

ಜಾಹೀರಾತು ನಿಯಮದ ಕರಡು– ಗೊಂದಲದ ಗೂಡು
ನಗರಾಭಿವೃದ್ಧಿ ಇಲಾಖೆ ರೂಪಿಸಿರುವ ‘ಜಾಹೀರಾತು ನಿಯಮ 2019’ರ ಕರಡು ಅನೇಕ ಗೊಂದಲಗಳಿಂದ ಕೂಡಿದೆ. ಅವುಗಳಲ್ಲಿ ಪ್ರಮುಖವಾದವುಗಳು ಇಂತಿವೆ.

ರಾಜಕಾಲುವೆ ಬಳಿ ಹೋರ್ಡಿಂಗ್‌ಗೆ ನಿಷೇಧವಿಲ್ಲ?
ಈಗಿರುವ ನಿಯಮಗಳ ಪ್ರಕಾರ ನದಿ, ಕೆರೆ, ರಾಜಕಾಲುವೆಗಳ ಮೀಸಲು ಪ್ರದೇಶದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗೆ ಅವಕಾಶವಿಲ್ಲ. ಹೊಸ ಜಾಹೀರಾತು ನಿಯಮಗಳ ಕರಡಿನಲ್ಲಿ ನದಿ ಹಾಗೂ ಕೆರೆದಂಡೆಗಳ ಬಳಿ ಜಾಹೀರಾತು ಹೋರ್ಡಿಂಗ್‌ ಅಳವಡಿಸುವುದಕ್ಕೆ ಅವಕಾಶ ಇಲ್ಲ. ಆದರೆ, ರಾಜಕಾಲುವೆಗಳ ಬಳಿ ಹೋರ್ಡಿಂಗ್‌ ನಿಷೇಧಿಸುವ ಉಲ್ಲೇಖ ಇದರಲ್ಲಿಲ್ಲ.

‘ಎ’ ವಲಯದಲ್ಲೂ ಅವಕಾಶ?
2006ರ ಜಾಹೀರಾತು ಬೈಲಾಗಳ ಪ್ರಕಾರ ನಗರವನ್ನು ಎ, ಬಿ, ಸಿ ಮತ್ತು ಡಿ ವಲಯಗಳನ್ನಾಗಿ ವಿಂಗಡಿಸಲಾಗಿತ್ತು. ಎ–ವಲಯದಲ್ಲಿ ಕುಮಾರಕೃಪಾ ರಸ್ತೆ, ರಾಜಭವನ ರಸ್ತೆ, ಅಂಬೇಡ್ಕರ್‌ ಬೀದಿ, ಅಂಚೆ ಕಚೇರಿ ರಸ್ತೆ, ಬಸವೇಶ್ವರ ವೃತ್ತ, ಮಹಾರಾಣಿ ಕಾಲೇಜು ರಸ್ತೆ, ಕೆ.ಆರ್‌.ವೃತ್ತ, ಕಬ್ಬನ್‌ಪಾರ್ಕ್‌ ಮತ್ತು ಲಾಲ್‌ಬಾಗ್‌, ನೃಪತುಂಗ ರಸ್ತೆ, ಅರಮನೆ ರಸ್ತೆಗಳನ್ನು ಪಟ್ಟಿ ಮಾಡಲಾಗಿತ್ತು. ಇಲ್ಲಿ ಜಾಹೀರಾತು ಪ್ರದರ್ಶನವನ್ನು ಸಂಪೂರ್ಣ ನಿಷೇಧಿಸಲಾಗಿತ್ತು. 2018ರಲ್ಲಿ ಬಿಬಿಎಂಪಿ ರೂಪಿಸಿದ್ದ ಜಾಹೀರಾತು ಬೈಲಾದಲ್ಲೂ ಈ ನಿಷೇಧವನ್ನು ಮುಂದುವರಿಸಲಾಗಿತ್ತು.

ಹೊಸ ನಿಯಮ ಇಂತಹ ವಲಯವಾರು ವಿಂಗಡಣೆ ಬಗ್ಗೆ ಮೌನ ವಹಿಸಿದೆ. ‘ಎ’ ವಲಯದಲ್ಲೂ ಇನ್ನು ಜಾಹೀರಾತು ಪ್ರದರ್ಶನಕ್ಕೆ ನಿಷೇಧ ಮುಂದುವರಿಯುತ್ತದೆಯೋ ಅಥವಾ ಅವಕಾಶ ಕಲ್ಪಿಸಲಾಗುತ್ತದೋ ಇಲ್ಲವೋ ಎಂಬ ಬಗ್ಗೆ ಗೊಂದಲ ಮೂಡಿಸುತ್ತದೆ.

ಮೇಲ್ಮನವಿ ಪ್ರಾಧಿಕಾರವೂ ಆಯುಕ್ತರೇ
ಹೊಸ ನಿಯಮಗಳ ಪ್ರಕಾರ ಜಾಹೀರಾತಿಗೆ ಅನುಮತಿ ಪಡೆಯಲು ನಮೂನೆ –1ರಲ್ಲಿ ಆಯುಕ್ತರಿಗೆ ಅರ್ಜಿ ಸಲ್ಲಿಸಬೇಕು (ಕ್ರಮಸಂಖ್ಯೆ 4). ಆದರೆ, ಹೊಸ ಅಧಿಸೂಚನೆಯ 26ನೇ ಕ್ರಮಸಂಖ್ಯೆ ಪ್ರಕಾರ ಈ ಬಗ್ಗೆ ನಿರ್ಧಾರ ತಳೆಯಬೇಕಾದುದು ಕಂದಾಯ ಅಧಿಕಾರಿ. ಇಲ್ಲೇ ಗೊಂದಲ ಆರಂಭವಾಗುತ್ತದೆ. ಕಂದಾಯ ಅಧಿಕಾರಿಯ ಅರ್ಜಿ ತಿರಸ್ಕರಿಸಿದರೆ ಮೇಲ್ಮನವಿ ಪ್ರಾಧಿಕಾರವಾದ ಆಯುಕ್ತರ ಮೊರೆ ಹೋಗಬಹುದು. ಆಯುಕ್ತರೂ ಮನವಿಯನ್ನು ತಿರಸ್ಕರಿಸಿದರೆ ಜಾಹೀರಾತು ನಿಯಂತ್ರಣ ಸಮಿತಿಯಲ್ಲಿ ಪ್ರಶ್ನೆ ಮಾಡಬಹುದು. ಅಚ್ಚರಿ ಎಂದರೆ ಈ ಸಮಿತಿಯ ಅಧ್ಯಕ್ಷರೂ ಆಯುಕ್ತರೇ ಆಗಿರುತ್ತಾರೆ.

ಅಕ್ರಮಕ್ಕೆ ಕ್ಷುಲ್ಲಕ ದಂಡ?
ಯಾರಾದರೂ ಅನುಮತಿ ಪಡೆಯದೆ ಜಾಹೀರಾತು ಅಳವಡಿಸಿದರೆ ಆಯುಕ್ತರು ಯಾವುದೇ ನೋಟಿಸ್‌ ನೀಡದೆಯೇ ಅದರ ತೆರವಿಗೆ ಕ್ರಮ ಕೈಗೊಳ್ಳಬಹುದು. ಅನಧಿಕೃತ ಜಾಹೀರಾತು 100 ಚ.ಮೀಗಿಂತ ಕಡಿಮೆ ವಿಸ್ತೀರ್ಣದ್ದಾದರೆ ₹ 5 ಸಾವಿರ ಹಾಗೂ 100 ಚ.ಮೀ.ಗಿಂತ ಹೆಚ್ಚು ವಿಸ್ತೀರ್ಣದ್ದಾದರೆ ₹ 7 ಸಾವಿರ ದಂಡವನ್ನು ನಿಗದಿಪಡಿಸಲಾಗಿದೆ (ಕ್ರಮಸಂಖ್ಯೆ 21 (5)). ಅಚ್ಚರಿ ಎಂದರೆ, ಪ್ರಮುಖ ಪ್ರದೇಶದಲ್ಲಿರುವ ಒಂದು ಹೋರ್ಡಿಂಗ್‌ ಕಂಪನಿಗೆ ತಿಂಗಳಿಗೆ ₹ 3 ಲಕ್ಷಕ್ಕಿಂತಲೂ ಹೆಚ್ಚು ಆದಾಯ ತರುತ್ತದೆ. ಪರಿಸ್ಥಿತಿ ಹೀಗಿರುವಾಗ ತಿಂಗಳಿಗೆ ₹ 7 ಸಾವಿರದವರೆಗೆ ದಂಡ ವಿಧಿಸಿದರೆ ಸಾಕೇ.

ಷರತ್ತು ಮುರಿದರೆ ಕೇವಲ ₹ 1000 ದಂಡ
ಪಾಲಿಕೆಯಿಂದ ಅನುಮತಿ ಪಡೆದು ಜಾಹೀರಾತು ಅಳವಡಿಸುವ ಕಂಪನಿ ಷರತ್ತು ಪಾಲಿಸದಿದ್ದರೆ ದಿನಕ್ಕೆ ₹ 1 ಸಾವಿರದಂತೆ ದಂಡ ವಿಧಿಸಲು ಅವಕಾಶವಿದೆ. (ಕ್ರಮಸಂಖ್ಯೆ 22). ಅಂದರೆ ತಿಂಗಳಿಗೆ ₹ 30 ಸಾವಿರ. ಅಕ್ರಮ ಹೋರ್ಡಿಂಗ್‌ಗೆ ತಿಂಗಳಿಗೆ ₹ 3 ಲಕ್ಷ ಆದಾಯ ತರುತ್ತಿರುವಾಗ ₹ 30 ಸಾವಿರ ದಂಡ ತೆರಲು ಯಾರಾದರೂ ಹಿಂದೇಟು ಹಾಕುತ್ತಾರೆಯೇ.

ಹೋರ್ಡಿಂಗ್‌ ಸಕ್ರಮಕ್ಕೆ 2 ವರ್ಷ ಕಾಲಾವಕಾಶ
ಹೊಸನಿಯಮ ಜಾರಿಗೆ ಬರುವ ಮುನ್ನವೇ ಅಳವಡಿಸಿರುವ ಹಳೆಯ ಅಕ್ರಮ ಹೋರ್ಡಿಂಗ್‌ ಸಕ್ರಮಗೊಳಿಸಲು 2 ವರ್ಷ ಕಾಲಾವಕಾಶ ನೀಡಲಾಗಿದೆ. ಇಂತಹ ಅಕ್ರಮ ಹೋರ್ಡಿಂಗ್‌ಗಳು ಕಟ್ಟಡದ ರಚನೆಗೆ ಧಕ್ಕೆ ತರುವಂತಿದ್ದರೆ, ಏನು ಮಾಡಬೇಕು, ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯದ ಕಟ್ಟಡದಲ್ಲಿರುವ ಜಾಹೀರಾತುಗಳನ್ನೂ ಸಕ್ರಮಗೊಳಿಸಬಹುದೇ ಎಂಬ ಬಗ್ಗೆ ಹೊಸ ನಿಯಮ ಸೊಲ್ಲೆತ್ತುವುದಿಲ್ಲ.

ಮೂರು ವರ್ಷಕ್ಕೊಮ್ಮೆ ನವೀಕರಣ
ಹಿಂದಿನ ಬೈಲಾ ಪ್ರಕಾರ ಜಾಹೀರಾತುಗಳ ಪರವಾನಗಿಯನ್ನು ಪ್ರತಿವರ್ಷ ನವೀಕರಿಸಬೇಕಿತ್ತು. ಹೊಸ ನಿಯಮದ ಪ್ರಕಾರ ಮೂರು ವರ್ಷಗಳಿಗೆ ಒಮ್ಮೆ ನವೀಕರಿಸಿದರೆ ಸಾಕು.

ಈ ನಿಷೇಧಗಳಿಗೆ ಕೊಕ್‌?
* ಯಾವುದೇ ತರಹದ ವಾಣಿಜ್ಯ ಹೋರ್ಡಿಂಗ್
* ಚಾವಣಿಗಳ ಮೇಲಿನ ಸೈನೇಜ್‌ (ರೂಫ್‌ ಸೈನೇಜ್‌)
* ಸಾರ್ವಜನಿಕ ರಸ್ತೆಗಳ ಪಕ್ಕದ ಎಲೆಕ್ಟ್ರಾನಿಕ್ ಡಿಸ್‌ಪ್ಲೇ
* ಹೊರಾಂಗಣ ಜಾಹೀರಾತುಗಳಲ್ಲಿ ಧ್ವನಿ ಬಳಕೆ
* ಸರಣಿ ಸಂದೇಶ ನೀಡುವ ಜಾಹೀರಾತು
* ರಸ್ತೆಗೆ ಅಡ್ಡಲಾಗಿ ಅಳವಡಿಸುವ (ಗ್ಯಾಂಟ್ರಿ) ಜಾಹೀರಾತು
* ಬಲೂನ್‌ ಅಥವಾ ಗಾಳಿಯಲ್ಲಿ ಹಾರಾಡುವ ಪರಿಕರ
* ಗೋಡೆಗಳಲ್ಲಿ ವಾಣಿಜ್ಯ ಉದ್ದೇಶದಿಂದ ಅಂಟಿಸುವ ಭಿತ್ತಿಪತ್ರಗಳು, ಪೇಂಟಿಂಗ್‌, ಸಂದೇಶ
* ಮರಗಳಲ್ಲಿ, ವಿದ್ಯುತ್‌ ಕಂಬ, ಮಾರ್ಗಸೂಚಿ ಕಂಬ, ವಿದ್ಯುತ್‌ ಪರಿವರ್ತಕ, ದೂರವಾಣಿ ಗೋಪುರಗಳಲ್ಲಿನ ಜಾಹೀರಾತು
* ಸಂಚಾರಿ ಜಾಹೀರಾತು
* ವಾಹನಗಳಲ್ಲಿನ ಜಾಹೀರಾತು (ಸೇವೆ/ಉತ್ಪನ್ನ ಪ್ರಚುರ ಪಡಿಸುವಂತಹದ್ದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT