ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಆಕ್ರೋಶ, ಕಣ್ಣೀರು ನಡುವೆ ಆಯ್ಕೆ ಕಸರತ್ತು

12 ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆ * ಆರ್ಥಿಕ ಸ್ಥಾಯಿ ಸಮಿತಿಗೆ ಎಲ್.ಶ್ರೀನಿವಾಸ್ ಅಧ್ಯಕ್ಷ?
Last Updated 18 ಜನವರಿ 2020, 22:09 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಸದಸ್ಯರ ಅಸಮಾಧಾನ, ಮಹಿಳೆಯರ ಕಣ್ಣೀರಿನ ನಡುವೆ ಬಿಬಿಎಂಪಿ 12ಸ್ಥಾಯಿ ಸಮಿತಿಗಳಿಗೆ 131 ಸದಸ್ಯರು ಶನಿವಾರ ಅವಿರೋಧ ಆಯ್ಕೆಯಾದರು. ಬಹುಬೇಡಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಎಲ್‌. ಶ್ರೀನಿವಾಸ್ ಆಯ್ಕೆ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ.

ಮೂಲ ಬಿಜೆಪಿ ಸದಸ್ಯರ ಹೊರತಾಗಿಯೂ ಇತ್ತೀಚೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಶಾಸಕರ ಬೆಂಬಲಿಗ ಸದಸ್ಯರಿಗೂ ಅಧ್ಯಕ್ಷ ಸ್ಥಾನದ ಭಾಗ್ಯ ಕಲ್ಪಿಸಲು ನಾಯಕರು ಸಿದ್ಧತೆ ನಡೆಸಿದ್ದಾರೆ.

ಅಭ್ಯರ್ಥಿಗಳ ಆಯ್ಕೆ ಸಂಬಂಧ ಶುಕ್ರವಾರ ತಡರಾತ್ರಿತನಕವೂ ಸಭೆ ನಡೆದಿತ್ತು. ಶನಿವಾರ ಬೆಳಿಗ್ಗೆ ನಾಮಪತ್ರ ಸಲ್ಲಿಕೆಯ ಅಂತಿಮ ಕ್ಷಣದತನಕ ಆಕಾಂಕ್ಷಿಗಳನ್ನು ಸಮಾಧಾನಪಡಿಸಲು ಸಚಿವ ಆರ್. ಅಶೋಕ, ಶಾಸಕರಾದ ಅರವಿಂದ ಲಿಂಬಾವಳಿ, ಸತೀಶ್‌ರೆಡ್ಡಿ, ರವಿಸುಬ್ರಹ್ಮಣ್ಯ, ಎಸ್.ರಘು, ಎಂ.ಕೃಷ್ಣಪ್ಪ ಕಸರತ್ತು ನಡೆಸಿದರು.

ಆರ್‌. ಆಶೋಕ ಅವರ ಜತೆಗೆ ಕಾಂಗ್ರೆಸ್‌ ಶಾಸಕ ರಾಮಲಿಂಗಾರೆಡ್ಡಿ ಕೂಡ ಸಮಾಲೋಚನೆ ನಡೆಸಿ ಕಾಂಗ್ರೆಸ್‌ ಸದಸ್ಯರಲ್ಲಿ ಯಾರಿಗೆಲ್ಲ ಸದಸ್ಯ ಸ್ಥಾನ ನೀಡಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನಕ್ಕೆ ಬಂದರು. ಸೌಮ್ಯಾ ರೆಡ್ಡಿ, ವಿಧಾನ ಪರಿಷತ್ತಿನ ಸದಸ್ಯರಾದ ಕಾಂಗ್ರೆಸ್‌ನ ನಾರಾಯಣಸ್ವಾಮಿ ಮತ್ತು ಜಯಮಾಲ ಹಾಜರಿದ್ದರು. ಅಶೋಕ ಅವರು ವಿಧಾನ ಪರಿಷತ್‌ ಸದಸ್ಯ ಜೆಡಿಎಸ್‌ನ ಟಿ.ಎ.ಶರವಣ ಅವರ ಜೊತೆ ಸಮಾಲೋಚನೆ ನಡೆಸಿ ಸಮಿತಿಗಳಲ್ಲಿ ಸ್ಥಾನ ಕಲ್ಪಿಸಬೇಕಾದ ಜೆಡಿಎಸ್‌ ಸದಸ್ಯರ ಹೆಸರುಗಳನ್ನು ಅಂತಿಮಗೊಳಿಸಿದರು.

ಇಷ್ಟೆಲ್ಲಾ ಕಸರತ್ತುಗಳ ನಡುವೆಯೂ ಕೆಲವು ಸಮಿತಿಗಳಿಗೆ ಅಗತ್ಯಕ್ಕೂ ಹೆಚ್ಚು ನಾಮಪತ್ರ ಸಲ್ಲಿಕೆಯಾದವು. ಕಣದಲ್ಲಿ ಉಳಿದಿದ್ದ ಕೆಲವರನ್ನು ಚುನಾವಣಾ ಸಂದರ್ಭದಲ್ಲಿ ನಾಮ ಪತ್ರ ಹಿಂಪಡೆಯುವಂತೆ ಮನವೊಲಿಸಲಾಯಿತು.

‘ಅಂತಿಮವಾಗಿ ಎಲ್ಲಾ ಸಮಿತಿಗಳಿಗೂ ಆಡಳಿತ ಪಕ್ಷ ಬಿಜೆಪಿಯಿಂದ 6, ಕಾಂಗ್ರೆಸ್‌ನಿಂದ 4 ಮತ್ತು ಜೆಡಿಎಸ್‌ನ ಒಬ್ಬರಿಗೆ ಅವಕಾಶ ಕಲ್ಪಿಸಲಾಯಿತು. ನಾಲ್ವರು ಪಕ್ಷೇತರರಲ್ಲಿ ಒಬ್ಬರಿಗೆ ಸ್ಥಾಯಿ ಸಮಿತಿ ಸದಸ್ಯ ಸ್ಥಾನ ಕಲ್ಪಿಸಲಾಗಿದೆ’ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ತಿಳಿಸಿದರು.

‘ನಾಲ್ಕು ವರ್ಷಗಳಿಂದ ಬಿಜೆಪಿ ಆಡಳಿತದಲ್ಲಿ ಇರಲಿಲ್ಲ. ಕೊನೆಯ ವರ್ಷ ಅವಕಾಶ ಸಿಕ್ಕಿದೆ. ಹೀಗಾಗಿ, ಸದಸ್ಯರಿಂದ ಒತ್ತಡ ಹೆಚ್ಚಿದೆ. ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಮುಂದಿನ ವಾರ ಮೇಯರ್ ಸಮ್ಮುಖದಲ್ಲಿ ನಡೆಯಲಿದೆ’ ಎಂದು ಹೇಳಿದರು.

‘ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಮಾತ್ರ 10 ಸದಸ್ಯರು ಆಯ್ಕೆಯಾಗಿದ್ದು, ಸದಸ್ಯ ಸ್ಥಾನಕ್ಕೆ ಮತ್ತೆ ಚುನಾವಣೆ ನಡೆಯಲಿದೆ’ ಎಂದು ತಿಳಿಸಿದರು.

ಸದಸ್ಯರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದ ಪ್ರಾದೇಶಿಕ ಆಯುಕ್ತ ಎನ್.ವಿ. ಪ್ರಸಾದ್, ‘ಸ್ಥಾಯಿ ಸಮಿತಿ ಚುನಾವಣೆ ಸಂಬಂಧದ ರಿಟ್ ಅರ್ಜಿ ಹೈಕೋರ್ಟ್‌ನಲ್ಲಿದೆ. ಚುನಾವಣೆಯ ಫಲಿತಾಂಶ ಕೋರ್ಟ್‌ನ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದು ತಿಳಿಸಿದರು.

ನಾಮಪತ್ರ ವಾಪಸ್ ತೆಗೆಸಲು ಹರಸಾಹಸ
ವಾರ್ಡ್‌ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಸದಸ್ಯರಾಗಲು ಭಾರಿ ಪೈಪೋಟಿ ಇತ್ತು. ಈ ಸಮಿತಿಗೆ 15 ಮಂದಿ ನಾಮಪತ್ರ ಸಲ್ಲಿಸಿದ್ದರು.

ಬಿ.ಎಂ.ಶೋಭಾ ಮುನಿರಾಜು, ಲೀಲಾ ಶಿವಕುಮಾರ್, ಸುಜಾತಾ ನಾಮಪತ್ರ ವಾಪಸ್ ಪಡೆದರು. ಆದರೂ 12 ಮಂದಿ ಕಣದಲ್ಲಿ ಉಳಿ
ದರು. ಆಗ ಒಬ್ಬರ ನಾಮಪತ್ರ ವಾಪಸ್ ತೆಗೆಸುವ ಅನಿವಾರ್ಯ ಇತ್ತು. ಅಟ್ಟೂರು ವಾರ್ಡ್‌ನ ನೇತ್ರಾ ಪಲ್ಲವಿ ಅವರ ಮನವೊಲಿಸಲು ಶಾಸಕ ಸತೀಶ್‌ರೆಡ್ಡಿ, ವಿಧಾನ ಪರಿಷತ್‌ ಸದಸ್ಯ ನಾರಾಯಣಸ್ವಾಮಿ, ಮೇಯರ್ ಗೌತಮ್‌ಕುಮಾರ್, ಆಡಳಿತ ‍ಪಕ್ಷದ ನಾಯಕ ಮುನಿಂದ್ರ ಕುಮಾರ್, ಸದಸ್ಯರಾದ ಉಮೇಶ್‌ ಶೆಟ್ಟಿ ಸೇರಿದಂತೆ ಹಲವರು ಪ್ರಯತ್ನಿಸಿದರು.

‘ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ’ ಎಂದು ಪಟ್ಟು ಹಿಡಿದಿದ್ದ ನೇತ್ರಾ ಪಲ್ಲವಿ, ನಾಮಪತ್ರ ವಾಪಸ್ ಪಡೆಯುವ ಅರ್ಜಿಯನ್ನು ತಂದುಕೊಟ್ಟರೂ ಅದನ್ನು ತಳ್ಳಿ ಮುಖ ಸಿಂಡರಿಸಿಕೊಂಡಿದ್ದರು.

ಬಳಿಕ ಸತೀಶ್‌ರೆಡ್ಡಿ, ‘ಪಕ್ಷದ ತೀರ್ಮಾನಕ್ಕೆ ಒಪ್ಪಬೇಕು, ಮುಂದೆ ಅವಕಾಶಗಳು ಇವೆ’ ಎಂದು ಕಟ್ಟುನಿಟ್ಟಾಗಿ ಹೇಳಿದರು. ಕಣ್ಣಲ್ಲಿ ನೀರು ತುಂಬಿಕೊಂಡು ಬಂದ ನೇತ್ರಾ ಪಲ್ಲವಿ ಕೊನೆಗೂ ನಾಮಪತ್ರ ವಾಪಸ್ ಪಡೆದರು.

ಮಹಾಲಕ್ಷ್ಮೀ ಕಣ್ಣೀರು
ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ವಂಚಿತರಾದ ಹೊಸಹಳ್ಳಿ ವಾರ್ಡ್‌ ಸದಸ್ಯೆ ಮಹಾಲಕ್ಷ್ಮೀ ಕಣ್ಣೀರು ಹಾಕಿದರು.

‘ನಾನು ಆಕಾಂಕ್ಷಿಯಾಗಿರಲಿಲ್ಲ. ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಹಾಕಿದ್ದಾಗ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿ ನಾಯಕರೇ ಸಮಾಧಾನ ಪಡಿಸಿದ್ದರು. ಈಗ ಅವಕಾಶ ನೀಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪಕ್ಷದ ತೀರ್ಮಾನದ ಬಗ್ಗೆ ಹೆಚ್ಚೇನು ಮಾತನಾಡುವುದಿಲ್ಲ’ ಎಂದು ಹೇಳಿದರು.

‘ಆ ಕರ್ಣನಂತೆ ನೀ ದಾನಿಯಾದೆ...’‌
ಸ್ಥಾಯಿ ಸಮಿತಿಯಲ್ಲಿ ಸ್ಥಾನ ವಂಚಿತ ಸದಸ್ಯರನ್ನು ಉದ್ದೇಶಿಸಿ ‘ಆ ಕರ್ಣನಂತೆ ನೀ ದಾನಿಯಾದೆ’ ಎಂಬ ಹಾಡನ್ನು ಕಂದಾಯ ಸಚಿವ ಆರ್. ಅಶೋಕ ವ್ಯಂಗ್ಯವಾಗಿ ಹಾಡಿದ್ದು ಸದಸ್ಯರ ಆಕ್ರೋಶಕ್ಕೆ ಗುರಿಯಾಯಿತು.

ಚುನಾವಣೆಗೂ ಮುನ್ನ ಆಡಳಿತ ಪಕ್ಷದ ನಾಯಕರ ಕೊಠಡಿಯಲ್ಲಿ ಆಕಾಂಕ್ಷಿಗಳನ್ನು ಆರ್. ಅಶೋಕ ಸಮಾಧಾನ ಮಾಡುತ್ತಿದ್ದರು. ಈ ವೇಳೆ ಎಚ್‌ಎಸ್‌ಆರ್‌ ಬಡಾವಣೆ ವಾರ್ಡ್‌ನ ಸದಸ್ಯ ಗುರುಮೂರ್ತಿ ರೆಡ್ಡಿ ಪ್ರಶ್ನೆ ಮಾಡಿದಾಗ, ‘ವಿಷ್ಣುವರ್ಧನ್ ಸಿನಿಮಾ ಹಾಡು ನಿನಗೆ ಸೂಟ್ ಆಗುತ್ತೆ. ಯಾವುದು ಆ ಹಾಡು ಎಂದು ಅತ್ತಿಗುಪ್ಪೆ ವಾರ್ಡ್‌ ಸದಸ್ಯ ಎಸ್. ರಾಜು ಅವರನ್ನು ಪ್ರಶ್ನಿಸಿದರು. ‘ಆ ಕರ್ಣನಂತೆ ನೀ ದಾನಿಯಾದೆ, ಇನ್ನೊಂದು ಜೀವಕೆ ಆಧಾರವಾದೆ... ಎಂದು ಹಾಡಿದರು. ಅಶೋಕ ಹಾಗೂ ಇನ್ನೂ ನಾಲ್ಕೈದು ಮಂದಿ ಅದಕ್ಕೆ ಧ್ವನಿಗೂಡಿಸಿದರು. ಇದರಿಂದ ಕುಪಿತಗೊಂಡ ಗುರುಮೂರ್ತಿ, ‘ಸಾರ್ ನಮಗೂ ಕಾಲ ಬರುತ್ತೆ. ಮುಂದೊಂದು ದಿನ ಈ ಹಾಡನ್ನು ನಿಮಗಾಗಿ ನಾನೂ ಹಾಡ್ತೀನಿ. ನೀವು ಕನ್ನಡದಲ್ಲಿ ಹಾಡಿದ್ದೀರಿ, ನಾನು ತೆಲುಗಿನಲ್ಲಿ ಹಾಡ್ತೀನಿ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT