ಭಾನುವಾರ, ಜನವರಿ 17, 2021
22 °C
ಮಲ ಹೊರುವವರ ಮರು ಸಮೀಕ್ಷೆ: ಬಿಬಿಎಂಪಿ ಆಯುಕ್ತ ಸೂಚನೆ

ಮಲಹೊರುವ ಪದ್ಧತಿ ಈಗಲೂ ಇದೆಯೇ ಕೂಲಂಕಷವಾಗಿ ಪರಿಶೀಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಮಲ ಹೊರುವವರು (ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳು) ಇನ್ನೂ ಆ ಕೆಲಸ ಮಾಡುತ್ತಿದ್ದರೆ ಅವರ ಜೀವನೋಪಾಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಅವರನ್ನು ಪತ್ತೆ ಹಚ್ಚಲು ಸಮರ್ಪಕವಾಗಿ ಸಮೀಕ್ಷೆ ನಡೆಸಬೇಕು’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಎಲ್ಲ ವಲಯಗಳ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.

ಒಳಚರಂಡಿ ವ್ಯವಸ್ಥೆಯ ಮ್ಯಾನ್‌ಹೋಲ್‌ಗಳಲ್ಲಿ ಹಾಗೂ ಒಳಚರಂಡಿ ಸಂಪರ್ಕವಿಲ್ಲದ ಶೌಚಾಲಯಗಳ ಮಲಗುಂಡಿಗಳನ್ನು ಸ್ವಚ್ಛಗೊಳಿಸಲು ವ್ಯಕ್ತಿಗಳನ್ನು ಬಳಸುವುದನ್ನು ನಿಷೇಧಿಸಿದ್ದರೂ ಈ ಪದ್ಧತಿ ಕೆಲವೆಡೆ ಈಗಲೂ ಮುಂದುವರಿದಿದೆ. ಅಂತಹವರನ್ನು ಪತ್ತೆ ಹಚ್ಚಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಮರುಸಮೀಕ್ಷೆ ನಡೆಸಲಾಗುತ್ತಿದೆ. ಈ ಸಮೀಕ್ಷೆಯ ಸಿದ್ಧತೆ ಪರಿಶೀಲಿಸಲು ಆಯುಕ್ತರು ‘ಪಾಲಿಕೆ ಮಟ್ಟದ ವಿಚಕ್ಷಣಾ ಸಮಿತಿ'ಯ ಸಭೆಯನ್ನು ಗುರುವಾರ ನಡೆಸಿದರು. 

‘ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ ಮಲ ಹೊರುವ ಕಾಯಕದಲ್ಲಿ ತೊಡಗಿದ್ದವರ ಪಟ್ಟಿ ಸಿದ್ಧಪಡಿಸಬೇಕು. ಬಿಬಿಎಂಪಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳಲ್ಲಿ ಇನ್ನೂ ಒಳಚರಂಡಿ ಸಂಪರ್ಕ ಇಲ್ಲ. ಈ ಪ್ರದೇಶಗಳಲ್ಲಿ ಶೌಚಗುಂಡಿಗಳನ್ನು ಈಗಲೂ ಮಲಹೊರುವ ವ್ಯಕ್ತಿಗಳಿಂದಲೇ ಸ್ವಚ್ಛಗೊಳಿಸಲಾಗುತ್ತಿದೆಯೇ ಎಂಬ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕು. ಈ ಹಿಂದೆ ಮಲ ಹೊರುವ ಕಾಯಕ ಮಾಡುತ್ತಿದ್ದವರಿಗೆ ಪರ್ಯಾಯ ಕೆಲಸ ಒದಗಿಸಲು ಈ ಸಮೀಕ್ಷೆ ಅತ್ಯಂತ ಮಹತ್ವದ್ದು’ ಎಂದು ಆಯುಕ್ತರು ನಿರ್ದೇಶನ ನೀಡಿದರು.

ಕಲ್ಯಾಣ ವಿಭಾಗದ ಸಹಾಯಕ ಆಯುಕ್ತ ಸೋಮಪ್ಪ ಕಡಕೋಳ, ‘ಪಾಲಿಕೆ ವ್ಯಾಪ್ತಿಯಲ್ಲಿ ಮಲ ಹೊರುವವರ ಸಮೀಕ್ಷೆ 2013ರಲ್ಲಿ ನಡೆದಿತ್ತು. ಈ ಕಾಯಕದಲ್ಲಿ ತೊಡಗಿದ್ದ  201 ಮಂದಿಯನ್ನು ಆಗ ಪತ್ತೆ ಮಾಡಲಾಗಿತ್ತು. ಮಲ ಹೊರುವ ಕಾಯಕ ಮಾಡಿಕೊಂಡಿದ್ದವರಿಗೆ ಕೇಂದ್ರ ಸರ್ಕಾರವು ₹ 40 ಸಾವಿರ ಸಹಾಯಧನ ನೀಡುತ್ತದೆ. ಈಗಾಗಲೇ 71 ಮಂದಿಗೆ ಈ ಸವಲತ್ತು ಒದಗಿಸಲಾಗಿದೆ. ಇನ್ನುಳಿದವರಿಗೆ ಸಹಾಯಧನ ಒದಗಿಸಲು ಅಗತ್ಯ ದಾಖಲೆ ಪಡೆದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದರು.

ಮಲಹೊರುತ್ತಿದ್ದ 1,139 ಮಂದಿ ಪತ್ತೆ

‘ಯಲಹಂಕ, ಬೊಮ್ಮನಹಳ್ಳಿ ಹಾಗೂ ದಾಸರಹಳ್ಳಿ ವಲಯ ಹೊರತುಪಡಿಸಿ ಇನ್ನುಳಿದ ಐದು ವಲಯಗಳಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ 1,139 ಮಂದಿ ಮಲ ಹೊರುವ ಕಾಯಕದಲ್ಲಿ ತೊಡಗಿದ್ದವರನ್ನು ಪತ್ತೆ ಮಾಡಸಲಾಗಿದೆ’ ಎಂದು ಸೋಮಪ್ಪ ಕಡಕೋಳ ಮಾಹಿತಿ ನೀಡಿದರು.

‘ಕಲ್ಯಾಣ ಕಾರ್ಯಕ್ರಮಗಳಡಿ ಹೆಚ್ಚುವರಿ ಸವಲತ್ತು’

‘ಮಲ ಹೊರುವ ಕೆಲಸದಲ್ಲಿ ತೊಡಗಿದ್ದವರಿಗೆ ಕೇಂದ್ರ ಸರ್ಕಾರ ನೀಡುವ ₹ 40 ಸಾವಿರ ಸಹಾಯಧನದ ಜೊತೆಗೆ ಮತ್ತಷ್ಟು ಮೊತ್ತವನ್ನು ಸೇರಿಸಿ ನೀಡಲು ಅಗತ್ಯ ಕ್ರಮವಹಿಸಬೇಕು. ಸ್ವಂತ ವಸತಿ ಇಲ್ಲದವರಿಗೆ ಒಂಟಿಮನೆ ಯೋಜನೆಯಡಿ ಮನೆ ಕಟ್ಟಿಸಿ ಕೊಡಬೇಕು. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಧನ ಒದಗಿಸಬೇಕು’ ಎಂದು ಬಿಬಿಎಂಪಿ ಕಲ್ಯಾಣ ವಿಭಾಗದ ಅಧಿಕಾರಿಗಳಿಗೆ ಮಂಜುನಾಥ ಪ್ರಸಾದ್‌ ಸೂಚನೆ ನೀಡಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು