ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳತೆ ಪುಸ್ತಕದ ಲೆಕ್ಕಕ್ಕೂ ವಾಸ್ತವಕ್ಕೂ ಅಜಗಜಾಂತರ!

ಬಿಬಿಎಂಪಿ: ರಸ್ತೆ ಸುರಕ್ಷತಾ ಕಾಮಗಾರಿಗಳಲ್ಲಿ ಭಾರಿ ಅವ್ಯವಹಾರ * ಟಿವಿಸಿಸಿ ತನಿಖಾ ವರದಿ
Last Updated 11 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ₹73 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಿದ ರಸ್ತೆ ಸುರಕ್ಷತಾ ಕಾಮಗಾರಿಗಳಲ್ಲಿ ಭಾರಿ ಅವ್ಯವಹಾರ ನಡೆದಿರುವುದನ್ನು ಪಾಲಿಕೆಯ ತಾಂತ್ರಿಕ ಮತ್ತು ಜಾಗೃತ ಕೋಶ(ಟಿವಿಸಿಸಿ) ಪತ್ತೆ ಹಚ್ಚಿದೆ.

ರಸ್ತೆ ವಿಭಜಕಗಳು, ಬಸ್‌ ಶೆಲ್ಟರ್‌ಗಳು, ಜಂಕ್ಷನ್‌ಗಳ ಅಭಿವೃದ್ಧಿ, ಜೀಬ್ರಾ ಕ್ರಾಸಿಂಗ್‌ಗಳಿಗೆ ಬಣ್ಣ ಬಳಿದಿರುವುದು ಸೇರಿದಂತೆ ಸಂಚಾರ ಸುರಕ್ಷತೆಗೆ ಅಗತ್ಯ ಇರುವ ಕಾಮಗಾರಿಗಳನ್ನು 2016–17 ಮತ್ತು 2017–18ನೇ ಸಾಲಿನಲ್ಲಿ ಬಿಬಿಎಂಪಿ ಅನುಷ್ಠಾನಗೊಳಿಸಿತ್ತು.

ನಗರೋತ್ಥಾನ ಅನುದಾನದ ಅಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಕೆಲವೆಡೆ ಕೆಲಸ ನಿರ್ವಹಿಸದೆಯೇ ಬಿಲ್ ಪಾವತಿ ಮಾಡಲಾಗಿದೆ ಎಂದು ಬಿಜೆಪಿ ನಗರ ಮೋರ್ಚಾ ವಕ್ತಾರ ಎನ್.ಆರ್. ರಮೇಶ್‌ 2019ರ ಜ.31ರಂದು ಮೇಯರ್ ಮತ್ತು ಆಯುಕ್ತರಿಗೆ ‌ದೂರು ನೀಡಿದ್ದರು. ಆಯುಕ್ತರ ಆದೇಶದಂತೆ ಟಿವಿಸಿಸಿ ತನಿಖೆ ನಡೆಸಿದ್ದು, ಅ.1ರಂದು ತನಿಖಾ ವರದಿಯನ್ನು ಆಯುಕ್ತರಿಗೆ ಸಲ್ಲಿಸಿದೆ.

‘48 ಕಾಮಗಾರಿಗಳ ಪೈಕಿ ತಂತಿ ಬೇಲಿ, ಕಬ್ಬಿಣದ ಕಂಬಗಳು, ಪೈಪ್‌ಗಳು, ಮೆಷ್, ಮೈಲ್ಡ್ ಸ್ಟೀಲ್ ಬ್ಯಾರಿಕೇಡ್, ರಸ್ತೆ ವಿಭಜಕಗಳು, ಕಾಂಕ್ರಿಟ್ ಹೊದಿಕೆ, ಮೀಡಿಯನ್ ಮಾರ್ಕರ್‌ ಅಳವಡಿಸುವ ಕಾಮಗಾರಿಗಳನ್ನು ಮಂಜೂರಾದ ಅಂದಾಜು ಪಟ್ಟಿಯ ಅಳತೆಗಿಂತ ಕಡಿಮೆ ಅಳವಡಿಸಲಾಗಿದೆ. ಆದರೆ, ಇ–ಅಳತೆ ಪುಸ್ತಕದಲ್ಲಿ ಮಂಜೂರಾದ ಅಳತೆಯನ್ನೇ ದಾಖಲಿಸಿ ಬಿಲ್ ಪಾವತಿಸಲಾಗಿದೆ’ ಎಂದು ವರದಿಯಲ್ಲಿ ದಾಖಲಿಸಲಾಗಿದೆ.

‘ಬೈಯ್ಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಬಳಿ 175.20 ಮೀಟರ್ ಉದ್ದದ ಮೈಲ್ಡ್‌ ಸ್ಟೀಲ್ ಬ್ಯಾರಿಕೇಡ್ ಅಳವಡಿಸಲಾಗಿದೆ ಎಂದು ಇ–ಅಳತೆ ಪುಸ್ತಕದಲ್ಲಿ ಉಲ್ಲೇಖಲಾಗಿದೆ. ಆದರೆ, ವಾಸ್ತವದಲ್ಲಿ 146.35 ಮೀಟರ್ ಮಾತ್ರ ಬ್ಯಾರಿಕೇಡ್‌ ಇದೆ. ಹೆಬ್ಬಾಳ ಬಳಿ ಚರಂಡಿಗೆ ಪ್ರಿಕಾಸ್ಟ್ ಸ್ಲ್ಯಾಬ್ ಅಳವಡಿಸಲಾಗಿದೆ ಎಂದು ದಾಖಲೆಗಳು ಹೇಳುತ್ತವೆ. ಸ್ಥಳ ಪರಿಶೀಲನೆ ನಡೆಸಿದಾಗ ಅಲ್ಲಿ ಪ್ರಿಕಾಸ್ಟ್ ಸ್ಲ್ಯಾಬ್‌ಗಳೇ ಇಲ್ಲ. ಕೆ.ಆರ್. ರಸ್ತೆಯ 27ನೇ ಕ್ರಾಸ್‌ನಲ್ಲಿ ಆರ್‌ಸಿಸಿ ಸ್ಲ್ಯಾಬ್ ಅಳವಡಿಸಲಾಗಿದೆ ಎಂಬ ಉಲ್ಲೇಖ ಇ–ಅಳತೆ ಪುಸ್ತಕದಲ್ಲಿದೆ. ಅಲ್ಲಿ ಹೊದಿಸಿರುವುದು ಕಲ್ಲಿನ ಚಪ್ಪಡಿಗಳನ್ನು’ ಎಂದು ವರದಿ ಹೇಳಿದೆ.

‘ಮಾರತಹಳ್ಳಿ ಮುಖ್ಯರಸ್ತೆ ಬಳಿ 1 ಮೀಟರ್ ಎತ್ತರದ 250 ಮೀಡಿಯನ್‌ಗಳು, ಐಒಸಿ ಪೆಟ್ರೋಲ್ ಬಂಕ್ ಹತ್ತಿರ 30, ಕೆ.ಬಿ. ಜಂಕ್ಷನ್‌ನಲ್ಲಿ 60 ಮೀಡಿಯನ್‌ಗಳನ್ನು ಅಳವಡಿಸಲಾಗಿದೆ ಎಂದು ಇ–ಅಳತೆ ಪುಸ್ತಕದಲ್ಲಿ ದಾಖಲಿಸಲಾಗಿದೆ. ವಾಸ್ತವದಲ್ಲಿ ಮಾರತಹಳ್ಳಿ ಮುಖ್ಯರಸ್ತೆಯಲ್ಲಿ 236 ಮೀಡಿಯನ್‌ಗಳನ್ನು ಮಾತ್ರ ಅಳವಡಿಸಲಾಗಿದೆ. ಐಒಸಿ ಪೆಟ್ರೋಲ್ ಬಂಕ್ ಹತ್ತಿರ 1 ಮೀಟರ್ ಬದಲಿಗೆ 0.60 ಮೀಟರ್ ಎತ್ತರದ ಮೀಡಿಯನ್‌ಗಳನ್ನು ಅಳವಡಿಸಲಾಗಿದೆ’ ಎಂದು ವರದಿ ತಿಳಿಸಿದೆ.

‘ಈ ಯೋಜನೆಯಡಿ 41 ಬಸ್ ಶೆಲ್ಟರ್‌ಗಳನ್ನು ನಿರ್ಮಿಸಲಾಗಿದೆ. ಬಹುತೇಕ ಬಸ್ ಶೆಲ್ಟರ್‌ಗಳಲ್ಲಿ ವಿದ್ಯುತ್ ಸಂಪರ್ಕ ಇದ್ದರೂ, ಸಮರ್ಪಕ ನಿರ್ವಹಣೆ ಆಗಿಲ್ಲ. ಎಲ್ಲಾ ಶೆಲ್ಟರ್‌ಗಳಲ್ಲೂ ಒಂದಲ್ಲ ಒಂದು ನ್ಯೂನತೆಗಳು ಇರುವುದು ಕಂಡುಬಂದಿದೆ. ಈ ಎಲ್ಲಾ ಕಾಮಗಾರಿಗಳ ಬಗ್ಗೆ ನಿಯಮಾನುಸಾರ ಕ್ರಮ ವಹಿಸಬಹುದು’ ಎಂದು ಟಿವಿಸಿಸಿ ಅಭಿಪ್ರಾಯಪಟ್ಟಿದೆ.

ಇಲ್ಲದ ರಸ್ತೆ ಉಬ್ಬಿಗೆ ಬಣ್ಣ ಬಳಿದರು!

ಸುಬ್ರಮಣ್ಯ ನಗರದಲ್ಲಿ ಇಲ್ಲದ ರಸ್ತೆ ಉಬ್ಬಿಗೆ ಬಣ್ಣ ಬಳಿಯಲಾಗಿದೆ ಎಂದು ದಾಖಲೆ ಸೃಷ್ಟಿಸಿ ಬಿಲ್ ಪಾವತಿ ಮಾಡಿಕೊಂಡಿರುವುದು ತನಿಖೆಯಲ್ಲಿ ಬಳಕಿಗೆ ಬಂದಿದೆ.

‘ಡಯಾಕಾನ್ ಆಸ್ಪತ್ರೆ ಜಂಕ್ಷನ್‌ನಿಂದ ಪೊಲೀಸ್ ಠಾಣೆ ವರೆಗಿನ ರಸ್ತೆಯಲ್ಲಿ ಆದೀಶ್ವರ ಶೋರೂಂ ಎದುರು ರಸ್ತೆಯುಬ್ಬಿಗೆ (ಹಂಪ್‌) ಬಣ್ಣ ಬಳಿಯಾಗಲಿದೆ ಎಂದು ಇ–ಅಳತೆ ಪುಸ್ತಕದಲ್ಲಿ ದಾಖಲಿಸಲಾಗಿದೆ. ಆದರೆ, ಸ್ಥಳ ಪರಿಶೀಲನೆ ನಡೆಸಿದಾಗ ಆ ಜಾಗದಲ್ಲಿ ಹಂಪೇ ಇಲ್ಲ’ ಎಂದು ಹೇಳಿದೆ.

‘ಕೊತ್ತನೂರು ದಿಣ್ಣೆಯಿಂದ ಅಂಜನಾಪುರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ವಿಕ್ರಂ ಚಿತ್ರ ಮಂದಿರದ ಎದುರು 10.50 ಮೀಟರ್ ಉದ್ದದ, 3.50 ಮೀಟರ್ ಅಗಲದ ರಸ್ತೆ ಉಬ್ಬು ನಿರ್ಮಿಸಲಾಗಿದೆ ಎಂದು ದಾಖಲೆಗಳು ಹೇಳುತ್ತಿವೆ. ವಾಸ್ತವದಲ್ಲಿ 2.40 ಮೀಟರ್ ಅಗಲದ ರಸ್ತೆ ಉಬ್ಬು ಮಾತ್ರ ಇದೆ. ಈ ಯೋಜನೆಯಡಿ ನಿರ್ಮಾಣವಾದ ಬಹುತೇಕ ರಸ್ತೆ ಉಬ್ಬುಗಳು ಇದೇ ಮಾದರಿಯಲ್ಲಿ ಇವೆ’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT