ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBMP ಬಜೆಟ್‌-2024: ಹೊಸ ಆದಾಯದತ್ತ ಚಿತ್ತ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 2024–25ನೇ ಸಾಲಿನ ಬಜೆಟ್‌ ಮಂಡನೆ
Published 29 ಫೆಬ್ರುವರಿ 2024, 23:30 IST
Last Updated 29 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳನ್ನು ‘ಬ್ರ್ಯಾಂಡ್ ಬೆಂಗಳೂರು‘ ಪರಿಕಲ್ಪನೆಯ ಹೆಸರಿನಲ್ಲಿ ಒಟ್ಟುಗೂಡಿಸಿ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 2024–25ನೇ ಸಾಲಿನ ಬಜೆಟ್‌ ಮಂಡಿಸಲಾಗಿದೆ.

ಆಡಳಿತಗಾರ ರಾಕೇಶ್‌ ಸಿಂಗ್‌ ಅನುಮೋದನೆ ನೀಡಿದ ಬಜೆಟ್‌ ಅನ್ನು, ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರ ಸಮ್ಮುಖದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಎಚ್‌. ಕಲಕೇರಿ ಅವರು ಪುರಭವನದಲ್ಲಿ ಗುರುವಾರ ಮಂಡಿಸಿದರು.

ಆಸ್ತಿ ತೆರಿಗೆ, ಪ್ರೀಮಿಯಂ ಎಫ್‌ಎಆರ್, ಜಾಹೀರಾತು ನೀತಿಗಳಿಂದ ಹೆಚ್ಚುವರಿ ಆದಾಯ ಕ್ರೋಡೀಕರಿಸಲು ನಿರ್ಧರಿಸಲಾಗಿದ್ದು, ಮಾರ್ಗಸೂಚಿ ದರದಂತೆ ಆಸ್ತಿ ತೆರಿಗೆ ವ್ಯವಸ್ಥೆಯನ್ನು 2024ರ ಏಪ್ರಿಲ್‌ 1ರಿಂದಲೇ ಜಾರಿಗೆ ತರಲಾಗುತ್ತದೆ ಎಂದು ಪ್ರಕಟಿಸಲಾಗಿದೆ.

ಕಂದಾಯ ಇಲಾಖೆಯ ಭೂಮಾಪನಾ ಇಲಾಖೆಯಡಿಯ ನಗರ ಭೂಮಾಪನ ಇಲಾಖೆಯು ಡ್ರೋನ್‌ ಆಧಾರಿತ ನಗರ ಸರ್ವೆ ಮೂಲಕ ಆಸ್ತಿಗಳ ಡಿಜಿಟಲೀಕರಣ ಮತ್ತು ವಿವರಗಳನ್ನು ರಚಿಸಿದೆ. 163 ವಾರ್ಡ್‌ಗಳಲ್ಲಿ ಈ ವಿವರ ಲಭ್ಯವಿದ್ದು, ಇವುಗಳ ಆಧಾರದಲ್ಲಿ ಆಸ್ತಿಗಳ ತೆರಿಗೆಯನ್ನು ಲೆಕ್ಕ ಹಾಕಲಾಗುತ್ತದೆ.

2023–24ನೇ ಸಾಲಿಗಿಂತ ₹486 ಕೋಟಿಯಷ್ಟು ಮಾತ್ರ ಹೆಚ್ಚಿನ ಬಜೆಟ್‌ ಅನ್ನು 2024–25ನೇ ಸಾಲಿಗೆ ಮಂಡಿಸಲಾಗಿದೆ. ಒಟ್ಟು ₹ 12,371.63 ಕೋಟಿ ಗಾತ್ರದ ಆಯವ್ಯಯದಿಂದ ₹‌2.17 ಕೋಟಿ ಉಳಿತಾಯವನ್ನು ನಿರೀಕ್ಷಿಸಲಾಗಿದೆ.

ನಗರಕ್ಕೆ ಮೂಲಸೌಕರ್ಯ, ಸಂಚಾರ, ಪರಿಸರ ಸುಸ್ಥಿರತೆಯನ್ನು ಒದಗಿಸಲು ಪಾಲಿಕೆಗೆ ಸವಾಲುಗಳಿದ್ದು, ಬೆಳೆಯುತ್ತಿರುವ ಜನಸಂಖ್ಯೆಗೆ ವಿಶೇಷ ಸವಲತ್ತುಗಳೊಂದಿಗೆ ಜೀವನ ಗುಣಮಟ್ಟ ಹೆಚ್ಚಿಸುವ ಗುರುತರ ಜವಾಬ್ದಾರಿ ಪಾಲಿಕೆಯ ಮೇಲಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ಲಿಂಗತ್ವ ಅಲ್ಪಸಂಖ್ಯಾತರಿಗೆ ಕೊಡುಗೆ: ಲಿಂಗತ್ವ ಅಲ್ಪಸಂಖ್ಯಾತರ ಅನುಕೂಲಕ್ಕಾಗಿ ರಾತ್ರಿ ನಿರಾಶ್ರಿತರ ತಂಗುದಾಣ ನಿರ್ಮಿಸಲು ಮತ್ತು ಈಗಿರುವ 48 ರಾತ್ರಿ ನಿರಾಶ್ರಿತರ ತಂಗುದಾಣಗಳ ನಿರ್ವಹಣೆಗೆ ₹ 4 ಕೋಟಿ ಮೀಸಲಿರಿಸಲಾಗಿದೆ.

ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ವಿದ್ಯುತ್‌ಚಾಲಿತ ಆಟೊ/ಗೂಡ್ಸ್‌ ವಾಹನ ಖರೀದಿಗಾಗಿ ಇ–ಸಾರಥಿ ಯೋಜನೆಯಡಿ ₹ 5 ಕೋಟಿ ಒದಗಿಸಲಾಗಿದೆ. 

ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಹಾಗೂ ಆರ್ಥಿಕವಾಗಿ ಹಿಂದುಳಿದ ಇತರೆ ವರ್ಗಗಳಿಗೆ ಸಹಾಯ ಹಸ್ತವಾಗಿ ಯೋಜನಾ ವೆಚ್ಚದ ಶೇ 50 ಅಥವಾ ಗರಿಷ್ಠ ₹ 1.5 ಲಕ್ಷ ಸಹಾಯಧನ ನೀಡಲು ₹ 10 ಕೋಟಿ ಮೀಸಲಿಡಲಾಗಿದೆ.

₹6000 ಕೋಟಿ - ಕಂದಾಯ

ವಾಣಿಜ್ಯ ಆಸ್ತಿಗಳನ್ನು ಗುತ್ತಿಗೆ ಆಧಾರದಲ್ಲಿ ನೀಡಲು ನೀತಿ ರಚಿಸಲಾಗುತ್ತಿದೆ. ಇದರಿಂದ ಆಸ್ತಿಗಳ ರಕ್ಷಣೆಯಿಂದ ಉತ್ತಮ ಆದಾಯ ಗಳಿಸಲು ಚಿಂತಿಸಲಾಗಿದೆ. ಟಿಡಿಆರ್‌ ರಚನೆ ಮತ್ತು ವಿತರಣೆಯನ್ನು ಸಂಪೂರ್ಣ ಆನ್‌ಲೈನ್‌ನಲ್ಲಿ ನಿರ್ವಹಣೆ ಮಾಡಲಾಗುತ್ತದೆ. ಖರೀದಿ ಮತ್ತು ಮಾರಾಟವೂ ಆನ್‌ಲೈನ್‌ನಲ್ಲೇ ನಡೆಯುವುದರಿಂದ ಪಾರದರ್ಶಕವಾಗಿ ಹೆಚ್ಚಿನ ಆದಾಯ ಬರುತ್ತದೆ. ಮಾರ್ಗಸೂಚಿ ದರ ಆಸ್ತಿ ತೆರಿಗೆ ಜಾರಿಯೂ ಸೇರಿದಂತೆ ಕಂದಾಯ ವಿಭಾಗದಿಂದ ₹6 ಸಾವಿರ ಕೋಟಿ ಆದಾಯ ನಿರೀಕ್ಷಿಸಲಾಗಿದೆ.

₹500 ಕೋಟಿ - ಜಾಹೀರಾತು ನೀತಿ

ಪಾಲಿಕೆಯ ಜಾಹೀರಾತು ನಿಯಮಗಳು 2024ರ ಮೂಲಕ ಹೊಸ ನೀತಿ ರಚಿಸಿ, ಪಾರದರ್ಶಕ ಮತ್ತು ನಿಯಂತ್ರಿತ ವ್ಯವಸ್ಥೆಯಲ್ಲಿ ಜಾಹೀರಾತಿಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ನವದೆಹಲಿ ಮುನ್ಸಿಪಲ್‌ ಕಾರ್ಪೊರೇಷನ್‌ ಜಾಹೀರಾತು ನೀತಿಯಂತೆ ಪಾಲಿಕೆ ನೀತಿ ರೂಪಿಸಿ, ನಗರದ ಸೌಂದರ್ಯ ವೃದ್ಧಿಗೊಳಿಸಲಾಗುತ್ತದೆ ಹಾಗೂ ಸ್ಥಳ ವಿರೂಪಗೊಳಿಸುವುದನ್ನು ತಡೆಯಲಾಗುತ್ತದೆ. ಆನ್‌ಲೈನ್‌, ಮೊಬೈಲ್‌ ವ್ಯವಸ್ಥೆಯನ್ನು ಜಾರಿಗೆ ತಂದು, ಜಾಹೀರಾತಿನಿಂದ ವಾರ್ಷಿಕ ₹500 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

1,709 ಕೋಟಿ - ನಗರ ಯೋಜನೆ

ಪ್ರೀಮಿಯಂ ಎಫ್‌ಎಆರ್‌ ಅನ್ನು ಆನ್‌ಲೈನ್‌ ಪಾರದರ್ಶಕ ವ್ಯವಸ್ಥೆಯಲ್ಲಿ ಜಾರಿಗೆ ತಂದು, ಬಿಬಿಎಂಪಿ ಇ–ಖಾತಾ ವ್ಯವಸ್ಥೆಯಲ್ಲಿ ಖರೀದಿಸಲು ಅನುವು ಮಾಡಲಾಗುತ್ತದೆ. ಮಾಹಿತಿ ತಂತ್ರಜ್ಞಾನದಲ್ಲಿ ಪ್ರೀಮಿಯಂ ಎಫ್‌ಎಆರ್‌ ಬಳಕೆಯನ್ನು ಲೆಕ್ಕ ಹಾಕಲಾಗುತ್ತದೆ. ಈ ಶುಲ್ಕದಿಂದ ₹1,000 ಕೋಟಿ ಸೇರಿ ಒಟ್ಟು ₹1,709 ಕೋಟಿಯನ್ನು ನಗರ ಯೋಜನೆಯಲ್ಲಿ ಸಂಗ್ರಹಿಸುವ ಗುರಿ ಹೊಂದಲಾಗಿದೆ.

ಜನ ಕಲ್ಯಾಣಕ್ಕೆ ಆದ್ಯತೆ
ಘನತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ನೇರ ಪಾವತಿಯಡಿ ಕರ್ತವ್ಯ ನಿರ್ವಹಿಸಲು ನಿವೃತ್ತರಾಗುವ ಪೌರಕಾರ್ಮಿಕರಿಗೆ ಪಿಂಚಣಿ ಯೋಜನೆ ಜಾರಿಗೆ ತರಲು ₹ 137.50 ಕೋಟಿ ಮೀಸಲಿಡಲಾಗಿದೆ. ಕಾರ್ಮಿಕ ಮಹಿಳೆಯರು ಮತ್ತು ಪೌರಕಾರ್ಮಿಕರಿಗೆ ವಿದ್ಯುತ್‌ ದ್ವಿಚಕ್ರ ವಾಹನಗಳನ್ನು ಒದಗಿಸಲು, ಅಂಗವಿಕಲರಿಗೆ ಹೆಚ್ಚುವರಿ ಚಕ್ರ ಅಳವಡಿಸಿರುವ ವಾಹನ ನೀಡಲು ಒಟ್ಟು ₹ 12 ಕೋಟಿ ಇಡಲಾಗಿದೆ. ನೇರಪಾವತಿ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ₹ 5 ಲಕ್ಷ ಸಹಾಯಧನ ಒದಗಿಸಲಾಗುತ್ತಿದೆ. ಎಸ್‌ಸಿ, ಎಸ್‌ಟಿ, ಒಬಿಸಿ, ಅಂಗವಿಕಲರು ಸೇರಿದಂತೆ ಎಲ್ಲ ಬಡವರಿಗೆ ಆರ್ಥಿಕ ಸಹಾಯಕ್ಕಾಗಿ ಒಟ್ಟು ₹ 211 ಕೋಟಿ ಮೀಸಲಿಡಲಾಗಿದೆ. ವಲಯಕ್ಕೆ ಒಂದರಂತೆ 8 ವೃದ್ಧಾಶ್ರಮ ತೆರೆಯುವ ಯೋಜನೆ ಇದೆ. ಸದ್ಯ ಬಾಡಿಗೆ ಜಾಗದಲ್ಲಿ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ‘ಶ್ರವಣ ವಸತಿ ವೃದ್ಧಾಶ್ರಮ’ ತೆರೆಯಲು ₹ 4 ಕೋಟಿ ಇರಿಸಲಾಗಿದೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಅಶಕ್ತ ಹಾಗೂ ದಮನಿತ ಸಮುದಾಯಗಳ ಕಾರ್ಯನಿರತ ಹೆಣ್ಣುಮಕ್ಕಳಿಗೆ ಸುರಕ್ಷಿತ ವಸತಿ ಒದಗಿಸಲು 8 ವಲಯಗಳಲ್ಲಿ ‘ಸಾವಿತ್ರಿ ವಸತಿ ನಿಲಯ’ ತೆರೆಯಲಾಗುವುದು. ಅದಕ್ಕೆ ₹ 4ಕೋಟಿ ಮೀಸಲಿರಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ಮತ್ತು ಹೊಸ ಪಟ್ಟಣ ಮಾರಾಟ ಸಮಿತಿ ರಚನೆಯನ್ನು ಆದ್ಯತೆಯ ಮೇಲೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಮಾರಾಟ ವಲಯ, ನಿರ್ಬಂಧಿತ ವಲಯ ಪ್ರದೇಶ ಗುರುತಿಸಲಾಗುವುದು. ಪಾದಚಾರಿ ಮಾರ್ಗದಲ್ಲಿ ನಡೆದಾಡಲು ತೊಂದರೆಯಾಗದಂತೆ ಮಾರಾಟ ಚಟುವಟಿಕೆ ನಡೆಸಲು 5,000 ಜನರಿಗೆ ಸಬ್ಸಿಡಿ ಆಧಾರಿತ ಇ–ವೆಂಡಿಂಗ್ ರಿಕ್ಷಾ ಒದಗಿಸುವ ಯೋಜನೆ ಜಾರಿಗೆ ತರಲಾಗುತ್ತಿದೆ. ಇದಕ್ಕಾಗಿ ₹ 50 ಕೋಟಿ ಮೀಸಲಿಡಲಾಗಿದೆ. ಇದರಲ್ಲಿ ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪ ಸಂಖ್ಯಾತರಿಗೆ ₹ 1.50 ಲಕ್ಷ, ಇತರರಿಗೆ ₹ 1 ಲಕ್ಷ ಸಹಾಯಧನ ಸಿಗಲಿದೆ.

ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆಯಲ್ಲೇ ಕೆಲವು ಯೋಜನೆಗಳನ್ನು ರೂಪಿಸಲಾಗಿದೆ. ಪ್ರೀಮಿಯಂ ಎಫ್‌ಎಆರ್‌ ಹಾಗೂ ಜಾಹೀರಾತು ನೀತಿಯಿಂದ ಬರುವ ಹೆಚ್ಚುವರಿ ಆದಾಯದಿಂದ ಈ ಯೋಜನೆಗಳ ಅನುಷ್ಠಾನ ಮಾಡಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ‘ಎಸ್ಕ್ರೊ’ ಖಾತೆ ತೆರೆದು, ₹1,580 ಕೋಟಿಗಳನ್ನು ವರ್ಗಾಯಿಸಿ, ಆದ್ಯತೆ ಮೇರೆಗೆ ಹಣ ಪಾವತಿ ಮಾಡಲು
ನಿರ್ಧರಿಸಲಾಗಿದೆ. ಈ ಯೋಜನೆಯಲ್ಲಿರುವ ಕಾಮಗಾರಿಗಳೆಂದರೆ:

₹880 ಕೋಟಿ: ಸುಗಮ ಸಂಚಾರ ಬೆಂಗಳೂರು
₹300 ಕೋಟಿ – ರಸ್ತೆ ವೈಟ್‌ ಟಾಪಿಂಗ್‌ 
₹100 ಕೋಟಿ – ರಾಜಕಾಲುವೆ ಬಫರ್‌ ವಲಯ ಅಭಿವೃದ್ಧಿ
₹50 ಕೋಟಿ – ಆರ್‌ಎಂಪಿಯಂತೆ ರಸ್ತೆ ವಿಸ್ತರಣೆ
₹50 ಕೋಟಿ – ಆರ್‌ಎಂಪಿಯಂತೆ ರಸ್ತೆ ನಿರ್ಮಾಣ
₹200 ಕೋಟಿ – ಸುರಂಗ ರಸ್ತೆ ಯೋಜನೆ ಡಿಪಿಆರ್‌
₹30 ಕೋಟಿ – ಪಾದರಾಯನಪುರ ರಸ್ತೆ ವಿಸ್ತರಣೆ
₹100 ಕೋಟಿ – ಸಂಯುಕ್ತ ಮೆಟ್ರೊ– ರಸ್ತೆ ಮೇಲ್ಸೇತುವೆ ಮಾರ್ಗ

₹50 ಕೋಟಿ – ಬನಶಂಕರಿ ವೃತ್ತದಲ್ಲಿ ವೃತ್ತಾಕಾರದ ಪಾದಚಾರಿ ಮೇಲ್ಸೇತುವೆ


₹225 ಕೋಟಿ– ಆಕರ್ಷಕ ಬೆಂಗಳೂರು
₹100 ಕೋಟಿ – ನಗರ ಪ್ರಮುಖ ತಾಣಗಳಲ್ಲಿ ಬಣ್ಣದ ದೀಪ
₹25 ಕೋಟಿ – ಜಂಕ್ಷನ್‌ಗಳ ಸೌಂದರ್ಯೀಕರಣ
₹50 ಕೋಟಿ – ಸ್ಕೈ–ಡೆಕ್‌ ನಿರ್ಮಾಣದ ಪ್ರಾರಂಭಿಕ ಯೋಜನಾ ವೆಚ್ಚ
₹50 ಕೋಟಿ – ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನಿಧಿ

₹50 ಕೋಟಿ– ಟೆಕ್‌ ಬೆಂಗಳೂರು

₹50 ಕೋಟಿ– ಶಿಕ್ಷಣ ಬೆಂಗಳೂರು
ಶೈಕ್ಷಣಿಕ ಪ್ರಗತಿ ಕಾರ್ಯಕ್ರಮಗಳು, ಉನ್ನತ ಗುಣಮಟ್ಟದ
ಶಿಕ್ಷಣ, ಸಮವಸ್ತ್ರ, ಮೂಲಸೌಕರ್ಯ ಅಭಿವೃದ್ಧಿ

₹150 ಕೋಟಿ– ಸ್ವಚ್ಛ ಬೆಂಗಳೂರು
₹100 ಕೋಟಿ – ತ್ಯಾಜ್ಯ ಸಂಸ್ಕರಣೆಗೆ ಜಮೀನು ಖರೀದಿ
₹10 ಕೋಟಿ – ಸಾರ್ವಜನಿಕ ಶೌಚಾಲಯ
₹10 ಕೋಟಿ – ಘನತ್ಯಾಜ್ಯ ನಿರ್ವಹಣೆ ಉಪಕರಣ
₹30 ಕೋಟಿ – ಗುಡಿಸುವ ಯಂತ್ರ

₹125 ಕೋಟಿ– ಆರೋಗ್ಯಕರ ಬೆಂಗಳೂರು
₹80 ಕೋಟಿ – ತುರ್ತು ಆರೋಗ್ಯ ಸೇವೆ, ಪ್ರಯೋಗಾಲಯ, ವಾರ್‌ ರೂಂ
₹10 ಕೋಟಿ – ಪಶು ಸಂಗೋಪನೆ- ಕಸಾಯಿಖಾನೆ ನಿರ್ಮಾಣ
₹15 ಕೋಟಿ – ಚಿತಾಗಾರ ಮತ್ತು ಸ್ಮಶಾನ ಅಭಿವೃದ್ಧಿ
₹20 ಕೋಟಿ – ಶಾಂತಿನಗರದಲ್ಲಿ ಆಸ್ಪತ್ರೆ ನಿರ್ಮಾಣ

₹100 ಕೋಟಿ– ಹಸಿರು ಬೆಂಗಳೂರು
₹10 ಕೋಟಿ – ವಿಪತ್ತು ನಿರ್ವಹಣೆ
₹35 ಕೋಟಿ – ಕೆರೆಗಳ ಅಭಿವೃದ್ಧಿ, ಗಡಿಗಳಿಗೆ ಬೇಲಿತಂತಿ
₹15 ಕೋಟಿ – ಎರಡು ಹೊಸ ಸಸ್ಯಕ್ಷೇತ್ರ, ಆರೈಕೆ ಕೇಂದ್ರ
₹35 ಕೋಟಿ – ಬಿಡಿಎ, ಕೆಐಎಡಿಬಿ ಬಡಾವಣೆಗಳಲ್ಲಿನ ಉದ್ಯಾನ ಅಭಿವೃದ್ಧಿ
₹5 ಕೋಟಿ – 10 ಕಲ್ಯಾಣಿಗಳ ಪುನರುಜ್ಜೀವನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT