ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಇಬ್ಬರು ಮಾರ್ಷಲ್‌ಗಳ ವಜಾ

ಜಯನಗರದಲ್ಲಿ ಹಿರಿಯ ನಾಗರಿಕರೊಂದಿಗೆ ಅಮಾನವೀಯ ವರ್ತನೆ
Published 28 ಮಾರ್ಚ್ 2024, 21:48 IST
Last Updated 28 ಮಾರ್ಚ್ 2024, 21:48 IST
ಅಕ್ಷರ ಗಾತ್ರ

ಬೆಂಗಳೂರು: ಜಯನಗರ ಶಾಪಿಂಗ್‌ ಕಾಂಪ್ಲೆಕ್ಸ್‌ ಬಳಿಯ ಪಾದಚಾರಿ ಮಾರ್ಗದಲ್ಲಿ ಬ್ಯಾಗ್ ಮಾರಾಟ ಮಾಡುತ್ತಿದ್ದ ಹಿರಿಯ ನಾಗರಿಕರೊಬ್ಬರೊಂದಿಗೆ ಅಮಾನವೀಯವಾಗಿ ವರ್ತಿಸಿದ್ದ ಇಬ್ಬರು ಮಾರ್ಪಲ್‌ಗಳನ್ನು ಕೆಲಸದಿಂದ ಬಿಬಿಎಂಪಿ ವಜಾಗೊಳಿಸಿದೆ.

ಬ್ಯಾಗ್‌ ಮಾರುತ್ತಿದ್ದ ಹಿರಿಯ ನಾಗರಿಕರಿಂದ ಬ್ಯಾಗ್ ಕಸಿದು, ಎಳೆದಾಡಿದ್ದ ವಿಡಿಯೊ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಮಾರ್ಷಲ್‌ಗಳ ಮೇಲೆ ಆಕ್ರೋಶ ವ್ಯಕ್ತವಾಗತ್ತು. ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ‘ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಮಾರ್ಷಲ್‌ಗಳನ್ನು ತೆಗೆದುಹಾಕಲಾಗಿದೆ’ ಎಂದು ಹೇಳಿದರು.

ಜಯನಗರ 4ನೇ ಬ್ಲಾಕ್‌ನಲ್ಲಿ ಪಾದಚಾರಿ ಮಾರ್ಗದಲ್ಲಿನ ಶಾಶ್ವತ ನಿರ್ಮಾಣಗಳನ್ನು ತೆಗೆದುಹಾಕಲು ಬಿಬಿಎಂಪಿ ಮಾರ್ಷಲ್‌ಗಳನ್ನು ನಿಯೋಜಿಸಿದೆ. ಬೀದಿಬದಿ ವ್ಯಾಪಾರಿಗಳನ್ನೂ ಮಾರ್ಷಲ್‌ಗಳು ತೆರವುಗೊಳಿಸುತ್ತಿರುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೂ ಬಿಬಿಎಂಪಿ ಈ ಕ್ರಮದಿಂದ ಹಿಂದೆ ಸರಿದಿರಲಿಲ್ಲ.

ಮಾರ್ಚ್‌ 23ರಂದು, ಜಯನಗರ ಶಾಪಿಂಗ್‌ ಕಾಂಪ್ಲೆಕ್ಸ್‌ ಬಳಿಯ ಪಾದಚಾರಿ ಮಾರ್ಗದಲ್ಲಿ ಹಿರಿಯ ನಾಗರಿಕರೊಬ್ಬರು ನಡೆದಾಡಿಕೊಂಡು ಬ್ಯಾಗ್‌ ಮಾರಾಟ ಮಾಡುತ್ತಿದ್ದರು. ಅವರು ಅಥವಾ ಅವರು ಮಾರಾಟ ಮಾಡುತ್ತಿದ್ದ ಸಾಮಗ್ರಿಗಳು ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿರಲಿಲ್ಲ. ಹೀಗಿದ್ದರೂ, ಮಾರ್ಷಲ್‌ಗಳು ಅವರು ಹಿಡಿದು, ಬ್ಯಾಗ್‌ ಕಸಿದುಕೊಂಡು ಎಳೆದಾಡಿದ್ದರು. ಪಾದಚಾರಿಯೊಬ್ಬರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ಮಾರ್ಷಲ್‌ಗಳು ಸುಮ್ಮನಾಗಿದ್ದರು.

ಕೆಲಸದಿಂದ ತೆಗೆಯಲು ಮನವಿ: ‘ಮಾರ್ಷಲ್‌ಗಳು ನಾಗರಿಕರ ಮೇಲೆ ದೌರ್ಜನ್ಯ ಹಾಗೂ ದರ್ಪದಿಂದ ನಡೆದುಕೊಳ್ಳುತ್ತಿದ್ದು, ಇದರಿಂದ ಬಿಬಿಎಂಪಿಗೆ ಕೆಟ್ಟ ಹೆಸರು ಬರುತ್ತಿದೆ. ಈ ಹಿಂದೆ ಮಾರ್ಷಲ್‌ಗಳು ಬಿಬಿಎಂಪಿಯ ಗಸ್ತು ವಾಹನದಲ್ಲಿ ಮದ್ಯ ಕೊಂಡೊಯ್ದಿದ್ದರು. ಇದೀಗ, ಜಯನಗರದಲ್ಲಿ ಹಿರಿಯ ನಾಗರಿಕರೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಾರೆ. ಪಾಲಿಕೆಯಲ್ಲಿ 500ಕ್ಕೂ ಮಾರ್ಷಲ್‌ಗಳನ್ನು ನೇಮಿಸಿಕೊಂಡಿದ್ದು, ಅವರಿಂದ ಕೆಟ್ಟ ಹೆಸರಿನ ಜೊತೆಗೆ ಪಾಲಿಕೆಗೆ ಆರ್ಥಿಕ ನಷ್ಟವೂ ಉಂಟಾಗುತ್ತಿದೆ. ಮಾರ್ಷಲ್‌ಗಳ ಮುಖ್ಯಸ್ಥರಿಗೆ ಕೇಂದ್ರ ಕಚೇರಿಯಲ್ಲಿ ಕಚೇರಿ ನೀಡಿರುವುದೂ ಕಾನೂನು ಬಾಹಿರ. ಎಲ್ಲ ಮಾರ್ಷಲ್‌ಗಳನ್ನು ಬಿಬಿಎಂಪಿ ಕೆಲಸದಿಂದ ತೆಗೆದುಹಾಕಬೇಕು’ ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಅವರಿಗೆ ಮಾರ್ಚ್‌ 27ರಂದು ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT