ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ ವಲಯ: ರಸ್ತೆ ಮರುನಿರ್ಮಾಣ ತಿಂಗಳಲ್ಲಿ ಆರಂಭ

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಭರವಸೆ
Last Updated 1 ಅಕ್ಟೋಬರ್ 2021, 20:18 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೊರವಲಯದ ವಾರ್ಡ್‌ಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ಕಲ್ಪಿಸುವ ಸಲುವಾಗಿ ಕತ್ತರಿಸಲಾದ ರಸ್ತೆಗಳ ಪುನರ್‌ ನಿರ್ಮಾಣ ಕಾಮಗಾರಿಗಳನ್ನು ಮುಂದಿನ ತಿಂಗಳಿನಿಂದ ಆರಂಭಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ‘ನಗರಕ್ಕೆ ಹೊಸತಾಗಿ ಸೇರ್ಪಡೆಯಾಗಿರುವ ಗ್ರಾಮಗಳಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗಳಿಂದಾಗಿ 2500 ಕಿ.ಮೀ ಉದ್ದದ ರಸ್ತೆಗಳು ಹಾಳಾಗಿವೆ. ಈ ಉದ್ದೇಶಕ್ಕಾಗಿ ಕತ್ತರಿಸಲಾದ ರಸ್ತೆಗಳ ಪುನರ್‌ ನಿರ್ಮಾಣಕ್ಕೆ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಕಾಮಗಾರಿಗಳ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದ್ದು, ಟೆಂಡರ್‌ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಬರುವ ತಿಂಗಳಲ್ಲಿ ಕೆ.ಆರ್‌.ಪುರ ಹಾಗೂ ಮಹದೇವಪುರ ಕ್ಷೇತ್ರಗಳಲ್ಲಿ ರಸ್ತೆಗಳ ಪುನರ್‌ ನಿರ್ಮಾಣ ಕಾಮಗಾರಿಗಳು ಆರಂಭವಾಗಲಿವೆ’ ಎಂದು ಮಾಹಿತಿ ನೀಡಿದರು.

‘ನಗರದ ರಸ್ತೆಗಳ ವಸ್ತುಸ್ಥಿತಿ ಪರಿಶೀಲಿಸಲು ಬಿಬಿಎಂಪಿಯ ಎಂಟೂ ವಲಯಗಳ ಮುಖ್ಯ ಎಂಜಿನಿಯರ್‌ಗಳು ಹಾಗೂ 27 ವಿಭಾಗ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದೇವೆ. ಮುಖ್ಯ ರಸ್ತೆಗಳ ದುರಸ್ತಿ ಪ್ರಗತಿಯಲ್ಲಿದ್ದು, 10 ದಿನಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ವಾರ್ಡ್‌ ಮಟ್ಟದ ರಸ್ತೆ ಗುಂಡಿಗಳನ್ನು ಆದಷ್ಟು ಬೇಗ ದುರಸ್ತಿ ಮಾಡುವಂತೆ ಕಂದಾಯ ಸಚಿವ ಆರ್‌.ಅಶೋಕ ಸೂಚಿಸಿದ್ದಾರೆ. ಇದಕ್ಕಾಗಿ 25 ದಿನಗಳ ಗಡುವು ನೀಡಿದ್ದಾರೆ’ ಎಂದರು.

ನಗರದಲ್ಲಿ ವೈರಾಣು ಜ್ವರ ಹಾಗೂ ಡೆಂಗಿ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಜ್ವರ ಹಾಗೂ ಡೆಂಗಿ ನಿಯಂತ್ರಣದ ಬಗ್ಗೆ ಪಾಲಿಕೆಯ ತಜ್ಞ ವೈದ್ಯರ ಸಮಿತಿ ಹಾಗೂ ಮಕ್ಕಳ ತಜ್ಞರ ಸಮಿತಿ ಜೊತೆ ಚರ್ಚಿಸಿದ್ದೇವೆ. ಡೆಂಗಿ ಹರಡದಂತೆ ಜನರೂ ಮುನ್ನೆಚ್ಚರಿಕೆ ವಹಿಸಬೇಕು’ ಎಂದರು.

ಇ–ಆಸ್ತಿ ನೋಂದಣಿಗೆ ಕೆಲವು ಪಾಲಿಕೆ ಸಿಬ್ಬಂದಿ ₹ 10 ಸಾವಿರ ಲಂಚ ತೆಗೆದುಕೊಳ್ಳುತ್ತಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ‘ನಿರ್ದಿಷ್ಟ ಪ್ರಕರಣಗಳಿದ್ದರೆ ಸಾರ್ವಜನಿಕರು ನನಗೆ ದೂರು ನೀಡಬಹುದು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT