ಭಾನುವಾರ, ಫೆಬ್ರವರಿ 23, 2020
19 °C
ಮುಖ್ಯ ನ್ಯಾಯಮೂರ್ತಿ ಕೆಂಗಣ್ಣಿಗೆ ಗುರಿಯಾದ ಬಿಬಿಎಂಪಿ

ಬೇಷರತ್‌ ಕ್ಷಮೆಯಾಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೈಕೋರ್ಟ್‌ ಆದೇಶ ಪಾಲಿಸದೇ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠದ ಕೆಂಗಣ್ಣಿಗೆ ಗುರಿಯಾಗಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರು ಮಂಗಳವಾರ ಬೇಷರತ್‌ ಕ್ಷಮೆಯಾಚಿಸಿದ್ದಾರೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳಿಂದ ಸಾರ್ವಜನಿಕರು ಸಾವು–ನೋವುಗಳಿಗೆ ಈಡಾಗುತ್ತಿದ್ದಾರೆ’ ಎಂದು ಆಕ್ಷೇಪಿಸಿ ಕೋರಮಂಗಲದ ವಿಜಯನ್ ಮೆನನ್ ಸೇರಿದಂತೆ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಅವರ ಪ್ರಮಾಣ ಪತ್ರವನ್ನು ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು.

ಯಾಕೆ ಕ್ಷಮೆ?: ಪರಿಹಾರ ನೀಡಿಕೆಗೆ ಸಂಬಂಧಿಸಿದಂತೆ ನ್ಯಾಯಪೀಠ, 2019ರ ನವೆಂಬರ್ 27ರಂದು ಪ್ರಮಾಣ ಪತ್ರ ಸಲ್ಲಿಸಿತ್ತು. ಈ ಪತ್ರದಲ್ಲಿ, ‘ಕೋರ್ಟ್ ಆದೇಶವನ್ನು ಮೇಯರ್, ಉಪ ಮೇಯರ್, ಆಡಳಿತ ಪಕ್ಷದ ನಾಯಕರು, ಬೃಹತ್ ಕಾಮಗಾರಿ, ಆರ್ಥಿಕ ಹಾಗೂ ತೆರಿಗೆ ಮತ್ತು ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಹಾಗೂ ವಿರೋಧ ಪಕ್ಷದ ನಾಯಕರ ಮುಂದಿಡಲಾಗಿದೆ’ ಎಂದು ತಿಳಿಸಲಾಗಿತ್ತು.

ಇದಕ್ಕೆ ಕೆಂಡಾಮಂಡಲವಾಗಿದ್ದ ನ್ಯಾಯಪೀಠ, ‘ಹೈಕೋರ್ಟ್ ಆದೇಶ ಪಾಲಿಸುವುದು ಬಿಟ್ಟು ಈ ರೀತಿ ಏಕೆ ಚರ್ಚೆ ನಡೆಸಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡಿತ್ತು.

‘ಅಂದಿನ ಸಭೆಯಲ್ಲಿ ಭಾಗವಹಿಸಿದ್ದವರ ಹೆಸರು, ವಿವರ ನೀಡಿ’ ಎಂದು ಬಿಬಿಎಂಪಿ ಆಯುಕ್ತರಿಗೆ ತಾಕೀತು ಮಾಡಿತ್ತು. ‘ಕೊಡದೇ ಹೋದರೆ, ನೀವೇ ತಪ್ಪಿತಸ್ಥರು ಎಂದು ಒಪ್ಪಿಕೊಳ್ಳಬೇಕು’ ಎಂದೂ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಆಯುಕ್ತರು ಕ್ಷಮೆ ಕೋರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ 5ರಂದು (ಬುಧವಾರ) ಆದೇಶ ಪ್ರಕಟಿಸುವುದಾಗಿ ನ್ಯಾಯಪೀಠ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು