ಗುರುವಾರ , ಜೂನ್ 30, 2022
27 °C
ಮಹದೇವಪುರ ವಲಯ: ಅಭಿವೃದ್ಧಿ ಕಾಮಗಾರಿ ಪರಿಶೀಲನೆ

ಹೊರಮಾವು: ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೊರಮಾವು ವಾರ್ಡ್ ವ್ಯಾಪ್ತಿಯ ರಾಜಕಾಲುವೆಗಳನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ಗುರುತಿಸಿ, ಕೂಡಲೆ ತೆರವು ಕಾರ್ಯ ಪ್ರಾರಂಭಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚಿಸಿದರು.

ಮಹದೇವಪುರ ವಲಯದಲ್ಲಿ ಮಳೆಸಂತ್ರಸ್ತ ಪ್ರದೇಶಗಳನ್ನು ಶನಿವಾರ ಪರಿಶೀಲಿಸಿದ ಅವರು ಹೊರಮಾವು ವಾರ್ಡ್‌ಗೂ ಭೇಟಿ ನೀಡಿದರು. ಇಲ್ಲಿನ ಪಾಮ್ ಬೀಚ್ ಅಪಾರ್ಟ್ಮೆಂಟ್‌ ಸಮುಚ್ಚಯದ ಬಳಿಯ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು. ಅದನ್ನು ತಡೆಯಲು ಕಚ್ಚಾ ರಾಜಕಾಲುವೆಯನ್ನು ದುರಸ್ತಿಪಡಿಸಲಾಗುತ್ತಿದೆ. ಅದರ ಬದಲು ಕಾಲುವೆಯನ್ನು ವಿಸ್ತರಿಸಿ ಸದೃಢವಾದ ಕಾಲುವೆ ನಿರ್ಮಿಸುವಂತೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಕೆ.ಆರ್.ಪುರ ವಾರ್ಡ್‌ನಲ್ಲಿ ಹಳೆ ಮದ್ರಾಸ್ ರಸ್ತೆಯ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಜಲಾವೃತವಾಗುವ ಪ್ರದೇಶದಲ್ಲಿ ಚರಂಡಿಯು ರಸ್ತೆ ಮಟ್ಟಕ್ಕಿಂತ ಎತ್ತರದಲ್ಲಿದೆ. ಹಾಗಾಗಿ ಮಳೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯದೇ ರಸ್ತೆಯಲ್ಲೇ ನಿಲ್ಲುತ್ತಿದೆ.

‘ಚರಂಡಿ ವಿನ್ಯಾಸವನ್ನು ಬದಲಿಸಿ, ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಕೆಲವೆಡೆ ಮಳೆನೀರುvಹರಿಯುವ ಚರಂಡಿಗೆ ಕೊಳಚೆ ನೀರು ಸೇರುತ್ತಿದೆ. ಇದನ್ನು ತಡೆಯಲು ಕ್ರಮಕೈಗೊಳ್ಳಬೇಕು’ ಎಂದು ಮುಖ್ಯ ಆಯುಕ್ತರು ಸೂಚನೆ ನೀಡಿದರು.

ನಾರಾಯಣಪುರ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಕೆರೆಯ‌ ಕಾಲುವೆಗೆ ಕಸ ಎಸೆಯದಂತೆ ತಡೆಯಲು ಬೇಲಿ ನಿರ್ಮಿಸುವಂತೆ ನಿರ್ದೇಶನ ನೀಡಿದರು.

ಹಳೆ ವಿಮಾನ ನಿಲ್ದಾಣ ರಸ್ತೆಯ ಯಮಲೂರು ಜಂಕ್ಷನ್‌ನಿಂದ ಹೊರ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ 2.9 ಕಿ.ಮೀ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಪರಿಶೀಲಿಸಿದರು. ₹ 7 ಕೋಟಿ ಮೊತ್ತದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ.

ಮಾರತ್ತಹಳ್ಳಿ ಬಳಿ ರೈಲ್ವೆ ಮೇಲ್ಸೇತುವೆಯ ಕೆಳಗೆ ಎಚ್.ಎ.ಎಲ್ ಕಡೆಯಿಂದ ಬರುವವರು ವರ್ತುಲ ರಸ್ತೆಗೆ ಯು-ಟರ್ನ್ ತೆಗೆದುಕೊಳ್ಳಲು ₹ 6 ಕೋಟಿ ವೆಚ್ಚದಲ್ಲಿ ಕೆಳ ಸೇತುವೆ ನಿರ್ಮಿಸಲಾಗುತ್ತಿದೆ. ಕಾಮಗಾರಿಯನ್ನು ಪರಿಶೀಲಿಸಿದ ಮುಖ್ಯ ಆಯುಕ್ತರು, ‘ಭೂಸ್ವಾಧೀನ ಸಮಸ್ಯೆ ಇತ್ಯರ್ಥಪಡಿಸಿಕೊಂಡು ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ’ ಎಂದು ನಿರ್ದೇಶನ ನೀಡಿದರು.

ಕುಂದಲಹಳ್ಳಿ ಜಂಕ್ಷನ್ ಬಳಿ ₹ 19.50 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕೆಳಸೇತುವೆ ಕಾಮಗಾರಿಯನ್ನು ಪರೀಶೀಲನೆ ನಡೆಸಿದರು. ನಾಲ್ಕು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಬಾಕಿಯಾಗಿದ್ದರಿಂದ ಸಮಸ್ಯೆ ಎದುರಾಗಿದೆ. ಭೂಸ್ವಾಧೀನ ಸಮಸ್ಯೆ ಇತ್ಯರ್ಥಪಡಿಸಿ  15 ದಿನಗಳಲ್ಲಿ ಬಾಕಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ವರ್ತೂರು ರಸ್ತೆ ವಿಸ್ತರಣೆ ಕಾಮಗಾರಿಯಿಂದ ವಾಹನ ಸಂಚಾರಕ್ಕೆ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು. ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ವಲಯ ಆಯುಕ್ತರಾದ ಡಾ.ತ್ರಿಲೋಕಚಂದ್ರ, ಜಂಟಿ ಆಯುಕ್ತ ವೆಂಕಟಾಚಲಪತಿ, ಮುಖ್ಯ ಎಂಜಿನಿಯರ್‌ಗಳಾದ ಪರಮೇಶ್ವರಯ್ಯ, ಬಿ.ಎಸ್‌.ಪ್ರಹ್ಲಾದ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು