ಭಾನುವಾರ, ಆಗಸ್ಟ್ 1, 2021
28 °C
ವಾಹನಗಳ ಜಾಡು ಪತ್ತೆಗೆ ವಾರ್‌ರೂಮ್‌ ಬಳಸಲಿದೆ ಬಿಬಿಎಂಪಿ

ಕಸ ಸಾಗಾಟ–ಪಾಲಿಕೆ ಕೇಂದ್ರ ಕಚೇರಿಯಿಂದಲೇ ನಿಗಾವಣೆ

ಪ್ರವೀಣ ಕುಮಾರ್ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಸ ಒಯ್ಯುವ ಆಟೊ ಟಿಪ್ಪರ್‌ಗಳು ನಿತ್ಯ ಮನೆ ಬಳಿಗೆ ಬರುತ್ತಿಲ್ಲವೇ? ಆಟೊಟಿಪ್ಪರ್‌ ಎಲ್ಲಿದೆ, ಎಷ್ಟು ಹೊತ್ತಿಗೆ ಅದು ಮನೆ ಬಳಿಗೆ ಬರಲಿದೆ ಎಂಬ ಮಾಹಿತಿಯನ್ನು ಮುಂಚಿತವಾಗಿ ತಿಳಿದುಕೊಳ್ಳಲು ಬಯಸುತ್ತೀರಾ... ಶೀಘ್ರವೇ ಇದು ಈಡೇರಲಿದೆ.

ಆಟೊ ಟಿಪ್ಪರ್‌ಗಳಿಗೆ ಜಿಪಿಎಸ್‌ ಅಳವಡಿಸಿ, ಅವುಗಳು ಸಾಗುತ್ತಿರುವ ಮಾಹಿತಿಯನ್ನು ಬಿಬಿಎಂಪಿಯ ಕೇಂದ್ರ ಕಚೇರಿಗೆ ಜೋಡಿಸುವ ಕಾರ್ಯನಡೆಯುತ್ತಿದೆ. ಕೋವಿಡ್‌ 19 ನಿಯಂತ್ರಣದ ಮಾಹಿತಿ ಸಮನ್ವಯಕ್ಕಾಗಿ ಆರಂಭಿಸಿರುವ ವಾರ್‌ ರೂಂ‌ ಅನ್ನೇ ಕಸ ನಿರ್ವಹಣೆ ಮೇಲೆ ನಿಗಾ ಇಡಲು ಬಳಸಿಕೊಳ್ಳುವ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಿದೆ.

‘ಕಸ ನಿರ್ವಹಣೆ ಮೇಲೆ ನಿಗಾ ಇಡುವ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿದ್ದೇವೆ. ರಸ್ತೆಯಲ್ಲಿ ಕಸ ಗುಡಿಸುವ 26 ಯಂತ್ರಗಳಿಗೆ ಜಿಪಿಎಸ್‌ ಅಳವಡಿಸಿ ಅವುಗಳ ಚಲನವಲನದ ಮೇಲೆ ಕೇಂದ್ರ ಕಚೇರಿಯಿಂದಲೇ ನಿಗಾ ಇಡಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿ ಮನೆ ಮನೆಯಿಂದ ಕಸ ಸಾಗಿಸುವ ಆಟೊ ಟಿಪ್ಪರ್‌ಗಳನ್ನು ಹಾಗೂ ಕಾಂಪ್ಯಾಕ್ಟರ್‌ ವಾಹನಗಳಿಗೂ ಜಿಪಿಎಸ್‌ ಅಳವಡಿಸಲಾಗುತ್ತಿದೆ. ಈ ತಿಂಗಳ ಅಂತ್ಯದೊಳಗೆ ಅವುಗಳ ಮೇಲೂ ನಿಗಾ ಇಡುವ ವ್ಯವಸ್ಥೆ ಜಾರಿಗೆ ಬರಲಿದೆ’ ಎಂದು ವಿಶೇಷ ಆಯಕ್ತ ಡಿ.ರಂದೀಪ್‌ ತಿಳಿಸಿದರು.

‘ಒಂದು ತಿಂಗಳು ನಾವು ಜಿಪಿಎಸ್‌ ವ್ಯವಸ್ಥೆಯ ಮೂಲಕ ಆಟೊ ಟಿಪ್ಪರ್‌ ಹಾಗೂ ಕಾಂಪ್ಯಾಕ್ಟರ್‌ಗಳ ಮೇಲೆ ನಿಗಾ ಇಡಲಿದ್ದೇವೆ. ನಂತರ ವ್ಯವಸ್ಥೆಯ ಲೋಪಗಳೇನಾದರೂ ಇದ್ದರೆ ಸರಿಪಡಿಸಿಕೊಂಡು ಬಳಿಕ ಸಾರ್ವಜನಿಕರಿಗೂ ಈ ಮಾಹಿತಿಯನ್ನು ನೇರವಾಗಿ ಪಡೆಯುವುದಕ್ಕೆ ಅವಕಾಶ ಕಲ್ಪಿಸುತ್ತೇವೆ’ ಎಂದು ತಿಳಿಸಿದರು.

‘ಜಿಪಿಎಸ್‌ ಅಳವಡಿಕೆ ಬಳಿಕ ಯಾವ ಆಟೊ ಟಿಪ್ಪರ್‌ ಎಲ್ಲೆಲ್ಲಿ ಸಂಚರಿಸುತ್ತದೆ ಎಂಬ ಕ್ಷಣ ಕ್ಷಣದ ಮಾಹಿತಿ ನೇರವಾಗಿ ಅಧಿಕಾರಿಗಳಿಗೆ ತಿಳಿಯಲಿದೆ. ಗುತ್ತಿಗೆದಾರರು ಯಾರಾದರೂ ಆಟೊ ಟಿಪ್ಪರ್‌ಗಳ ಸಂಖ್ಯೆ ಬಗ್ಗೆ ತಪ್ಪು ಮಾಹಿತಿ ನೀಡಿದ್ದರೆ ಅಥವಾ ಮನೆ ಮನೆಯಿಂದ ನಿತ್ಯ ಕಸ ಸಂಗ್ರಹ ಮಾಡದಿದ್ದರೆ ಪತ್ತೆ ಹಚ್ಚುವುದು ಇದರಿಂದ ಸುಲಭವಾಗಲಿದೆ’ ಎಂದು ಅವರು ವಿವರಿಸಿದರು. 

ಅಂಕಿ ಅಂಶ
500: ಬಿಬಿಎಂಪಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಂಪ್ಯಾಕ್ಟರ್‌ ವಾಹನಗಳು
4000: ಮನೆ ಮನೆಯಿಂದ ಕಸ ಸಂಗ್ರಹಿಸಲು ಬಳಕೆಯಾಗುತ್ತಿರುವ ಆಟೊ ಟಿಪ್ಪರ್‌ಗಳು

**
ಕಸ ಸಾಗಣೆ ವಾಹನಗಳಿಗೆ ಜಿಪಿಎಸ್‌ ಅಳವಡಿಸಿ ಅವುಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಜಾರಿಗೆ ಬಂದ ಬಳಿಕ ವ್ಯವಸ್ಥೆ ಪರಿಣಾಮಕಾರಿ ಆಗಿ ಕಾರ್ಯನಿರ್ವಹಿಸಲು ಸಾಧ್ಯ.
-ಡಿ.ರಂದೀಪ್‌, ವಿಶೇಷ ಆಯುಕ್ತ (ಕಸ ನಿರ್ವಹಣೆ), ಬಿಬಿಎಂಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು