ಗುರುವಾರ , ಡಿಸೆಂಬರ್ 5, 2019
21 °C
‘ಬಿಬಿಎಂಪಿ ಕಾನೂನಿಗಿಂತ ಮಿಗಿಲಲ್ಲ’ ಎಂದ ನ್ಯಾಯಪೀಠ

ತಪ್ಪು ಮಾಹಿತಿ: ಬಿಬಿಎಂಪಿಗೆ ಹೈಕೋರ್ಟ್‌ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಡಿವಾಳ-ಸರ್ಜಾಪುರ ಸಾರ್ವಜನಿಕ ರಸ್ತೆ ಪಕ್ಕದ ಸರ್ವೀಸ್ ರಸ್ತೆ ಹಾಗೂ ಪಾದಚಾರಿ ಮಾರ್ಗದ ಒತ್ತುವರಿ ತೆರವು ಕುರಿತ ಪ್ರಕರಣದಲ್ಲಿ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ರೆಗ್ಗಿ ಥಾಮಸ್ ಸೇರಿ ದಂತೆ ಕೋರಮಂಗಲದ ನಿವಾಸಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘2019ರ ಅಕ್ಟೋಬರ್ 26ರಂದು ಸಲ್ಲಿಸಿದ ಪ್ರಮಾಣ ಪತ್ರ ತಪ್ಪಿನಿಂದ ಕೂಡಿದೆ’ ಎಂಬ ವಿವರಣೆಗೆ ನ್ಯಾಯಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿತು.

‘ಈ ಪ್ರಕರಣದಲ್ಲಿ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿಲ್ಲ. ಹಾಗಾಗಿ ಆಗಸ್ಟ್‌ 22 ರಂದು ನೀಡಿದ ಆದೇಶ ಪಾಲನೆ ಮಾಡಬೇಕಿತ್ತು. ಈಗ ಬಂದು ಪ್ರಮಾಣಪತ್ರ ತಪ್ಪಿನಿಂದ ಕೂಡಿದೆ ಎಂದು ಹೇಳುತ್ತಿದ್ದೀರಿ. ಬಿಬಿಎಂಪಿ ಕಾನೂನಿಗಿಂತ ಮಿಗಿಲಲ್ಲ, ಇದು
ನ್ಯಾಯಾಲಯವನ್ನು ತುಂಬಾ ಹಗುರವಾಗಿ ಪರಿಗಣಿಸಿದಂತೆ ಕಾಣುತ್ತಿದೆ’ ಎಂದು ಕಿಡಿಕಾರಿತು.

‘ತಪ್ಪು ಮಾಹಿತಿ ನೀಡಿ ನ್ಯಾಯಾಲಯವನ್ನು ಹಾದಿ ತಪ್ಪಿಸಿದ ಅಧಿಕಾರಿ ಯಾರು, ಆ ಅಧಿಕಾರಿಯ ವಿರುದ್ಧ ಯಾವ ಕ್ರಮ ಜರುಗಿಸಲಾಗಿದೆ ಎಂಬುದನ್ನು ಮೊದಲು ನ್ಯಾಯಾಲಯಕ್ಕೆ ತಿಳಿಸಿ. ಇಲ್ಲವಾದರೆ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಎಚ್ಚರಿಸಿ ವಿಚಾರಣೆ ಮುಂದೂಡಿದೆ.

ಪ್ರಕರಣವೇನು?: ‘ಮಡಿವಾಳ-ಸರ್ಜಾಪುರ ಸಾರ್ವಜನಿಕ ರಸ್ತೆ ಪಕ್ಕದ ಸರ್ವೀಸ್ ರಸ್ತೆ ಮತ್ತು ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿ ನಿರ್ಮಿಸಿರುವ 88 ಮಳಿಗೆಗಳನ್ನು ತೆರವುಗೊಳಿಸಲು ಮತ್ತು ಸ್ಥಳಾಂತರಿಸಲು ನಿರ್ದಿಷ್ಟ ಕಾಲಮಿತಿಯೊಳಗೆ ಯೋಜನೆ ರೂಪಿಸಿ ನ್ಯಾಯಾಲಯಕ್ಕೆ ತಿಳಿಸಿ’ ಎಂದು ಹೈಕೋರ್ಟ್‌ 2019ರ
ಆಗಸ್ಟ್‌ 22ರಂದು ಬಿಬಿಎಂಪಿಗೆ ನಿರ್ದೇಶಿಸಿತ್ತು.

2019ರ ಅಕ್ಟೋಬರ್ 26ರಂದು ಪ್ರಕರಣ ವಿಚಾರಣೆಗೆ ಬಂದ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದರು. ‘ಮಳಿಗೆ ತೆರವು ಹಾಗೂ ಸ್ಥಳಾಂತರಕ್ಕೆ ನಿರ್ದೇಶಿಸಿದ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಆದ್ದರಿಂದ ಆಗಸ್ಟ್‌ 22ರ ಆದೇಶಕ್ಕೆ ತಡೆ ನೀಡಬೇಕು’ ಎಂದು ಮನವಿ ಮಾಡಿದ್ದರು. ಇದಕ್ಕೆ ನ್ಯಾಯಪೀಠ ನಿರಾಕರಿಸಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು