ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ತಿಂಗಳುಗಳಿಂದ ಗೌರವಧನವಿಲ್ಲದೆ ಜೀವನ

ಶಿಕ್ಷಕರ ದಿನ: ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರಿಗಿಲ್ಲ ಸಂಭ್ರಮ
Last Updated 5 ಸೆಪ್ಟೆಂಬರ್ 2020, 18:47 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಕರ ದಿನದ ಅಂಗವಾಗಿ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಶುಭ ಹಾರೈಸುವಾಗ ಬಿಬಿಎಂಪಿ ಶಾಲೆಗಳ ಹೊರಗುತ್ತಿಗೆ ಶಿಕ್ಷಕರು/ಉಪನ್ಯಾಸಕರು ಈ ಸಡಗರವನ್ನು ಅನುಭವಿಸುವ ಸ್ಥಿತಿಯಲ್ಲಿರಲಿಲ್ಲ. ಐದು ತಿಂಗಳುಗಳಿಂದ ಅವರು ಗೌರವಧನವನ್ನೇ ಕಾಣದೇ ಬದುಕಿನ ಬಂಡಿಯನ್ನು ಸಾಗಿಸುತ್ತಿದ್ದಾರೆ.

‘ಶಿಕ್ಷಕರ ದಿನದಂದು ಸಂಭ್ರಮಪಡುವ ಸ್ಥಿತಿಯಲ್ಲಿ ನಾವಿಲ್ಲ. ದಿನಾಚರಣೆಗಳೆಲ್ಲ ಕೇವಲ ತೋರಿಕೆಗಾಗಿ. ನಮ್ಮ ಸಂಕಷ್ಟ ಕೇಳುವವರಿಲ್ಲ’ ಎಂದು ಬಿಬಿಎಂಪಿ ಶಾಲೆಗಳ ಕೆಲ ಶಿಕ್ಷಕರು ಬೇಸರ ತೋಡಿಕೊಂಡರು.

‘ಏಪ್ರಿಲ್‌ ತಿಂಗಳ ಬಳಿಕ ಗೌರವಧನ ಕೈಸೇರಿಲ್ಲ. ಇಷ್ಟು ವರ್ಷ ಒಂದೆರಡು ತಿಂಗಳು ವಿಳಂಬವಾದರೂ ಹಣ ಬರುತ್ತದೆ ಎಂಬ ಖಾತರಿಯಾದರೂ ಇರುತ್ತಿತ್ತು. ಈ ಬಾರಿ ಅದೂ ಇಲ್ಲ’ ಎನ್ನುತ್ತಾರೆ ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಲಿಂಗರಾಜು.

ಬಿಬಿಎಂಪಿಯು ಶಿಶುವಿಹಾರಗಳಿಂದ ಪದವಿ ಕಾಲೇಜಿನವರೆಗೆ ಖಾಲಿಯಿರುವ ಅಧ್ಯಾಪಕರ/ ಉಪನ್ಯಾಸಕರ ಹುದ್ದೆಗಳನ್ನು ಖಾಸಗಿ ಸಂಸ್ಥೆ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿಕೊಳ್ಳುತ್ತಿದೆ. ಜೂನ್‌ನಿಂದ ಏಪ್ರಿಲ್‌ವರೆಗೆ ಅವರಿಗೆ ಗೌರವಧನ ಪಾವತಿಸಲಾಗುತ್ತಿತ್ತು. ಜೂನ್‌ನಲ್ಲಿ ಗುತ್ತಿಗೆಯನ್ನು ನವೀಕರಿಸಲಾಗುತ್ತಿತ್ತು.

ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ/ ಉಪನ್ಯಾಸಕರ ಸೇವೆಯನ್ನು ಪ್ರತಿವರ್ಷದಂತೆ ಮುಂದುವರಿಸುವುದಕ್ಕೆ ಪಾಲಿಕೆ ಆಯುಕ್ತರು ಜೂನ್‌ನಲ್ಲೇ ಒಪ್ಪಿಗೆ ನೀಡಿದ್ದರು. ‘ಶಿಕ್ಷಕರ/ ಉಪನ್ಯಾಸಕರ ಸೇವೆಯನ್ನು 2020–21ನೇ ಸಾಲಿಗೂ ಮುಂದುವರಿಸಲಾಗಿದೆ. ಈ ಬಗ್ಗೆ ಶಾಲಾ–ಕಾಲೇಜುಗಳ ಮುಖ್ಯಸ್ಥರು ಕ್ರಮಕೈಗೊಳ್ಳಬೇಕು’ ಎಂದು ಬಿಬಿಎಂಪಿಯ ವಿದ್ಯಾಧಿಕಾರಿ ಜೂನ್‌ 25ರಂದೇ ಆದೇಶ ಮಾಡಿದ್ದರು.

‘ವಿದ್ಯಾಧಿಕಾರಿಗಳು ಆದೇಶ ಹೊರಡಿಸಿದ ಬಳಿಕ ಹೊಸ ವಿದ್ಯಾರ್ಥಿಗಳ ಸೇರ್ಪಡೆಯೂ ಸೇರಿದಂತೆ ವಿವಿಧ ಶೈಕ್ಷಣಿಕ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದೇವೆ. ಆದರೂ ಜೂನ್‌ ತಿಂಗಳಿನಿಂದ ಗೌರವಧನ ಬಿಡುಗಡೆಗೆ ಮೀನಮೇಷ ಎಣಿಸಲಾಗುತ್ತಿದೆ’ ಎಂದುಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರ ಸಂಘದ ಅಧ್ಯಕ್ಷ ಎನ್‌.ಲೋಕೇಶ್‌ ದೂರಿದರು.

ಊಟಕ್ಕೂ ತತ್ವಾರ:‘ಬಹುತೇಕ ಹೊರಗುತ್ತಿಗೆ ಶಿಕ್ಷಕರು ಮನೆ ಬಾಡಿಗೆ ಕಟ್ಟಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. 15 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇವೆ. ಬೇರೆ ಕೆಲಸವೂ ತಿಳಿದಿಲ್ಲ. ಈ ತಿಂಗಳೂ ಸಂಬಳವಾಗದಿದ್ದರೆ ಸಂಸಾರ ನಿರ್ವಹಣೆಯೂ ಕಷ್ಟವಾಗಲಿದೆ. ಊಟಕ್ಕೂ ತತ್ವಾರ ಪಡುವ ಸ್ಥಿತಿಯಲ್ಲಿದ್ದೇವೆ. ಆತ್ಮಹತ್ಯೆಯೊಂದೇ ನಮ್ಮ ಮುಂದಿರುವ ದಾರಿ’ ಎಂದು ಲಿಂಗರಾಜು ಅಳಲು ತೋಡಿಕೊಂಡರು.

ಕೊರೊನಾ ಕರ್ತವ್ಯಕ್ಕೂ ಬಳಕೆ:‘ಬೂತ್‌ ಮಟ್ಟದ ಅಧಿಕಾರಿಗಳಾಗಿದ್ದ (ಬಿಎಲ್‌ಒ) ಕೆಲವು ಹೊರಗುತ್ತಿಗೆ ಶಿಕ್ಷಕರನ್ನು ಕೊರೊನಾ ನಿಯಂತ್ರಣ ಕಾರ್ಯಕ್ಕೂ ಬಳಸಿಕೊಳ್ಳಲಾಗಿದೆ. ಅವರಿಗೂ ಯಾವುದೇ ಪ್ರೋತ್ಸಾಹಧನ ನೀಡಿಲ್ಲ. ಅವರೂ ಸಂಬಳವಿಲ್ಲದೆಯೇ ನಾಲ್ಕು ತಿಂಗಳು ಕೆಲಸ ಮಾಡಿದ್ದಾರೆ. ಇವರಲ್ಲಿ 10ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಸೋಂಕಿತರ ಚಿಕಿತ್ಸೆಗೂ ಬಿಬಿಎಂಪಿಯಿಂದ ನೆರವು ಸಿಕ್ಕಿಲ್ಲ’ ಎಂದು ಅವರು ದೂರಿದರು.

‘ಶಾಲೆಯೇ ಶುರುವಾಗಿಲ್ಲ– ಗೌರವಧನ ನೀಡುವುದು ಹೇಗೆ’

‘2019ರ ಜೂನ್‌ನಿಂದ 2020ರ ಏಪ್ರಿಲ್‌ವರೆಗೆ ಗುತ್ತಿಗೆ ಆಧಾರದಲ್ಲಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿತ್ತು. ಈ ಅವಧಿಯ ಗೌರವಧನ ಪಾವತಿಸಲಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಹೊಸ ವಿದ್ಯಾರ್ಥಿಗಳ ಸೇರ್ಪಡೆಗೆ ಹಾಗೂ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನಕ್ಕೆ ಕಾಯಂ ಶಿಕ್ಷಕರನ್ನು ಬಳಸಿಕೊಳ್ಳುತ್ತಿದ್ದೇವೆ. ಹೊರಗುತ್ತಿಗೆ ಶಿಕ್ಷಕರ/ ಉಪನ್ಯಾಸಕರ ಸೇವೆಯನ್ನು ಬಳಸಿಕೊಂಡಿಲ್ಲ. ಅವರಿಗೆ ಗೌರವಧನ ನೀಡುವುದು ಹೇಗೆ’ ಎಂದು ವಿಶೇಷ ಆಯುಕ್ತ (ಶಿಕ್ಷಣ) ಜೆ.ಮಂಜುನಾಥ್‌ ಪ್ರಶ್ನಿಸಿದರು.

‘ಹೊರಗುತ್ತಿಗೆ ಶಿಕ್ಷಕರಿಗೆ 2019ರ ಸೆಪ್ಟೆಂಬರ್‌ನಿಂದ 2020 ಏಪ್ರಿಲ್‌ವರೆಗೆ ಪ್ರತಿ ತಿಂಗಳಿಗೆ ₹6ಸಾವಿರದಂತೆ ಒಟ್ಟು ₹ 48 ಸಾವಿರವನ್ನು ಜೂನ್‌ನಲ್ಲಿ ಪಾವತಿಸಿದ್ದೇವೆ. ಶಾಲಾ–ಕಾಲೇಜುಗಳು ಆರಂಭವಾದ ಬಳಿಕ ಗುತ್ತಿಗೆ ಮುಂದುವರಿಸಲು ಮಾನವೀಯ ನೆಲೆಯಲ್ಲಿ ಕ್ರಮಕೈಗೊಳ್ಳಲಿದ್ದೇವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೂನ್‌ನಲ್ಲಿ ಬಿಬಿಎಂಪಿ ಬಿಡುಗಡೆ ಮಾಡಿದ್ದು ಏಪ್ರಿಲ್‌ ಒಳಗೇ ನ್ಯಾಯಯುತವಾಗಿ ನಮಗೆ ಪಾವತಿಯಾಗಬೇಕಿದ್ದ ಹಣವೇ ಹೊರತು ಗೌರವಧನವಲ್ಲ’ ಎಂದು ಲೋಕೇಶ್‌ ಹೇಳಿದರು.

ಅಂಕಿ ಅಂಶ

* ಬಿಬಿಎಂಪಿಯಲ್ಲಿ (ಶಿಶುವಿಹಾರದಿಂದ ಸ್ನಾತಕೋತ್ತರ ಕಾಲೇಜಿನವರೆಗೆ) ಮಂಜೂರಾದ ಶಿಕ್ಷಕರ/ಉಪನ್ಯಾಸಕರ ಒಟ್ಟು ಹುದ್ದೆಗಳು-902

* ಕಾರ್ಯನಿರ್ವಹಿಸುತ್ತಿರುವ ಕಾಯಂ ಶಿಕ್ಷಕರು/ಉಪನ್ಯಾಸಕರು-226

* ಖಾಲಿ ಇರುವ ಹುದ್ದೆಗಳು-680

* ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು/ ಉಪನ್ಯಾಸಕರು-621

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT