ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿಗೆ ಲಗ್ಗೆ ಸಜ್ಜಾಗುತ್ತಿದೆ ಎಎಪಿ

ಸುಸಜ್ಜಿತ ಶಾಲೆ, ಮೊಹಲ್ಲಾ ಕ್ಲಿನಿಕ್‌ ಮಂತ್ರ
Last Updated 11 ಫೆಬ್ರುವರಿ 2020, 19:24 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಆಮ್‌ ಆದ್ಮಿ ಪಕ್ಷ (ಎಎಪಿ) ಎಲ್ಲ 198 ವಾರ್ಡ್‌ಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ. ಪಕ್ಷದ ಪ್ರಮುಖರು ಒಂದೂವರೆ ವರ್ಷದಿಂದಲೇ ಈ ಕುರಿತು ಸಿದ್ಧತೆಯಲ್ಲಿ ತೊಡಗಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆಯ ಭಾರಿ ಗೆಲುವು ಪಕ್ಷದ ಕಾರ್ಯಕರ್ತರಲ್ಲೂ ಹೊಸ ಹುರುಪು ಮೂಡಿಸಿದೆ.

‘ಬಿಬಿಎಂಪಿಯ ಚುಕ್ಕಾಣಿಯನ್ನು ನಮ್ಮ ಕೈಗೆ ಕೊಟ್ಟರೆ, ಇಲ್ಲೂ ಜನಸ್ನೇಹಿ ಬದಲಾವಣೆ ಸಾಧ್ಯ ಎಂಬುದನ್ನು ಮತದಾರರಿಗೆ ಮನದಟ್ಟು ಮಾಡುವುದು ನಮ್ಮ ಗುರಿ. ಈ ಸಲುವಾಗಿಯೇ 40 ನಿಮಿಷ ಅವಧಿಯ ‘ಹೊಸ ಬೆಂಗಳೂರು’ ಎಂಬ ಕಿರುಚಿತ್ರವೊಂದನ್ನು ರೂಪಿಸಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೇಗೆ ಜಾರಿಗೆ ತರಬಹುದು ಎಂಬುದನ್ನು ವಿವರಿಸಿದ್ದೇವೆ. ಈಗಾಗಲೇ 50ಕ್ಕೂ ಹೆಚ್ಚು ಕಡೆ ಅದನ್ನು ಪ್ರದರ್ಶಿಸಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿ ಬೀದಿಯಲ್ಲೂ ಇದನ್ನು ಪ್ರದರ್ಶಿಸಲಿದ್ದೇವೆ’ ಎನ್ನುತ್ತಾರೆ ಪಕ್ಷದ ರಾಜ್ಯ ಸಹಸಂಚಾಲಕಿ ಹಾಗೂ ಬಿಬಿಎಂಪಿ ಚುನಾವಣಾ ಉಸ್ತುವಾರಿ ಶಾಂತಲಾ ದಾಮ್ಲೆ.

‘ನಾವು ಇಲ್ಲಿ ಉಚಿತವಾಗಿ ವಿದ್ಯುತ್‌ ನೀಡುವ ಭರವಸೆ ನೀಡುತ್ತಿಲ್ಲ. ಏಕೆಂದರೆ ಅದು ಬಿಬಿಎಂಪಿ ಕೈಯಲ್ಲಿ ಇಲ್ಲ. ಆದರೆ, ಬಡವರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಸುಸಜ್ಜಿತ ಶಾಲೆಗಳನ್ನು ರೂಪಿಸುವುದು ಹಾಗೂ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಮೊಹಲ್ಲಾ ಕ್ಲಿನಿಕ್‌ ಸ್ಥಾಪನೆ ನಮ್ಮ ಪ್ರಮುಖ ಭರವಸೆಗಳು. ದೆಹಲಿಯಲ್ಲಿ ಇವುಗಳನ್ನು ಹೇಗೆ ಯಶಸ್ವಿಯಾಗಿ ಜಾರಿಗೆ ತರಲಾಯಿತು ಎಂಬುದನ್ನೂ ವಿವರಿಸುತ್ತಿದ್ದೇವೆ. ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ಅಭಿವೃದ್ಧಿ ಯಿಂದ ವಾಹನ ದಟ್ಟಣೆ ಕಡಿಮೆಗೊಳಿಸುವ ಹಾಗೂ ಕಸದ ಮಾಫಿಯಾ ಮಟ್ಟ ಹಾಕಿ ಸ್ವಚ್ಛ ನಗರ ನಿರ್ಮಾಣ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿದ್ದೇವೆ’ ಎಂದರು.

‘ನಗರದಲ್ಲಿ 10ಕ್ಕೂ ಹೆಚ್ಚು ಕಡೆ ಕಚೇರಿಗಳನ್ನು ಆರಂಭಿಸಿದ್ದೇವೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಸಾಮರ್ಥ್ಯವಿರುವ ಕಾರ್ಯಕರ್ತರ ತಂಡಗಳು 45 ವಾರ್ಡ್‌ಗಳಲ್ಲಿ ಸಜ್ಜಾಗಿವೆ. ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಮನೆ–ಮನೆ ತಲುಪುವ ಕೆಲಸದಲ್ಲಿ ಈ ತಂಡಗಳು ನಿರತವಾಗಿವೆ. ಈ ಸಣ್ಣ ಆರಂಭವೇ ಗೆಲುವಿನ ಮೆಟ್ಟಿಲಾಗಲಿದೆ’ ಎಂದು ದಾಮ್ಲೆ ವಿಶ್ವಾಸ ವ್ಯಕ್ತಪಡಿಸಿದರು.

‘ಬರಲಿದೆ ಚುನಾವಣೆ ಪರಿಣತರ ತಂಡ’

‘ದೆಹಲಿ ಚುನಾವಣಾ ಪ್ರಚಾರ ಕಾರ್ಯಕ್ಕೆ ರಾಜ್ಯದಿಂದ 200ಕ್ಕೂ ಅಧಿಕ ಕಾರ್ಯಕರ್ತರು ತೆರಳಿದ್ದರು. ಅವರಲ್ಲಿ ಹೆಚ್ಚಿನವರು ಬೆಂಗಳೂರಿನವರು. ಅವರೆಲ್ಲ ಮರಳಿ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಬೆವರು ಸುರಿಸಲಿದ್ದಾರೆ. ಅದಲ್ಲದೇ ಚುನಾವಣಾ ತಂತ್ರಗಾರಿಕೆ ಹೆಣೆಯುವ ತಂಡವೂ ಇಲ್ಲಿಗೆ ಬರಲಿದೆ. ಇಲ್ಲೂ ಬದಲಾವಣೆ ಸಾಧ್ಯ ಎಂಬುದನ್ನು ಜನರಿಗೆ ಮನದಟ್ಟು ಮಾಡುವ ಪ್ರಯತ್ನವನ್ನು ಈ ತಂಡ ಮಾಡಲಿದೆ’ ಎಂದು ಶಾಂತಲಾ ದಾಮ್ಲೆ ತಿಳಿಸಿದರು.

ಬೆಂಗಳೂರು ಮೇಲೇಕೆ ಕಣ್ಣು?

‘ಬೆಂಗಳೂರು ಕೂಡಾ ದೆಹಲಿಯಂತೆ ಕಾಸ್ಮೋಪಾಲಿಟನ್‌ ಸಂಸ್ಕೃತಿಯನ್ನು ಹೊಂದಿರುವ ನಗರ. ಇಲ್ಲಿನ ಮತದಾರರು ಪ್ರಜ್ಞಾವಂತರು. ಅಲ್ಲಿನ ಮಾದರಿ ಇಲ್ಲಿ ಯಶಸ್ಸಿಯಾಗುವ ಸಾಧ್ಯತೆ ಹೆಚ್ಚು. ಭ್ರಷ್ಟಾಚಾರದ ವಿರುದ್ಧ ನಡೆದ ಹೋರಾಟಕ್ಕೂ ದೆಹಲಿಯಂತೆಯೇ ಈ ನಗರದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆ ಕಾರಣಕ್ಕಾಗಿಯೇ ಈ ನಗರದಲ್ಲಿ ಗೆಲುವು ಸಾಧಿಸುವುದು ನಮ್ಮ ಮುಂದಿನ ಗುರಿ’ ಎಂದು ಪಕ್ಷದ ರಾಜ್ಯ ಘಟಕದ ಸಹಕಾರ್ಯದರ್ಶಿ ದರ್ಶನ್‌ ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

***

‘ಭಯೋತ್ಪಾದಕ’ ಎಂದು ಕರೆಸಿಕೊಂಡ ಕೇಜ್ರಿವಾಲ್‍ ಅವರ ಗೆಲುವು ಇತರ ‘ದೇಶದ್ರೋಹಿ’ಗಳಿಗೂ ಸ್ಫೂರ್ತಿಯಾದರೆ ತಾವೇ ‘ದೇಶಭಕ್ತ’ರು ಎಂದು ಘೋಷಿಸಿಕೊಂಡುವರ ಗತಿ?

-ಪ್ರೊ.ಬಿ.ಕೆ.ಚಂದ್ರಶೇಖರ್‌, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT