ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBMP | ಕೆರೆ, ಕಾಲುವೆ ಒತ್ತುವರಿ ಉಳಿದರೆ ಶಿಕ್ಷೆ!

Published 5 ಸೆಪ್ಟೆಂಬರ್ 2023, 22:27 IST
Last Updated 5 ಸೆಪ್ಟೆಂಬರ್ 2023, 22:27 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆರೆಗಳು ಹಾಗೂ ರಾಜಕಾಲುವೆ ಒತ್ತುವರಿ ತೆರವಿನ ಜವಾಬ್ದಾರಿಯನ್ನು ತಹಶೀಲ್ದಾರ್‌ ಹಾಗೂ ವಲಯ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ವಹಿಸಲಾಗಿದೆ. ಅವರು ವಿಫಲರಾದರೆ ಶಿಸ್ತುಕ್ರಮ ಜರುಗಿಸಲು ಸರ್ಕಾರ ಸೂಚಿಸಿದೆ.

ಹೈಕೋರ್ಟ್‌ನಿಂದ ಸಾಕಷ್ಟು ಬಾರಿ ಆಕ್ಷೇಪಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ ಇದೀಗ ಕೆರೆಗಳು ಹಾಗೂ ರಾಜಕಾಲುವೆ ಒತ್ತುವರಿ ತೆರವು ಹಾಗೂ ರಕ್ಷಣೆ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ವಹಿಸಿದೆ.

ಕೆರೆಗಳು ಮತ್ತು ಪ್ರಾಥಮಿಕ– ದ್ವಿತೀಯ ರಾಜಕಾಲುವೆ ಸಂರಕ್ಷಣೆ, ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅವರ ಜವಾಬ್ದಾರಿಗಳನ್ನು ನಿಗದಿಪಡಿಸಿ ಆಗಸ್ಟ್‌ 28ರಂದು ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಸ್ತಿತ್ವದಲ್ಲಿ ಇಲ್ಲದ 19 ಕೆರೆಗಳು ಸೇರಿದಂತೆ ಒಟ್ಟು 197 ಕೆರೆಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ಕೆಟಿಸಿಡಿಎ) ಕಾಯ್ದೆ ಪ್ರಕಾರ, ಬಿಬಿಎಂಪಿ ಕೆರೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌, ‘ಸಕ್ಷಮ ಪ್ರಾಧಿಕಾರದ’ ಅಧಿಕಾರಿಗೆ ದೂರು ನೀಡುವ ಜವಾಬ್ದಾರಿ ಹೊಂದಿದ್ದಾರೆ. ಈ ಸಕ್ಷಮ ಅಧಿಕಾರಿ ಕೆರೆ ಒತ್ತುವರಿಯನ್ನು ತೆರವುಗೊಳಿಸಿದ ನಂತರ ಕೆರೆ ನಿರ್ವಹಣೆ, ಸಂರಕ್ಷಣೆಗೆ ಅದನ್ನು ಕೆರೆ ವಿಭಾಗದ ಕಾರ್ಯಪಾಲಕರಿಗೆ ಹಸ್ತಾಂತರಿಸಬೇಕು. ಈ ಮಧ್ಯೆ, ತಹಶೀಲ್ದಾರ್ ಅವರು ಸರ್ವೆ ಹಾಗೂ ಒತ್ತುವರಿ ತೆರವಿಗೆ ಆದೇಶ ನೀಡಬೇಕು.

ಒಂದು ಬಾರಿ ಒತ್ತುವರಿ ತೆರವಾದ ಮೇಲೆ ಅದನ್ನು ರಕ್ಷಿಸಿಕೊಳ್ಳದೆ ಹೋದರೆ ಕೆರೆ ವಿಭಾಗದ ಕಾರ್ಯಪಾಲಕರದ್ದು ತೀವ್ರತರವಾದ ಕರ್ತವ್ಯ ಲೋಪ ಎಂದು ಪರಿಗಣಿಸಲಾಗುತ್ತದೆ. ಒತ್ತುವರಿ ತೆರವು ಪ್ರಕ್ರಿಯೆಯಲ್ಲಿ ಬಿಎಂಟಿಎಫ್‌ ಅಗತ್ಯ ಭದ್ರತೆ ನೀಡಬೇಕು. ಜೊತೆಗೆ ಆಯಾ ವ್ಯಾಪ್ತಿಯ ಪೊಲೀಸ್‌ ಠಾಣಾಧಿಕಾರಿಯೂ ನೆರವು ನೀಡಬೇಕು. ನಿಗದಿಪಡಿಸಿರುವ ಜವಾಬ್ದಾರಿಗಳನ್ನು ಯಾವ ಅಧಿಕಾರಿ ನಿರ್ವಹಿಸುವುದಿಲ್ಲವೇ ಅದನ್ನು ‘ತೀವ್ರತರವಾದ ಕರ್ತವ್ಯ ಲೋಪ’ ಎಂದು ಪರಿಗಣಿಸಿ ಬಿಬಿಎಂಪಿ ಮುಖ್ಯ ಆಯುಕ್ತರು ಶಿಸ್ತು ಕ್ರಮ ಗೊಳ್ಳಬೇಕು ಎಂದು ಆದೇಶಿಸಲಾಗಿದೆ.

10 ಕೆರೆಗಳ ಒತ್ತುವರಿ ತೆರವು ಪ್ರಾರಂಭ

ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಆರಂಭಿಸಿದೆ. 10 ಕೆರೆಗಳ ಒತ್ತುವರಿ ತೆರವಿಗೆ ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್‌ ಅವರು ಸಂಬಂಧಿಸಿದ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಬಾಗ್ಮನೆ ಟೆಕ್‌ ಪಾರ್ಕ್‌, ಪೈನ್‌ ವುಡ್‌ ವಿಲ್ಲಾ, ಗ್ರಾಂಟ್‌ ಥಾಂಟನ್‌, ಕಾಂಜ್ನಿಜಂಟ್‌ ಟೆಕ್ನಾಲಜಿ, ಎಲ್‌ಆರ್‌ಡಿಇಯಿಂದ ಬೈರಸಂದ್ರ ಕೆಳಗಿನ ಕೆರೆಯಲ್ಲಿ ಒತ್ತುವರಿಯಾಗಿದೆ. ಗಂಗಮ್ಮ ದೇವಸ್ಥಾನದಿಂದ ಕೆಂಪಾಬುಧಿ ಕೆರೆ ಒತ್ತುವರಿಯಾಗಿದೆ ಎಂದು ಬಿಬಿಎಂಪಿ ವರದಿ ತಿಳಿಸಿದ್ದು, ಎಲ್ಲ ರೀತಿಯ ಒತ್ತುವರಿಗಳ ಸರ್ವೆ ಕಾರ್ಯ ಇದೀಗ ಮತ್ತೆ ನಡೆಯಲಿದೆ.

ಕೆರೆ: ಒತ್ತುವರಿ ತೆರವಿಗೆ 70 ದಿನ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 159 ಕೆರೆಗಳಲ್ಲಿರುವ ಒತ್ತುವರಿ ಪ್ರಕ್ರಿಯೆಯನ್ನು ವಾರಕ್ಕೆ 10 ಕೆರೆಗಳಲ್ಲಿ ತೆರವು ಕಾರ್ಯಾಚರಣೆಯ ಪ್ರಕ್ರಿಯೆ ನಡೆಯಲಿದೆ. ಒಟ್ಟು 16 ವಾರ ತಲಾ 10 ಕೆರೆಗಳ ಒತ್ತುವರಿ ಪ್ರಕ್ರಿಯೆ ಆರಂಭವಾಗಲಿದ್ದು, ಕೆರೆಗಳ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮೊದಲ ಮೂರು ದಿನದಲ್ಲಿ ಒತ್ತುವರಿ ವರದಿ ತಯಾರಿಸಿ, ನಂತರ ವಲಯ ಕಾರ್ಯಪಾಲಕ ಎಂಜಿನಿಯರ್‌  ಸಲ್ಲಿಸಬೇಕು. ಅವರು ಒತ್ತುವರಿಯನ್ನು ಗುರುತಿಸಲು  ತಹಶೀಲ್ದಾರ್‌ ಅವರಿಗೆ ಮೂರು ದಿನದೊಳಗೆ ಮನವಿ ಸಲ್ಲಿಬೇಕು.

ತಹಶೀಲ್ದಾರ್‌ ಅವರು ಸರ್ವೆ ನಡೆಸಿ ಒತ್ತುವರಿಯನ್ನು ಏಳು ದಿನದಲ್ಲಿ ಗುರುತಿಸಬೇಕು. 10 ದಿನದಲ್ಲಿ ಒತ್ತುವರಿ ತೆರವಿಗೆ ಆದೇಶ ಹೊರಡಿಸಬೇಕು. ಕೆಟಿಸಿಡಿಎ ಕಾಯ್ದೆ ಪ್ರಕಾರ 30 ದಿನದ ಅವಧಿ ನೀಡಬೇಕು. ನಂತರದ 10 ದಿನದಲ್ಲಿ ಒತ್ತುವರಿ ತೆರವುಗೊಳಿಸಬೇಕು. ಒಟ್ಟಾರೆ 70 ದಿನದೊಳಗೆ ತೆರವು ಕಾರ್ಯಾಚರಣೆ ಪೂರ್ಣಗೊಳ್ಳಲಿದೆ ಎಂದು ಹೈಕೋರ್ಟ್‌ಗೆ ಬಿಬಿಎಂಪಿ ಕ್ರಿಯಾಯೋಜನೆ ಸಲ್ಲಿಸಿದೆ.

850 ಕಿ.ಮೀ. ರಾಜಕಾಲುವೆ ಸಂರಕ್ಷಣೆ

ರಾಜಕಾಲುವೆ ಒತ್ತುವರಿ ಪ್ರಕರಣಗಳಲ್ಲಿ, ಬೃಹತ್‌ ನೀರುಗಾಲುವೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗಳನ್ನು ‘ದೂರು ನೀಡುವ ಪ್ರಾಧಿಕಾರಿ’ಯಾಗಿದ್ದು, ತಹಶೀಲ್ದಾರ್‌ ‘ಸಕ್ಷಮ ಪ‍್ರಾಧಿಕಾರಿ’ಯಾಗಿದ್ದಾರೆ. ರಾಜಕಾಲುವೆಗಳನ್ನು ಭೌತಿಕವಾಗಿ ತೆರವುಗೊಳಿಸುವ ಜವಾಬ್ದಾರಿಯನ್ನು ಸಂಬಂಧಿಸಿದ ವಲಯ ಕಾರ್ಯಪಾಲಕ ಎಂಜಿನಿಯರ್‌ಗೆ ನೀಡಲಾಗಿದ್ದು, ಕಂದಾಯ ಇಲಾಖೆ ಸರ್ವೆಯರ್‌ ಹಾಗೂ ತಹಶೀಲ್ದಾರ್ ತೆರವು ಸಮಯದಲ್ಲಿ ಹಾಜರಿರಬೇಕು ಎಂದು ಸೂಚಿಸಲಾಗಿದೆ. ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ತಹಶೀಲ್ದಾರ್‌ ಅವರೇ ದೂರು ದಾಖಲಿಸಬೇಕು. ಅದರಲ್ಲಿ ವಿಫಲರಾದರೆ ಅವರ ಮೇಲೆ ಶಿಸ್ತುಕ್ರಮ. ಒತ್ತುವರಿ ತೆರವಾದ ಮೇಲೆ ಬೃಹತ್‌ ನೀರುಗಾಲುವೆ ವಿಭಾಗದ ಕಾರ್ಯಪಾಲಕರು ಅದನ್ನು ರಕ್ಷಿಸಿಕೊಂಡು, ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು. 850 ಕಿ.ಮೀ ಪ್ರಾಥಮಿಕ ಮತ್ತು ದ್ವಿತೀಯ ರಾಜಕಾಲುವೆಗಳ ಪ್ರತಿ ಹಂತದ ನಿರ್ವಹಣೆಯನ್ನು ಜವಾಬ್ದಾರಿ ವಹಿಸಿದ ಅಧಿಕಾರಿಗಳು ನಿರ್ವಹಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಲಾಗಿದೆ. 

ಸರ್ಕಾರಿ ಒತ್ತುವರಿಗೆ ಪರ್ಯಾಯ ಭೂಮಿ!

‘ಬಿಡಿಎ ಸೇರಿದಂತೆ ಸರ್ಕಾರದ ಯಾವುದೇ ಇಲಾಖೆ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತೆರವು ಮಾಡಬೇಕು. ಸಾಧ್ಯವಾಗದಿದ್ದರೆ, ಅದಕ್ಕೆ ಪರ್ಯಾಯ ಜಾಗ ನೀಡಬೇಕು ಅಥವಾ ಪ್ರದೇಶದ ಮೌಲ್ಯವನ್ನು ನಗದಾಗಿ ನೀಡಬೇಕು’ ಎಂದು ಬಿಬಿಎಂಪಿ ಹೈಕೋರ್ಟ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಿದೆ’ ಎಂದು ಅಧಿಕಾರಿಗಳು ಹೇಳಿದರು.

165 ದಿನದಲ್ಲಿ ಒತ್ತುವರಿ ತೆರವು: ಪ್ರಹ್ಲಾದ್‌

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಾಜಕಾಲುವೆ ಒತ್ತುವರಿ ತೆರವು ಇನ್ನು 165 ದಿನದಲ್ಲಿ ಪೂರ್ಣಗೊಳ್ಳಲಿದೆ. ಇನ್ನು 10 ದಿನದಲ್ಲಿ ಪಾಲಿಕೆ ಎಂಜಿನಿಯರ್‌ಗಳು ಒತ್ತುವರಿಯನ್ನು ಗುರುತಿಸಿ ವರದಿ ನೀಡಬೇಕು. ನಂತರ, ತಹಶೀಲ್ದಾರ್‌ ಅವರಿಗೆ ವರದಿ ನೀಡಲಾಗುತ್ತದೆ. 5 ದಿನದಲ್ಲಿ ಅದನ್ನು ಎಡಿಎಲ್‌ಆರ್‌ ಅವರಿಗೆ ಸರ್ವೆಗೆ ವಹಿಸಲಾಗುತ್ತದೆ. 60 ದಿನದಲ್ಲಿ ಎಲ್ಲ ಒತ್ತುವರಿಯ ನಕ್ಷೆ ರಚಿಸಲಾಗುತ್ತದೆ. ಅದನ್ನು ತಹಶೀಲ್ದಾರ್‌ ಅವರಿಗೆ ನೀಡಿ, ಮುಂದಿನ 40 ದಿನಗಳಲ್ಲಿ ನೋಟಿಸ್‌, ಸ್ಕೆಚ್‌, ವಿವರಣೆ, ಅಂತಿಮ ಆದೇಶದ ಪ್ರಕ್ರಿಯೆ ನಡೆಯುತ್ತವೆ. ಆಮೇಲೆ 30  ದಿನ ಮೇಲ್ಮನವಿಗೆ ಅವಕಾಶ. ಮುಂದಿನ 10 ದಿನಗಳಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತದೆ.  10 ದಿನದಲ್ಲಿ ಎಲ್ಲವನ್ನೂ ಸಂರಕ್ಷಿಸಿ ಹಸ್ತಾಂತರಿಸಲಾಗುತ್ತದೆ’ ಎಂದು ಬಿಬಿಎಂಪಿ ಬೃಹತ್‌ ನೀರುಗಾಲುವೆಗಳ ಮುಖ್ಯ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT