ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಷೆ ಉಲ್ಲಂಘನೆ: ತೆರವಿಗೆ ಕಾರ್ಯಪಡೆ

ಬಿಬಿಎಂಪಿ: ಅಕ್ರಮ ಕಟ್ಟಡಗಳಿಗೆ ಅಂಕುಶ; ಪ್ರತಿ ತಿಂಗಳೂ ವರದಿ; ಜವಾಬ್ದಾರಿ ಮರೆತರೆ ಅಮಾನತು
Published 2 ಆಗಸ್ಟ್ 2023, 0:20 IST
Last Updated 2 ಆಗಸ್ಟ್ 2023, 0:20 IST
ಅಕ್ಷರ ಗಾತ್ರ

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗಿರುವ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲು ಬಿಬಿಎಂಪಿ ಎಂಟೂ ವಲಯಗಳಲ್ಲಿ ಪ್ರತ್ಯೇಕ ಅಧಿಕಾರಿಗಳ ಕಾರ್ಯಪಡೆಯನ್ನು ರಚಿಸಲಾಗಿದೆ.

ವಲಯ ಆಯುಕ್ತರ ಅಧ್ಯಕ್ಷತೆ ಕಾರ್ಯಪಡೆಯನ್ನು ರಚಿಸಲಾಗಿದ್ದು, ಪ್ರತಿ ತಿಂಗಳೂ ಸಭೆ ನಡೆಸಲಿರುವ ಸದಸ್ಯರು, ತೆರವು ಕಾರ್ಯಾಚರಣೆ ನಡೆಸಲಿದ್ದಾರೆ. ಪ್ರತಿ ತಿಂಗಳೂ ಈ ಕಾರ್ಯಾಚರಣೆಯ ವರದಿಯನ್ನೂ ನೀಡಲಿದ್ದಾರೆ. ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಅಮಾನತುಗೊಳಿಸಿ, ಶಿಸ್ತು ಕ್ರಮಕೈಗೊಳ್ಳಲೂ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.

‘ಕಟ್ಟಡ ಮಂಜೂರಾತಿ ನಕ್ಷೆಗಳ ಉಲ್ಲಂಘನೆ, ಅನಧಿಕೃತ ಕಟ್ಟಡಗಳ ನಿರ್ಮಾಣ ತಡೆಯಲು, ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡ ಅಥವಾ ಅದರ ಭಾಗಗಳನ್ನು ತೆರವುಗೊಳಿಸಲು ಕಾರ್ಯಪಡೆ ರಚನೆ’ ಎಂಬ ಆದೇಶವನ್ನು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಜುಲೈ 31ರಂದು ಹೊರಡಿಸಿದ್ಧಾರೆ.

ಕೆಎಂಸಿ ಕಾಯ್ದೆ ಕಲಂ 321 ಹಾಗೂ ಬಿಬಿಎಂಪಿ ಕಾಯ್ದೆ 2020ರ ಕಲಂ 248 ಮತ್ತು 356ರಡಿ ಕಾನೂನು ಜರುಗಿಸಲು ಅಧಿಕಾರಿಗಳಿಗೆ ಜವಾಬ್ದಾರಿಯನ್ನೂ ನೀಡಲಾಗಿದೆ. ಇದರ ನಿರ್ವಹಣೆಯಲ್ಲಿ ವಿಫಲವಾಗುವ ಅಧಿಕಾರಗಳ ವಿರುದ್ಧ ಶಿಸ್ತುಕ್ರಮದ ಮಾರ್ಗಸೂಚಿಗಳನ್ನು ಆದೇಶದಲ್ಲಿ ವಿವರಿಸಲಾಗಿದೆ.

ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿಯಾದ ಮೇಲೆ, ಕಟ್ಟಡದ ‘ಪ್ಲಿಂಥ್‌ ಲೈನ್‌ ಮಾರ್ಕಿಂಗ್‌’ ಅನ್ನು ಕಡ್ಡಾಯವಾಗಿ ಸಂಬಂಧಿಸಿದ ಅಧಿಕಾರಿ ಪಡೆಯಬೇಕು. ನಂತರ, ನಕ್ಷೆಯಂತೆಯೇ ನಿರ್ಮಾಣವಾಗುತ್ತಿರುವ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ಮಾಡುವ ಜವಾಬ್ದಾರಿಯನ್ನೂ ನಿಗದಿ ಮಾಡಲಾಗಿದೆ.

ಕಾಲಮಿತಿ: ನಕ್ಷೆ ಉಲ್ಲಂಘಿಸಿದ ಕಟ್ಟಡ ತೆರವು ಕಾರ್ಯಾಚರಣೆಗೆ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಅಥವಾ ಜವಾಬ್ದಾರಿಯನ್ನು ಯಾರು ನಿರ್ವಹಿಸಬೇಕು ಎನ್ನುವ ‘ಫ್ಲೋಚಾರ್ಟ್‌’ ಕೂಡ ಆದೇಶದಲ್ಲಿದೆ. ಕಿರಿಯ ಎಂಜಿನಿಯರ್‌, ಸಹಾಯಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಕಾರ್ಯಪಾಲ ಎಂಜಿನಿಯರ್‌, ನಗರ ಯೋಜನೆ ಸಹಾಯಕ ನಿರ್ದೇಶಕರಿಗೆ ಜವಾಬ್ದಾರಿ ಹಾಗೂ ದಿನಗಳನ್ನು ನಿಗದಿ ಮಾಡಲಾಗಿದೆ. ಪ್ರಥಮ ನೋಟಿಸ್‌ ಜಾರಿಯಿಂದ ಹಿಡಿದು ತೆರವು ಕಾರ್ಯಾಚರಣೆ ಮುಗಿಸಿ, ವರದಿ ಸಲ್ಲಿಸಲು ಒಟ್ಟು 117 ದಿನಗಳನ್ನು ನಿಗದಿಪಡಿಸಲಾಗಿದೆ.

ಕಾರ್ಯಪಡೆ ಅಧ್ಯಕ್ಷ– ವಲಯ ಸದಸ್ಯರು– ಜಂಟಿ ಆಯುಕ್ತ ಮುಖ್ಯ ಎಂಜಿನಿಯರ್‌ ನಗರ ಯೋಜನೆ ಕೇಂದ್ರ ಕಚೇರಿ ಜಂಟಿ ನಿರ್ದೇಶಕ ಕಂದಾಯ ಅಧಿಕಾರಿಗಳು ವಿಭಾಗಗಳ ಕಾರ್ಯಪಾಲಕ ಎಂಜಿನಿಯರ್‌ಗಳು ನಗರ ಯೋಜನೆ ಸಹಾಯಕ ನಿರ್ದೇಶಕರು ಉಪ ವಿಭಾಗಗಳ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ವಲಯ ಉಪ ಕಾನೂನುಅಧಿಕಾರಿ. ಸಮಿತಿ ಸಂಚಾಲಕ– ವಲಯ ಜಂಟಿ ನಿರ್ದೇಶಕ. ಕಾರ್ಯಪಡೆ ಕಾರ್ಯ ಚಟುವಟಿಕೆ ಪ್ರತಿ ತಿಂಗಳು ಕಡ್ಡಾಯವಾಗಿ ಸಭೆ ನಡೆಸುವುದು ವಾರ್ಡ್‌ ಎಂಜಿನಿಯರ್‌ ಅನಧಿಕೃತ ಕಟ್ಟಡ ಮತ್ತು ನಕ್ಷೆ ಉಲ್ಲಂಘನೆಗಳ ಬಗ್ಗೆ ನೀಡಿದ ವರದಿ ಪರಿಶೀಲಿಸುವುದು. ನಾಗರಿಕರ ದೂರುಗಳ ಪರಾಮರ್ಶಿಸಿ ನೋಟಿಸ್‌ ನೀಡಲು ಕ್ರಮ ಕೈಗೊಳ್ಳಬೇಕು. ನೀಡಿರುವ ನೋಟಿಸ್‌ಗಳ ಸ್ಥಿತಿ ಬಗ್ಗೆ ಪರಿಶೀಲಿಸಬೇಕು. ಕಟ್ಟಡಗಳ ವಿರುದ್ಧ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವುದು. ನೋಟಿಸ್‌ ನೀಡಿದ ಕೂಡಲೇ ಕಟ್ಟಡ ನಿರ್ಮಾಣ ಸ್ಥಗಿತಗೊಳ್ಳುವಂತೆ ನೋಡಿಕೊಳ್ಳಬೇಕು. ನಕ್ಷೆ ಉಲ್ಲಂಘನೆ ಮಾಡಿ ಅಕ್ರಮವಾಗಿ ನಿರ್ಮಾಣ ಮಾಡಿರುವ ಭಾಗಗಳ ತೆರವಿಗೆ ಅಂದಾಜು ಪಟ್ಟಿ ಸಲ್ಲಿಸಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯಾಚರಣೆ ನಡೆಸಬೇಕು. ನ್ಯಾಯಾಲಯಗಳಿಂದ ತಡೆಯಾಜ್ಞೆ ಇದ್ದರೆ ಅದನ್ನು ಸೂಕ್ತ ದಾಖಲೆಗಳೊಂದಿಗೆ ತ್ವರಿತವಾಗಿ ತೆರವಾಗುವಂತೆ ಕ್ರಮ ಕೈಗೊಳ್ಳಬೇಕು. ನಗರ ಯೋಜನೆ ವಲಯ ಜಂಟಿ ನಿರ್ದೇಶಕರು ನಕ್ಷೆ ಉಲ್ಲಂಘನೆಗಳ ಪ್ರಕರಣ ಹಾಗೂ ಅದರ ತೆರವಿಗೆ ಕೈಗೊಂಡ ಕ್ರಮಗಳ ವರದಿಯನ್ನು ಪ್ರತಿ ತಿಂಗಳೂ ನಗರ ಯೋಜನೆ ಹೆಚ್ಚುವರಿ ನಿರ್ದೇಶಕರಿಗೆ ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT