ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ 11 ಬೇಡಿಕೆ ಈಡೇರಿಸಲು ಬಿಡಿಎ ಸಮ್ಮತಿ

ಕೆಂಪೇಗೌಡ ಬಡಾವಣೆಗೆ ಭೂಮಿ ನೀಡಿರುವ ರೈತರೊಂದಿಗೆ ಬಿಡಿಎ ಅಧ್ಯಕ್ಷ ಸಭೆ
Last Updated 20 ಜನವರಿ 2021, 18:21 IST
ಅಕ್ಷರ ಗಾತ್ರ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೂಮಿಯನ್ನು ನೀಡಿದ ರೈತರ 11 ಪ್ರಮುಖ ಬೇಡಿಕೆಗಳ ಪೈಕಿ ಬಹುತೇಕ ಬೇಡಿಕೆಗಳನ್ನು ಕಾಲಮಿತಿಯೊಳಗೆ ಈಡೇರಿಸುವುದಾಗಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಭರವಸೆ ನೀಡಿದರು.

ಭೂಮಿ ಬಿಟ್ಟು ಕೊಟ್ಟವರ ರೈತರ ಜೊತೆ ಅವರು ಬುಧವಾರ ಸಭೆ ನಡೆಸಿದರು.

ಪೆರಿಫೆರಲ್ ವರ್ತುಲ ರಸ್ತೆಗೆ ಭೂಮಿ ನೀಡಿದ್ದರೂ ಪರಿಹಾರ ನೀಡಿಲ್ಲ. ಭೂಮಿ ನೀಡಿರುವ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಮೀಸಲಿಡಬೇಕು. ಸಂಪರ್ಕ ರಸ್ತೆಗಳನ್ನು ನಿರ್ಮಿಸಬೇಕು, ಗ್ರಾಮಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂಬುದೂ ಸೇರಿ 11 ಬೇಡಿಕೆಗಳನ್ನು ರೈತರು ಸಭೆಯ ಮುಂದಿಟ್ಟರು. ಈ ಬೇಡಿಕೆಗಳನ್ನು ಈಡೇರಿಸುವ ಭರವಸೆ ಸಿಕ್ಕಿದ್ದರಿಂದ ರೈತರು ನ್ಯಾಯಾಲಯದಲ್ಲಿ ದಾಖಲಿಸಿರುವ ಪ್ರಕರಣ ವಾಪಸ್ ಪಡೆಯಲು ಸಮ್ಮತಿಸಿದರು.

‘ಬಡಾವಣೆ ನಿರ್ಮಾಣಕ್ಕೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ಆ ಬಳಿಕವೂ ಕರಾರಿನಂತೆ ಅಭಿವೃದ್ಧಿಪಡಿಸಿದ ನಿವೇಶನಗಳನ್ನಾಗಲೀ ಅಥವಾ ನಗದು ರೂಪದ ಪರಿಹಾರವನ್ನಾಗಲೀ ಅಧಿಕಾರಿಗಳು ನೀಡಿಲ್ಲ’ ಎಂದು ರೈತರು ದೂರಿದರು.

ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್‌, ‘ಕೆಲವು ಅಧಿಕಾರಿಗಳ ಅಸಡ್ಡೆಯಿಂದ ರೈತರು 9-10 ವರ್ಷಗಳಿಂದ ಪ್ರಾಧಿಕಾರದ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಮುಂದೆ ಈ ರೀತಿ ಆಗುವುದಿಲ್ಲ’ ಎಂದು ಹೇಳಿದರು.

‘‌ರೈತರಿಗೆ ನೀಡಬೇಕಾದ ಪರಿಹಾರದ ಸಮಸ್ಯೆಯನ್ನು ಒಂದು ತಿಂಗಳೊಳಗೆ ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಂದಾಯ ನಿವೇಶನಗಳಿಗೆ ಸಂಬಂಧಿಸಿದಂತೆ ರೈತರ ಭೂಮಿಯ ನೈಜತೆ ಬಗ್ಗೆ ವಾರದಲ್ಲಿ ಪರಿಶೀಲಿಸಲು ತಿಳಿಸಲಾಗಿದೆ’ ಎಂದರು.

‘ಬಡಾವಣೆ ನಿರ್ಮಾಣಕ್ಕೆ ರೈತರು ತಮ್ಮ ಕೃಷಿ ಭೂಮಿ ನೀಡಿದ್ದಾರೆ. ಅಭಿವೃದ್ಧಿಪಡಿಸಿದ ನಿವೇಶನವನ್ನು ಅವರದೇ ಭೂಮಿಯಲ್ಲಿ ಕೊಡಿಸಲು ಪ್ರಯತ್ನಿಸಲಾಗುವುದು. ನಿರ್ದಿಷ್ಟ ಜಾಗದಲ್ಲಿ ನಿವೇಶನ ಹಂಚಿಕೆ ಸಾಧ್ಯವಾಗದಿದ್ದರೆ, ಸಮೀಪದ ಜಾಗದಲ್ಲಿ ನಿವೇಶನ ಸಿಗುವಂತೆ ನೋಡಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಸ್ಮಶಾನಕ್ಕೆ 2 ಎಕರೆ ಜಾಗ, ಆಟದ ಮೈದಾನಕ್ಕೆ ಜಾಗ ಮೀಸಲಿಡುತ್ತೇವೆ. ಗ್ರಾಮಗಳಿಗೆ ಸಂಪರ್ಕ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ರೈತರ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸಲಾಗುವುದು ಎಂದು ಬಿಡಿಎ ಆಯುಕ್ತ ಡಾ.ಎಚ್.ಆರ್.ಮಹದೇವ ಭರವಸೆ ನೀಡಿದರು.

ನಾಡಪ್ರಭು ಕೆಂಪೇಗೌಡ ಬಡಾವಣೆ ಹೋರಾಟ ಸಮಿತಿಯ ಅಧ್ಯಕ್ಷ ಚನ್ನಪ್ಪ ಹಾಗೂ 50ಕ್ಕೂ ಹೆಚ್ಚು ರೈತ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT