ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಕಾನ್ಫರೆನ್ಸ್‌ ಮೂಲಕ ಬಿಬಿಎಂಪಿ ಬಜೆಟ್

Last Updated 20 ಏಪ್ರಿಲ್ 2020, 20:09 IST
ಅಕ್ಷರ ಗಾತ್ರ

ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಬಿಬಿಎಂಪಿಯ ಬಜೆಟ್ ಮಂಡಿಸಲಾಯಿತು. ಜನ ಗುಂಪುಗೂಡದಂತೆ ತಡೆಯುವ ಈ ಉದ್ದೇಶ ಈಡೇರಿದ್ದು ಮಂಡನೆಯಾಗುವರೆಗೆ ಮಾತ್ರ. ಬಳಿಕ ಕೌನ್ಸಿಲ್‌ ಸಭಾಂಗಣದ ಕಟ್ಟಡದಲ್ಲಿ ಜನಜಂಗುಳಿ ಏರ್ಪಟ್ಟಿತು.

ಮಂಡನೆ ನಂತರ ಅಂತರ ಮಾಯ

ಪತ್ರಕರ್ತರು 1 ಮೀ ಅಂತರ ಕಾಯ್ದುಕೊಂಡು ಬಜೆಟ್‌ ಮಂಡನೆ ವೀಕ್ಷಣೆ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಕಂದಾಯ ಸಚಿವರ ಸುದ್ದಿಗೋಷ್ಠಿ ವೇಳೆ ಪತ್ರಕರ್ತರು, ಅಧಿಕಾರಿಗಳು, ಜನಪ್ರತಿನಿಧಿಗಳೆಲ್ಲರೂ ಗುಂಪುಗೂಡಿದ್ದರು. ಜನಪ್ರತಿನಿಧಿಗಳು, ಅಧಿಕಾರಿಗಳು ಅಡ್ಡಾಡುವಾಗಲೂ ಕಟ್ಟಡದಲ್ಲಿ ಅಂತರ ಕಾಪಾಡುವ ಹೊಣೆ ಮರೆತೇ ಹೋಗಿತ್ತು.

ಕೋವಿಡ್ 19 ನಿಯಂತ್ರಣ ಸಲುವಾಗಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಬೆರಳೆಣಿಕೆ ಮಂದಿ ಮಾತ್ರ ಕೇಂದ್ರ ಕಚೇರಿಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಿದರು.

ಪಾಲಿಕೆ ಸದಸ್ಯರು ಬಜೆಟ್ ಮಂಡನೆಯನ್ನು ಆಯಾ ವಲಯಗಳಲ್ಲೇ ವೀಕ್ಷಿಸಲು ‘ಸಿಸ್ಕೊ ಜಾಬರ್’ ತಂತ್ರಾಂಶ ಬಳಸಿ ವಿಡಿಯೊ ಕಾನ್ಫರೆನ್ಸ್‌ಗೆ ಏರ್ಪಾಟು ಮಾಡಲಾಗಿತ್ತು.

ಆಡಳಿತ ಪಕ್ಷದ ಸುತ್ತ ವಿಶೇಷ ಅನುದಾನ ಗಿರಕಿ

ರಾಜ್ಯ ಸರ್ಕಾರವು 15ನೇ ಹಣಕಾಸು ಆಯೋಗದ ಅನುದಾನದಲ್ಲಿ 2020–21ನೇ ಸಾಲಿಗೆ ಪಾಲಿಕೆಗೆ ₹558 ಕೋಟಿ ನೀಡಿದೆ. ಈ ಪೈಕಿ ಹೆಚ್ಚಿನ ಅನುದಾನವನ್ನು ಆಡಳಿತ ಪಕ್ಷ ಬಿಜೆಪಿ ಶಾಸಕರ ಹಾಗೂ ‍ಪಾಲಿಕೆ ಸದಸ್ಯರ ವಾರ್ಡ್‌ಗಳಿಗೆ ಹಂಚಲಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ.

ವಿಶೇಷ ಅಭಿವೃದ್ಧಿ ಕಾಮಗಾರಿಗಳಿಗಾಗಿ ಶಾಸಕರಿಗೆ ₹190 ಕೋಟಿ ನೀಡಲಾಗಿದ್ದು, ₹180 ಕೋಟಿ ಬಿಜೆಪಿ ಶಾಸಕರ ಪಾಲಾಗಿದೆ. ಕಾಂಗ್ರೆಸ್‌ ಶಾಸಕ ರಾಮಲಿಂಗಾ ರೆಡ್ಡಿ ಅವರ ಬಿಟಿಎಂ ಬಡಾವಣೆಗೆ ₹10 ಕೋಟಿ ನಿಗದಿಪಡಿಸಲಾಗಿದೆ. ಇದಕ್ಕೆ ರಾಮಲಿಂಗಾ ರೆಡ್ಡಿ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌.ಶ್ರೀನಿವಾಸ್‌ ಅವರ ಹಳೆಯ ಗೆಳೆತನ ಕಾರಣ ಎಂಬ ವಿಶ್ಲೇಷಣೆ ನಡೆದಿದೆ.

ಪದ್ಮನಾಭನಗರಕ್ಕೆ ₹25 ಕೋಟಿ, ಬೆಂಗಳೂರು ದಕ್ಷಿಣ ಹಾಗೂ ಯಶವಂತಪುರಕ್ಕೆ ತಲಾ₹20 ಕೋಟಿ, ಬೊಮ್ಮನಹಳ್ಳಿಗೆ ₹15 ಕೋಟಿ ನೀಡಲಾಗಿದೆ. ಉಳಿದಂತೆ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ತಲಾ ₹10 ಕೋಟಿ ಹಂಚಿಕೆ ಮಾಡಲಾಗಿದೆ.

ಮೇಯರ್‌ ವಾರ್ಡ್‌ಗೆ ₹41 ಕೋಟಿ: ಮೇಯರ್ ಎಂ. ಗೌತಮ್‌ ಕುಮಾರ್ ಅವರ ಜೋಗುಪಾಳ್ಯ ವಾರ್ಡ್‌ಗೆ ₹41 ಕೋಟಿ ಕೊಡಲಾಗಿದೆ. ಉಪಮೇಯರ್ ಸಿ.ಆರ್‌.ರಾಮಮೋಹನರಾಜು ಅವರ ವಾರ್ಡ್‌ಗೆ ₹10, ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್‌ ಅವರ ವಾರ್ಡ್‌ಗೆ ₹25 ಕೋಟಿ, ಎಲ್‌.ಶ್ರೀನಿವಾಸ್‌ ವಾರ್ಡ್‌ಗೆ ₹23 ಕೋಟಿ ಅನುದಾನ ನೀಡಲಾಗಿದೆ. ಜೆಡಿಎಸ್‌ ಪಕ್ಷದ ನಾಯಕಿ ನೇತ್ರಾ ನಾರಾಯಣ್‌ ವಾರ್ಡ್‌ ಗೆ ₹15 ಕೋಟಿ ಹಾಗೂ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ವಾರ್ಡ್‌ಗೆ ₹7 ಕೋಟಿ ಹಂಚಿಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT