ಗುರುವಾರ , ಜೂನ್ 30, 2022
22 °C
2022 ಜೂನ್‌ 30ರ ಬಳಿಕ ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆಗೆ ಇಲ್ಲ ಅವಕಾಶ

ಬಿಬಿಎಂಪಿ: ಚುನಾವಣೆ ದೀರ್ಘ ಕಾಲ ಮುಂದೂಡಿಕೆ?

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಜನಗಣತಿ ಪ್ರಕ್ರಿಯೆಗೆ ತಯಾರಿ ನಡೆಯುತ್ತಿದ್ದು, ಎಲ್ಲ  ತಾಲ್ಲೂಕುಗಳು, ಗ್ರಾಮಗಳು ಹಾಗೂ ನಗರಾಡಳಿತ ಪ್ರದೇಶಗಳ ಮೇರೆಗಳನ್ನು ಪರಿಷ್ಕರಿಸುವ ಪ್ರಕ್ರಿಯೆ ನಡೆಯುತ್ತಿದ್ದರೆ ಅವುಗಳನ್ನು 2022ರ ಜೂನ್‌ 30ರ ಒಳಗೆ ಪೂರ್ಣಗೊಳಿಸಬೇಕು ಎಂದು ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಬಿಬಿಎಂಪಿ ವಾರ್ಡ್‌ ಮರುವಿಂಗಡಣಾ ಪ್ರಕ್ರಿಯೆ ಜೂನ್‌ 30ರ ಒಳಗೆ ಪೂರ್ಣಗೊಳ್ಳದೇ ಹೋದರೆ, ಚುನಾವಣೆ ದೀರ್ಘ ಕಾಲ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

‘ತಾಲ್ಲೂಕು, ನಗರಾಡಳಿತ ಸಂಸ್ಥೆಗಳು ಹಾಗೂ ಗ್ರಾಮಗಳಲ್ಲಿ ಆಡಳಿತಾತ್ಮಕ ಸೀಮೆಗಳನ್ನು ಪರಿಷ್ಕರಿಸಿ ಹೊಸ ಘಟಕಗಳನ್ನು ರಚಿಸುವ ಪ್ರಸ್ತಾವನೆಗಳು ಬಾಕಿ ಇದ್ದರೆ ಜೂನ್‌ 30ರ ಒಳಗೆ ಪೂರ್ಣಗೊಳಿಸಿ ಜನಗಣತಿ ನಡೆಸುವುದನ್ನು ಖಾತರಿ ಪಡಿಸಬೇಕು. ಆ ಬಳಿಕ ಜನಗಣತಿ ಕಾರ್ಯ ಪೂರ್ಣಗೊಳ್ಳುವವರೆಗೆ ಆಡಳಿತಾತ್ಮಕ ಘಟಕಗಳಲ್ಲಿ ಯಾವುದೇ ಬದಲಾವಣೆ ಮಾಡುವುದಕ್ಕೆ ಅವಕಾಶ ಇಲ್ಲ’ ಎಂದು ಕಂದಾಯ ಇಲಾಖೆಯ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ವಾರ್ಡ್‌ ಮರುವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಸರ್ಕಾರ ಆಸಕ್ತಿಯನ್ನೇ ತೋರಿಸದಿರುವುದು ಬಿಬಿಎಂಪಿ ಚುನಾವಣೆಯ ನಿರೀಕ್ಷೆಯಲ್ಲಿರುವ ವಿವಿಧ ಪಕ್ಷ ಸ್ಥಳೀಯ ಮುಖಂಡರಲ್ಲಿ ಕಳವಳ ಹೆಚ್ಚಿಸಿದೆ.

‘ಒಮ್ಮೆ ಜನಗಣತಿ ಆರಂಭವಾದರೆ, ಅದರ ಅಂಕಿ ಅಂಶ ಆಧರಿಸಿ ಚುನಾವಣೆ ನಡೆಸುವ ಸಾಧ್ಯತೆ ಹೆಚ್ಚು. ಜನಗಣತಿ ನಡೆಸಿ, ಅಂಕಿ ಅಂಶ ವಿಶ್ಲೇಷಿಸಿ ವರದಿ ಬಿಡುಗಡೆಯಾಗಲು ಏನಿಲ್ಲವೆಂದರೂ ಎರಡು ವರ್ಷ ಕಾಲಾವಕಾಶ ಬೇಕು. ಅಲ್ಲಿವರೆಗೂ ಬಿಬಿಎಂಪಿ ಚುನಾವಣೆ ಮುಂದೂಡಿದರೂ ಆಶ್ಚರ್ಯವಿಲ್ಲ’ ಎಂದು ಬಿಜೆಪಿ ಪ್ರಮುಖರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿವಾರ್ಡ್‌ನಲ್ಲೂ ಪಕ್ಷದ ಟಿಕೆಟ್‌ಗೆ ನಾಲ್ಕೈದು ಆಕಾಂಕ್ಷಿಗಳಿದ್ದಾರೆ. ಒಬ್ಬರಿಗೆ ಟಿಕೆಟ್‌ ನೀಡಿದರೆ ಉಳಿದವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಇದರಿಂದ ಹಿನ್ನಡೆಯಾಗುವ ಅಪಾಯವಿದೆ. ಹಾಗಾಗಿ ವಿಧಾನಸಭಾ ಚುನಾವಣೆ ಬಳಿಕವೇ ಬಿಬಿಎಂಪಿ ಚುನಾವಣೆ ನಡೆಸುವಂತೆ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ. ವಿಧಾನಸಭಾ ಚುನಾವಣೆ ನಡೆದ ವರ್ಷದೊಳಗೆ ಲೋಕಸಭೆ ಚುನಾವಣೆಯೂ ಬರಲಿದೆ. ಅಲ್ಲಿವರೆಗೂ ಬಿಬಿಎಂಪಿ ಚುನಾವಣೆ ನಡೆಯುವುದು ಅನುಮಾನ’ ಎಂದರು.

2020ರ ಬಿಬಿಎಂಪಿ ಕಾಯ್ದೆ 2021ರ ಜನವರಿಯಲ್ಲಿ ಜಾರಿಯಾಗಿದ್ದು, ಇದರನ್ವಯ ಪಾಲಿಕೆ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ.

ನಗರದ ಹೊರವಲಯದ ಗ್ರಾಮಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವ ಕುರಿತು ಅಧ್ಯಯನ ನಡೆಸಿ ಶಿಫಾರಸು ಮಾಡುವುದಕ್ಕೆ ಪಾಲಿಕೆಯ ಮುಖ್ಯ ಆಯುಕ್ತರ ನೇತೃತ್ವದಲ್ಲಿ 2021ರ ಜ.29ರಂದು ಅಧಿಕಾರಿಗಳ ಸಮಿತಿಯನ್ನು ಮತ್ತೊಮ್ಮೆ ರಚಿಸಲಾಯಿತು. 2021ರ ಜು. 28ಕ್ಕೆ ಕೊನೆಗೊಂಡಿದ್ದ ಈ ಸಮಿತಿಯ ಅವಧಿಯನ್ನು ಮತ್ತೆ ಆರು ತಿಂಗಳು ವಿಸ್ತರಿಸಲಾಯಿತು. ಅದರ ಗಡುವೂ 2022ರ ಜನವರಿಯಲ್ಲಿ ಕೊನೆಗೊಂಡಿದ್ದು, ಅದನ್ನು ಸರ್ಕಾರ ವಿಸ್ತರಿಸಿಲ್ಲ. ಈ ಸಮಿತಿ ಒಂದೆರಡು ಬಾರಿ ಅನೌಪಚಾರಿಕವಾಗಿ ಸಭೆ ಸೇರಿತ್ತಾದರೂ ವಾರ್ಡ್‌ ಮರುವಿಂಗಡಣೆ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ.

‘ಪರಿಧಿ ವಿಸ್ತರಿಸಿ ವಾರ್ಡ್‌ ಮರುವಿಂಗಡಣೆ ಮಾಡುವುದಾದರೆ ಮಾತ್ರ ಬಿಬಿಎಂಪಿಗೆ ಈ ಆದೇಶ ಅನ್ವಯವಾಗುತ್ತದೆ. ಪರಿಧಿಯನ್ನು ಈಗಿನಷ್ಟೇ ಉಳಿಸಿಕೊಂಡು ವಾರ್ಡ್‌ಗಳ ಮರುವಿಂಗಡಣೆ ಮಾಡುವುದಕ್ಕೆ ಅಭ್ಯಂತರ ಇಲ್ಲ’ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

*

‘ಚುನಾವಣೆ ನಡೆಸಲು ಬಿಜೆಪಿಗೆ ಭಯ’
ಚುನಾವಣೆ ನಡೆಸಲು ನಿಜವಾದ ಆಸಕ್ತಿ ಇದ್ದರೆ ವಾರ್ಡ್‌ ಮರುವಿಂಗಡಣೆ ಪೂರ್ಣಗೊಳಿಸುತ್ತಿತ್ತು. ನಿರ್ದಿಷ್ಟ ಅವಧಿಯೊಳಗೆ ಚುನಾವಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರವೇ ಪ್ರಮಾಣಪತ್ರ ಸಲ್ಲಿಸುತ್ತಿತ್ತು. ಕೋವಿಡ್‌ ಹಾಗೂ ಪ್ರವಾಹ ನಿರ್ವಹಣೆಯಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ. ಈಗ ಚುನಾವಣೆ ನಡೆಸಿದರೆ ಬಿಜೆಪಿಗೆ ಸೋಲು ಖಚಿತ. ಹಾಗಾಗಿ ಚುನಾವಣೆ ನಡೆಸಲು ಸರ್ಕಾರಕ್ಕೆ ಭಯ.
-ಅಬ್ದುಲ್‌ ವಾಜಿದ್‌, ಕಾಂಗ್ರೆಸ್‌ ಮುಖಂಡ

*
‘2 ತಿಂಗಳಲ್ಲಿ ಪ್ರಕ್ರಿಯೆ ಮುಗಿಸಬಹುದು’
ಈಗಲೂ ಸರ್ಕಾರ ಮನಸ್ಸು ಮಾಡಿದರೆ ಬಿಬಿಎಂಪಿಯ ಪರಿಧಿಯನ್ನು ಈಗಿರುವಷ್ಟೇ ಉಳಿಸಿಕೊಂಡು ವಾರ್ಡ್‌ ಮರುವಿಂಗಡಣೆ ಮಾಡಬಹುದು. ಎರಡು ತಿಂಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಆದರೆ, ಬಿಬಿಎಂಪಿ ಚುನಾವಣೆ ನಡೆಯುವುದು ಸರ್ಕಾರಕ್ಕೆ ಬೇಕಿಲ್ಲ.
-ಎಂ.ಶಿವರಾಜು, ಕಾಂಗ್ರೆಸ್‌ ಮುಖಂಡ

*
‘ಮೇ ತಿಂಗಳಲ್ಲಿ ಚುನಾವಣೆ– ಸಿ.ಎಂ. ಭರವಸೆ’
2022ರ ಮೇ ತಿಂಗಳಲ್ಲಿ ಚುನಾವಣೆ ನಡೆಸುವ ಭರವಸೆಯನ್ನು ಪಕ್ಷದ ಪ್ರಮುಖರ ಸಭೆಯಲ್ಲಿ (ಕಳೆದ ತಿಂಗಳು) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೀಡಿದ್ದರು. ಅದರಂತೆ ನಡೆಸಿಕೊಳ್ಳುವ ನಂಬಿಕೆ ಇದೆ. ಯಾವಾಗ ಚುನಾವಣೆ ನಡೆದರೂ ಪಕ್ಷ ಗೆಲ್ಲಲಿದೆ.
-ಪದ್ಮನಾಭ ರೆಡ್ಡಿ, ಬಿಜೆಪಿ ಮುಖಂಡ

*
‘ಜನರ ಅಳಲು ಕೇಳುವವರು ಯಾರು ಇಲ್ಲ’
ರಸ್ತೆ ಗುಂಡಿಗೆ ಬಿದ್ದು ಜನ ಸಾಯುತ್ತಿದ್ದಾರೆ, ಜನರ ಅಳಲನ್ನು ಹೇಳುವವರು ಕೇಳುವವರು ಯಾರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಬಿಬಿಎಂಪಿ ಚುನಾವಣೆಯನ್ನು ಸರ್ಕಾರ ಆದಷ್ಟು ಬೇಗ ನಡೆಸಬೇಕು.
-ಆರ್‌.ಪ್ರಕಾಶ್‌, ಜೆಡಿಎಸ್ ನಗರ ಘಟಕದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು