ಬುಧವಾರ, ಏಪ್ರಿಲ್ 21, 2021
25 °C
ಯಡಿಯೂರು ವಾರ್ಡ್‌ನಲ್ಲಿ ನಾಲ್ಕು ವರ್ಷಗಳಲ್ಲಿ ನಡೆದಿರುವ ಬೆಳವಣಿಗೆ

ಯಡಿಯೂರು ವಾರ್ಡ್‌: ಒಬ್ಬ ಗುತ್ತಿಗೆದಾರನಿಗೆ 60 ಕಾಮಗಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಬಿಎಂಪಿ

ಬೆಂಗಳೂರು: ಕಸ ನಿರ್ವಹಣೆಯಿಂದ ಹಿಡಿದು ಕಟ್ಟಡ ನಿರ್ಮಾಣದವರೆಗೆ, ರಸ್ತೆ ಕಾಂಕ್ರಿಟೀಕರಣದಿಂದ ಹಿಡಿದು ಚರಂಡಿ ಅಭಿವೃದ್ಧಿಯವರೆಗೆ, ವಾರ್ಡ್‌ ನಿರ್ವಹಣೆಗೆ ಗ್ಯಾಂಗ್‌ಮನ್‌ಗಳನ್ನು ಒದಗಿಸುವುದರಿಂದ ಹಿಡಿದು ಕುಡಿಯುವ ನೀರು ಪೂರೈಸುವುದರ ವರೆಗೆ  ಒಂದೇ ವಾರ್ಡ್‌ನಲ್ಲಿ 60ಕ್ಕೂ ಅಧಿಕ ಕಾಮಗಾರಿಗಳ ಗುತ್ತಿಗೆ ಒಬ್ಬನೇ ಗುತ್ತಿಗೆದಾರನಿಗೆ ಸಿಗಲು ಸಾಧ್ಯವೇ?

ರಾಜಕೀಯ ಕೃಪಾಕಟಾಕ್ಷ, ಅಧಿಕಾರಿಗಳ ಸಹಕಾರ ಇದ್ದರೆ ಇದು ಕೂಡಾ ಸಾಧ್ಯ. ಇದಕ್ಕೆ ತಾಜಾ ಉದಾಹರಣೆ ಬೇಕಿದ್ದರೆ ಯಡಿಯೂರು ವಾರ್ಡ್‌ನಲ್ಲಿ 2017–18ರ ನಂತರ ನಡೆದಿರುವ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಗಳ ಬಗ್ಗೆ ಸರ್ಕಾರದ ಇಪ್ರೊಕ್ಯೂರ್‌ಮೆಂಟ್‌ ವೆಬ್‌ಸೈಟ್‌ನಲ್ಲಿ ಕಣ್ಣಾಡಿಸಿದರೆ ಸಾಕು. ಈ ವಾರ್ಡ್‌ನಲ್ಲಿ 2017–18ರಿಂದ ಇದುವರೆಗೆ ಸತೀಶ್‌ ಆರ್‌. ಎಂಬ ಒಬ್ಬನೇ ಗುತ್ತಿಗೆದಾರನಿಗೆ ಬರೋಬ್ಬರಿ 60ಕ್ಕೂ ಅಧಿಕ ಕಾಮಗಾರಿಗಳ ಗುತ್ತಿಗೆ ನೀಡಲಾಗಿದೆ. ಅಚ್ಚರಿಯೆಂದರೆ 2015–16ನೇ ಸಾಲಿನವರೆಗೆ ಅವರು ಯಾವುದೇ ಗುತ್ತಿಗೆ ನಿರ್ವಹಿಸಿಲ್ಲ.

2016ರ ಏಪ್ರಿಲ್‌ನಲ್ಲಿ ಯಡಿಯೂರು ವಾರ್ಡ್‌ನ ಶಾಸ್ತ್ರಿನಗರ 1ನೇ ಮುಖ್ಯರಸ್ತೆಯಲ್ಲಿ ಕಾಬಲ್‌ ಸ್ಟೋನ್‌ ಅಳವಡಿಸುವ ಕಾಮಗಾರಿಯಿಂದ ಹಿಡಿದು 2021ರ ಫೆಬ್ರುವರಿಯಲ್ಲಿ ವಾರ್ಡ್‌ನ ನಿರ್ವಹಣೆಗೆ ಗ್ಯಾಂಗ್‌ಮನ್‌ಗಳನ್ನು ಪೂರೈಸುವುದರವರೆಗೆ ಒಟ್ಟು 64 ಕಾಮಗಾರಿಗಳ ಟೆಂಡರ್‌ಗಳಲ್ಲಿ ಸತೀಶ್‌ ಆರ್‌.ಅವರು ಅತಿ ಕಡಿಮೆ ಮೊತ್ತ ನಮೂದಿಸಿದ ಗುತ್ತಿಗೆದಾರರಾಗಿ (ಎಲ್‌–1) ಆಗಿ ಹೊರಹೊಮ್ಮಿದ್ದು, ಅಷ್ಟೂ ಕಾಮಗಾರಿಗಳು ಅವರ ಪಾಲಾಗಿವೆ. ಕಾಕತಾಳೀಯವೆಂದರೆ ಅವರು ಭಾಗವಹಿಸಿದ ಈ ವಾರ್ಡ್‌ನ ಟೆಂಡರ್‌ ಪ್ರಕ್ರಿಯೆಗಳಲ್ಲೆಲ್ಲ ಗುತ್ತಿಗೆ ಅವರಿಗೇ ಸಿಗುತ್ತವೆ.

2017ರಲ್ಲಿ ಸತೀಶ್‌ ಅವರು ಯಡಿಯೂರು ವಾರ್ಡ್‌ ಒಂದರಲ್ಲೇ 9 ಕಾಮಗಾರಿಗಳನ್ನು ಗುತ್ತಿಗೆ ಪಡೆಯುತ್ತಾರೆ. ಅವುಗಳಲ್ಲೆಲ್ಲ ಮಂಜುನಾಥ ಎಸ್‌. ಎಂಬ ಇನ್ನೊಬ್ಬ ಗುತ್ತಿಗೆದಾರರು ಎಲ್‌–2 ಆಗಿರುವುದು ಇನ್ನೊಂದು ಕಾಕತಾಳೀಯ. 2018ರ ಆ 13ರಂದು ಒಂದೇ ದಿನ ಈ ವಾರ್ಡ್‌ನ ಆರು ಕಾಮಗಾರಿಗಳ ಗುತ್ತಿಗೆಯನ್ನು ಸತೀಶ್‌ ಆರ್‌. ಅವರಿಗೆ ನೀಡಲಾಗುತ್ತದೆ. ಅಷ್ಟೂ ಕಾಮಗಾರಿಗಳಲ್ಲಿ ಎಲ್‌–2 ಆಗಿದ್ದುದು ಎಚ್‌.ಎಚ್‌.ನಂದಿನಿ (ಇಂಪನ ಕನ್‌ಸ್ಟ್ರಕ್ಷನ್ಸ್‌) ಎಂಬುವರು ಎಲ್‌–2 ಆಗಿದ್ದುದು ಇನ್ನೊಂದು ಕಾಕತಾಳೀಯ. ಅದೇ ದಿನ ಟೆಂಡರ್‌ ಆದೇಶವಾದ ಇನ್ನೊಂದು ಕಾಮಗಾರಿಯ ಟೆಂಡರ್‌ನಲ್ಲಿ ಸತೀಶ್‌ ಆರ್‌. ಅವರ ಜೊತೆ ಭಾಗವಹಿಸಿದ ಇಂಪನಾ ಕನ್‌ಸ್ಟ್ರಕ್ಷನ್ಸ್‌ ಸಂಸ್ಥೆ ಇಎಂಡಿ ಮೊತ್ತ ನೀಡಿದ್ದರೂ ಅಧಿಕಾರಿಗಳು ಅದನ್ನು ಪರಿಶೀಲನೆ ನಡೆಸುವುದಿಲ್ಲ. ಅನುಮೋದನೆಗೆ ಸಲ್ಲಿಕೆಯಾಗುವ ಟಿಪ್ಪಣಿ ಹಾಳೆಯಲ್ಲಿ ಟೆಂಡರ್‌ನಲ್ಲಿ ಸತೀಶ್‌ ಅವರು ಒಬ್ಬರೇ ಭಾಗವಹಿಸಿದ್ದಾರೆ ಎಂದು ನಮೂದಿಸುತ್ತಾರೆ.

2018ರ ಜುಲೈ ನಂತರ ಈ ವಾರ್ಡ್‌ನಲ್ಲಿ ಒಟ್ಟು 36 ಕಾಮಗಾರಿಗಳ ಗುತ್ತಿಗೆ ಸತೀಶ್‌ ಆರ್‌. ಅವರಿಗೇ ಸಿಕ್ಕಿದೆ. ಇವುಗಳಲ್ಲಿ 33 ಟೆಂಡರ್‌ಗಳಲ್ಲಿ ಇಬ್ಬರು ಗುತ್ತಿಗೆದಾರರು ಭಾಗವಹಿಸಿದ್ದಾರೆ. 32 ಟೆಂಡರ್‌ಗಳಲ್ಲಿ ಸತೀಶ್‌  ಅವರ ಜೊತೆ ಮೋಹನ್‌ ಕುಮಾರ್ ನಂಜಪ್ಪ ಬೆಂಗಳೂರು ಎಂಬ ಇನ್ನೊಬ್ಬ ಗುತ್ತಿಗೆದಾರರ ಹಾಗೂ ಇನ್ನೊಂದರಲ್ಲಿ ಸತೀಶ್ ಎಸ್‌  ಎಲ್‌–2 ಆಗಿದ್ದಾರೆ. ಇನ್ನುಳಿದ ಮೂರು ಕಾಮಗಾರಿಗಳ ಟೆಂಡರ್‌ಗಳಲ್ಲಿ ಮೂವರು ಗುತ್ತಿಗೆದಾರರು ಭಾಗವಹಿಸಿದ್ದರು.

ಸತೀಶ್‌ ಆರ್‌. ಅವರಿಗೆ ಸಿಕ್ಕಿದ ಈ 64 ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಗಳಲ್ಲಿ ಬಹುತೇಕವುಗಳಲ್ಲಿ ಶಿಫಾರಸು ಮಾಡಿದ ಎಂಜಿನಿಯರ್‌ ಒಬ್ಬರೇ. ಸಹಾಯಕ ಎಂಜಿನಿಯರ್‌ ಆಗಿರುವ ಅವರಿಗೆ ಕಡಿಮೆ ಅವಧಿಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ಕಾರ್ಯಪಾಲಕ ಎಂಜಿನಿಯರ್‌ ಪ್ರಭಾರ ಹೊಣೆಯನ್ನೂ ನೀಡಲಾಗಿದೆ.

‘ಒಬ್ಬ ಗುತ್ತಿಗೆದಾರ ಆರ್ಥಿಕ ಅರ್ಹತೆ ಹೊಂದಿದ್ದರೆ ಎಷ್ಟು ಕಾಮಗಾರಿಗಳಲ್ಲೂ ಭಾಗವಹಿಸಬಹುದು. ಟೆಂಡರ್‌ನಲ್ಲಿರುವ ಕಾಮಗಾರಿಯದ್ದೇ ಮಾದರಿಯ ಬೇರೆ ಕೆಲಸಗಳನ್ನು ಮಾಡಿರುವ ಅನುಭವ ಆತನಿಗೆ ಇರಬೇಕಾಗುತ್ತದೆ. ಆದರೆ, ಒಂದೇ ವಾರ್ಡ್‌ನಲ್ಲಿ ಇಷ್ಟೊಂದು ಪ್ರಮಾಣದ ಕಾಮಗಾರಿಯನ್ನು ಒಬ್ಬನೇ ಗುತ್ತಿಗೆದಾರನಿಗೆ ನೀಡಿರುವುದು ಹಾಗೂ ಬಹುತೇಕ ಟೆಂಡರ್‌ಗಳಲ್ಲಿ ಎಲ್‌–2 ಆಗಿರುವ ಗುತ್ತಿಗೆದಾರರೂ ಅವರೇ ಇರುವುದು ಸಹಜವಾಗಿಯೇ ಅನುಮಾನ ಮೂಡಿಸುತ್ತದೆ. ಟೆಂಡರ್‌ ಕರೆದು ಕಾಮಗಾರಿ ನೀಡುವ ಪ್ರಮುಖ ಉದ್ದೇಶವೇ, ಅರ್ಹತೆ ಹೊಂದಿರುವ ಯಾವುದೇ ಗುತ್ತಿಗೆದಾರರು ಬೇಕಾದರೂ ಬಿಡ್‌ಗಳಲ್ಲಿ ಭಾಗವಹಿಸಲು ಮುಕ್ತ ಅವಕಾಶ ಸಿಗಬೇಕು ಎಂಬುದು. ಅಧಿಕಾರಿಗಳು, ರಾಜಕಾರಣಿಗಳು ಶಾಮೀಲಾಗಿ ತಮಗೆ ಬೇಕಾದವರಿಗೆ ಕಾಮಗಾರಿಯ ಗುತ್ತಿಗೆ ಸಿಗುವಂತೆ ಟೆಂಡರ್‌ ಪ್ರಕ್ರಿಯೆಯಲ್ಲಿ ಆಟವಾಡುವ ಪರಿಪಾಠ ಈ ಆಶಯವನ್ನೇ ಮೂಲೆಗುಂಪು ಮಾಡಿ ಬಿಡುತ್ತದೆ’ ಎಂದು ಬಿಬಿಎಂಪಿ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಗಳ ಒಳಹೊರಗನ್ನು ಚೆನ್ನಾಗಿ ಬಲ್ಲ ಎಂಜಿನಿಯರ್‌ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ?

ಕಸ ನಿರ್ವಹಣೆಗೆ ಕಾಮಗಾರಿ ಸಂಖ್ಯೆ (ಜಾಬ್‌ ಕೋಡ್‌) ಪಡೆದು ಸಿವಿಲ್‌ ಕಾಮಗಾರಿ ನಡೆಸುವ ಮೂಲಕ ಅನುದಾನ ದುರುಪಯೋಗಪಡಿಸಿಕೊಂಡಿರುವ ಅನುಮಾನವೂ ವ್ಯಕ್ತವಾಗಿದೆ (ಇಂಡೆಂಟ್‌ ಸಂಖ್ಯೆ: BBMP/ 2020-21/OW/ Work_INDENT42913/CALL -3).

‘ವಾರ್ಡ್‌ ಹಂತದ ಕಸ ನಿರ್ವಹಣೆ ಕಾಮಗಾರಿಗಳಲ್ಲಿ ಕಾಂಕ್ರೀಟ್‌ ಕಟ್ಟಡ ನಿರ್ಮಿಸಬೇಕಾಗಿ ಬರುವ ಪ್ರಮೇಯಗಳು ಕಡಿಮೆ. ವಾರ್ಡ್‌ ಹಂತದಲ್ಲಿ ಕಸ ನಿರ್ವಹಣೆಯ ಟೆಂಡರ್‌ನಲ್ಲಿ ನಿರ್ಮಾಣಕ್ಕೆ ಸಂಬಂಧಿಸಿದ ಅಂಶಗಳಿದ್ದಾಗ ಮುಖ್ಯ ಎಂಜಿನಿಯರ್‌ಗಳು ಪರಿಶೀಲಿಸದೆಯೇ ಹೇಗೆ ಅನುಮೋದನೆ ನೀಡುತ್ತಾರೋ ತಿಳಿಯದು. ಕಸ ನಿರ್ವಹಣೆಯ ಅನುದಾನವನ್ನು ಸಿವಿಲ್‌ ಕಾಮಗಾರಿಗೆ ಬಳಸಲು ಅವಕಾಶ ಇಲ್ಲ. ಇಂತಹ ಪ್ರಕರಣಗಳಲ್ಲಿ ಕಸ ನಿರ್ವಹಣೆ ಮೊತ್ತವನ್ನು ಡಿ.ಸಿ.ಬಿಲ್‌ ಮೂಲಕ ಸಾದಿಲ್ವಾರು ವೆಚ್ಚದ ಅನುದಾನದಲ್ಲೂ ಬಳಸಿಕೊಳ್ಳುವ ಮೂಲಕ ಅಕ್ರಮ ನಡೆಸಲಾಗುತ್ತದೆ. ವಾರ್ಡ್‌ ಹಂತದಲ್ಲಿ ರಾಜಕೀಯ ಬೆಂಬಲ ಇಲ್ಲದೇ ಕೇವಲ ಅಧಿಕಾರಿಗಳು ಈ ರೀತಿ ಅಕ್ರಮ ನಡೆಸಲು ಸಾಧ್ಯವಿಲ್ಲ’ ಎಂದು ಎಂಜಿನಿಯರ್‌ ಒಬ್ಬರು ವಿವರಿಸಿದರು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು