ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ಎದುರಿಸಲು ಸನ್ನದ್ಧ: 366ಸೂಕ್ಷ್ಮ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿ

ಬಿಬಿಎಂಪಿ
Last Updated 22 ಆಗಸ್ಟ್ 2018, 4:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸತತ ಎರಡು ಮಳೆಗಾಲಗಳಲ್ಲಿ ಎದುರಾದ ಭೀಕರ ಪ್ರವಾಹದಿಂದ ಎಚ್ಚೆತ್ತುಕೊಂಡ ಬಿಬಿಎಂಪಿ, 366 ಸೂಕ್ಷ್ಮ ಪ್ರದೇಶಗಳಲ್ಲಿ ನೆರೆಗೆ ಕಾರಣವಾಗುತ್ತಿದ್ದ ಅಂಶಗಳನ್ನು ಪತ್ತೆಹಚ್ಚಿ ಪರಿಹಾರ ಕಾಮಗಾರಿಗಳನ್ನು ಕೈಗೊಂಡಿದೆ.

2016ರಲ್ಲಿ ಮಡಿವಾಳ ಕೆರೆ ಆಸುಪಾಸಿನ ಪ್ರದೇಶಗಳಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಲಾಗಿತ್ತು. ಒಟ್ಟು 366 ಸ್ಥಳಗಳನ್ನು ಗುರುತಿಸಿದ್ದಕೆಎಸ್‌ಎನ್‌ಡಿಎಂಸಿ, ಇಲ್ಲಿನ ರಾಜಕಾಲುವೆಗಳಲ್ಲಿ ಹಾಗೂ ಮಳೆ ನೀರು ಹರಿಯುವ ಚರಂಡಿಗಳಲ್ಲಿ ಕೆಲವು ಮಾರ್ಪಾಡು ಮಾಡುವಂತೆ ಸಲಹೆ ನೀಡಿತ್ತು.

‘ಕೆಎಸ್‌ಎನ್‌ಡಿಎಂಸಿ ಅಧ್ಯಯನದಲ್ಲಿ ಗುರುತಿಸಿದ್ದ ಕಡೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿದ್ದೇವೆ. ಕೆಲವು ಕಡೆ ಕಾಲುವೆಯ ದಿಕ್ಕು ಬದಲಾಯಿಸಿದ್ದೇವೆ. ಇನ್ನು ಕೆಲವು ಕಡೆ ತಡೆಗೋಡೆಗಳನ್ನು ಬಲಪಡಿಸಿದ್ದೇವೆ. ಜನ ಕಸ ಸುರಿಯುತ್ತಿದ್ದ ಕಡೆ ತಡೆ ಬೇಲಿಗಳನ್ನು ಎತ್ತರಿಸಿದ್ದೇವೆ’ ಎಂದು ಬಿಬಿಎಂಪಿಯ ಮಳೆನೀರು ಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಎಚ್‌.ಟಿ. ಬೆಟ್ಟೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಬಾರಿ ಮಳೆಗಾಲಕ್ಕೆ ಮುನ್ನವೇ ಬಹುತೇಕ ರಾಜಕಾಲುವೆಗಳಲ್ಲಿ ಹೂಳೆ ತ್ತಿದ್ದೇವೆ. ಕಾಲುವೆಗಳಲ್ಲಿದ್ದ ಅಡೆತಡೆಗಳನ್ನು ತೆರವುಗೊಳಿಸಿದ್ದೇವೆ. ಪರಿಹಾರ ಕಾಮಗಾರಿ ಕೈಗೊಂಡ ಸ್ಥಳಗಳಲ್ಲಿ ಮತ್ತೆ ಪ್ರವಾಹ ಉಂಟಾಗುವ ಸಾಧ್ಯತೆ ತೀರಾ ಕಡಿಮೆ. ಆದರೂ, ಭಾರಿ ಮಳೆಯಾದರೆ ಹೊಸ ನಿರ್ಮಾಣ ಚಟುವಟಿಕೆ ನಡೆದ ಕಡೆ ನೆರೆ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ’ ಎಂದರು.

ಸರ್ಕಾರ ರಾಜಕಾಲುವೆ ಅಭಿವೃದ್ಧಿಗೆ ಬಿಡುಗಡೆ ಮಾಡಿದ ವಿಶೇಷ ಅನು ದಾನವನ್ನು ಬಳಸಿ ಬಿಬಿಎಂಪಿ 390 ಕಿ.ಮೀ ಉದ್ದದಷ್ಟು ಕಾಲುವೆಯನ್ನು ಅಭಿವೃದ್ಧಿಪಡಿಸಿದೆ.

2018–19ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಪಾಲಿಕೆ ವ್ಯಾಪ್ತಿಯಲ್ಲಿ 150 ಕಿ.ಮೀ ಉದ್ದದ ಕಾಲುವೆ ಅಭಿವೃದ್ಧಿಪಡಿಸುವ ಕಾರ್ಯಕ್ರಮವನ್ನು ಪ್ರಕಟಿಸಿದೆ. ಆದರೆ, ಇದಕ್ಕೆ ಎಷ್ಟು ಅನುದಾನ ಒದಗಿಸಲಾಗುವುದು ಎಂಬ ಪ್ರಸ್ತಾವ ಇಲ್ಲ.

‘150 ಕಿ.ಮೀ ಉದ್ದದ ಕಾಲುವೆ ಅಭಿವೃದ್ಧಿಗೆ ಯೋಜನೆ ರೂಪಿಸಬೇಕಿದೆ’ ಎಂದು ಬೆಟ್ಟೇಗೌಡ ತಿಳಿಸಿದರು.

ಒತ್ತುವರಿ ತೆರವು: 434 ಕಡೆ ಸರ್ವೆ

2016ರಲ್ಲಿ ಪ್ರವಾಹ ಉಂಟಾದಾಗ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ನಡೆಸಿತ್ತು. ಆರಂಭದಲ್ಲಿ ತೋರಿದ ಉತ್ಸಾಹ ಕ್ರಮೇಣ ಕಣ್ಮರೆಯಾಗಿತ್ತು.

1,953 ಕಡೆ ರಾಜಕಾಲುವೆಗಳ ಒತ್ತುವರಿಯನ್ನು ಬಿಬಿಎಂಪಿ 2016ರಲ್ಲಿ ಗುರುತಿಸಿತ್ತು. ಆ ವರ್ಷ 1,225 ಕಡೆ ಒತ್ತುವರಿ ತೆರವುಗೊಳಿಸಲಾಗಿತ್ತು.

‘ಸರ್ವೆ ಕಾರ್ಯ ಪೂರ್ಣಗೊಳ್ಳದ ಕಾರಣ ಕೆಲವು ಕಡೆ ಒತ್ತುವರಿ ತೆರವು ಸಾಧ್ಯವಾಗಿರಲಿಲ್ಲ. ಈಗ 434 ಸರ್ವೆ ನಂಬರ್‌ಗಳಲ್ಲಿ ಸರ್ವೆ ಪೂರ್ಣಗೊಂಡಿದ್ದು, ಭೂಮಾಪನ ಇಲಾಖೆ ನಮಗೆ ನಕ್ಷೆಗಳನ್ನು ಹಸ್ತಾಂತರಿಸಿದೆ. ಈ ಪ್ರದೇಶಗಳಲ್ಲಿ ಒಂದೊಂದಾಗಿ ಒತ್ತುವರಿ ತೆರವುಗೊಳಿಸುತ್ತಿದ್ದೇವೆ’ ಎಂದು ಬೆಟ್ಟೇಗೌಡ ತಿಳಿಸಿದರು.

‘ಇನ್ನೂ 294 ಸರ್ವೆ ನಂಬರ್‌ಗಳಿಗೆ ಸಂಬಂಧಿಸಿ ಸರ್ವೆ ಪೂರ್ಣಗೊಂಡಿಲ್ಲ. ಇವುಗಳ ನಕ್ಷೆ ಕೈಸೇರಿದ ಬಳಿಕ ಇಲ್ಲೂ ಒತ್ತುವರಿ ತೆರವುಗೊಳಿಸುತ್ತೇವೆ’ ಎಂದರು.

‘ಸೆಪ್ಟೆಂಬರ್‌ ಮಳೆಗೆ ಬಿಬಿಎಂಪಿ ಸಜ್ಜಾಗಲಿ’

ನಗರದಲ್ಲಿ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಸಾಮಾನ್ಯವಾಗಿ ಹೆಚ್ಚು ಮಳೆಯಾಗುವುದರಿಂದ ಪರಿಸ್ಥಿತಿ ನಿಭಾಯಿಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸಲಹೆ ನೀಡಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗುವುದರಿಂದ ಈ ತಿಂಗಳಲ್ಲಿ ಮಳೆ ಸಾಮಾನ್ಯವಾಗಿ ಹೆಚ್ಚಾಗಿ ಇರುತ್ತದೆ. ಅಸಹಜ ರೀತಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

*ಪ್ರವಾಹ ಉಂಟಾಗಲು ಕಾರಣ ವಾಗುತ್ತಿದ್ದ ಅಂಶಗಳನ್ನು ಪತ್ತೆಮಾಡಿ ಪರಿಹಾರ ಕ್ರಮ ಕೈಗೊಂಡಿದ್ದೇವೆ. ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ

-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

**

ಎಲ್ಲೆಲ್ಲಿ ಪದೇ ಪದೇ ಪ್ರವಾಹ?

*ಚಿಕ್ಕಪೇಟೆ (ಕುಂಬಾರಗುಂಡಿ)

*ಎಚ್‌.ಎಸ್‌.ಆರ್‌.ಬಡಾವಣೆ

*ಬಿಎಂಟಿಸಿ ಮುಖ್ಯ ಕಚೇರಿ (ಶಾಂತಿನಗರ)

*ಕೋರಮಂಗಲ 4ನೇ ಬ್ಲಾಕ್‌

*ಜೆ.ಪಿ.ನಗರ ಡಾಲರ್ಸ್‌ ಕಾಲೊನಿ

*ಯಶವಂತಪುರ, ಪಟ್ಟಣಗೆರೆ

*ಕೆ.ಆರ್‌.ಪುರ

*ಈಜಿಪುರ

*ಕುರುಬರಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT