ಭಾನುವಾರ, ನವೆಂಬರ್ 28, 2021
20 °C
4.8 ಲಕ್ಷ ಡೋಸ್‌ ಲಸಿಕೆ ನೀಡುವ ಗುರಿ ನಿಗದಿಪಡಿಸಿದ ಬಿಬಿಎಂಪಿ

ಅ.22ರಂದು ಕೋವಿಡ್‌ ವಿಶೇಷ ಲಸಿಕಾ ಮೇಳ: 4.8 ಲಕ್ಷ ಡೋಸ್‌ ಲಸಿಕೆ ನೀಡುವ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇದುವರೆಗೆ ಕೋವಿಡ್‌ ಲಸಿಕೆಯ ಒಂದೂ ಡೋಸ್‌ ಪಡೆಯದವರನ್ನು ಗುರುತಿಸಿ ಲಸಿಕೆ ನೀಡುವ ಉದ್ದೇಶದಿಂದ ಬಿಬಿಎಂಪಿಯು ಇದೇ 22ರಂದು (ಗುರುವಾರ) ವಿಶೇಷ ಮೇಳವನ್ನು ಹಮ್ಮಿಕೊಂಡಿದೆ. ಒಂದೇ ದಿನ 4.8 ಲಕ್ಷ ಡೋಸ್‌ ಲಸಿಕೆ ನೀಡುವ ಗುರಿ ನಿಗದಿಪಡಿಸಿದೆ.

ಈ ಮೇಳದ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸುವ ಸಲುವಾಗಿ ಪಾಲಿಕೆಯ ವಿಶೇಷ ಆಯುಕ್ತ (ಆರೋಗ್ಯ) ಡಾ. ಕೆ.ವಿ.ತ್ರಿಲೋಕಚಂದ್ರ ಅವರು ಎಲ್ಲ ವಲಯದ ಆರೋಗ್ಯಾಧಿಕಾರಿಗಳ ಜೊತೆ ಗುರುವಾರ ಸಭೆ ನಡೆಸಿದರು.

‘ಲಸಿಕೆ ಪಡೆಯದವರನ್ನು ಗುರುತಿಸಿ ಲಸಿಕೆ ನೀಡಲು ವಿಶೇಷ ಮೇಳ ನಗರದಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಲಸಿಕಾ ಕೇಂದ್ರ, ಸಂಚಾರ ಲಸಿಕಾ ಕೇಂದ್ರಗಳಲ್ಲಿ ಹಾಗೂ ಬ್ಲಾಕ್ ಮತ್ತು ಬೀದಿ ಮಟ್ಟದಲ್ಲಿ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು. ಅರ್ಹ ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ನೋಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಕೊಳೆಗೇರಿಗಳ ನಿವಾಸಿಗಳು, ಬೀದಿ ಬದಿ ವ್ಯಾಪಾರಿಗಳು, ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಗುರಿಯಾಗಿಸಿ ಲಸಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕಾರ್ಮಿಕರ ಸಂಘಟನೆಗಳು, ಹೋಟೆಲ್ ಮಾಲೀಕರ ಸಂಘ ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಇತರ ಸಂಘಟನೆಗಳ ನೆರವಿನಿಂದ ಅಲ್ಲಲ್ಲಿ ಲಸಿಕಾ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ, ಮಾರುಕಟ್ಟೆ, ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಲಸಿಕಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಸಂಚಾರ ಶಿಬಿರಗಳನ್ನೂ ಹಮ್ಮಿಕೊಳ್ಳಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶೇ 52ರಷ್ಟು ಮಂದಿಗೆ ಎರಡನೇ ಡೋಸ್‌’

‘ನಗರದಲ್ಲಿ 91 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ನಿಗದಿಪಡಿಸಲಾಗಿದ್ದು, ಇವರಲ್ಲಿ ಶೇ 86 ರಷ್ಟು ಮಂದಿ ಈಗಾಗಲೇ ಮೊದಲನೇ ಡೋಸ್ ನೀಡಲಾಗಿದೆ. ಶೇ 52 ರಷ್ಟು ಮಂದಿ ಎರಡನೇ ಡೋಸ್ ಕೂಡ ಪಡೆದಿದ್ದಾರೆ' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು.

‘ಲಸಿಕೆಯ ಮೊದಲ ಡೋಸ್‌ ಪಡೆದವರು ಎರಡನೇ ಡೋಸ್‌ ಪಡೆಯಲು 12 ವಾರ ಕಾಲಾವಕಾಶ ಬೇಕು. ಹಾಗಾಗಿ ಎರಡನೇ ಡೋಸ್‌ ಪಡೆದವರ ಪ್ರಮಾಣ ಸ್ವಲ್ಪ ಕಡಿಮೆ ಇದೆ. ಇದುವರೆಗೆ ಅರ್ಹರಾದವರಲ್ಲಿ ಶೇ 85ರಷ್ಟು ಮಂದಿಗೆ ಎರಡನೇ ಡೋಸ್‌ ನೀಡಿದ್ದೇವೆ. ನಗರದಲ್ಲಿ ಆಂದೋಲನ ರೂಪದಲ್ಲಿ ಲಸಿಕಾ ಕಾರ್ಯಕ್ರಮ ನಡೆಸಿದ್ದರಿಂದಾಗಿ ಕೋವಿಡ್‌ ನಿಯಂತ್ರಣದಲ್ಲಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.