ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಮತ್ತೆ 9 ಕಡೆ ಚಿತಾಗಾರ, ಜಾಗ ಹಸ್ತಾಂತರ

ಆಯುಕ್ತರಿಂದ ಚಿತಾಗಾರಗಳ ದಿಢೀರ್‌ ಪರಿಶೀಲನೆ
Last Updated 23 ಆಗಸ್ಟ್ 2020, 13:35 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ವ್ಯಾಪ್ತಿಯಲ್ಲಿ ಹೊಸದಾಗಿ ಒಂಬತ್ತು ಕಡೆ ವಿದ್ಯುತ್‌ ಚಿತಾಗಾರಗಳನ್ನು ನಿರ್ಮಿಸಲು ಕಂದಾಯ ಇಲಾಖೆಯು ಜಾಗಗಳನ್ನು ಹಸ್ತಾಂತರ ಮಾಡಿದೆ. ಶೀಘ್ರವೇ ಅಲ್ಲೂ ಚಿತಾಗಾರಗಳನ್ನು ನಿರ್ಮಿಸಲಾಗುವುದು. ಆ ಬಳಿಕ ಚಿತಾಗಾರಗಳ ಸಂಖ್ಯೆ 21ಕ್ಕೆ ಏರಲಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ನಗರದಪಾದರಾಯಪುರ, ಹೆಬ್ಬಾಳ ಹಾಗೂ ಮೇಡಿ ಅಗ್ರಹಾರಗಳಲ್ಲಿರುವ ವಿದ್ಯುತ್ ಚಿತಾಗಾರಗಳಿಗೆ ಭಾನುವಾರ ಭೇಟಿ ನೀಡಿ ಅಲ್ಲಿನ ಸೌಕರ್ಯಗಳನ್ನು ಹಾಗೂ ಕಾರ್ಯನಿರ್ವಹಣೆಯನ್ನು ಅವರು ಪರಿಶೀಲಿಸಿದರು.

‘ಚಿತಾಗಾರಗಳ ಮುಂದೆ ಮೃತದೇಹ ಸಾಗಿಸುವ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಅಂತ್ಯಕ್ರಿಯೆಗೆ ನಡೆಸಲು ಚಿತಾಗಾರಗಳ ಸಿಬ್ಬಂದಿ ಹಣ ಕೇಳುತ್ತಿದ್ದಾರೆ ದೂರುಗಳು ಕೇಳಿಬಂದಿದ್ದವು. ಹಾಗಾಗಿ ದಿಢೀರ್‌ ತಪಾಸಣೆ ಕೈಗೊಂಡಿದ್ದೇನೆ’ ಎಂದು ಆಯುಕ್ತರು ತಿಳಿಸಿದರು.

‘ಕೆಲವರು ರಾಹುಕಾಲ ನೋಡಿಕೊಂಡು ಚಿತಾಗಾರಗಳಿಗೆ ಮೃತದೇಹಗಳನ್ನು ತರುತ್ತಿದ್ದಾರೆ. ಒಂದು ದೇಹದ ಅಂತ್ಯಕ್ರಿಯೆಗೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಲಾಗಿರುತ್ತದೆ. ಆದರೆ, ಕೆಲವರು ಅಂತಿಮ ವಿಧಿಗಳನ್ನು ಪೂರೈಸಲು ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ನಿಗದಿಪಡಿಸಿದಷ್ಟು ದೇಹಗಳ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಒಂದು ದೇಹದ ಅಂತ್ಯಕ್ರಿಯೆ ನಡೆಯುತ್ತಿರುವಂತೆಯೇ ಮತ್ತೊಂದು ಮೃತದೇಹದ ಅಂತಿಮ ವಿಧಿಗಳನ್ನು ನಡೆಸಲು ಅವಕಾಶ ನೀಡುವಂತೆ ಸೂಚನೆ ನೀಡಿದ್ದೇನೆ. ಇದರಿಂದ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ’ ಎಂದು ಆಯುಕ್ತರು ತಿಳಿಸಿದರು.

‘ಬಿಬಿಎಂಪಿಯ ಎಲ್ಲ ಚಿತಾಗಾರಗಳಲ್ಲೂ ಶುಚಿತ್ವ ಕಾಪಾಡಲಾಗಿದೆ. ಶೌಚಾಲಯ, ಸ್ನಾನದ ಕೊಠಡಿ, ಬಿಸಿ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಕಾಣಿಸಿಕೊಳ್ಳಲು ಆರಂಭಿಸಿದ ಬಳಿಕ ಬಿಬಿಎಂಪಿ ಚಿತಾಗಾರಗಳಲ್ಲಿ ಸರಾಸರಿ 90 ಮೃತದೇಹಗಳ ಅಂತ್ಯಕ್ರಿಯೆ ನಡೆಯುತ್ತಿದೆ. ಈ ಪೈಕಿ ಸೋಂಕಿನಿಂದ ಮೃತಪಟ್ಟವರ 30 ಹಾಗೂ ಇತರರ 60 ಮೃತದೇಹಗಳು ಸೇರಿವೆ’ ಎಂದರು.

‘ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುವ ಸಿಬ್ಬಂದಿಗೆ ಪಾಲಿಕೆಯಿಂದ ₹ 500 ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಸಿಬ್ಬಂದಿಯ ವೇತವನ್ನೂ ಹೆಚ್ಚಳ ಮಾಡಲಾಗಿದೆ. ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಲು ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ಇಷ್ಟಾಗಿಯೂ ಸಿಬ್ಬಂದಿಯ ಕಾರ್ಯವೈಖರಿ ಬಗ್ಗೆ ದೂರುಗಳು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪಶ್ಚಿಮ ವಲಯದ ಮುಖ್ಯ ಎಂಜಿನಿಯರ್ ನಾಗರಾಜ್, ಮುಖ್ಯ ಆರೋಗ್ಯಾಧಿಕಾರಿ ಡಾ.ಮನೋರಂಜನ್ ಹೆಗ್ಡೆ ಇದ್ದರು.

ಪಾದರಾಯನಪುರ ಚಿತಾಗಾರ ಸೆ.7ರಿಂದ ಲಭ್ಯ
‘ಪಾದರಾಯನಪುರ ಚಿತಾಗಾರ ದುರಸ್ಥಿಯಲ್ಲಿದ್ದು, ಅದರ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಎಂಬ ದೂರು ಬಂದಿತ್ತು. ಈ ಚಿತಾಗಾರಕ್ಕೂ ಭೇಟಿ ನೀಡಿ ದುರಸ್ತಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ಸೆ. 7ಕ್ಕೆ ಈ ಚಿತಾಗಾರವನ್ನೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯ ಇರುವಂತೆ ನೋಡಿಕೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT