ಬುಧವಾರ, ಆಗಸ್ಟ್ 17, 2022
27 °C
ಬಿಬಿಎಂಪಿ ಚುನಾವಣೆ: ಮುಂದುವರಿದ ಗೊಂದಲದ ನಡುವೆಯೂ ನಡೆದಿದೆ ಪೂರ್ವ ತಯಾರಿ

ಮರುವಿಂಗಡಣೆ ಆಧಾರದಲ್ಲಿ ಸಿದ್ಧವಾಯಿತು ಮತದಾರರ ಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿರುವುದರಿಂದ ಈಗಾಗಲೇ ಮರುವಿಂಗಡಣೆಗೊಂಡಿರುವ ವಾರ್ಡ್‌ಗಳಿಗೆ ಅನುಗುಣವಾಗಿಯೇ ಪಾಲಿಕೆ ಚುನಾವಣೆ ನಡೆಯುತ್ತದೆಯೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಈಗಾಗಲೇ ಮರುವಿಂಗಡಣೆಗೊಂಡಿರುವ ವಾರ್ಡ್‌ಗಳಿಗೆ ಅನುಗುಣವಾಗಿ ಮತದಾರರ ಪಟ್ಟಿ ತಯಾರಿಸುವ ಕಾರ್ಯವನ್ನು ಬಿಬಿಎಂಪಿ ಸದ್ದಿಲ್ಲದೇ ಪೂರ್ಣಗೊಳಿಸಿದೆ.

2011ರ ಜನಗಣತಿ ಪ್ರಕಾರ ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಿ ಸರ್ಕಾರ 2020ರ ಮಾ.2ರಂದು ಕರಡು ಅಧಿಸೂಚನೆ ಪ್ರಕಟಿಸಿತ್ತು. 2020ರ ಜೂನ್‌ 23ರಂದು ಈ ಬಗ್ಗೆ ಅಂತಿಮ ಅಧಿಸೂಚನೆ ಪ್ರಕಟವಾಗಿತ್ತು. ಮರುವಿಂಗಡಣೆಗೊಂಡ ವಾರ್ಡ್‌ಗಳಿಗೆ ಅನುಗುಣವಾಗಿ ‘ಬಿಬಿಎಂಪಿ ಸಾರ್ವತ್ರಿಕ ಚುನಾವಣೆ 2020’ ನಡೆಸಲು ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ರಾಜ್ಯ ಚುನಾವಣಾ ಆಯೋಗವು ಬಿಬಿಎಂಪಿಗೆ ಸೂಚನೆ ನೀಡಿತ್ತು. ನ.30ರ ಒಳಗೆ ಅಂತಿಮ ಪಟ್ಟಿ ಸಿದ್ಧಪಡಿಸಬೇಕು ಎಂದು ಪಾಲಿಕೆಗೆ ಗಡುವು ವಿಧಿಸಿತ್ತು. ಮತದಾರರ ಅಂತಿಮ ಪಟ್ಟಿಯನ್ನು ಬಿಬಿಎಂಪಿ ಮಂಗಳವಾರ ಪ್ರಕಟಿಸಿದೆ. 

‘ರಾಜ್ಯ ಚುನಾವಣಾ ಆಯೋಗದ ಸೂಚನೆ ಮೇರೆಗೆ ನಾವು ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ, ಸಾರ್ವಜನಿಕವಾಗಿ ಪ್ರಕಟಿಸಿದ್ದೇವೆ. ಆಯಾ ವಾರ್ಡ್‌ನ ಮತದಾರರ ನೋಂದಣಾಧಿಕಾರಿ, ಮತದಾರರ ಸಹಾಯಕ ನೋಂದಣಾಧಿಕಾರಿ, ವಾರ್ಡ್ ಕಚೇರಿಗಳಲ್ಲಿ ಹಾಗೂ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ (https://bbmp.gov.in) ಮತದಾರರ ಪಟ್ಟಿ ಸಾರ್ವಜನಿಕ ವೀಕ್ಷಣೆಗೆ ಲಭ್ಯ. ಬಿಬಿಎಂಪಿ ವ್ಯಾಪ್ತಿಯ ಮತದಾರರು ತಮ್ಮ ಹಾಗೂ ಕುಟುಂಬದವರ ಹೆಸರು ಆಯಾ ವಾರ್ಡ್‌ನ ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಬಹುದು’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಬಿಬಿಎಂಪಿ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಇರುತ್ತದೆ’ ಎಂದು ಅವರು ತಿಳಿಸಿದರು.

198 ವಾರ್ಡ್‌ಗಳ ಮರುವಿಂಗಡಣೆಯಾದ ಮೂರೇ ತಿಂಗಳಲ್ಲಿ ರಾಜ್ಯ ಸರ್ಕಾರವು ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲು 1976ರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಪರಿಷ್ಕೃತ ಕಾಯ್ದೆ ಜಾರಿಯೂ ಆಗಿದೆ. ವಾರ್ಡ್‌ ಮರುವಿಂಗಡಣೆಗಾಗಿ ಮಂಜುನಾಥ ಪ್ರಸಾದ್‌ ನೇತೃತ್ವದಲ್ಲಿ ಸಮಿತಿಯನ್ನೂ ರಚಿಸಲಾಗಿದೆ. ವಾರ್ಡ್‌ ಮರುವಿಂಗಡಣೆಯ ಮಾನದಂಡಗಳ ಬಗ್ಗೆ ಸಮಿತಿ ಸರ್ಕಾರವನ್ನು ಕೋರಿದೆ. ಬಿಬಿಎಂಪಿಗೆ ಹೊಸ ಪ್ರದೇಶವನ್ನು ಸೇರ್ಪಡೆಗೊಳಿಸಿ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸಬೇಕೇ ಅಥವಾ ಈಗಿರುವ ವ್ಯಾಪ್ತಿಯನ್ನೇ ಉಳಿಸಿಕೊಂಡು ಹೊಸ ವಾರ್ಡ್‌ಗಳನ್ನು  ರೂಪಿಸಬೇಕೇ ಎಂಬ ಬಗ್ಗೆ ಸಮಿತಿಯು ಸರ್ಕಾರದಿಂದ ಹೆಚ್ಚಿನ ವಿವರಣೆ ಬಯಸಿದೆ ಎಂದು ಗೊತ್ತಾಗಿದೆ.

ಬಿಬಿಎಂಪಿ ಚುನಾವಣೆಯನ್ನು 243 ವಾರ್ಡ್‌ಗಳಿಗೆ ಅನುಗುಣವಾಗಿ ನಡೆಸಬೇಕಾಗಿ ಬಂದರೆ ವಾರ್ಡ್‌ ಮರುವಿಂಗಡಣೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಬಿಬಿಎಂಪಿ ಇದುವರೆಗೆ ನಡೆಸಿರುವ ಪ್ರಯತ್ನಗಳು ವ್ಯರ್ಥವಾಗಲಿದೆ. 243 ವಾರ್ಡ್‌ಗಳ ರಚನೆಯಾದ ಬಳಿಕ ಮತದಾರರ ಪಟ್ಟಿಯನ್ನು ಮತ್ತೆ ಹೊಸತಾಗಿ ಸಿದ್ಧಪಡಿಸಬೇಕಾಗುತ್ತದೆ. 

ಹೈಕೋರ್ಟ್‌ ಅಂಗಳದಲ್ಲಿ ಚುನಾವಣೆ ಭವಿಷ್ಯ

ಬಿಬಿಎಂಪಿ ಚುನಾವಣೆ ಮುಂದೂಡಿಕೆಯನ್ನು ಪ್ರಶ್ನಿಸಿ ಕಾಂಗ್ರೆಸ್‌ ಮುಖಂಡರಾದ ಎಂ.ಶಿವರಾಜು ಹಾಗೂ ಅಬ್ದುಲ್‌ ವಾಜಿದ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಿರುವ ಹೈಕೋರ್ಟ್‌, ತೀರ್ಪು ಕಾಯ್ದಿರಿಸಿದೆ. ಬಿಬಿಎಂಪಿ ಚುನಾವಣೆಯನ್ನು ಈಗಿರುವಂತೆ 198 ವಾರ್ಡ್‌ಗಳಿಗೆ ಅನ್ವಯವಾಗುವಂತೆ ನಡೆಸಬೇಕೇ ಅಥವಾ ವಾರ್ಡ್‌ಗಳ ಸಂಖ್ಯೆ 243ಕ್ಕೆ ಹೆಚ್ಚಳವಾದ ಬಳಿಕ ನಡೆಸಬೇಕೇ ಎಂಬ ಗೊಂದಲ ಬಗೆಹರಿಯಲು ಹೈಕೋರ್ಟ್‌ ಆದೇಶದವರೆಗೆ ಕಾಯಬೇಕಿದೆ. 

ಒಂದು ವೇಳೆ 198 ವಾರ್ಡ್‌ಗಳಿಗೆ ಅನುಗುಣವಾಗಿಯೇ ನಡೆಸುವಂತೆ ಹೈಕೋರ್ಟ್‌ ಆದೇಶ ನೀಡಿದರೂ ಸರ್ಕಾರ, ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಮತದಾರರ ಸಂಖ್ಯೆ 8 ಲಕ್ಷ ಹೆಚ್ಚಳ

2015ರ ಬಿಬಿಎಂಪಿ ಚುನಾವಣೆಯ ಮತದಾರರ ಪಟ್ಟಿಗೆ ಹೋಲಿಸಿದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಸಂಖ್ಯೆ 8,03,145ರಷ್ಟು ಹೆಚ್ಚಳವಾಗಿದೆ. ಪುರುಷ ಮತದಾರರ ಸಂಖ್ಯೆ 3,89,449ರಷ್ಟು ಹೆಚ್ಚಳವಾಗಿದ್ದರೆ, ಮಹಿಳಾ ಮತದಾರರ ಸಂಖ್ಯೆ 4,13,411 ರಷ್ಟು ಹೆಚ್ಚಳವಾಗಿದೆ. ತೃತೀಯಲಿಂಗಿ ಮತದಾರರ ಸಂಖ್ಯೆ 285 ಹೆಚ್ಚಳ ಕಂಡಿದೆ.

ಬಿಬಿಎಂಪಿ ಮತದಾರರ ವಿವರ (2015ರಲ್ಲಿ) 

ಪುರುಷರು; 38,43,183

ಮಹಿಳೆಯರು; 34,84,283

ತೃತೀಯ ಲಿಂಗಿಗಳು; 1112 

ಒಟ್ಟು ಮತದಾರರು; 73,28,578

ಬಿಬಿಎಂಪಿ ಮತದಾರರ ವಿವರ (2020ರಲ್ಲಿ)

ಪುರುಷರು; 42,32, 632

ಮಹಿಳೆಯರು; 38,97,694

ತೃತೀಯಲಿಂಗಿಗಳು; 1,397

ಒಟ್ಟು ಮತದಾರರು; 81,31,723

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು