ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾಸಸ್ಥಳ ಸ್ವಚ್ಛವಿದ್ದರೆ ಡೆಂಗಿ ದೂರ’

Last Updated 26 ಆಗಸ್ಟ್ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ಡೆಂಗಿ ಹರಡುವ ‘ಈಡಿಸ್‌ ಈಜಿಪ್ಟೈ’ ಸೊಳ್ಳೆ ಹೆಚ್ಚೆಂದರೆ 150 ಮೀ ವ್ಯಾಪ್ತಿಯಲ್ಲಿ ಮಾತ್ರ ಸಂಚರಿಸಬಲ್ಲದು. ಜನರು ವಾಸದ ಸ್ಥಳದಲ್ಲಿ ಸೊಳ್ಳೆ ಉತ್ಪತ್ತಿ ತಾಣ ಇಲ್ಲದಂತೆ ಎಚ್ಚರ ವಹಿಸಿದರೆ ಈ ರೋಗವನ್ನು ನಿಯಂತ್ರಿಸಬಹುದು.

ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ (ಸಿಎಚ್‌ಒ) ವಿಜಯೇಂದ್ರ ಬಿ.ಕೆ. ಅವರ ಸ್ಪಷ್ಟ ಅಭಿಪ್ರಾಯವಿದು.

‘ಡೆಂಗಿ ನಗರ ಕೇಂದ್ರಿತ ರೋಗ. ಇದನ್ನು ಹರಡುವ ಸೊಳ್ಳೆಗಳು ಕಂಡುಬರುವುದೇ ಜನವಸತಿ ಪ್ರದೇಶಗಳಲ್ಲಿ. ಮಲೇರಿಯಾವನ್ನು ಹರಡುವ ಅನಾಫಿಲಿಸ್‌ ಹೆಣ್ಣು ಸೊಳ್ಳೆ ಕಲುಷಿತ ನೀರಿನಲ್ಲೂ ಮೊಟ್ಟೆ ಇಡುತ್ತದೆ. ಆದರೆ, ‘ಈಡಿಸ್‌ ಈಜಿಪ್ಟೈ’ ಸೊಳ್ಳೆ ಸ್ವಚ್ಛ ನೀರಿನಲ್ಲಿ ಮಾತ್ರ ಮೊಟ್ಟೆ ಇಡುತ್ತದೆ. ಮನೆಯ ರೆಫ್ರಿಜರೇಟರ್‌ ತಳಭಾಗ, ಹವಾನಿಯಂತ್ರಕ ಯಂತ್ರ (ಎ.ಸಿ), ಬಳಸಿ ಬಿಸಾಡಿದ ನೀರಿನ ಬಾಟಲಿಯ ಮುಚ್ಚಳ, ಹೂಕುಂಡಗಳ ತಳಭಾಗಗಳಲ್ಲಿ ನಿಲ್ಲುವ ಅಲ್ಪ ಪ್ರಮಾಣದ ನೀರು ಕೂಡಾ ಈ ಸೊಳ್ಳೆ ಮೊಟ್ಟೆ ಇಡಲು ಸಾಕಾಗುತ್ತದೆ.’

‘ನಿಂತ ನೀರಿನಲ್ಲಿ ಡೆಂಗಿ ಹೊರಡುವ ಸೊಳ್ಳೆಯ ಸಂತಾನೋತ್ಪಾದನೆ ಮಾಡುವುದಕ್ಕೆ ಒಂದು ವಾರ ಸಾಕು. ಲೋಟದಲ್ಲಿ ನೀರು ತುಂಬಿಟ್ಟು, ಒಂದು ವಾರ ಹಾಗೆಯೇ ಬಿಟ್ಟರೆ ಅದರಲ್ಲೂ ಸೊಳ್ಳೆ ಲಾರ್ವ ಕಾಣಿಸಬಹುದು. ನೀರು ನಿಲ್ಲದಂತೆ ನೋಡಿಕೊಂಡರೆ ಸೊಳ್ಳೆ ಉತ್ಪಾದನೆಯೂ ನಿಯಂತ್ರಣಕ್ಕೆ ಬರುತ್ತದೆ.’

ಹರಡುವುದು ಹಗಲಿನ ವೇಳೆ: ‘ಮಲೇರಿಯಾ ಹರಡುವ ಸೊಳ್ಳೆ ರಾತ್ರಿ ಹೊತ್ತು ಹೆಚ್ಚು ಸಕ್ರಿಯವಾಗಿದ್ದರೆ, ಡೆಂಗಿ ಹರಡುವ ಸೊಳ್ಳೆ ಹಗಲು ಹೊತ್ತಿನಲ್ಲೇ ಹೆಚ್ಚು ಸಕ್ರಿಯವಾಗಿರುತ್ತದೆ. ಜನರು ರಾತ್ರಿ ಮಲಗುವ ವೇಳೆಮುನ್ನೆಚ್ಚರಿಕೆ ಕ್ರಮವಾಗಿ ಸೊಳ್ಳೆ ಪರದೆ, ಸಾಂಬ್ರಾಣಿ ಅಥವಾ ಗಂಧದ ಹೊಗೆ ಅಥವಾ ಸೊಳ್ಳೆ ನಿವಾರಕ ಸಾಧನಗಳನ್ನು ಬಳಸುತ್ತಾರೆ. ಆದರೆ, ಡೆಂಗಿ ಸೊಳ್ಳೆ ಹಗಲಿನಲ್ಲಿ ಕೆಲಸದ ವೇಳೆಯೂ ಕಚ್ಚಬಹುದು. ಹಾಗಾಗಿ ನಗರಗಳಲ್ಲಿ ಈ ರೋಗದ ಪ್ರಮಾಣ ಹೆಚ್ಚುತ್ತಿದೆ’ ಎಂದು ಸಿಎಚ್‌ಒ ವಿವರಿಸಿದರು.

‘ಡೆಂಗಿ ಭಾರಿ ಅಪಾಯಕಾರಿ ರೋಗವೇನಲ್ಲ. ಈ ಕಾಯಿಲೆ ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ದಾಖಲಾಗಬೇಕು ಎನ್ನುವುದೂ ತಪ್ಪುಕಲ್ಪನೆ. ಮಾಮೂಲಿ ಜ್ವರದಂತೆಯೇ ಇದೂ ಕೂಡಾ, ವೈದ್ಯರು ಸೂಚಿಸಿದ ಔಷಧ ಸೇವನೆಯಿಂದ ಕಡಿಮೆಯಾಗುತ್ತದೆ. ಆದರೆ, ಈ ಕಾಯಿಲೆ ಕಾಣಿಸಿಕೊಂಡವರಲ್ಲಿ ರಕ್ತದ ಕಣಗಳು ಏಕಾಏಕಿ ಕಡಿಮೆ ಆಗಲು ಶುರುವಾದರೆ, ಪ್ರಾಣಕ್ಕೂ ಅಪಾಯ ಉಂಟಾಗಬಲ್ಲದು. ಈ ಹಂತವನ್ನು ‘ಶಾಕ್‌ ಸಿಂಡ್ರೋಮ್‌’ ಎನ್ನುತ್ತಾರೆ. ನೂರು ರೋಗಿಗಳಲ್ಲಿ ಒಬ್ಬರು ಈ ಹಂತವನ್ನು ತಲುಪಬಹುದು. ಈ ಹಂತ ತಲುಪಿದವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವುದು ಅನಿವಾರ್ಯ’ ಎಂದರು.

‘ಜ್ವರ ಬಂದಾಗ ಕೆಲವರು ವೈದ್ಯರ ಸಲಹೆ ಪಡೆಯದೆಯೇ ಆಸ್ಪಿರಿನ್‌, ಬ್ರುಫೇನ್‌, ಡೈಕ್ಲೋನ್‌ನಂತಹ ಮಾತ್ರೆಗಳನ್ನು ಸೇವಿಸುತ್ತಾರೆ.‌ ಡೆಂಗಿಯಿಂದಜ್ವರ ಬಂದಿದ್ದರೆ, ಇಂತಹ ಮಾತ್ರೆ ಸೇವನೆಯಿಂದ ವ್ಯತಿರಿಕ್ತ ಪರಿಣಾಮ ಉಂಟಾಗುವ ಅಪಾಯವೂ ಇದೆ. ಕೆಲವೊಮ್ಮೆ ಇದು ರಕ್ತದ ಕಣಗಳ ನಾಶಕ್ಕೆ ಕಾರಣವಾಗಬಲ್ಲುದು. ಜೀರ್ಣಾಂಗವ್ಯೂಹ, ಮೂಗುಗಳಲ್ಲಿ ರಕ್ತ ಸೋರಿಕೆ ಇದರ ಲಕ್ಷಣ. ಹಾಗಾಗಿ ಸ್ವಯಂ ವೈದ್ಯರಾಗುವ ಪ್ರಯತ್ನ ಒಳ್ಳೆಯದಲ್ಲ’ ಎಂದು ಅವರು ಕಿವಿಮಾತು ಹೇಳಿದರು.

‘ಡೆಂಗಿ ಕಾಯಿಲೆಯಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಹಾಗಾಗಿ ಈ ರೋಗ ಕಾಣಿಸಿಕೊಂಡರೆ ಸಾಕಷ್ಟು ನೀರು ಕುಡಿಯಬೇಕು’ ಎಂದರು.

‘ವಾರಕ್ಕೊಮ್ಮೆಯಾದರೂ ನೀರಿನ ತೊಟ್ಟಿ ತೊಳೆಯಿರಿ’
‘ನಗರದ ಬಹುತೇಕ ಮಂದಿ ಮನೆಯ ನೀರಿನ ತೊಟ್ಟಿ ಬಗ್ಗೆ ಕಾಳಜಿಯನ್ನೇ ವಹಿಸುವುದಿಲ್ಲ. ತೊಟ್ಟಿಯನ್ನು ಸಂಪೂರ್ಣ ಮುಚ್ಚಿದ್ದರೆ ಅದರಲ್ಲಿ ಸೊಳ್ಳೆ ಉತ್ಪತ್ತಿಯಾಗುವ ಅಪಾಯ ಕಡಿಮೆ. ಆದರೆ, ಒಂದು ಸೊಳ್ಳೆ ನುಸುಳುವಷ್ಟು ಜಾಗವಿದ್ದರೂ ಅದರಿಂದ ಅಪಾಯ ತಪ್ಪಿದ್ದಲ್ಲ’ ಎಂದು ಸಿಎಚ್‌ಒ ಎಚ್ಚರಿಸಿದರು.

‘ಸೊಳ್ಳೆಯ ಮೊಟ್ಟೆಗಳು ನೀರಿನ ಸಂಪರ್ಕ ಇಲ್ಲದಿದ್ದರೂ ಒಂದು ವರ್ಷಕ್ಕೂ ಹೆಚ್ಚುಕಾಲ ಜೀವಂತವಾಗಿರುತ್ತವೆ. ತೊಟ್ಟಿಯನ್ನು ಚೆನ್ನಾಗಿ ಸಾಬೂನು ಬಳಸಿ ತಿಕ್ಕಿ ತೊಳೆದರೆ ಮಾತ್ರ ಅವುಗಳು ನಾಶವಾಗುತ್ತವೆ. ನೀರಿನ ತೊಟ್ಟಿಯನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಬೇಕು. ತೊಟ್ಟಿಯೊಳಗೆ ಸೊಳ್ಳೆ ಸೇರಿಕೊಳ್ಳುವುದನ್ನು ತಡೆಯಲು ಬಟ್ಟೆಗಳನ್ನೂ ಬಳಸಬಹುದು’ ಎಂದು ಅವರು ಸಲಹೆ ನೀಡಿದರು.

‘ಪಿಒಪಿ ವಿಗ್ರಹ ವಿಸರ್ಜನೆಯಿಂದ ಕೆರೆ ಮಲಿನ’
‘ಗಣೇಶೋತ್ಸವವನ್ನು ಪರಿಸರಸ್ನೇಹಿಯಾಗಿ ಆಚರಿಸಬೇಕು. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ (ಪಿಒಪಿ) ತಯಾರಿಸಿದ ವಿಗ್ರಹಗಳನ್ನು ವಿಸರ್ಜನೆ ಮಾಡುವ ಕೊಳದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆ ಮಾಡುತ್ತದೆ. ಇದರಿಂದ ಜಲಚರಗಳು ಸಾಯುತ್ತವೆ. ವಿಗ್ರಹಕ್ಕೆ ಬಳಸಿದ ರಾಸಾಯನಿಕ ಬಣ್ಣಗಳಿಂದಾಗಿ ನೀರು ಮಲಿನಗೊಳ್ಳುತ್ತದೆ. ಹಾಗಾಗಿ ಗಣೇಶ ಹಬ್ಬವನ್ನು ಪರಿಸರಸ್ನೇಹಿಯಾಗಿ ಆಚರಿಸಬೇಕು’ ಎಂದು ವಿಜಯೇಂದ್ರ ಅವರು ಜಯನಗರದ ಗಣೇಶ್‌ ಪ್ರಸಾದ್‌ ಅವರ ಪ್ರಶ್ನೆಗೆ ಉತ್ತರಿಸಿದರು.

‘ಫಾಗಿಂಗ್‌ ಪರಿಣಾಮಕಾರಿಯಲ್ಲ’
‘ಫಾಗಿಂಗ್‌ನಿಂದ ಡೆಂಗಿ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗದು. ಫಾಗಿಂಗ್‌ ವೇಳೆ ಸ್ಮೃತಿ ತಪ್ಪುವ ಸೊಳ್ಳೆಗಳು ಮತ್ತೆ ಚೇತರಿಸಿಕೊಳ್ಳುತ್ತವೆ. ಅಥವಾ ಬೇರೆ ಪ್ರದೇಶಕ್ಕೆ ಹೋಗುತ್ತವೆ. ಅದರ ಬದಲು, ಮೆಲಥಿಯನ್‌, ಪೈರಿಥ್ರಮ್‌ ಅಥವಾ ಟಾಮಿಫ್ಲು ಮುಂತಾದ ಅಪಾಯಕಾರಿಯಲ್ಲದ ರಾಸಾಯನಿಕಗಳನ್ನು ಮನೆಯೊಳಗೆ ಹಾಗೂ ಆಸುಪಾಸಿನಲ್ಲಿ ಸ್ಪ್ರೇ ಮಾಡಿಸುವುದು ಸೂಕ್ತ’ ಎಂದು ವಿಜಯೇಂದ್ರ ಅವರು ರಾಮಮೂರ್ತಿನಗರದ ಆಂಜನಪ್ಪ ಪ್ರಶ್ನೆಗೆ ಉತ್ತರಿಸಿದರು.

‘ಪಿಒಪಿ ವಿಗ್ರಹ ಬಳಕೆ ತಡೆ ಕಟ್ಟುನಿಟ್ಟು’
ಪಿಒಪಿ ಗಣೇಶ ವಿಗ್ರಹಗಳನ್ನು ರಾತ್ರೋರಾತ್ರಿ ನಗರಕ್ಕೆ ಸಾಗಿಸುವ ಪ್ರಯತ್ನಗಳು ನಡೆಯುತ್ತಿವೆ. ಇದನ್ನು ತಡೆಯಬೇಕು ಎಂದು ಸಾರ್ವಜನಿಕರೊಬ್ಬರು ಮನವಿ ಮಾಡಿದರು.

‘ಇಷ್ಟು ವರ್ಷ ವಿಗ್ರಹಗಳ ಮಾರಾಟಗಾರರು ಒಂದು ವರ್ಷ ಬಿಟ್ಟುಬಿಡಿ. ಇನ್ನು ಮುಂದೆ ಇವುಗಳನ್ನು ತಯಾರಿಸುವುದಿಲ್ಲ ಎಂದು ಕೋರಿದಾಗ ಅಧಿಕಾರಿಗಳು ಸುಮ್ಮನಿರುತ್ತಿದ್ದರು. ಈ ಬಾರಿ ಹಾಗೆ ಮಾಡುವುದಿಲ್ಲ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೂ ಈ ಬಗ್ಗೆ ಕಟ್ಟುನಿಟ್ಟಿನ ಆದೇಶ ಮಾಡಿದೆ’ ಎಂದು ಸ್ಪಷ್ಟಪಡಿಸಿದರು.

ಕೆ.ಆರ್‌.ಪುರ ಹಾಗೂ ಹೊಸಕೋಟೆ ಪ್ರದೇಶಗಳಲ್ಲಿ ಪಿಒಪಿ ಗಣೇಶ ವಿಗ್ರಹಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಮಹದೇವಪುರದ ಮಂಜುನಾಥ ಹಾಗೂ ಕೋಗಿಲು ಕ್ರಾಸ್‌ ಬಳಿ ಈ ಬಾರಿಯೂ ಪಿಒಪಿ ವಿಗ್ರಹಗಳನ್ನು ಮಾರಾಟಕ್ಕೆ ಇಟ್ಟಿರುವ ಕುರಿತು ವೆಂಕಟಾಚಲಪತಿ ಗಮನ ಸೆಳೆದರು.

‘ನಗರದಲ್ಲಿ ಪಿಒಪಿಯಿಂದ ತಯಾರಿಸಿದ ಮೂರ್ತಿಗಳನ್ನು ಮಾರಾಟಮಾಡುತ್ತಿದ್ದ 20ಕ್ಕೂ ಹೆಚ್ಚು ತಾಣಗಳಿಗೆ ಈಗಾಗಲೇ ದಾಳಿ ನಡೆಸಿ 400ಕ್ಕೂಹೆಚ್ಚು ದೊಡ್ಡ ಗಾತ್ರದ ವಿಗ್ರಹಗಳನ್ನು ಜಪ್ತಿ ಮಾಡಲಾಗಿದೆ. ಕುಂಬಳಗೋಡುವಿನ ಗೋದಾಮಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ದಾಳಿ ನಡೆಸಿ 12ಸಾವಿರಕ್ಕೂ ಅಧಿಕ ವಿಗ್ರಹಗಳನ್ನು ವಶಕ್ಕೆ ಪಡೆದಿದ್ದೇವೆ. ಈ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

‘ಸಾರ್ವಜನಿಕರುಸಹ ಪಿಒಪಿಯಿಂದ ತಯಾರಿಸಿದ ವಿಗ್ರಹದ ಬದಲು ಮಣ್ಣಿನ ವಿಗ್ರಹವನ್ನು ಪೂಜಿಸುವ ಸಂಕಲ್ಪ ಮಾಡಬೇಕು. ಪಿಒಪಿ ಗಣೇಶನನ್ನು ಪೂಜಿಸದಿದ್ದರೆ ಪುಣ್ಯ ಬರುತ್ತದೆ’ ಎಂದರು.

‘ಗಣೇಶ ಚತುರ್ಥಿಗೆ ಮೂರು ದಿನಗಳಿರುವಾಗ ನಗರದಲ್ಲಿ ನಾಕಾಬಂದಿ ಮಾಡುವಂತೆ ಪೊಲೀಸ್‌ ಇಲಾಖೆಯನ್ನು ಕೋರಿದ್ದೇವೆ. ಹೊರಗಿನ ಪಿಒಪಿ ಗಣೇಶ ಮೂರ್ತಿಗಳು ನಗರದೊಳಕ್ಕೆ ಪ್ರವೇಶಿಸದಂತೆ ತಡೆಯಲು ಇದು ನೆರವಾಗಲಿದೆ’ ಎಂದರು.

‘71 ವಾರ್ಡ್‌ಗಳಲ್ಲಿ 20ಕ್ಕೂ ಹೆಚ್ಚು ಡೆಂಗಿ ಪ್ರಕರಣ’
ಒಂದು ತಿಂಗಳಲ್ಲಿ ನಗರದ 71ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ 20ಕ್ಕೂ ಹೆಚ್ಚು ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಹೊಯ್ಸಳನಗರ ವಾರ್ಡ್‌ನಲ್ಲಿ ಕಳೆದ ವಾರವೊಂದರಲ್ಲೇ 213 ಪ್ರಕರಣಗಳು ಪತ್ತೆಯಾಗಿವೆ.

‘ಡೆಂಗಿ ಹಾವಳಿ ನಿಯಂತ್ರಿಸುವ ಸಲುವಾಗಿ ಜನಜಾಗೃತಿ ಮೂಡಿಸಲು ಪಾಲಿಕೆಯ ಆರೋಗ್ಯ ಸಿಬ್ಬಂದಿ ಜೊತೆಗೆ ಸ್ವಯಂ ಸೇವಕರನ್ನೂ ನೇಮಿಸಿಕೊಂಡಿದ್ದೇವೆ. ಡೆಂಗಿ ಪ್ರಕರಣ ಹೆಚ್ಚು ಇರುವ ವಾರ್ಡ್‌ಗೆ ತಲಾ ನಾಲ್ವರು ಸ್ವಯಂಸೇವಕರನ್ನು ನೇಮಿಸಲಾಗಿದೆ. ಮನೆ ಮನೆಗೆ ಭೇಟಿ ನೀಡುವ ಅವರು ನೀರು ನಿಂತ ಕಡೆ ಸೊಳ್ಳೆ ಲಾರ್ವಗಳನ್ನು ಪತ್ತೆಹಚ್ಚಿ ಆ ಮನೆಯವರಿಗೆ ಮನವರಿಕೆ ಮಾಡಲಿದ್ದಾರೆ’ ಎಂದು ಸಿಎಚ್‌ಒ ತಿಳಿಸಿದರು.

‘ನಾವೆಷ್ಟೇ ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿದರೂ ಜನ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಅವರ ಮನೆಯಲ್ಲೇ ಸೊಳ್ಳೆಯ ಲಾರ್ವಾ ಇರುವುದನ್ನು ತೋರಿಸಿದ ಬಳಿಕ ಅನೇಕರು ನೀರು ನಿಲ್ಲದಂತೆ ಎಚ್ಚರ ವಹಿಸುತ್ತಾರೆ’ ಎಂದು ತಿಳಿಸಿದರು.

‘ಪ್ಲಾಸ್ಟಿಕ್‌ ಮಾರಾಟ: ದಂಡಕ್ಕೆ ಬಗ್ಗದಿದ್ದರೆ ಪರವಾನಗಿ ರದ್ದು’
‘ಅಂಗಡಿ ಮಳಿಗೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಮಾರಾಟ ಮಾಡಿದರೆ ದಂಡ ವಿಧಿಸಲಿದ್ದೇವೆ. ಆ ಬಳಿಕವೂ ತಪ್ಪು ಮರುಕಳಿಸಿದರೆ ಅವರ ಉದ್ದಿಮೆ ಪರವಾನಗಿಯನ್ನೇ ರದ್ದುಪಡಿಸಲಿದ್ದೇವೆ’ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದರು.

‘ಪ್ಲಾಸ್ಟಿಕ್‌ ಚೀಲಗಳನ್ನು ಬಳಸುವ ಗ್ರಾಹಕರಿಗೂ ಸೆ.1ರಿಂದ ದಂಡ ವಿಧಿಸಲು ಸಿದ್ಧತೆ ನಡೆದಿದೆ’ ಎಂದರು.

‘ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರಿಗೆ ವಿಧಿಸುವ ದಂಡದ ಪ್ರಮಾಣ ಹೆಚ್ಚಿಸಲಾಗಿದೆ. ಅಂತಹವರಿಗೆ ಮಾರ್ಷಲ್‌ಗಳು ₹ 500ರಿಂದ ₹ 2 ಸಾವಿರ ದಂಡ ವಿಧಿಸಲಿದ್ದಾರೆ. ಈ ಸಲುವಾಗಿ ಪಿಒಎಸ್‌ ಯಂತ್ರಗಳನ್ನೂ ಖರೀದಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ತಂಡ: ಎಂ.ಜಿ.ಬಾಲಕೃಣ್ಣ, ಪ್ರವೀಣ್‌ ಕುಮಾರ್‌ ಪಿ.ವಿ, ಇರ್ಷಾದ್‌ ಮಹಮ್ಮದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT