ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಈಜಿಪುರ ಮೇಲ್ಸೇತುವೆ: ನಿವಾರಣೆಯಾಗದ ಕಂಟಕ

ಬಿಬಿಎಂಪಿ ಎಂಜಿನಿಯರ್‌, ಗುತ್ತಿಗೆದಾರರ ಪ್ರತ್ಯಾರೋಪ; ನಾಗರಿಕರಿಗೆ ನಿತ್ಯವೂ ಸಂಕಟ
Published 29 ಮೇ 2024, 23:17 IST
Last Updated 29 ಮೇ 2024, 23:17 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಯೋಜನೆ ವಿಭಾಗದ ಎಂಜಿನಿಯರ್‌ಗಳು, ಗುತ್ತಿಗೆದಾರರ ಪ್ರತ್ಯಾರೋಪ ಹಾಗೂ ನಿರಾಸಕ್ತಿಯಿಂದ ಈಜಿಪುರ ಮೇಲ್ಸೇತುವೆ ಕಾಮಗಾರಿ ಕುಂಠಿತಗೊಂಡಿದೆ. ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರ ನಡುವೆ ಸಮನ್ವಯ ಕೊರತೆಯಿಂದ ನಾಗರಿಕರು ನಿತ್ಯವೂ ಸಂಕಷ್ಟ ಎದುರಿಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರ ಸುತ್ತಾಟದ ಸಂದರ್ಭದಲ್ಲಿ ಈಜಿಪುರ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರಿಗೆ ನೋಟಿಸ್‌ ಜಾರಿ ಮಾಡಲು ಸೂಚಿಸಿದ್ದರು. ಅದರಂತೆ ಬಿಬಿಎಂಪಿ ಎಂಜಿನಿಯರ್‌ಗಳು ಮೇ 24ರಂದು ನೋಟಿಸ್‌ ನೀಡಿದ್ದಾರೆ. ಗುತ್ತಿಗೆದಾರರೂ ಇದಕ್ಕೆ ಮೇ 27ರಂದು ಉತ್ತರ ನೀಡಿದ್ದಾರೆ. ಇಬ್ಬರೂ ಪರಸ್ಪರ ಆರೋಪಗಳನ್ನು ಮಾಡಿದ್ದಾರೆ.

2021ರಲ್ಲಿ ಸ್ಥಗಿತಗೊಂಡಿದ್ದ ಈಜಿಪುರ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಬಿಎಸ್‌ಸಿಪಿಎಲ್‌ ಸಂಸ್ಥೆಗೆ 2023ರ ನವೆಂಬರ್‌ 15ರಂದು ಕಾರ್ಯಾದೇಶ ನೀಡಲಾಗಿತ್ತು. ಆದರೆ ಈವರೆಗೂ ಶೇ 5ರಷ್ಟೂ ಕಾಮಗಾರಿ ಮುಗಿದಿಲ್ಲ. ನವೆಂಬರ್ 16ರಂದೇ ಮುಂಗಡ ಹಣಕ್ಕೆ ಗುತ್ತಿಗೆದಾರರು ಬ್ಯಾಂಕ್‌ ಗ್ಯಾರಂಟಿ ಸಹಿತ ಬೇಡಿಕೆ ಸಲ್ಲಿಸಿದ್ದರೂ 2024ರ ಮಾರ್ಚ್‌ 8ರಂದು ಶೇ 75ಷ್ಟು ಮುಂಗಡ ಪಾವತಿ ಮಾಡಲಾಗಿದೆ. ಇದನ್ನು ಗುತ್ತಿಗೆದಾರರು ಪ್ರಮುಖ ಕಾರಣವನ್ನಾಗಿ ನೀಡಿದ್ದು, ‘ಹಣ ನೀಡದಿದ್ದರೆ ಕಾಮಗಾರಿ ಆರಂಭಿಸುವುದಾದರೂ ಹೇಗೆ?’ ಎಂದು ಪ್ರಶ್ನಿಸಿದ್ದಾರೆ.

ಈಜಿಪುರ ಮೇಲ್ಸೇತುವೆಗೆ ಸಾಕಷ್ಟು ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಜನವರಿಯಲ್ಲಿ ಮಾತುಕತೆ ನಡೆದು, ಅಂತಿಮಗೊಳಿಸಲಾಗಿದ್ದರೂ, ಎಂಜಿನಿಯರ್‌ಗಳು ಭೂಸ್ವಾಧೀನ ಪ್ರಕ್ರಿಯೆ ಮುಗಿಸಿಲ್ಲ.

ಐಐಎಸ್ಸಿ ವರದಿ: ನಾಲ್ಕು ವರ್ಷ ನಿಂತಿದ್ದ ಈಜಿಪುರ ಮೇಲ್ಸೇತುವೆ ಕಾಮಗಾರಿಯನ್ನು ಮುಂದುವರಿಸುವ ಬಗ್ಗೆ ತಾಂತ್ರಿಕ ಸಲಹೆಯನ್ನು ಭಾರತೀಯ ವಿಜ್ಞಾನ ಸಂಸ್ಥೆಯಿಂದ ಪಡೆದುಕೊಳ್ಳಲು ಸೂಚಿಸಲಾಗಿತ್ತು. ಅದರ ವೆಚ್ಚವನ್ನು ಗುತ್ತಿಗೆದಾರರು ಪಾವತಿಸಿದ್ದರು. ಈ ವರದಿಯನ್ನು ಬಿಬಿಎಂಪಿ ಮೇ 27ರಂದು ಗುತ್ತಿಗೆದಾರರಿಗೆ ನೀಡಿದೆ.

ವಿಳಂಬ: ಈಜಿಪುರ ಮೇಲ್ಸೇತುವೆಗೆ ಲಭ್ಯವಿರುವ ಸ್ಥಳದಲ್ಲಿ ಗುತ್ತಿಗೆದಾರರು ಕಾಮಗಾರಿಯನ್ನು ವೇಗವಾಗಿ ನಡೆಸಿದ್ದರೆ, ಈ ವೇಳೆಗೆ ಸುಮಾರು 25ರಷ್ಟು ಕಾಮಗಾರಿ ಮುಗಿಯುತ್ತಿತ್ತು. ಈ ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರು ಕಾರಣ ಎಂದು ಬಿಬಿಎಂಪಿ ಕೇಂದ್ರ ಯೋಜನೆ ವಿಭಾಗದ ಎಂಜಿನಿಯರ್‌ಗಳು ದೂರಿದ್ದಾರೆ. 

ಕ್ರಮ ಕೈಗೊಳ್ಳಿ: ‘ಮುಖ್ಯಮಂತ್ರಿಯವರು ಸ್ಥಳ ಪರಿಶೀಲನೆಗೆ ಬಾರದೆ ಇದ್ದಿದ್ದರೆ ಈ ಮೇಲ್ಸೇತುವೆ ಕಾಮಗಾರಿ ಇನ್ನೂ ವಿಳಂಬವಾಗುತ್ತಿತ್ತೇನೋ?  ಒಬ್ಬರ ಮೇಲೆ ಮತ್ತೊಬ್ಬರು ದೂರುವುದನ್ನು ಬಿಟ್ಟು, ಬಿಬಿಎಂಪಿ ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರು ಯಾರೇ ವಿಳಂಬಕ್ಕೆ ಕಾರಣರಾಗಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಸಾರಿಗೆ ಸಚಿವರು, ಮುಖ್ಯ ಆಯುಕ್ತರು ಆಗಾಗ್ಗೆ ಇತ್ತ ಗಮನಹರಿಸಬೇಕು. 2017ರಿಂದ ನಿತ್ಯವೂ ಜನರಿಗೆ ಸಮಸ್ಯೆ ಆಗುತ್ತಿರುವುದನ್ನು ತಪ್ಪಿಸಬೇಕು’ ಎಂದು ಸ್ಥಳೀಯ ನಿವಾಸಿ ರಾಮಕೃಷ್ಣ ಆಗ್ರಹಿಸಿದರು.

ಬಿಬಿಎಂಪಿ ನೋಟಿಸ್‌ನಲ್ಲಿ ಏನಿದೆ?; ಗುತ್ತಿಗೆದಾರರ ಉತ್ತರ ಏನು?

ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಅಗತ್ಯ ಎಂಜಿನಿಯರ್‌ಗಳನ್ನು ನಿಯೋಜಿಸಿಲ್ಲ. ಹಲವು ಬಾರಿ ಹೇಳಿದ್ದರೂ ಈ ಕ್ರಮವಾಗಿಲ್ಲ.

- ಕಾಮಗಾರಿ ಸ್ಥಳದಲ್ಲಿ ಆರು ಎಂಜಿನಿಯರ್‌ಗಳಿದ್ದಾರೆ. ಕಾಮಗಾರಿ ಪ್ರಗತಿ ಹೆಚ್ಚಾದಾಗ ಇನ್ನಷ್ಟು ಎಂಜಿನಿಯರ್‌ಗಳನ್ನು ನಿಯೋಜಿಸಲಾಗುತ್ತದೆ.

ಕಾಮಗಾರಿಗೆ ಅಗತ್ಯವಾದ ರಚನೆಗಳನ್ನು ನಿರ್ಮಿಸಿಕೊಳ್ಳಲು ‘ಕಾಸ್ಟಿಂಗ್‌ ಯಾರ್ಡ್‌’ ಸ್ಥಾಪಿಸಿಕೊಳ್ಳುವ ಕಾರ್ಯ ಗುತ್ತಿಗೆದಾರರದ್ದೇ ಆಗಿರುತ್ತದೆ. ಇದನ್ನು ಸ್ಥಾಪಿಸಿಕೊಳ್ಳದ್ದರಿಂದ ಕಾಮಗಾರಿ ವಿಳಂಬವಾಗಿದೆ.

-2023ರ ನವೆಂಬರ್‌ 15ರ ಒಪ್ಪಂದದಂತೆ ಆನೇಕಲ್‌ನಲ್ಲಿ ಹಿಂದಿನ ಗುತ್ತಿಗೆದಾರರು ಬಳಸುತ್ತಿದ್ದ ಕಾಸ್ಟಿಂಗ್‌ ಯಾರ್ಡ್‌ ಅನ್ನೇ ಬಳಸಲು ಅನುಮತಿ ನೀಡಲಾಗಿದೆ. ಯೋಜನೆಯ ಕಾರ್ಯಪಾಲಕ ಎಂಜಿನಿಯರ್–9 ಹಾಗೂ ನವೆಂಬರ್‌ 26ರಂದು ಅಧೀಕ್ಷಕ ಎಂಜಿನಿಯರ್‌ ಕೂಡ ಆ ಸ್ಥಳಕ್ಕೆ ಭೇಟಿ ನೀಡಿ ಉಪಯೋಗಿಸಿಕೊಳ್ಳಲು ಒಪ್ಪಿದ್ದರು. ಆದರೆ ಆ ಸ್ಥಳದ ಮಾಲೀಕರಿಗೆ ₹2 ಕೋಟಿ ಬಾಡಿಗೆ ಬಾಕಿ ಇದ್ದು ಅದನ್ನು ಅವರು ಬಳಸಲು ಕೊಡುತ್ತಿಲ್ಲ. ಈ ಬಗ್ಗೆ ನಿಮಗೆ ಹಲವು ಬಾರಿ ತಿಳಿಸಿದ್ದರೂ ಕ್ರಮ ಕೈಗೊಂಡಿಲ್ಲ.

‘ಕಾಸ್ಟಿಂಗ್‌ ಯಾರ್ಡ್‌’ ಹಾಗೂ ಅಲ್ಲಿರುವ ಸಾಮಗ್ರಿಗಳನ್ನು ಪಡೆದುಕೊಳ್ಳುವಲ್ಲಿ ವಿಳಂಬ ಅಲ್ಲಿರುವ ಸಾಮಗ್ರಿಗಳ ಮೌಲ್ಯೀಕರಣ ಮಾಡಿಲ್ಲ. ಇದರಿಂದ ಲಭ್ಯವಿರುವ ಸಾಮಗ್ರಿಗಳನ್ನು ಹಸ್ತಾಂತರಿಸಲು ನಿಧಾನವಾಗುತ್ತಿದೆ.

ಬಿಬಿಎಂಪಿ ನಿಗದಿಪಡಿಸುವ ದರಕ್ಕೆ ಸಾಮಗ್ರಿಗಳನ್ನು ಪಡೆದುಕೊಳ್ಳುತ್ತೇವೆ ಎಂದು ನಾವು ಮೊದಲೇ ಒಪ್ಪಿಕೊಳ್ಳುತ್ತೇವೆ ಎಂದು ಮೇ 15ರ ಪತ್ರದಲ್ಲಿ ತಿಳಿಸಿದ್ದೇವೆ. ಕಾಸ್ಟಿಂಗ್‌ ಯಾರ್ಡ್‌ನ ಮಾಲೀಕರಿಗೆ ಬಾಡಿಗೆ ನೀಡದಿರುವುದರಿಂದ ಅವರು ಆ ಪ್ರದೇಶಕ್ಕೆ ಹೋಗಲು ಬಿಡುತ್ತಿಲ್ಲ. ಈ ಬಗ್ಗೆ ಬಿಬಿಎಂಪಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಳಿಕೊಳ್ಳುತ್ತೇವೆ.

ರಕ್ಷಣಾ ಇಲಾಖೆ ಪ್ರದೇಶದಲ್ಲಿ 2023ರ ಡಿಸೆಂಬರ್‌ 17ರಂದು ಆರಂಭವಾದ ಕಾಂಪೌಂಡ್‌ ನಿರ್ಮಾಣದ ಕಾಮಗಾರಿ ಇನ್ನೂ ಅಗತ್ಯ ಪ್ರಗತಿಯನ್ನು ಕಂಡಿಲ್ಲ. ಅಗತ್ಯ ಕಾರ್ಮಿಕರು ಮತ್ತು ಯಂತ್ರಗಳನ್ನು ಒದಗಿಸಿಲ್ಲ.

– ಕಾಂಪೌಂಡ್‌ ನಿರ್ಮಾಣ ಪೂರ್ಣಗೊಂಡಿದ್ದು ‘ಫಿನಿಷಿಂಗ್’ ಕಾರ್ಯ ಮಾತ್ರ ಪ್ರಗತಿಯಲ್ಲಿದೆ.

ಕಾಮಗಾರಿ ಪ್ರದೇಶದಲ್ಲಿ ಕಟ್ಟಡ ತ್ಯಾಜ್ಯವನ್ನು(ಡೆಬ್ರಿ) ತೆರವುಗೊಳಿಸಲು ಹಲವು ಬಾರಿ ಸೂಚಿಸಲಾಗಿದೆ. ಹೊರಗಡೆಯಿಂದ ಡೆಬ್ರಿ ತಂದು ಹಾಕುವುದನ್ನು ತಡೆಯಲು ಭದ್ರತಾ ಸಿಬ್ಬಂದಿ ನಿಯೋಜಿಸಲು ಹೇಳಿದ್ದರೂ ಈ ಕಾರ್ಯಗಳು ಆಗಿಲ್ಲ.

– ಕಾಮಗಾರಿ ಮೇಲುಸ್ತುವಾರಿ ಹೊಂದಿರುವ ಸಹಾಯಕ ಎಂಜಿನಿಯರ್‌  ಕಾಲಕಾಲಕ್ಕೆ ಸೂಚಿಸುವಂತೆ ಡೆಬ್ರಿ ವಿಲೇವಾರಿ ಮಾಡಲಾಗಿದೆ. ರಾತ್ರಿವೇಳೆ ಹೊರಭಾಗದಿಂದ ಬರುವ ಡೆಬ್ರಿ ತಡೆಯಲು ಕ್ರಮ ಕೈಗೊಳ್ಳಲಾಗುವುದು.

ಕಾಮಗಾರಿ ನಡೆಯುವ ಸ್ಥಳದಲ್ಲಿ ಲೈಟಿಂಗ್‌ ಸೂಚನಾಫಲಕ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳ ಕೊರತೆ ಇದೆ.

– ಮೇಲುಸ್ತುವಾರಿ ಸಹಾಯಕ ಎಂಜಿನಿಯರ್‌ ಅವರ ಸೂಚನೆಯಂತೆ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಇತರೆ ಸೂಚನೆಗಳನ್ನೂ ಪಾಲಿಸಲಾಗುವುದು.

ಕಾಮಗಾರಿಗೆ ಅಗತ್ಯವಾದ ಕಾರ್ಮಿಕರು ಯಂತ್ರಗಳನ್ನು ನಿಯೋಜಿಸಲು ವಿಫಲವಾಗಿದ್ದು ಯೋಜನೆ ಪ್ರಗತಿ ಕುಂಠಿತವಾಗಿದೆ.

– ಅಗತ್ಯ ಸಿಬ್ಬಂದಿ ನಿಯೋಜಿಸಲ್ಲ ಎಂಬ ಆರೋಪ ಸುಳ್ಳು. ಅಗತ್ಯ ಇರುವ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈಜಿಪುರ ಜಂಕ್ಷನ್‌ ಸೇಂಟ್‌ ಜಾನ್ಸ್‌ ಆಸ್ಪತ್ರೆ ಜಂಕ್ಷನ್‌ ಮತ್ತು ಕೇಂದ್ರೀಯ ಸದನ ಜಂಕ್ಷನ್‌ನಲ್ಲಿ ಕಾಮಗಾರಿ ನಡೆಸಲು ಬಿಬಿಎಂಪಿ ಸ್ಥಳವನ್ನು ಇನ್ನೂ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT