ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶವಸಂಸ್ಕಾರದ ವೇಳೆ ಸೋಂಕು ಹರಡುವಿಕೆ ತೀವ್ರ’

ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೆ ದುಡಿಯುತ್ತಿರುವ ಚಿತಾಗಾರ ಸಿಬ್ಬಂದಿ
Last Updated 16 ಏಪ್ರಿಲ್ 2021, 21:14 IST
ಅಕ್ಷರ ಗಾತ್ರ

ಬೆಂಗಳೂರು: ಚಿತಾಗಾರದ ಮುಂದೆ ಸಾಲುಗಟ್ಟಿ ನಿಂತಿರುವ ಕೋವಿಡ್ ಶವದ ವಾಹನಗಳು, ಶವಗಳನ್ನು ಸರಿಯಾಗಿ ‘ಕವರ್‌’ ಮಾಡಿ ಕಳುಹಿಸದ ಆಸ್ಪತ್ರೆಗಳು, ಕೊನೆಯ ಬಾರಿ ಮುಖ ನೋಡಬೇಕು ಎಂದು ಸೇರುತ್ತಿರುವ ವಾಹನಗಳು, ಮಾಸ್ಕ್‌, ಗ್ಲೌಸ್‌ಗಳು ಇಲ್ಲದೆ ಕೆಲಸ ಮಾಡುತ್ತಿರುವ ಚಿತಾಗಾರದ ಸಿಬ್ಬಂದಿ...

ನಗರದಲ್ಲಿ ಕೋವಿಡ್‌ ಶವಗಳ ಸಂಸ್ಕಾರಕ್ಕೆ ಮೀಸಲಾಗಿಟ್ಟಿರುವ ವಿದ್ಯುತ್ ಚಿತಾಗಾರದ ಮುಂದೆ ಕಂಡು ಬರುವ ದೃಶ್ಯಗಳು ಇವು. ಒಂದೊಂದು ಚಿತಾಗಾರದಲ್ಲಿ ದಿನಕ್ಕೆ 20ರಿಂದ 25 ಶವಗಳನ್ನು ದಹಿಸಲಾಗುತ್ತಿದೆ. ಬೆಳಿಗ್ಗೆ 4ಕ್ಕೆ ಮನೆ ಬಿಡುವ ಚಿತಾಗಾರ ಸಿಬ್ಬಂದಿ, ರಾತ್ರಿ 12ರ ನಂತರ ಮನೆ ಸೇರುತ್ತಿದ್ದಾರೆ.

‘ಬೆಳಿಗ್ಗೆ 7 ಗಂಟೆಯ ವೇಳೆಗೆ ಚಿತಾಗಾರದ ಮುಂದೆ ಶವಗಳ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಒಂದು ಶವ ಸಂಪೂರ್ಣವಾಗಿ ದಹನವಾಗಲು ಒಂದರಿಂದ ಒಂದೂವರೆ ತಾಸು ಸಮಯ ಬೇಕಾಗುತ್ತದೆ. ಊಟ, ತಿಂಡಿ ಮಾಡಲು ಕೂಡ ಸಮಯ ಸಿಗುತ್ತಿಲ್ಲ’ ಎಂದು ಕೆಂಗೇರಿ ಚಿತಾಗಾರದಲ್ಲಿ ಕಾರ್ಯನಿರ್ವಹಿಸುವ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ಹೇಳಿದರು.

‘ಕಳೆದ ವರ್ಷ ಕೋವಿಡ್‌ ಶವಗಳನ್ನು ಸರಿಯಾಗಿ ‘ಪ್ಯಾಕ್’ ಮಾಡಿ ಕಳುಹಿಸುತ್ತಿದ್ದರು. ಈಗ ಬಿಳಿ ಬಟ್ಟೆಯಲ್ಲೋ, ಪೇಪರ್‌ನಲ್ಲಿಯೋ ಸುತ್ತಿ ಕಳುಹಿಸುತ್ತಿದ್ದಾರೆ. ಈ ಬಾರಿ ನಮಗೆ ಇನ್ನೂ ಸರಿಯಾಗಿ ಗ್ಲೌಸ್‌, ಮಾಸ್ಕ್‌ ಹಾಗೂ ಪಿಪಿಇ ಕಿಟ್‌ ಕೊಟ್ಟಿಲ್ಲ. ಕಳೆದ ಬಾರಿ ಕೊಟ್ಟಿರುವುದನ್ನೇ ಬಳಸುತ್ತಿದ್ದೇವೆ’ ಎಂದು ಅವರು ಹೇಳಿದರು.

ಆಂಬುಲೆನ್ಸ್ ಸಿಬ್ಬಂದಿ ಕೂಡ ಶವಗಳನ್ನು ತರುವಾಗ ಗ್ಲೌಸ್‌ ಮತ್ತು ಮಾಸ್ಕ್‌ಗಳನ್ನು ಹಾಕಿಕೊಂಡಿರುವುದಿಲ್ಲ. ಮೃತರ ಸಂಬಂಧಿಗಳ ಸಂಖ್ಯೆ ಕೂಡ ಜಾಸ್ತಿ ಇರುತ್ತದೆ. ಕಳೆದ ವರ್ಷ ಕೋವಿಡ್‌ ಬಗ್ಗೆ ಆತಂಕ ಹೆಚ್ಚಾಗಿದ್ದು, ಬಹುತೇಕರು ಶವದ ಹತ್ತಿರ ಹೋಗುತ್ತಿರಲಿಲ್ಲ. ಆದರೆ, ಈ ವರ್ಷ ಹೆಚ್ಚು ಜನ ಕಾಣುತ್ತಿದ್ದು, ಇವರಲ್ಲಿ ಬಹುತೇಕರು ಮಾಸ್ಕ್, ಗ್ಲೌಸ್‌ ಹಾಕಿಕೊಳ್ಳದೇ ಇರುವುದು ಎದ್ದು ಕಾಣುತ್ತಿದೆ.

‘ಕೊನೆಯ ಬಾರಿ ಮುಖ ತೋರಿಸಿ ಎಂದು ಮೃತರ ಸಂಬಂಧಿಕರು ಗೋಗರೆಯುತ್ತಾರೆ. ಬೇಡ ಎಂದರೂ ಕೇಳುವುದಿಲ್ಲ. ನಿಮಗೆ ಕರುಣೆಯೇ ಇಲ್ಲವೇ, ಮಾನವೀಯತೆ ಇಲ್ಲವೇ ಎಂದು ಬೈಯುತ್ತಾರೆ. ಮುಖ ನೋಡುವುದು ಮಾತ್ರವಲ್ಲದೆ, ಪೂಜೆ–ಪುನಸ್ಕಾರ ಎಲ್ಲ ಮಾಡುತ್ತಾರೆ. ಇದರಿಂದ ಶವಸಂಸ್ಕಾರದ ವೇಳೆ ಸೋಂಕು ಹರಡುತ್ತದೆ ಎಂಬ ಆತಂಕ ಕಾಡುತ್ತಿದೆ’ ಎಂದು ಚಿತಾಗಾರದ ಮತ್ತೊಬ್ಬ ಸಿಬ್ಬಂದಿ ಹೇಳಿದರು.

ಆಂಬುಲೆನ್ಸ್‌ನಲ್ಲಿ ಮೂರು ಶವ:ಕೆಂಗೇರಿಯ ಚಿತಾಗಾರಕ್ಕೆ ಗುರುವಾರ ಒಂದೇ ಆಂಬುಲೆನ್ಸ್‌ನಲ್ಲಿ ಮೂರು ಶವಗಳನ್ನು ಕರೆ ತರಲಾಗಿದೆ. ಶವಗಳನ್ನು ಈ ರೀತಿ ತಂದಾಗ ಚಿತಾಗಾರದ ಸಿಬ್ಬಂದಿಗೆ ತೊಂದರೆಯಾಗುತ್ತದೆಯಲ್ಲದೆ, ಸುರಕ್ಷತಾ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಲು ಕಷ್ಟವಾಗುತ್ತದೆ.

‘ಬೇರೆ ಬೇರೆ ಆಸ್ಪತ್ರೆಗಳಿಂದ ಮೂರು ಶವಗಳನ್ನು ಚಾಲಕರು ಒಂದೇ ಆಂಬುಲೆನ್ಸ್‌ನಲ್ಲಿ ತಂದಿದ್ದರು. ವಿಳಂಬವಾಗುತ್ತದೆ, ಆಂಬುಲೆನ್ಸ್‌ ಕೊರತೆ ಇದೆ ಎಂಬ ಕಾರಣ ಹೇಳುತ್ತಾರೆ. ಆದರೆ, ಚಿತಾಗಾರದ ಸಿಬ್ಬಂದಿಗೂ ತೊಂದರೆಯಾಗುತ್ತದೆ ಎಂಬುದನ್ನು ಗಮನಿಸಬೇಕು’ ಎಂದು ಸಿಬ್ಬಂದಿಯೊಬ್ಬರು ಹೇಳಿದರು.

‘ಗುರುತಿನ ಚೀಟಿ ವಿತರಿಸಿ’

‘ಚಿತಾಗಾರಕ್ಕೆ ಬಂದ ಎಲ್ಲ ಶವಗಳ ಸಂಸ್ಕಾರ ಮುಗಿಸಿ ಮನೆ ತಲುಪುವಷ್ಟರಲ್ಲಿ ಮಧ್ಯರಾತ್ರಿ ಆಗುತ್ತದೆ. ನಗರದಲ್ಲಿ ಈಗ ಕರ್ಫ್ಯೂ ಜಾರಿಯಲ್ಲಿದೆ. ಪೊಲೀಸರು ವಿಚಾರಿಸುತ್ತಾರೆ. ಬಿಬಿಎಂಪಿಯ ಸಹಿ ಮತ್ತು ಮೊಹರು ಇರುವ ಒಂದು ಗುರುತಿನ ಚೀಟಿಯನ್ನು ನೀಡಿದರೆ ಅನುಕೂಲವಾಗುತ್ತದೆ’ ಎಂದು ಸುಮನಹಳ್ಳಿ ಚಿತಾಗಾರದ ಸಿಬ್ಬಂದಿಯೊಬ್ಬರು ಹೇಳಿದರು.

‘ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಮಾತ್ರ ಶವಸಂಸ್ಕಾರ ನಡೆಸುವಂತೆ ಬಿಬಿಎಂಪಿ ಸೂಚಿಸಿದೆ. ಆದರೆ, ರಾತ್ರಿ 10 ಗಂಟೆಯಾದರೂ ಶವದ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಯಾವ ಶವವನ್ನೂ ವಾಪಸ್‌ ಕಳುಹಿಸಲು ಆಗುವುದಿಲ್ಲ. ಎಲ್ಲವುಗಳ ಸಂಸ್ಕಾರ ಮುಗಿಸುವುದರೊಳಗೆ ಮಧ್ಯರಾತ್ರಿ ಆಗುತ್ತದೆ’ ಎಂದು ಅವರು ಹೇಳಿದರು.

ಶವ ಸಂಸ್ಕಾರಕ್ಕೂ ‘ಪ್ರಭಾವ’ ಬಳಕೆ

ಕೋವಿಡ್‌ನಿಂದ ಸಾವಿಗೀಡಾಗುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಚಿತಾಗಾರದ ಮುಂದೆ ಶವಗಳ ಸಾಲು ಕೂಡ ಉದ್ದವಾಗುತ್ತಿದೆ.

‘ಆಸ್ಪತ್ರೆಯಿಂದ ಶವವನ್ನು ಚಿತಾಗಾರಕ್ಕೆ ತಂದು, ಅಂತ್ಯಸಂಸ್ಕಾರ ಮುಗಿಯುವುದರೊಳಗೆ ಎರಡರಿಂದ ಮೂರು ತಾಸು ಬೇಕಾಗುತ್ತದೆ. ಹೆಚ್ಚು ಶವಗಳು ಇದ್ದರೆ, ಇನ್ನೂ ಜಾಸ್ತಿ ಸಮಯ ಹಿಡಿಯುತ್ತದೆ. ಈ ವೇಳೆ, ‘ನಿರ್ದಿಷ್ಟ’ ಶವಗಳ ಸಂಸ್ಕಾರವನ್ನು ಮೊದಲು ಮುಗಿಸುವಂತೆ ‘ಪ್ರಭಾವಿ’ಗಳಿಂದಲೂ ಕರೆ ಬರುತ್ತಿರುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಿಬ್ಬಂದಿಯೊಬ್ಬರು ಹೇಳಿದರು.

‘ಮನೆಯಲ್ಲಿ ಮಕ್ಕಳಿವೆ, ಹಿರಿಯರು ಇದ್ದಾರೆ. ಹೆಚ್ಚು ಹೊತ್ತು ನಿಲ್ಲುವುದಕ್ಕಾಗುವುದಿಲ್ಲ. ಬೇಗ ಸಂಸ್ಕಾರ ಮುಗಿಸಿ ಎಂದೂ ಅನೇಕರು ಒತ್ತಾಯ ಮಾಡುತ್ತಿರುತ್ತಾರೆ’ ಎಂದೂ ಅವರು ಹೇಳಿದರು.

‘ನಗರದಲ್ಲಿ 7 ಕಡೆ ಮಾತ್ರ ಕೋವಿಡ್‌ ಶವಗಳ ದಹನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮತ್ತಷ್ಟು ಚಿತಾಗಾರಗಳನ್ನು ಕೋವಿಡ್‌ ಶವಸಂಸ್ಕಾರಕ್ಕೆ ಮೀಸಲಿಡಬೇಕು’ ಎಂದು ನಾಗರಿಕರೊಬ್ಬರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT