ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿ ಕಡಿತ:10 ವರ್ಷಗಳಲ್ಲಿ 1.92 ಲಕ್ಷ ಮಂದಿಗೆ ಚಿಕಿತ್ಸೆ

Last Updated 30 ಆಗಸ್ಟ್ 2018, 19:55 IST
ಅಕ್ಷರ ಗಾತ್ರ

ಬೆಂಗಳೂರು: ನಾಯಿ ಕಡಿತಕ್ಕೆ ಸಂಬಂಧಿಸಿದಂತೆ 10 ವರ್ಷಗಳಲ್ಲಿ ಒಟ್ಟು 1.92 ಲಕ್ಷ ಮಂದಿ ನಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

2010–11ನೇ ಸಾಲಿನಲ್ಲಿ 24ಸಾವಿರಕ್ಕೂ ಅಧಿಕ ಮಂದಿ ಈ ಚುಚ್ಚುಮದ್ದು ಪಡೆದಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಸಂಖ್ಯೆ ಇಳಿದಿತ್ತು.

‘ಸಾಮಾನ್ಯವಾಗಿ ನಾಯಿ ಕಚ್ಚಿದ ಪ್ರಕರಣಗಳಲ್ಲೇ ರೇಬಿಸ್‌ ನಿರೋಧಕ ಚುಚ್ಚುಮದ್ದು ನೀಡಲಾಗುತ್ತದೆ. ಕೆಲವರು ನಾಯಿಯ ಜೊಲ್ಲು ತಾಗಿದರೂ ಮುನ್ನೆಚ್ಚರಿಕೆಗಾಗಿ ಚುಚ್ಚುಮದ್ದು ಪಡೆಯುತ್ತಾರೆ. ನಗರದ ಹೊರಗಿನಿಂದಲೂ ಅನೇಕರು ಈ ಚುಚ್ಚುಮದ್ದು ಪಡೆಯಲು ನಗರಕ್ಕೆ ಬರುತ್ತಾರೆ’ ಎಂದು ಬಿಬಿಎಂಪಿ ಪಶುಸಂಗೋಪನಾ ವಿಭಾಗದ ಉಪನಿರ್ದೇಶಕ ಶ್ರೀರಾಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಿ ಮತ್ತೆ ಅದೇ ಸ್ಥಳಕ್ಕೆ ತಂದು ಬಿಡುವ ವ್ಯವಸ್ಥೆ 2016ರವರೆಗೆ ಚಾಲ್ತಿಯಲ್ಲಿತ್ತು. ಶಸ್ತ್ರಚಿಕಿತ್ಸೆ ನಡೆಸಿದ ನಾಯಿಗಳಿಗೆ 72 ಗಂಟೆಗಳ ಕಾಲ ಆರೈಕೆ ಒದಗಿಸುವುದನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಕಡ್ಡಾಯಗೊಳಿಸಿತ್ತು. ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆಗೂ ನಗರದಲ್ಲಿ ಮೂಲಸೌಕರ್ಯ ಕೊರತೆ ಇತ್ತು. ನಾಯಿಗಳಿಗೆ ಆರೈಕೆ ನೀಡಲು ಬೇಕಾದ ಗೂಡುಗಳೂ ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿರಲಿಲ್ಲ. ಈ ಕೊರತೆಯನ್ನು ನೀಗಿಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ.

ಪ್ರಸ್ತುತ ಆರು ಕಡೆ ಬಿಬಿಎಂಪಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸಾ ಕೇಂದ್ರಗಳನ್ನು ನಡೆಸುತ್ತಿದೆ. ಬೊಮ್ಮನಹಳ್ಳಿ ಮತ್ತು ಪೂರ್ವವಲಯದ ನಾಯಿಗಳಿಗೆ ಕೋರಮಂಗಲದ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸಾ ಕೇಂದ್ರದಲ್ಲಿ, ಪಶ್ಚಿಮ ಮತ್ತು ದಕ್ಷಿಣ ವಲಯಗಳ ನಾಯಿಗಳಿಗೆ ಮೈಸೂರು ರಸ್ತೆಯ ಪಶು ಆಸ್ಪತ್ರೆಯಲ್ಲಿ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಲಾಗುತ್ತಿದೆ. ಯಲಹಂಕ ವಲಯದ ಮೇಡಿ ಅಗ್ರಹಾರ, ದಾಸರಹಳ್ಳಿ ವಲಯದ ಶೆಟ್ಟಿಹಳ್ಳಿಯಲ್ಲಿ, ಮಹದೇವಪುರ ವಲಯದ ಸಾದರಮಂಗಲದಲ್ಲಿ, ಆರ್‌ಆರ್‌ನಗರ ವಲಯದ ತಾವರೆಕೆರೆಯಲ್ಲಿ ಸಂತಾನಹರಣ ಚಿಕಿತ್ಸಾ ಕೇಂದ್ರಗಳಿವೆ.

‘ಬಿಬಿಎಂಪಿ ಪ್ರತಿ ವಲಯಗಳಲ್ಲೂ ತಿಂಗಳಿಗೆ ಸರಾಸರಿ 600 ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಇದರ ಗುತ್ತಿಗೆ ವಹಿಸಿಕೊಂಡವರು ನಿಗದಿತ ಗುರಿ ತಲುಪಲು ಸಾಧ್ಯವಾಗದಿದ್ದರೆ ದಂಡ ವಿಧಿಸುತ್ತೇವೆ. ಪ್ರತಿ ನಾಯಿಯ ಶಸ್ತ್ರಚಿಕಿತ್ಸೆಗೆ ತಲಾ ₹ 900ರಿಂದ ₹ 1ಸಾವಿರ ಹಣವನ್ನು ನೀಡಲಾಗುತ್ತದೆ’ ಎಂದು ಬಿಬಿಎಂಪಿ ಜಂಟಿ ಆಯುಕ್ತ (ಪಶುಸಂಗೋಪನೆ) ಜಿ. ಆನಂದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪರಿಹಾರ ಎಷ್ಟು?: ನಾಯಿ ಕಡಿತ ಪ್ರಕರಣಗಳನ್ನು ನಿರ್ವಹಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹೈಕೋರ್ಟ್‌ ಸೂಚನೆಯಂತೆ ಬಿಬಿಎಂಪಿ ಮಾರ್ಗಸೂಚಿ ಸಿದ್ಧಪಡಿಸಿದೆ. ನಾಯಿ ಕಡಿತದಿಂದ ತರಚಿದ ಗಾಯವಾದರೆ ಪ್ರತಿ ಗಾಯಕ್ಕೆ ₹ 2,000, ಆಳವಾದ ಗಾಯವಾದರೆ ಪ್ರತಿ ಗಾಯಕ್ಕೆ ₹ 3,000ದಂತೆ ಬಿಬಿಎಂಪಿ ಚಿಕಿತ್ಸಾ ವೆಚ್ಚ ಭರಿಸಬೇಕು. ಒಂದು ವೇಳೆ ನಾಯಿ ಕಚ್ಚಿ ಮಕ್ಕಳು ಅಸುನೀಗಿದರೆ ₹ 50 ಸಾವಿರ ಹಾಗೂ ವ್ಯಕ್ತಿ ಸತ್ತರೆ ₹ 1 ಲಕ್ಷ ಪರಿಹಾರ ನೀಡಬೇಕು ಎಂದು ಮಾರ್ಗಸೂಚಿ ಹೇಳುತ್ತದೆ.

ಬೀದಿ ನಾಯಿಗಳ ಕಡಿತದಿಂದ 2000ದ ಬಳಿಕ ನಗರದಲ್ಲಿ ಒಟ್ಟು 61 ಮಂದಿ ಮೃತಪಟ್ಟಿದ್ದಾರೆ. ಆದರೆ 2012–13ನೇ ಸಾಲಿನ ಬಳಿಕ ನಗರದಲ್ಲಿ ನಾಯಿ ಕಡಿತದಿಂದ ಯಾರೂ ಸತ್ತಿಲ್ಲ.

ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ವಿವರ

ವರ್ಷ ನಾಯಿಗಳ ಸಂಖ್ಯೆ

2010–11; 69141

2011–12; 93447

2012–13; 61661

2013–14; 52524

2014–15; 30410

2015–16; 35261

2016–17; 8662

2017–18; 35266

2018–19; 15,000


ರೇಬಿಸ್ ನಿರೋಧಕ ಚುಚ್ಚುಮದ್ದು ಪಡೆದವರು (10 ವರ್ಷಗಳಲ್ಲಿ)

2008–09;17123

2009–10; 20555

2010–11; 24120

2011–12; 22177

2012–13; 22913

2013–14; 17933

2014–15; 19488

2015–16; 17178

2016–17; 16979

2017–18; 12,608


ಅಂಕಿ ಅಂಶ

2.90 ಲಕ್ಷ

ನಗರದಲ್ಲಿರುವ ನಾಯಿಗಳ ಸಂಖ್ಯೆ (2012ರ ಗಣತಿ ಪ್ರಕಾರ)

1.85 ಲಕ್ಷ

ಬೀದಿನಾಯಿಗಳಿವೆ

4800

ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಬಿಬಿಎಂಪಿ ನಿಗದಿ ಪಡಿಸಿದ ಗುರಿ (ಪ್ರತಿ ತಿಂಗಳು)

ನಾಯಿ ಕಚ್ಚಿದಾಗ ಏನು ಮಾಡಬೇಕು?

* ನಾಯಿ ಕಡಿತದಿಂದ ಉಂಟಾದ ಗಾಯವನ್ನು ಹತ್ತು ನಿಮಿಷಗಳವರೆಗೆ ನೀರಿನಿಂದ ತೊಳೆಯಬೇಕು. ಸಾಬೂನಿನಂದಲೂ ಶುಚಿಗೊಳಿಸಬೇಕು

* ಡೆಟಾಲ್‌/ಇಟಿಯಾಲ್‌/ಪೋವಿಡೋನ್‌/ ಅಯೋಡಿನ್‌ ತರಹದ ನಂಜು ನಿರೋಧಕ ಔಷಧಿಯನ್ನು ಗಾಯಕ್ಕೆ ಹಾಕಬೇಕು

* ಗಾಯಕ್ಕೆ ಬ್ಯಾಂಡೇಜ್‌ ಹಾಕುವುದಾಗಲಿ, ಹೊಲಿಗೆ ಹಾಕುವುದಾಗಲಿ ಮಾಡಬಾರದು. ಬರಿಗೈಯಿಂದ ಗಾಯ ಮುಟ್ಟಬಾರದು

* ರೇಬಿಸ್‌ ನಿರೋಧಕ ಇಮ್ಯೂನೋಗ್ಲೊಬ್ಯುಲಿನ್‌ ಚುಚ್ಚುಮದ್ದು ಪಡೆಯಬೇಕು

* ರೇಬಿಸ್‌ ನಿವಾರಿಸಬಲ್ಲ ಕಾಯಿಲೆ. ಆದರೆ, ನಿರ್ಲಕ್ಷ್ಯ ಮಾಡಿದರೆ ಮಾರಣಾಂತಿಕ ಎಂಬುದನ್ನು ನೆನಪಿಡಬೇಕು

* ಸಂಪರ್ಕ ಸಂಖ್ಯೆ: 080–2297 5595, 2222 1188

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT